top of page

ಭರತ - ಭಾರಧ್ವಾಜರ ಭೇಟಿ (ರಾಮಾಯಣ ಕಥಾಮಾಲೆ 47)

ಭರತನು, ಮಹಾರಾಣ್ಯಕ್ಕೆ ಹೋಗಿರುವ ಯಶೋವಂತನಾದ ಗುರುವಾದ ಶ್ರೀರಾಮನನ್ನು ಪ್ರಸನ್ನಗೊಳಿಸಿ ಹಿಂದಕ್ಕೆ ಕರೆತರಲು ನಿಶ್ಚಯಿಸಿದವನಾಗಿ ಸುಮಂತ್ರನಿಗೆ "ಸುಮಂತ್ರ! ಶೀಘ್ರವಾಗಿ ಹೊರಡು. ಅರಣ್ಯದಲ್ಲಿ ವಾಸ ಮಾಡುತ್ತಿರುವ ಶ್ರೀ ರಾಮನನ್ನು ಪ್ರಸನ್ನಗೊಳಿಸಿ, ಜಗತ್ತಿನ ಹಿತಾರ್ಥವಾಗಿ ಅಯೋಧ್ಯೆಗೆ ಕರೆತರಲು ಆಶಿಸಿರುವೆನು" ಎಂದನು.


ಹೀಗೆ ಭರತನಿಂದ ಆಜ್ಞಪ್ತನಾದ ಸುಮಂತ್ರನು, ರಾಮನನ್ನು ನೋಡಬೇಕೆಂದಿದ್ದ ತನ್ನ ಆಶಯವು ಪೂರ್ಣವಾಗುವದೆಂಬ ಮಹಾನಂದದಿಂದ, ಪ್ರಜಾನಾಯಕರಿಗೂ ಸೇನಾಪತಿಗಳಿಗೂ ಗೆಳೆಯರ ಬಳಗಕ್ಕೂ ಒಡನೆಯೇ ಯಾತ್ರೆ ಹೊರಡುವಂತೆ ಆಜ್ಞಾಪಿಸಿದನು. ಸುಮಂತ್ರನು ಆಜ್ಞೆಯನ್ನು ಕೇಳಿದ ಕೂಡಲೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಲ್ಲರೂ ತಮ್ಮ ತಮ್ಮ ಮನೆಗಳಿಂದ ಹೊರಬಂದು ಒಂಟೆ, ರಥ, ಹೇಸರಗತ್ತೆ, ಕುದುರೆ, ಆನೆ ಮುಂತಾದ ವಾಹನಗಳ ಮೂಲಕ ಪ್ರಯಾಣಸಿದ್ದರಾದರು.


ಭರತನನ್ನು ಅನುಸರಿಸಿ ಅಯೋಧ್ಯೆಯಿಂದ ಹೊರಟಿದ್ದ ಸೈನ್ಯವು ಚಕ್ರವಾಕ ಪಕ್ಷಿಗಳಿಂದ ಸಮಲಂಕೃತವಾಗಿದ್ದ ಗಂಗಾ ನದಿಯ ತೀರದಲ್ಲಿ ಬೀಡುಬಿಟ್ಟಿತು. ನಿಷಾದರಾಜನಾದ ಗುಹನು ಗಂಗಾ ನದಿಯ ತೀರದಲ್ಲಿ ಬೀಡು ಬಿಟ್ಟಿದ್ದ ಅಪಾರವಾದ ಸೈನ್ಯವನ್ನು ನೋಡಿದೊಡನೆ ಉಭಯ ಕುಶಲೊಪರಿಯನ್ನು ವಿಚಾರಿಸಿ ಆ ರಾತ್ರಿಯನ್ನು ಗಂಗಾತೀರದಲ್ಲಿಯೇ ಕಳೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟನು.


ಗುಹನಿಂದ ಬೀಳ್ಕೊಟ್ಟು ಭರತನು ಭಾರದ್ವಜರ ಆಶ್ರಮ ಪ್ರದೇಶವನ್ನು ಸಮೀಪಿಸಿ ಆಶ್ರಮವು ಒಂದು ಕ್ರೋಶದಷ್ಟು ದೂರವಿದ್ದಾಗಲೇ ಸೈನಿಕರನ್ನು ಅಲ್ಲಿಯೇ ನಿಲ್ಲಿಸಿದನು. ಧನುರ್ಬಾಣಗಳನ್ನೂ ಕಿರೀಟವೇ ಮೊದಲಾದ ಆಭರಣಗಳನ್ನೂ ಬಿಚ್ಚಿಟ್ಟು, ನಾರುಮಡಿಯನ್ನುಟ್ಟು ಅದನ್ನೇ ಉತ್ತರೀಯವನ್ನಾಗಿ ಹೊದೆದಿದ್ದ, ಧರ್ಮಜ್ಞಾನದ ಭರತನು ಪುರೋಹಿತರಾದ ವಸಿಷ್ಟರನ್ನು ಮುಂದೆ ಮಾಡಿಕೊಂಡು ಮಂತ್ರಿಗಳೊಡನೆ ಭಾರದ್ವಾಜರನ್ನು ಸಂದರ್ಶಿಸಲು ಕಾಲ್ನಡಿಗೆಯಲ್ಲಿಯೇ ಹೊರಟನು.



ಮಹಾ ತಪಸ್ವಿಗಳಾದ ಭರದ್ವಾಜರು ವಸಿಷ್ಠರನ್ನು ನೋಡಿದೊಡನೆ ಆಸನದಿಂದ ಮೇಲೆದ್ದು ಸ್ವಾಗತಿಸಿ ಯೋಗ ಕ್ಷೇಮವನ್ನು ವಿಚಾರಿಸಿ ಬಂದ ವೃತ್ತಾಂತವನ್ನು ತಿಳಿದು ಭರತನಿಗೆ "ಧರ್ಮಜ್ಞಾನದ, ಸೀತಾ ಲಕ್ಷ್ಮಣ ಸಮೇತನದ ಶ್ರೀರಾಮನು ಎಲ್ಲಿರುವನೆಂಬುದು ನನಗೆ ತಿಳಿದಿದೆ. ಅವನೀಗ ಚಿತ್ರಕೂಟ ಮಹಾಪರ್ವತದಲ್ಲಿ ವಾಸ ಮಾಡುತ್ತಿರುವನು. ನಾಳೆಯೇ ನೀನು ಚಿತ್ರಕೂಟ ಪರ್ವತಕ್ಕೆ ಹೋಗುವಿಯಂತೆ. ಈ ಒಂದು ದಿನ ನಿನ್ನ ಮಂತ್ರಿಗಳೊಡನೆ ಇಲ್ಲಿಯೇ ವಾಸವಾಗಿರು. ಕಾಮಾರ್ಥಗಳ ರಹಸ್ಯವನ್ನು ತಿಳಿದವನೇ! ನನ್ನ ಈ ಒಂದು ಅಪೇಕ್ಷೆಯನ್ನು ನಡೆಸಿಕೊಡು" ಎಂದರು.


ಪರಮಪೂಜ್ಯರಾದ ಭರದ್ವಾಜರ ಸ್ವಭಾವ ಗುಣಗಳನ್ನು ಪ್ರತ್ಯಕ್ಷವಾಗಿಯೇ ನೋಡಿ ತಿಳಿದುಕೊಂಡಿದ್ದ, ಪ್ರಸಿದ್ಧ ಯಶೋವಂತನಾದ ಭರತನು ಹಾಗೆಯೇ ಆಗಲಿ ಎಂದು ಹೇಳಿ, ಆ ರಾತ್ರಿಯಲ್ಲಿ ಭರದ್ವಾಜರ ಆಶ್ರಮದಲ್ಲಿಯೇ ಉಳಿದುಕೊಳ್ಳಲು ಮನಸ್ಸು ಮಾಡಿದನು.

ಭಾರದ್ವಾಜರಿಂದ ಸತ್ಕೃತನಾದ ಭರತನು ಪರಿವಾರ ಸಮೇತನಾಗಿ ಆ ರಾತ್ರಿಯನ್ನು ಕಳೆದು ಬೆಳಗಾಗುತ್ತಲೇ ಶ್ರೀರಾಮನನ್ನು ಕಾಣಬೇಕೆಂಬ ಕಾಮನೆಯಿಂದ ಭಾರದ್ವಾಜರ ಬಳಿಗೆ ಹೋಗಿ ನಮಸ್ಕರಿಸಿ " ಪೂಜ್ಯರೇ! ಪರಿವಾರ ಸಮೇತನಾಗಿ ನಾನು ರಾತ್ರಿಯನ್ನು ಸುಖವಾಗಿ ಕಳೆದನು. ಅಮಾತ್ಯರೊಡನೆ ಮತ್ತು ಸೈನಿಕರೊಡನೆ ಸಕಲ ವಿಧವಾದ ಕಾಮನೆಗಳಿಂದಲೂ ತೃಪ್ತಿಗೊಳಿಸಲ್ಪಟ್ಟೆನು. ಮುನಿವಾರ್ಯರೇ! ನಿಮ್ಮನ್ನು ಬಹು ಪ್ರಾಕಾರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಶ್ರೀರಾಮನ ಬಳಿಗೆ ಹೊರಟಿರುವ ನನ್ನನ್ನು ನೀವು ಅನುಗ್ರಹದ ದೃಷ್ಟಿಯಿಂದ ಕಾಣಿರಿ. ಧಾರ್ಮಿಕನಾದ ಮಹಾತ್ಮನಾದ ನಮ್ಮಣ್ಣನ ಆಶ್ರಮವು ಇಲ್ಲಿಗೆ ಎಷ್ಟು ದೂರದಲ್ಲಿದೆ? ಯಾವ ಮಾರ್ಗದಿಂದ ಅಲ್ಲಿಗೆ ಪ್ರಯಾಣ ಮಾಡಬೇಕು? ಈ ವಿಷಯಗಳನ್ನು ಹೇಳಿರಿ" ಎಂದನು.


ಅಣ್ಣನನ್ನು ಸಂದರ್ಶಿಸಬೇಕೆಂಬ ಉತ್ಕಟಾಕಾಂಕ್ಷೆಯಿಂದಿದ್ದ ಭರತನು ಹೀಗೆ ಪ್ರಶ್ನಿಸಲು ಮಹಾ ತಪಸ್ವಿಗಳಾದ ಭರದ್ವಾಜರು "ಭರತ! ಇಲ್ಲಿಗೆ ಸುಮಾರು ಎರಡುವರೆ ಯೋಜನಗಳ ದೂರದಲ್ಲಿ ನಿರ್ಜನವಾದ ಅರಣ್ಯದಲ್ಲಿ ರಮ್ಯವಾಗಿರುವ, ಗುಹೆಗಳಿಂದ ಕೂಡಿರುವ, ಕಾಡುಗಳಿಂದ ವ್ಯಾಪ್ತವಾಗಿರುವ ಚಿತ್ರಕೂಟ ಪರ್ವತವಿದೆ. ಆ ಚಿತ್ರಕೂಟ ಪರ್ವತದ ಉತ್ತರಕ್ಕೆ ಮಂದಾಕಿನಿ ನದಿ ಇದೆ.ಆ ನದಿಯ ಎರಡು ತೀರಗಳಲ್ಲಿಯೂ ಪುಷ್ಪಭರಿತವಾದ ವೃಕ್ಷಗಳಿವೆ. ರಮ್ಯವಾಗಿಯೂ, ಪುಷ್ಪಿತವಾಗಿಯೂ ಇರುವ ಅರಣ್ಯ ಪ್ರದೇಶದಲ್ಲಿ ಮಂದಾಕಿನಿ ನದಿಯು ಹರಿಯುತ್ತಿದೆ. ಆ ನದಿಯ ಸಮೀಪದಲ್ಲಿಯೇ ಚಿತ್ರಕೂಟ ಪರ್ವತವಿದೆ. ನದಿಯ ಮತ್ತು ಪರ್ವತದ ನಡುವೆ ಒಂದು ಪರ್ಣಶಾಲೆಯಿದೆ. ಅದೇ ರಾಮ ಲಕ್ಷ್ಮಣರ ಪರ್ಣಶಾಲೆ. ಅಲ್ಲಿಯೇ ಅವರಿಬ್ಬರೂ ಸೀತೆಯೊಡನೆ ವಾಸ ಮಾಡುತ್ತಿದ್ದಾರೆ. ನಮ್ಮ ಆಶ್ರಮದಿಂದ ಮೊದಲು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಬೇಕು. ಬಳಿಕ ನೈರುತ್ಯ ದಿಕ್ಕಿನ ಕಡೆಗೆ ಹೋಗಬೇಕು. ಗಜಾಶ್ವ- ರಥ - ಪದಾತಿಗಳಿಂದಯುಕ್ತವಾದ ನಿನ್ನ ಚತುರಂಗ ಸೇನೆಯನ್ನು ನಾನು ಹೇಳಿರುವ ಮಾರ್ಗದಲ್ಲಿ ಕರೆದುಕೊಂಡು ಹೋಗು ಅಲ್ಲಿ ನೀನು ರಾಘವನನ್ನು ಕಾಣುವೆ" ಎಂದರು.


ಪ್ರಯಾಣದ ವಿಷಯವಾಗಿ ಭರತನು ಭರದ್ವಾಜರೊಡನೆ ಮಾತನಾಡುತ್ತಿರುವುದನ್ನು ಕೇಳಿದೊಡನೆ ಪಲ್ಲಕ್ಕಿಯಲ್ಲಿಯೇ ಕುಳಿತಿರಬೇಕಾಗಿದ್ದ ದಶರಥನ ಪತ್ನಿಯರು ತಮ್ಮ ತಮ್ಮ ಪಲ್ಲಕ್ಕಿಗಳಿಂದ ಕೆಳಗಿಳಿದು ಬ್ರಹ್ಮನಿಷ್ಠರಾದ ಭರದ್ವಾಜರನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿದರು. ಭಾರದ್ವಾಜರ ಆ ಮಾತುಗಳನ್ನು ಕೇಳಿದ ನಂತರ ಅತ್ಯಂತ ನಿಪುಣನಾದ ಭರತನು ಭರದ್ವಾಜರಿಗೆ ಪ್ರದಕ್ಷಿಣೆ ಮಾಡಿ ಅಭಿವಾದನ ಪೂರ್ವಕವಾಗಿ ನಮಸ್ಕರಿಸಿ ಅವರಿಂದ ಆಶೀರ್ವಾದಗಳನ್ನು ಪಡೆದು ಸೈನಿಕರಿಗೆ ವಾಹನಗಳನ್ನು ಸಜ್ಜುಗೊಳಿಸುವಂತೆ ಆಜ್ಞಾಪಿಸಿದನು.

Comments


bottom of page