ದಶರಥನ ಅಂತ್ಯಸಂಸ್ಕಾರ (ರಾಮಾಯಣ ಕಥಾಮಾಲೆ 45)
- Ganapati Hegde Moodkani

- 2 hours ago
- 1 min read
ದಶರಥನ ಅಂತ್ಯಸಂಸ್ಕಾರ (ರಾಮಾಯಣ ಕಥಾಮಾಲೆ 45)
ಹೀಗೆ ಅನವರತವಾಗಿ ಪಿತೃ ವಿಯೋಗದಿಂದಲೇ ಪರಿತಪಿಸುತ್ತಿದ್ದ ಭರತನಿಗೆ ವಾಗ್ಮಿಗಳಲ್ಲಿ ಶ್ರೇಷ್ಠರಾದ ವಸಿಷ್ಠರು "ಯಶೋವಂತನೇ! ರಾಜಪುತ್ರ! ನಿನಗೆ ಮಂಗಳವಾಗಲಿ. ದುಃಖ ಪಡುವುದನ್ನು ಸಾಕು ಮಾಡು. ನರಪತಿಯಾದ ದಶರಥನಿಗೆ ಅಂತ್ಯಸಂಸ್ಕಾರವನ್ನು ಮಾಡಲು ಇದು ಯೋಗ್ಯವಾದ ಕಾಲವಾಗಿದೆ" ಎಂದರು. ಧರ್ಮವಿದನಾದ ಭರತನು ವಸಿಷ್ಠರ ಆ ಮಾತನ್ನು ಕೇಳಿ ಮನಸ್ಸಿಗೆ ಧೈರ್ಯವನ್ನು ತಂದುಕೊಂಡು ಪುರೋಹಿತರ ಆದೇಶದಂತೆ ತಂದೆಯ ಅಪರ ಕರ್ಮಗಳನ್ನು ಮಾಡಲುದ್ಯುಕ್ತನಾದನು.

ಎಣ್ಣೆಯ ಕೊಪ್ಪರಿಗೆಯಿಂದ ದಶರಥನ ಕಳೆಬರವನ್ನು ಮೇಲೆತ್ತಿ ಭೂಮಿಯ ಮೇಲಿಟ್ಟರು. ಕೊಪ್ಪರಿಗೆಯಲ್ಲಿ ಪಾರ್ಥಿವಶರೀರವು ಬಹಳ ದಿವಸಗಳಿದ್ದುದರಿಂದ ಮುಖದ ಬಣ್ಣವು ಹಳದಿಯಾಗಿದ್ದಿತು. ರಾಜನು ಸುಖವಾಗಿ ಮಲಗಿರುವನು ಎಂಬಂತೆ ಕಾಣುತ್ತಿದ್ದನು.
ಬಳಿಕ ನಾನಾವಿಧವಾದ ರತ್ನಗಳಿಂದ ಪರಿಶ್ಕೃತವಾಗಿದ್ದ ಹಾಸಿಗೆಯಲ್ಲಿ ರಾಜನ ಪಾರ್ಥಿವ ಶರೀರವನ್ನು ಮಲಗಿಸಿದರು. ತಂದೆಯ ಶರೀರವನ್ನು ನೋಡಿ ಭರತನು ಬಹಳವಾಗಿ ದುಃಖಿಸಿದನು.
ಹೀಗೆ ತಂದೆಯ ಪಾರ್ಥಿವ ಶರೀರದ ಮುಂದೆ ನಿಂತು ದೈನ್ಯದಿಂದ ಗೋಳಾಡುತ್ತಿದ್ದ ಭರತನಿಗೆ "ಮಹಾಬಾಹುವೆ! ಭರತ, ರಾಜನ ಪ್ರೇತ ಕಾರ್ಯಗಳು ಯಾವುವಿವೆಯೋ ಅವೆಲ್ಲವನ್ನು ಸಾಂಗವಾಗಿ ಮಾಡಬೇಕಾದುದು ಈಗಿನ ಮುಖ್ಯ ಕರ್ತವ್ಯವಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಬೇರೆ ಯಾವುದನ್ನೂ ಯೋಚಿಸ ಹೋಗದೆ, ಪ್ರೇತ ಸಂಸ್ಕಾರವನ್ನು ಏಕಾಗ್ರತೆಯಿಂದ ಮಾಡು" ಎಂದರು.
ಭರತನ ಹಾಗೆಯೇ ಆಗಲೆಂದು ಹೇಳಿ ಪೂಜ್ಯರಾದ ವಸಿಷ್ಟರನ್ನು ಯಥೋಚಿತವಾಗಿ ಸತ್ಕರಿಸಿ ಅವರ ಸಲಹೆಯಂತೆ ಮುಂದಿನ ಕಾರ್ಯವನ್ನು ಮಾಡಲು, ಋತ್ವಿಜರನ್ನೂ ಪುರೋಹಿತರನ್ನೂ ಆಚಾರ್ಯರನ್ನೂ ಅವಸರಪಡಿಸಿದನು. ಬಳಿಕ ಋತ್ವಿಜರು ಭರತನಿಂದ ಜೊತೆಗೆ ಬೆಂಕಿಯಿಡಿಸಿ ಪೈತೃಮೇಧಿಕ ಮಂತ್ರಗಳನ್ನು ಜಪಿಸಿದರು. ರಾಜಮಹಿಷಿಯರೂ ಮಂತ್ರಿ ಪುರೋಹಿತರೂ ಭರತನೋಡಗೂಡಿ ಸರಯೂ ನದಿಯಲ್ಲಿ ರಾಜನಿಗೆ ಉದಕ ಕ್ರಿಯೆಯನ್ನು ಮಾಡಿ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದವರಾಗಿ ಅಯೋಧ್ಯಾ ಪಟ್ಟಣವನ್ನು ಪ್ರವೇಶಿಸಿ ಹತ್ತು ದಿವಸಗಳ ವರೆಗೆ ಭೂಮಿಯ ಮೇಲೆಯೇ ಮಲಗುತ್ತಿದ್ದ ಅಶೌಚಯವನ್ನು ಕಳೆದುಕೊಂಡರು. ಹತ್ತು ದಿವಸಗಳು ಕಳೆದ ನಂತರ ಹನ್ನೊಂದನೆಯ ದಿನ ಭರತನು ಸೂತಕವನ್ನು ಕಳೆದುಕೊಂಡು ಹನ್ನೆರಡನೇ ದಿವಸ ಸಪಿಂಡೀಕರಣಾಂತವಾದ ಶ್ರಾದ್ಧಕರ್ಮಗಳನ್ನು ಯಥಾವಿಧಿಯಾಗಿ ಮಾಡಿದನು.
ಬಳಿಕ ಹದಿಮೂರನೇಯ ದಿವಸ ಬೆಳಗಾಗುತ್ತಲೇ ಮಹಾಬಾಹುವಾದ ಭರತನು ಆಸ್ಥಿಸಂಚಯನಾರ್ಥವಾಗಿ ಚಿತೆಯ ಬಳಿಗೆ ಹೋಗಿ ಶೋಕಾವಿಷ್ಟವಾಗಿ ಅಳತೊಡಗಿದನು. ಆ ಸಮಯದಲ್ಲಿ ಭರತನಿಗೆ ದುಃಖದಿಂದ ಗಂಟಲು ಕಟ್ಟಿ ಹೋಯಿತು. ತಂದೆಯ ಜೊತೆ ಇದ್ದ ಆ ಸ್ಥಾನಮಂಡಲವು ಭಸ್ಮದಿಂದ ತುಂಬಿ ಹೋಗಿದ್ದಿತು. ಅಲ್ಲಲ್ಲಿ ಬೆಂಕಿಯು ಕಾಣಿಸಿಕೊಳ್ಳುತ್ತಿದ್ದು ಕೆಂಪಾಗಿಯೂ ಇದ್ದಿತು. ಸುಟ್ಟು ಹೋದ ಮೂಳೆಗಳು ಸರ್ವತ್ರ ವ್ಯಾಪ್ತವಾಗಿದ್ದವು. ರಾಜನ ಶರೀರ ವಿನಾಶಕವಾದ ಆ ಸ್ಥಳವನ್ನು ನೋಡಿ ಭರತನು ಬಹಳವಾಗಿ ದುಃಖಿಸಿದನು.
ಮೇಲೇರಿಸಲ್ಪಡುತ್ತಿದ್ದ ಇಂದ್ರಧ್ವಜವು ಕೆಳಕ್ಕೆ ಬೀಳುವಂತೆ ಚಿತಾಮಂಡಲವನ್ನು ನೋಡಿ ದೀನನಾದ ಭರತನು ಕೆಳಗೆ ಬಿದ್ದನು. ಪುಣ್ಯವು ಮುಗಿದ ನಂತರ ಸ್ವರ್ಗದಿಂದ ಚ್ಯುತನಾದ ಯಯಾತಿಯನ್ನು ಋಷಿಗಳು ಸುತ್ತುವರಿದು ನಿಂತಂತೆ ದುಃಖಿತವಾಗಿ ಕುಸಿದು ಬಿದ್ದ ಭರತನನ್ನು ಅಮಾತ್ಯರು ಸುತ್ತುವರಿದು ನಿಂತರು. ಶೋಕಪೀಡಿತನಾಗಿದ್ದ ಭರತನನ್ನು ನೋಡಿ ಶತ್ರುಘ್ನನೂ ತಂದೆಯನ್ನು ಸ್ಮರಿಸಿಕೊಳ್ಳುತ್ತಾ ಎಚ್ಚರ ತಪ್ಪಿ ಕೆಳಕ್ಕೆ ಬಿದ್ದನು. ವಯಸ್ಸಿಗೆ ಅನುಗುಣವಾಗಿ ತಂದೆಯು ಆಯಾ ಕಾಲಗಳಲ್ಲಿ ಹೇಳುತ್ತಿದ್ದ ಮುದ್ದಿನ ಮಾತುಗಳನ್ನು ಉಪದೇಶಗಳನ್ನು ಸ್ಮರಿಸಿಕೊಳ್ಳುತ್ತಾ ಅತ್ಯಂತ ದುಃಖಿತನಾಗಿ ಹುಚ್ಚನಂತೆ ಅಥವಾ ಬುದ್ಧಿಯೇ ಇಲ್ಲದವನಂತೆ ಗಟ್ಟಿಯಾಗಿ ಅಳುತ್ತಿದ್ದನು.




Comments