ತಾಯಿಯ ಮೇಲೆ ಭರತನ ಕ್ರೋಧ (ರಾಮಾಯಣ ಕಥಾಮಾಲೆ 44)
- Ganapati Hegde Moodkani

- 6 hours ago
- 2 min read
ತಂದೆಯ ಮರಣಹೊಂದಿದುದನ್ನೂ ರಾಮ ಲಕ್ಷ್ಮಣರು ಕಾಡಿಗೆ ಹೋಗಿರುವುದನ್ನೂ ಕೇಳಿ ಪರಮ ದುಃಖಿತನಾದ ಭರತನು, "ಹತಭಾಗ್ಯನಾಗಿರುವ, ತಂದೆಯಿಂದಲೂ - ತಂದೆಗೆ ಸಮಾನನಾದ ಅಣ್ಣನಿಂದಲೂ ವಿಹೀನನಾಗಿ ಶೋಕ ಸಾಗರದಲ್ಲಿ ಮುಳುಗಿರುವ ನನಗೆ ರಾಜ್ಯದಿಂದ ಏನಾಗಬೇಕಿದೆ? ತಂದೆಯನ್ನು ಕಳೆದುಕೊಂಡು ದುಃಖ ಪಡುತ್ತಿರುವ ನನಗೆ, ಯಾತನೆಯಾಗುತ್ತಿರುವ ಗಾಯದ ಮೇಲೆ ಉಪ್ಪುಸುರಿದಂತೆ ನೀನು ಮತ್ತೂ ದುಃಖವನ್ನುಂಟು ಮಾಡಿರುವೆ. ತಂದೆಯನ್ನು ಪ್ರೇತನನ್ನಾಗಿಯೂ ರಾಮನನ್ನು ತಾಪಸನನ್ನಾಗಿಯೂ ಮಾಡಿಬಿಟ್ಟೆ."

"ರಾಜ್ಯ ಲುಬ್ದಳಾದ , ಐಶ್ವರ್ಯ ಲುಬ್ದಳಾದ, ಅಧಿಕಾರ ಲುಬ್ದಳಾದ ನಿನಗೆ ನಾನು ರಾಮನ ವಿಷಯದಲ್ಲಿ ಎಷ್ಟು ಪ್ರೀತ್ಯದರಗಳಿಂದಲೂ ಭಕ್ತಿಯಿಂದಲೂ ಇದ್ದೆನೆಂಬ ವಿಷಯವು ತಿಳಿದಿರುವೆ ಎಂದು ಭಾವಿಸುತ್ತೇನೆ ಈ ಕಾರಣದಿಂದಲೇ ನೀನು ರಾಜ್ಯದ ಸಲುವಾಗಿ ಇಷ್ಟೊಂದು ಅನರ್ಥಗಳನ್ನು ಮಾಡಿರುವೆ."
"ಅಮ್ಮ! ಒಂದು ವೇಳೆ ನನಗೆ ರಾಜ್ಯವಾಳುವ ಸಾಮರ್ಥ್ಯವು ಇರಬಹುದು. ಉಪಾಯಗಳಿಂದಲೂ ಬುದ್ಧಿ ಬಲದಿಂದಲೂ ನಾನು ರಾಜ್ಯವಾಳುವ ಶಕ್ತಿಯನ್ನೂ ಹೊಂದಿರಬಹುದು. ಆದರೂ ಪುತ್ರ ವಾತ್ಸಲ್ಯ ಒಂದನ್ನೇ ಪ್ರಧಾನವಾಗಿ ಇಟ್ಟುಕೊಂಡು ಕಾರ್ಯ ಮಾಡಿರುವ ನಿನ್ನ ಮನೋಭಿಲಾಷೆಯನ್ನು ಖಂಡಿತವಾಗಿಯೂ ಪೂರ್ಣಗೊಳಿಸುವುದಿಲ್ಲ. ರಾಮನೇನಾದರೂ ನಿನ್ನನ್ನು ತನ್ನ ತಾಯಿಗೆ ಸಮಾನಳೆಂದು ಭಾವಿಸದೆ ಇದ್ದಿದ್ದರೆ ಇಷ್ಟೊಂದು ಅನರ್ಥಗಳಿಗೆ ಕಾರಣಳಾದ ಪಾಪಿಷ್ಠೆಯಾದ ನಿನ್ನನ್ನು ಪರಿತ್ಯಾಗ ಮಾಡಿ ಬಿಡುತ್ತಿದ್ದೆನು. ನಮ್ಮ ಕುಲದಲ್ಲಿ ಎಲ್ಲರಿಗಿಂತಲೂ ಜೇಷ್ಠನಾದವನಿಗೇ ಪಟ್ಟಗಟ್ಟುತ್ತಾರೆ. ಉಳಿದ ಅವನ ತಮ್ಮಂದಿರು ಏಕಾಗ್ರ ಚಿತ್ತರಾಗಿ ಅಣ್ಣನನ್ನೇ ಅನುಸರಿಸಿಕೊಂಡಿರುತ್ತಾರಲ್ಲವೇ?ನಿರ್ದಯಳೇ! ರಾಜಧರ್ಮವೇನೆಂಬುದನ್ನು ನೀನು ತಿಳಿದವಳಾಗಿಲ್ಲ. ಅನಾದಿಕಾಲದಿಂದ ನಡೆದು ಬಂದಿರುವ ರಾಜರ ಆಚಾರ ವ್ಯವಹಾರಗಳೂ ನಿನಗೆ ತಿಳಿಯವು. ನಿನ್ನ ಪೂರ್ವಜರು ಮಹಾಭಾಗ್ಯ ಶಾಲಿಗಳಾದ, ಸದಾಚಾರ ಸಂಪನ್ನರಾದ ರಾಜರೇ ಆಗಿದ್ದರು. ಅಂತಹವರ ವಂಶದಲ್ಲಿ ಹುಟ್ಟಿರುವ ನಿನ್ನ ಬುದ್ಧಿಯು ಏಕೆ ಮೋಹವಶವಾಯಿತು? ನನ್ನ ಜೀವಿತಕ್ಕೆ ಆತಂಕಕಾರಿಯಾದ ವ್ಯಸನವೊಂದನ್ನು ನೀನು ಕಲ್ಪಿಸಿರುವೆ. ಈಗ ನಾನು ನಿನ್ನ ಇಚ್ಛೆಗೆ ವ್ಯತಿರಿಕ್ತವಾಗುವುದನ್ನೇ ಮಾಡುತ್ತೇನೆ. ನಿನಗೆ ಬೇಡವಾದುದನ್ನು ಮಾಡುವ ಸಲುವಾಗಿ ನಾನೀಗಲೇ ಕಾಡಿಗೆ ಹೋಗಿ ಪಾಪರಹಿತನಾದ ಸ್ವಜನ ಪ್ರಿಯನಾದ ನಮ್ಮಣ್ಣನನ್ನು ಅರಣ್ಯದಿಂದ ಕರೆತರುತ್ತೇನೆ. ಅವನನ್ನು ಅಯೋಧ್ಯೆಗೆ ಕರೆತಂದು ಸುಪ್ರತಿಷ್ಠಿತವಾದ ಅಂತಃಕರಣದಿಂದಲೇ ದೇದೀಪ್ಯಮಾನವಾದ ತೇಜಸ್ಸುಳ್ಳ ಶ್ರೀರಾಮನಿಗೆ ದಾಸನಾಗಿ ಅವನ ಸೇವೆಯನ್ನು ಮಾಡುತ್ತೇನೆ."
"ಪಾಪಿಷ್ಟಳೇ! ಕ್ರೂರ ಸ್ವಭಾವದವಳೇ! ದುಷ್ಟಚಾರಿಣಿಯೇ! ನಿನ್ನನ್ನು ಧರ್ಮವೇ ಪರಿಚಯಿಸಿದೆ. ಆದುದರಿಂದ ನೀನು ಈ ಗಲೇ ರಾಜ್ಯವನ್ನು ಬಿಟ್ಟು ಹೊರಟು ಹೋಗು. ನೀನು ಈ ರಾಜ್ಯದಲ್ಲಿರಲು ಖಂಡಿತವಾಗಿಯೂ ಯೋಗ್ಯಳಲ್ಲ. ನನ್ನನ್ನು ಸತ್ತುಹೋದನೆಂದೇ ಭಾವಿಸಿ, ಜೀವನ ಪರ್ಯಂತವಾಗಿ ಗೋಳಾಡುತ್ತಲೇ ಇರು. ಪತಿಯನ್ನೂ ಕೊಂದು ರಾಮನನ್ನೂ ಕಾಡಿಗೆ ಓಡಿಸಿ ಕುಲವನ್ನೇ ವಿನಾಶಗೊಳಿಸಿರುವ ಕಾರಣ ಭ್ರೂಣ ಹತ್ಯಾ ಪಾಪಕ್ಕೆ ನೀನು ಗುರಿಯಾಗುವೆ. ಈ ಪಾಪದ ಫಲವಾಗಿ ನೀನು ನರಕಕ್ಕೆ ಹೋಗು. ನೀನು ತಾಯಿಯ ರೂಪದಲ್ಲಿರುವೆಯೇ ಹೊರತು ನಿನ್ನಲ್ಲಿ ನಿಜವಾದ ತಾಯಿಯ ಸ್ವಭಾವವಿಲ್ಲ. ಸತ್ಯ ಪರಾಕ್ರಮನಾದ ರಾಮನು ಅಯೋಧ್ಯೆಗೆ ಬಂದುಬಿಟ್ಟರೆ ನಿನ್ನ ಹೊಟ್ಟೆಯಲ್ಲಿ ಹುಟ್ಟಿರುವುದರಿಂದ ಪ್ರಾಪ್ತವಾಗಿರುವ ಕಲ್ಮಷವನ್ನು ತೊಡೆದುಕೊಂಡು ನಾನೂ ಕೃತಕೃತ್ಯನಾಗುತ್ತೇನೆ."
ಹೀಗೆ ತಾಯಿಯನ್ನು ನಿಂದಿಸುತ್ತಿದ್ದ ಭರತನು ಸರ್ಪ ಬಸುಗುಟ್ಟುವಂತೆ ಸುಧೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಅರಣ್ಯದಲ್ಲಿರುವ ಆನೆಯ ಅಂಕುಶ-ತೋಮರಗಳಿಂದ ಪೆಟ್ಟು ತಿಂದು ಕೆಳಗೆ ಬೀಳುವಂತೆ ದುಃಖಾದಿತ್ಯದಿಂದ ಭೂಮಿಯ ಮೇಲೆ ಬಿದ್ದನು. ಆ ಸಮಯದಲ್ಲಿ ಭರತನ ಕಣ್ಣುಗಳು ಕೆಂಪಾಗಿದ್ದವು. ಉಟ್ಟಿದ್ದ ಬಟ್ಟೆಗಳೆಲ್ಲವೂ ಮಲಿನವಾಗಿದ್ದವು. ತೊಟ್ಟಿದ್ದ ಆಭರಣಗಳೆಲ್ಲವೂ ಕಳಚಿ ಕೆಳಗೆ ಬಿದ್ದಿದ್ದವು.ಭೂಮಿಯ ಮೇಲೆ ಬಿದ್ದಿದ್ದ ರಾಜಪುತ್ರನಾದ ಭರತನು ಉತ್ಸವದ ಕೊನೆಯಲ್ಲಿ ಮುದುರಿ ಬಿದ್ದಿರುವ ಇಂದ್ರನ ಧ್ವಜದಂತೆಯೇ ಕಾಣುತ್ತಿದ್ದನು.




Comments