ದಶರಥನಿಲ್ಲದ ಅಯೋಧ್ಯೆ (ರಾಮಾಯಣ ಕಥಾಮಾಲೆ 41)
- Ganapati Hegde Moodkani

- 6 hours ago
- 3 min read
ರಾಜನು ಸತ್ತು ಹೋದ ವಿಷಯವು ಕರ್ಣಾಕರ್ಣಿಕೆಯಾಗಿ ರಾಜನ ಪರಿವಾರದವರೆಲ್ಲರಿಗೂ ತಿಳಿಯಿತು. ಕೈಕೆ ಮೊದಲಾದ ಸ್ತ್ರೀಯರು ದಶರಥನಿದ್ದ ಅಂತಪುರಕ್ಕೆ ಗೋಳಾಡುತ್ತಾ ಬಂದು ಗತಪ್ರಾಣನಾಗಿ ಮಲಗಿದ್ದ ರಾಜನನ್ನು ಕಂಡು ಶೋಕ ಸಂತಪ್ತರಾಗಿ ಮೂರ್ಛೆ ಹೊಂದಿ ಕೆಳಗೆ ಬಿದ್ದರು. ಕೌಸಲ್ಯೆಯೇ ಮೊದಲಾದ ಸ್ತ್ರೀಯರು ಮಾಡುತ್ತಿದ್ದ ರೋಧನಕ್ಕೆ ಕೈಕೆ ಪ್ರಮುಖರಾದ ಸ್ತ್ರೀಯರ ಗೋಳಾಟವು ಸೇರಿ ಶಬ್ದವು ಇಮ್ಮಡಿಯಾಗಿ ದೊಡ್ಡದಾದ ಪ್ರತಿಧ್ವನಿಯನ್ನು ಉಂಟುಮಾಡಿತು. ಜನರೆಲ್ಲರೂ ಭಯಗೊಂಡು ಭ್ರಾಂತರಾಗಿ ವಿಷಯವೇನೆಂಬುದನ್ನು ತಿಳಿಯುವ ಉತ್ಸುಕತೆಯಿಂದ ಅರಮನೆಗೆ ಧಾವಿಸಿದರು. ಎಲ್ಲೆಲ್ಲಿಯೂ ದಶರಥನ ಬಂಧು-ದಾಯಾದಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆನಂದವೆಂಬುದು ಉಡುಗಿಹೋಯಿತು. ಎಲ್ಲೆಲ್ಲಿಯೂ ಹಾಹಾಕಾರ ಶಬ್ದಗಳೇ ಕೇಳಿ ಬರುತ್ತಿದ್ದವು. ಯಶೋವಂತನಾದ ದಶರಥನು ದಿವಂಗತನಾದನೆಂದು ನಿಶ್ಚಯಿಸಿದ ಪತ್ನಿಯರೆಲ್ಲರೂ ಅವನನ್ನು ಸುತ್ತುವರಿದು ಬಹುದುಃಖಿತರಾಗಿ ಕರುಣಾಜನಕವಾದ ರೀತಿಯಲ್ಲಿ ಆರ್ತಾಲಾಪಮಾಡುತ್ತ ರಾಜನ ಎರಡು ತೋಳುಗಳನ್ನು ಹಿಡಿದುಕೊಂಡು ಅನಾಥರೋಪಾದಿಯಲ್ಲಿ ಗೋಳಾಡಿದರು.

ನಂದಿಹೋದ ಬೆಂಕಿಯಂತೆಯೂ, ಬತ್ತಿಹೋದ ಸಮುದ್ರದಂತೆಯೂ, ಕಾಂತಿ ಇಲ್ಲದ ಸೂರ್ಯನಂತೆಯೂ ಇದ್ದ ಸ್ವರ್ಗಸ್ಥನಾದ ಪತಿಯ ಶರೀರವನ್ನು ನೋಡಿ ಕಂಬನಿ ತುಂಬಿದ ಕಣ್ಣುಗಳಿಂದ ಕೂಡಿದ್ದ, ಹಲವಾರು ಬಗೆಯ ದುಃಖಗಳಿಂದ ಪೀಡಿತಳಾಗಿದ್ದ ಕೌಸಲ್ಯಾದೇವಿಯು ರಾಜನ ತಲೆಯನ್ನು ತೊಡೆಯ ಮೇಲೆ ಇಟ್ಟುಕೊಂಡು ಕೈಕೇಯಿಗೆ "ಕ್ರೂರಿಯೇ! ದುರಾಚಾರಳೇ! ಭರತನಿಗೇ ಪಟ್ಟಗಟ್ಟಬೇಕೆಂಬುದರಲ್ಲಿಯೇ ಏಕಾಗ್ರ ಚಿತ್ತಳಾದ ನೀನು ಪತಿಯನ್ನೇ ಪರಿತ್ಯಜಿಸಿ ಇಷ್ಟಾರ್ಥವನ್ನು ಸಾಧಿಸಿದೆ. ಈಗ ನಿನ್ನ ಆಸೆಯನ್ನು ಪೂರೈಸಿಕೋ. ನಿಷ್ಕಂಟಕವಾದ ರಾಜ್ಯವನ್ನು ಉಪಭೋಗಿಸು. ರಾಮನು ನನ್ನನ್ನು ಬಿಟ್ಟು ಕಾಡಿಗೆ ಹೊರಟು ಹೋದನು. ಇದರಿಂದಾಗಿ ಅರಣ್ಯ ಮಾರ್ಗದಲ್ಲಿ ಸಹಾಯಕರಾದ ಜೊತೆಪಯಣಿಗರಿಂದ ತಪ್ಪಿಸಿಕೊಂಡವಳಂತಿರುವ ನಾನು ಇನ್ನು ಮುಂದೆ ಜೀವಿಸಲು ಉಸ್ತುಕಳಾಗಿಲ್ಲ. ಕಿಂಪಾಕಫಲವನ್ನು ತಿನ್ನುವವನು ತಾತ್ಕಾಲಿಕವಾದ ರುಚಿಗೆ ಮನಸೋತು ತಿನ್ನುವನೇ ಹೊರತು ಆ ಹಣ್ಣಿನ ಸೇವನೆಯಿಂದ ಮುಂದೆ ಆಗತಕ್ಕ ದುಷ್ಪರಿಣಾಮವನ್ನು ಮನಸ್ಸಿಗೆ ತಂದುಕೊಳ್ಳುವುದಿಲ್ಲ. ಇದೇ ರೀತಿಯಲ್ಲಿ ಲೋಭಿಯೂ ಕಾರ್ಯ ಕಾರ್ಯಗಳ ವಿವೇಚನೆ ಇಲ್ಲದೆ ಅರ್ಥ ಸಂಗ್ರಹ ಮಾಡುವನೇ ಹೊರತು ಅದರಿಂದ ಉಂಟಾಗುವ ದೋಷವನ್ನು ಪರಿಗಣಿಸುವುದಿಲ್ಲ. ಅಂತಯೇ ಕೈಕೇಯಿಯೂ ಕುಬ್ಜೆಯ ಮಾತನ್ನು ಕೇಳಿ ರಾಜ್ಯಲುಬದ್ದಳಾಗಿ ಭರತನಿಗೆ ಪಟ್ಟಗಟ್ಟಬೇಕೆಂದು ಹಠ ಹಿಡಿದಳು. ಇದರ ಪರಿಣಾಮವಾಗಿ ಇಂದು ರಘುವಂಶವೇ ನಾಶವಾಯಿತು" ಎಂದು ಹೇಳಿದಳು.
ರಾಜ್ಯ ವ್ಯವಹಾರಗಳಲ್ಲಿ ನಿಯುಕ್ತರಾದ ಮಂತ್ರಿಗಳು ದಶರಥನ ಪಾರ್ಥಿವ ಶರೀರವನ್ನು ಆನಂದಿಸಿಕೊಂಡು ರೋದನಮಾಡುತ್ತಿದ್ದ ಪತಿವ್ರತಾ ಶಿರೋಮಣಿಯಾದ, ದುಃಖ ಪೀಡಿತಳಾದ ಕೌಸಲ್ಯಾದೇವಿಯನ್ನು ಸೇವಕೀಯರ ಮೂಲಕವಾಗಿ ಬೇರ್ಪಡಿಸಿ ಬೇರೆಡೆಗೆ ಕಳುಹಿಸಿದರು. ಆನಂತರದಲ್ಲಿ ಅಮಾತ್ಯ ಶ್ರೇಷ್ಠರು ವಶಿಷ್ಠರ ಆದೇಶದಂತೆ ರಾಜನ ಪಾರ್ಥಿವ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಜೋಪಾನವಾಗಿಟ್ಟು ಮುಂದಿನ ಕಾರ್ಯಗಳನ್ನು ನೆರವೇರಿಸಿದರು. ದಶರಥನು ಮರಣ ಹೊಂದಿದ ಆ ಸಮಯದಲ್ಲಿ ಅವನಿಗಿದ್ದ ನಾಲ್ವರು ಮಕ್ಕಳಲ್ಲಿ ಒಬ್ಬನಾದರೂ ತಂದೆಯ ಬಳಿಯಲ್ಲಿರಲಿಲ್ಲ ಆದುದರಿಂದ ಮಕ್ಕಳು ಬರುವವರೆಗೂ ರಾಜನ ಶವ ಸಂಸ್ಕಾರವನ್ನು ಮಾಡಲು ಇಚ್ಚಿಸದ ಸರ್ವಜ್ಞರಾದ ಮಂತ್ರಿಗಳು ಮಕ್ಕಳ ಆಗಮನವನ್ನು ನಿರೀಕ್ಷಿಸಿ ರಾಜನ ಪಾರ್ಥಿವ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟು ರಕ್ಷಿಸುತ್ತಿದ್ದರು.
ಅಂದಿನ ರಾತ್ರಿಯೆಲ್ಲವೂ ಪುರಜನರ ಮತ್ತು ರಾಜ ಪರಿವಾರದವರ ಗೋಳಾಟದಿಂದಲೇ ಕಳೆಯಿತು. ಆನಂದ ಲೇಶವೂ ಇರಲಿಲ್ಲ. ಕಣ್ಣೀರನ್ನು ಕುತ್ತಿಗೆಯವರೆಗೂ ಸುರಿಸುತ್ತಿದ್ದ ಜನರಿಂದ ಅರಮನೆಯ ಪ್ರದೇಶವು ನಿಬಿಡವಾಗಿದ್ದಿತು. ಅತಿ ದೀರ್ಘವಾಗಿ ಕಾಣುತ್ತಿದ್ದ ಆ ರಾತ್ರಿಯು ಕಳೆದು ಹೋಯಿತು.
ಸೂರ್ಯೋದಯವಾದ ಬಳಿಕ ರಾಜ ಕಾರ್ಯ ಪ್ರವರ್ತಕರಾದ ಬ್ರಾಹ್ಮಣರು ವಿದ್ವಾಂಸರ ಸಭೆಯೊಂದನ್ನು ಸೇರಿಸಿದರು. ರಾಜ ಪುರೋಹಿತರಾದ ವಸಿಷ್ಟರನ್ನು ಪುರಸ್ಕರಿಸಿ ಮಾರ್ಕಂಡೇಯ, ಮೌದ್ಗಲ್ಯ, ವಾಮದೇವ, ಕಶ್ಯಪ, ಕಾತ್ಯಾಯನ, ಗೌತಮ, ಮಹಾಯಶೋವಂತನಾದ ಜಾಬಾಲಿ ಇವರೇ ಮುಂತಾದ ವಿದ್ವಾಂಸರು ಅಮಾತ್ಯರೊಡನೆ ಸಭೆಯಲ್ಲಿ ಉಪಸ್ಥಿತರಾಗಿದ್ದರು. ಮುಂದೆ ಮಾಡಬೇಕಾದ ಕರ್ತವ್ಯದ ವಿಷಯವಾಗಿ ಒಬ್ಬೊಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಯ ಮುಂದೆ ಮಂಡಿಸಲು ಪ್ರಾರಂಭಿಸಿದರು.
ಪುತ್ರವಿಯೋಗದ ಶೋಕದಿಂದಲೇ ನಮ್ಮ ದಶರಥ ಮಹಾರಾಜನು ಅಸುನೀಗಿದನು. ರಾಜನು ಅವಸಾನ ಹೊಂದಿದ ನಂತರ ನಮಗೆ ದಿವಸವನ್ನು ಕಳೆಯುವುದೇ ಬಹುದುಸ್ತರವಾಗಿದೆ. ನಾವು ದುಃಖದಿಂದ ಕಳೆದ ಈ ರಾತ್ರಿ ನೂರು ವರ್ಷಗಳನ್ನು ಕಳೆದಂತೆ ನಮ್ಮೆಲ್ಲರಿಗೂ ಭಾಸವಾಗುತ್ತಿದೆ. ಇಂದಿನ ನಮ್ಮ ರಾಜ್ಯದ ಪರಿಸ್ಥಿತಿಯು ಹೀಗಿದೆ: ರಾಜನು ಸ್ವರ್ಗಸ್ಥನಾದನು. ಇದಕ್ಕೆ ಮೊದಲೇ ಹಿರಿಯ ಮಗನಾದ ರಾಮನು ಅರಣ್ಯಕ್ಕೆ ಹೊರಟು ಹೋದನು. ರಾಜನ ಮತ್ತೊಬ್ಬ ಮಗನಾದ ತೇಜಸ್ವಿಯಾದ ಲಕ್ಷ್ಮಣನೂ ಶ್ರೀರಾಮನ ಜೊತೆಯಲ್ಲಿಯೇ ಕಾಡಿಗೆ ಹೊರಟು ಹೋದನು. ಶತ್ರು ವಿದ್ವಾಂಸಕರಾದ ಭರತ ಶತ್ರುಘ್ನರು ಕೆಕಯ ರಾಜ್ಯದ ರಾಜಧಾನಿಯಾದ ರಾಜಗ್ರಹದಲ್ಲಿ ಅವರ ತಾತನ ರಮ್ಯವಾದ ಅರಮನೆಯಲ್ಲಿ ವಾಸವಾಗಿದ್ದಾರೆ. ಈಗಲೇ ಈ ಕೋಸಲ ರಾಜ್ಯಕ್ಕೆ ಇಕ್ಷ್ಶ್ವಕುವಂಶದ ರಾಜಕುಮಾರರಲ್ಲಿ ಒಬ್ಬರನ್ನು ರಾಜನನ್ನಾಗಿ ಮಾಡಬೇಕಾಗಿದೆ. ರಾಜನೇ ಇಲ್ಲದ ನಮ್ಮ ರಾಷ್ಟ್ರವು ಅರಾಜಕತೆಯಿಂದ ವಿನಾಶ ಹೊಂದಬಾರದು.
ಸಾಧುವಾದ ಕಾರ್ಯವು ಯಾವುದು, ಅಸಾಧುವಾದ ಕಾರ್ಯವು ಯಾವುದು ಎಂಬುದನ್ನು ವಿವೇಚಿಸಿ ಕಾರ್ಯ ಮಾಡುವ ರಾಜನೇ ಈ ಲೋಕದಲ್ಲಿರುವದಿದ್ದರೆ - ಸೂರ್ಯನಿಲ್ಲದಿದ್ದರೆ ಪ್ರಪಂಚವು ಗಾಢಾಂಧಕಾರದಲ್ಲಿ ಮುಳುಗಿ ಹೋಗುವಂತೆ ಅಜ್ಞಾನಾಂಧಕಾರದಲ್ಲಿ ಮುಳುಗಿ ಹೋಗುತ್ತಿದ್ದಿತು. ಯಾವುದೂ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ಪೂಜ್ಯರಾದ ವಸಿಷ್ಠ ಮಹರ್ಷಿಗಳೇ! ನಮ್ಮ ಮಹಾರಾಜನು ಬದುಕಿದ್ದಾಗಲೂ ಸಮುದ್ರವು ದಡವನ್ನು ಮೀರಿ ಹೋಗದಿರುವಂತೆ ತಮ್ಮ ಆಜ್ಞೆಯನ್ನು ಯಾರೂ ಉಲ್ಲಂಘಿಸುತ್ತಿರಲಿಲ್ಲ. ದ್ವಿಜವರ್ಯರೇ! ನಮ್ಮ ಈಗಿನ ಪರಿಸ್ಥಿತಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡು ಈ ವಂಶಕ್ಕೆ ಸೇರಿದ ರಾಜಕುಮಾರರಲ್ಲಿ ಸಮರ್ಥನಾದವನೊಬ್ಬರನ್ನು ಕರೆತಂದು ನೀವೇ ಅವನಿಗೆ ಪಟ್ಟಗಟ್ಟಿರಿ. ರಾಜನಿಲ್ಲದಿದ್ದರೆ ಈ ರಾಜ್ಯವು ಗೊಂಡಾರಣ್ಯವೇ ಆಗುತ್ತದೆ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸುಮಂತ್ರನೆ ಮೊದಲಾದ ಮಂತ್ರಿಗಳ ಮತ್ತು ಮಾರ್ಕಂಡೇಯರೇ ಮೊದಲಾದ ಬ್ರಾಹ್ಮಣರ ಮಾತುಗಳನ್ನು ಕೇಳಿದ ನಂತರ ವಸಿಷ್ಠರು ಮಿತ್ರರನ್ನು, ಅಮಾತ್ಯರನ್ನು, ಬ್ರಾಹ್ಮಣರನ್ನು, ಅಲ್ಲಿ ನೆರೆದಿದ್ದ ಇತರ ಎಲ್ಲಾ ಪ್ರಜೆಗಳನ್ನು ಕುರಿತು " ಜೇಷ್ಠನಾದ ಶ್ರೀರಾಮನು ಕಾಡಿಗೆ ಹೊರಟು ಹೋಗಿರುವುದರಿಂದ ದಶರಥನು ಕೈಕೇಯಿಗಿತ್ತಿರುವ ವರಕ್ಕೆ ಅನುಗುಣವಾಗಿ ನಾವು ಭರತನಿಗೇ ಪಟ್ಟಗಟ್ಟಬೇಕಾಗಿದೆ. ಈಗ ಭರತನು ಶತ್ರು ಶತ್ರುಘ್ನನೊಡನೆ ತನ್ನ ಸಹೋದರ ಮಾವನ ಮನೆಯಲ್ಲಿ ಸುಖವಾಗಿದ್ದಾನೆ. ಈ ಇಬ್ಬರು ಅಣ್ಣತಮ್ಮಂದಿರನ್ನು ಕರೆತರುವ ಸಲುವಾಗಿ ಶೀಘ್ರವಾಗಿ ಹೋಗಲು ಸಮರ್ಥರಾಗಿರುವ ದೂತರು ವೇಗವುಳ್ಳ ಕುದುರೆಗಳನ್ನೇರಿ ಈಗಲೇ ರಾಜಗ್ರಹಕ್ಕೆ ಪ್ರಯಾಣ ಮಾಡಲಿ. ಈ ಸಂದರ್ಭದಲ್ಲಿ ನಾವು ಬೇರೆ ಏನು ಮಾಡಲು ಸಾಧ್ಯವಿದೆ? " ಎಂದರು.
ವಸಿಷ್ಟರ ಆ ಮಾತುಗಳನ್ನು ಕೇಳಿದೊಡನೆಯೇ 'ಹೋಗಿ ಬರಲಿ, ಶೀಘ್ರಗಾಮಿಗಳಾದ ರಾಜಭಟ್ಟರು ರಾಜಗ್ರಹಕ್ಕೆ ಒಡನೆಯೇ ಹೋಗಿ ಬರಲಿ' ಎಂಬ ಸಭ್ಯರಾಡಿದ ಮಾತುಗಳು ನಾಲ್ಕು ನಿಟ್ಟಿನಿಂದಲೂ ಕೇಳಿ ಬಂದವು.
ಆ ಮಾತುಗಳನ್ನು ಕೇಳಿ ವಸಿಷ್ಠರು "ಸಿದ್ದಾರ್ಥ, ವಿಜಯ, ಜಯಂತ, ಅಶೋಕ, ನಂದನ -ನೀವು ಮುಂದೆ ಬನ್ನಿರಿ. ನೀವು ಈ ಸಮಯದಲ್ಲಿ ಮಾಡಬೇಕಾದ ಕರ್ತವ್ಯವೇನೆಂಬುದನ್ನು ಗಮನವಿಟ್ಟು ಕೇಳಿರಿ. ನೀವು ಮಾಡಬೇಕಾದ ಕರ್ತವ್ಯವನ್ನು ವಿಶದವಾಗಿ ಹೇಳುತ್ತೇನೆ. ನೀವೇಗಳ ಶೀಘ್ರವಾಗಿ ರಾಜಗೃಹಕ್ಕೆ ಪ್ರಯಾಣ ಮಾಡಿರಿ. ರಾಜನ ಮರಣದಿಂದ ಉಂಟಾಗಿರುವ ದುಃಖವನ್ನು ಪರಿತ್ಯಜಿಸಿ ನನ್ನ ಅಜ್ಞಾನಸಾರವಾಗಿ ಭರತನಿಗೆ ನೀವು ಈ ಮಾತನ್ನು ಹೇಳಬೇಕು. 'ರಾಜಕುಮಾರ, ಪುರೋಹಿತರಾದ ವಸಿಷ್ಠರು ಮತ್ತು ಎಲ್ಲ ಮಂತ್ರಿಗಳು ನಿನ್ನ ಯೋಗ ಕ್ಷೇಮಗಳನ್ನು ಕೇಳಿದ್ದಾರೆ. ಬಹುಕ್ಲಿಷ್ಟವಾದ ಈಗಾಗಲೇ ಕಾಲ ಮೀರಿರುವ ಕಾರ್ಯವೊಂದನ್ನು ನೀನು ನಿರ್ವಹಿಸಬೇಕಾಗಿದೆ. ಆದುದರಿಂದ ನೀನು ಈಗಲೇ ಅಯೋಧ್ಯೆಗೆ ಹರಟು ಬಾ' ಎಂದು ಹೇಳಬೇಕು. ಶ್ರೀ ರಾಮನನ್ನು ಅರಣ್ಯಕ್ಕೆ ಕಳುಹಿಸಿರುವ ವಿಷಯವನ್ನಾಗಲೀ ರಾಜನು ಮೃತನಾಗಿರುವ ವಿಷಯವನ್ನಾಗಲೀ ನೀವು ಭರತನಿಗೆ ಹೇಳಬಾರದು" ಎಂದರು. ವಸಿಷ್ಠರ ಆದೇಶದಂತೆ ರಾಜಭಟರು ಸ್ವಲ್ಪವೂ ಅನಾದರಣೆ ಮಾಡದೆ ಬಹಳ ಶೀಘ್ರವಾಗಿ ರಾತ್ರಿಯಲ್ಲಿಯೇ ರಾಜಗೃಹವನ್ನು ಸೇರಿದರು.




Comments