top of page

ಭರತನ‌ ಅಯೋಧ್ಯಾಗಮನ (ರಾಮಾಯಣ ಕಥಾಮಾಲೆ 42)

ಭರತನ‌ ಅಯೋಧ್ಯಾಗಮನ

ಅಯೋಧ್ಯೆಯ ರಾಜಭಟರು ಬಹಳ ದೂರ ಪ್ರಯಾಣ ಮಾಡಿ ರಾಜಗೃಹಕ್ಕೆ ಬಂದು ಅರಮನೆಯನ್ನು ಪ್ರವೇಶಿಸಿದರು. ಕೇಕಯ ರಾಜ್ಯದ ರಾಜಪುತ್ರನಾದ ಯುಧಾಜಿತನು ಅಯೋಧ್ಯೆಯ ರಾಜಭಟರನ್ನು ಯಥಾಯೋಗ್ಯವಾಗಿ ಸತ್ಕರಿಸಿದನು. ಬಳಿಕ ರಾಜ ಭಟರು ಭರತನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ "ರಾಜಕುಮಾರ! ಪುರೋಹಿತರು ಮತ್ತು ಮಂತ್ರಿಗಳು ನಿನ್ನ ಕುಶಲವನ್ನು ಕೇಳಿದ್ದಾರೆ. ಸಮಯವು ಮೀರುವುದಕ್ಕೆ ಮುನ್ನವೇ ನೀನು ಒಂದು ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಆದುದರಿಂದ ಶೀಘ್ರವಾಗಿ ಇಲ್ಲಿಂದ ಹೊರಡು. ನಾವು ಅಯೋಧ್ಯೆಯಿಂದ ತಂದಿರುವ ಅನರ್ಘವಾದ ಈ ವಸ್ತ್ರಾಭರಣಗಳನ್ನು ಸ್ವೀಕರಿಸಿ ಇವುಗಳನ್ನು ನಿಮ್ಮ ತಾತನಿಗೂ ಮತ್ತು ಸೋದರ ಮಾವನಿಗೂ ಉಡುಗೊರೆಯಾಗಿ ಕೊಡು. ನಾವಿಲ್ಲಿ ಸುಮಾರು ಮೂವತ್ತು ಕೋಟಿ ವರಹಗಳ ಮೌಲ್ಯದ ವಸ್ತ್ರಾಭರಣಗಳನ್ನು ತಂದಿರುತ್ತೇವೆ. ಅದರಲ್ಲಿ ಇಪ್ಪತ್ತು ಕೋಟಿ ವರಹಗಳ ಮೌಲ್ಯದ ವಸ್ತುಗಳನ್ನು ನಿನ್ನ ಮಾತಾಮಹನಿಗೂ ಹತ್ತು ಕೋಟಿ ವರಹದ ಮೌಲ್ಯದ ವಸ್ತುಗಳನ್ನು ಸೋದರ ಮಾವನಿಗೂ ಉಡುಗೊರೆಯಾಗಿ ಕೊಡು" ಎಂದರು.


ರಾಜ ಭಟರು ಹೀಗೆ ಹೇಳಲು ಸ್ವಜನರಲ್ಲಿ ವಿಶೇಷವಾಗಿ ಪ್ರೀತಿಯನ್ನಿಟ್ಟಿದ್ದ ಭರತನು ಅವರು ತಂದಿದ್ದ ಉಡುಗೊರೆಗಳನ್ನು ಸ್ವೀಕರಿಸಿ ಆ ಅನರ್ಘವಾದ ವಸ್ತ್ರಾಭರ ವಸ್ತ್ರಾಭರಣಗಳನ್ನು ತಾತನಿಗೂ ಮತ್ತು ಸೋದರ ಮಾವನಿಗೂ ಅರ್ಪಿಸಿ ದೂತರನ್ನು ಯಥಾಯೋಗ್ಯವಾಗಿ ಸತ್ಕರಿಸಿ, "ರಾಜಭಟರೇ! ನಮ್ಮ ತಂದೆಯಾದ ದಶರಥನು ಕುಶಲಿಯಾಗಿರುವನೇ? ಮಹಾತ್ಮರಾದ ರಾಮ- ಲಕ್ಷ್ಮಣರು ನಿರೋಗದೃಢಕಾಯರಾಗಿರುವರೇ? ನನ್ನ ದೊಡ್ಡಮ್ಮನಾದ, ಪೂಜ್ಯಳಾದ, ಧರ್ಮದಲ್ಲಿಯೇ ನಿರತಳಾದ, ಇತರರಲ್ಲಿ ಸದ್ಗುಣಗಳನ್ನೇ ಕಾಣುವ, ಧೀಮಂತನಾದ ನಮ್ಮಣ್ಣನ ತಾಯಿಯಾದ ಕೌಸಲ್ಯ ದೇವಿಯು ಆರೋಗ್ಯದಿಂದಿರುವಳೇ? ಧರ್ಮಜ್ಞಳಾದ, ಲಕ್ಷ್ಮಣ-ಶತ್ರುಘ್ನರ ತಾಯಿಯಾದ ನನ್ನ ನಡುತಾಯಿಯು ಆರೋಗ್ಯದಿಂದಿರುವಳೇ!, ಸ್ವಾರ್ಥಿಯಾದ, ತಾನೇ ಎಲ್ಲರಿಗಿಂತಲೂ ಪ್ರಾಜ್ಞಳೆಂದು ಭಾವಿಸಿಕೊಂಡಿರುವ, ಹಠಮಾರಿಯೂ-ಕೋಪಿಷ್ಟಯೂ ಆಗಿರುವ ನನ್ನ ತಾಯಿಯಾದ ಕೈಕೆಯು ಆರೋಗ್ಯವಾಗಿರುವಳೇ? ಅವಳು ನನಗೆ ಏನಾದರೂ ಹೇಳಿಕಳುಹಿಸಿರುವಳೇ?" ಎಂದನು.


ಮಹಾತ್ಮನಾದ ಭರತನು ಹೀಗೆ ಪ್ರಶ್ನಿಸಲಾಗಿ ರಾಜಭಟರು ಸಂಕ್ಷೇಪವಾಗಿಯೂ, ವಿನಯಯುಕ್ತವಾಗಿಯೂ ಇದ್ದ ಈ ಮಾತುಗಳನ್ನು ಹೇಳಿದರು, "ರಾಜಕುಮಾರ! ನೀನು ಯಾರ - ಯಾರ ಕುಶಲವನ್ನು ಪ್ರಶ್ನಿಸಿದೆಯೋ ಅವರೆಲ್ಲರೂ ಕುಶಲಿಗಳಾಗಿಯೇ ಇರುವರು, ಪದ್ಮಸ್ಥಳಾದ ಮಹಾಲಕ್ಷ್ಮಿಯು ನಿನ್ನನ್ನು ಒರಿಸಲು ಕಾದು ನಿಂತಿದ್ದಾಳೆ. ಪ್ರಯಾಣಕ್ಕೆ ನಿನ್ನ ರಥವು ಈಗಲೇ ಸಿದ್ಧವಾಗಲಿ."


"ಹಾಗೆಯೇ ಆಗಲಿ ಅಯೋಧ್ಯೆಯಿಂದ ಬಂದಿರುವ ದೂತರು ಪ್ರಯಾಣ ಮಾಡಲು ಅವಸರಪಡಿಸುತ್ತಿದ್ದಾರೆ ಎಂದು ನಮ್ಮ ತಾತನಿಗೆ ಹೇಳಿ ಅವನ ಅನುಮತಿಯನ್ನು ಪಡೆದು ಹೊರಟುಬಿಡುತ್ತೇನೆ." ಹೀಗೆ ಭರತನು ರಾಜದೂತರಿಗೆ ಹೇಳಿ ಮಾತಾಮಹನ ಬಳಿಗೆ ಹೋಗಿ, "ತಾತ! ಅಯೋಧ್ಯಾ ಪಟ್ಟಣದಿಂದ ಬಂದಿರುವ ಈ ರಾಜ ಭಟರು ನನ್ನನ್ನು ಹೊರಡಲು ಅವಸರಪಡಿಸುತ್ತಿದ್ದಾರೆ. ಅವರ ಪ್ರೇರಣೆಯಂತೆ ನಾನೀಗ ನಮ್ಮ ತಂದೆಯ ಬಳಿಗೆ ಹೋಗಲಿದ್ದೇನೆ. ನೀನು ಯಾವಾಗ ನನ್ನನ್ನು ಸ್ಮರಿಸಿಕೊಳ್ಳುವೆಯೋ ಆಗಲೇ ನಾನು ಪುನಹ ಇಲ್ಲಿಗೆ ಬಂದುಬಿಡುತ್ತೇನೆ" ಎಂದನು.


ಭರತನು ಹೀಗೆ ಹೇಳಲು ಕೇಕಯರಾಜನು ಅವನನ್ನು ಬಾಚಿ ತಬ್ಬಿಕೊಂಡು ಮೈದಡವುತ್ತ , "ಹೋಗಿ ಬಾ, ಮಗು!‌ ಹೋಗಿಬರಲು ಅನುಮತಿಸಿದ್ದೇನೆ. ನಿನ್ನಂತಹ ಒಳ್ಳೆಯ ಮಗನನ್ನು ಪಡೆದು ಕೈಕೇಯಿಯು ಸುಪುತ್ರವತಿಯಾದಳು. ನಿನ್ನ ತಂದೆ ತಾಯಿಗಳಿಗೆ ಅವರ ಕುಶಲವನ್ನು ಕೇಳಿದೆನೆಂದು ಹೇಳು" ಎಂದನು.


ಭರತನು ಚತುರಂಗಬಲ ಸಮೇತನಾಗಿ ಶತ್ರುಘ್ನನೊಡನೆ ಕೇಕಯದೇಶದ ದೇಶದ ರಾಜಗೃಹದಿಂದ ಪೂರ್ವಾಭಿಮುಖವಾಗಿ ಹೊರಟರು. ಅಯೋಧ್ಯಾ ಪಟ್ಟಣವನ್ನು ತಲುಪಿದ ಅವರು ಅನಿಷ್ಠಸೂಚಕವಾದ ಅನೇಕ ದೃಶ್ಯಗಳನ್ನು ಅಯೋಧ್ಯಾ ಪಟ್ಟಣದಲ್ಲಿ ಕಂಡು ಅವೆಲ್ಲವನ್ನೂ ಸಾರಥಿಗೆ ವಿವರಿಸಿ ಹೇಳುತ್ತಾ, ದೀನ ಮನಸ್ಕನಾದ ಭರತನು ಅರಮನೆಗೆ ತೆರಳಿದನು. ಅಯೋಧ್ಯಾ ಪಟ್ಟಣದ ಚೌಕಗಳು, ಮನೆಗಳು, ರಾಜಭೀದಿಗಳು ಶೂನ್ಯವಾಗಿ ಕಾಣುತ್ತಿದ್ದವು. ಇಂದ್ರನ ಅಮರಾವತಿಯ ಶೋಭೆಗೆ ಸಮಾನವಾದ ಶೋಭೆಯಿಂದ ಕಂಗೊಳಿಸುತ್ತಿದ್ದ ಅಯೋಧ್ಯೆಯು ಅಂದು ದುಃಸ್ಥಿತಿಯಲ್ಲಿರುವುದನ್ನು ಕಂಡು ಭರತನು ದುಃಖ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋದನು.


ಎಂದೆಂದೂ ಕಾಣದಿದ್ದ ಅಪ್ರಿಯವಾದ ಅನೇಕ ದೃಶ್ಯಗಳನ್ನು ಭರತಾನು ಅಯೋಧ್ಯೆಯಲ್ಲಿ ಕಂಡನು. ತನ್ನ ಹುಟ್ಟೂರಿಗೆ ಬಂದುದ್ದಕ್ಕಾಗಿ ಮಹಾತ್ಮನಾದ ಭರತನು ಸ್ವಲ್ಪವೂ ಸಂತೋಷಿಸದೇ ತಲೆಯನ್ನು ತಗ್ಗಿಸಿಕೊಂಡು ಅತಿ ದೀನನಾಗಿ ತಂದೆಯ ಅರಮನೆಯನ್ನು ಪ್ರವೇಶಿಸಿದನು.

Comments


bottom of page