top of page

ತಂದೆಯ ಮರಣದ ವಿಷಯ ತಿಳಿದ ಭರತ (ರಾಮಾಯಣ ಕಥಾಮಾಲೆ 43)

ದಶರಥನ ಅರಮನೆಯಲ್ಲಿ ಭರತನು ತಂದೆಯನ್ನು ಕಾಣದೆ ತಾಯಿಯನ್ನು ಕಾಣುವ ಸಲುವಾಗಿ ಕೈಕೆಯಿಯ ಅಂತಃಪುರಕ್ಕೆ ಹೋದನು.ತನ್ನ ತಂದೆಯ ಮನೆಗೆ ಹೋಗಿದ್ದ ಪ್ರಿಯ ಪುತ್ರನು ಹಿಂದಿರುಗಿ ಬಂದುದನ್ನು ನೋಡಿ ಕೈಕೇಯಿಯು ಪರಮಹೃಷ್ಟಳಾಗಿ ಸುವರ್ಣಮಯವಾದ ಆಸನವನ್ನು ಬಿಟ್ಟು ಥಟ್ಟನೆ ಮೇಲೆದ್ದು ಬಂದಳು. ತಾನು ಪ್ರವೇಶ ಮಾಡಿದ ಅರಮನೆಯೂ ಕಾಂತಿಹೀನವಾಗಿರುವುದನ್ನು ಅವನು ಕಂಡನು. ಅಲ್ಲಿ ಭರತನು ತನ್ನ ತಾಯಿಯ ಶುಭಕರವಾದ ಎರಡು ಕಾಲುಗಳನ್ನು ಮುಟ್ಟಿ ನಮಸ್ಕರಿಸಿದನು. ಕೈಕೇಯಿಯು ಯಶೋವಂತನಾದ ಮಗನನ್ನು ಬಾಚಿ ತಬ್ಬಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮಾಯದಡಹುತ್ತ " ನೀನು ಇಲ್ಲಿಂದ ಪ್ರಯಾಣ ಮಾಡಿದಂದಿನಿಂದ ಹಿಂದಿರುಗುವವರೆಗೂ ಅಲ್ಲಿ ಏನೇನು ನಡೆಯಿತೋ ಅವೆಲ್ಲವನ್ನು ನನಗೆ ತಿಳಿಸು" ಎಂದಳು.


ಕೈಕೇಯಿಯು ಹೀಗೆ ಪ್ರಶ್ನಿಸಲಾಗಿ ರಾಜೀವಲೋಚನನಾದ ಭರತನು ಸಹೋದರ ಮಾವನ ಮನೆಯಲ್ಲಿ ನಡೆದ ಎಲ್ಲ ಸಂಗತಿಗಳನ್ನು ಕೈಕೇಯಿಗೆ ವಿವರವಾಗಿ ಹೇಳಿ, " ರಾಜದೂತರ ಮಾತಿನಂತೆ ನಾನು ಬಹಳ ಅವಸರವಾಗಿ ಇಲ್ಲಿಗೆ ಬರಬೇಕಾಗಿರುವುದರಿಂದ ಪರಿವಾರದವರಿಗೂ ಮತ್ತು ಸೈನಿಕರಿಗೂ ನಿಧಾನವಾಗಿ ಬರುವಂತೆ ತಿಳಿಸಿ ನಾನು ಅವಸರದಿಂದ ಬಂದು ಬಿಟ್ಟೆನು. ಅದು ಸರಿ. ನಾನೀಗ ಕೆಲವು ವಿಷಯಗಳನ್ನು ಕೇಳಲು ಬಯಸಿರುವೆನು ದಯಮಾಡಿ ಉತ್ತರಿಸು. ಸುವರ್ಣಮಯವಾದ ನಿನ್ನ ಹಂಸ ತೂಲಿಕಾತಲ್ಪವು ಶೂನ್ಯವಾಗಿದೆ. ಇಕ್ಷ್ಶ್ವಕು ಕುಲದ ಜನರು ಸಂತೋಷದಿಂದಿರುವಂತೆ ಕಾಣುತ್ತಿಲ್ಲ. ರಾಜನು ಸಾಮಾನ್ಯವಾಗಿ ಯಾವಾಗಲೂ ನಿನ್ನ ಅಂತಪುರದಲ್ಲಿಯೇ ಇರುತ್ತಿದ್ದನು. ನಮ್ಮ ತಂದೆಯು ಇಲ್ಲಿಯೇ ಇರಬಹುದೆಂದು ಭಾವಿಸಿ ಅವನನ್ನು ನೋಡುವ ಸಲುವಾಗಿಯೇ ನಾನು ಇಲ್ಲಿಗೆ ಬಂದೆನು. ಆದರೆ ಇಲ್ಲಿಯೂ ಅವನನ್ನು ಕಾಣುತ್ತಿಲ್ಲ. ಮೊದಲು ನಾನು ತಂದೆಯ ಕಾಲನ್ನು ಮುಟ್ಟಿ ನಮಸ್ಕಾರ ಬೇಕೆಂದಿರುವೆನು. ಆದುದರಿಂದ ಅವನೆಲ್ಲಿರುವನೆಂಬುದನ್ನು ಬೇಗ ಹೇಳು. ದೊಡ್ಡಮ್ಮನಾದ ಕೌಶಲ್ಯ ದೇವಿಯ ಅಂತಃಪುರದಲ್ಲೇನಾದರೂ ಇರುವನೇ?"


ರಾಜ್ಯ ಲೋಭದಿಂದ ವಿಮೋಹಿತಳಾಗಿದ್ದ ಕೈಕೆಯಿಯ ಏನೂ ತಿಳಿಯದಿದ್ದ ಭರತನಿಗೆ ಪ್ರಿಯವಾಗಿ ತೋರುವ ಆದರೆ ಬಹಳ ಅಪ್ರಿಯವೂ ಮತ್ತು ಘೋರವೂ ಆದ ಈ ಮಾತುಗಳನ್ನು ಹೇಳಿದಳು: " ಪ್ರಪಂಚದಲ್ಲಿ ಹುಟ್ಟಿರುವ ಎಲ್ಲ ಪ್ರಾಣಿಗಳಿಗೂ ಕೊನೆಯಲ್ಲಿ ಯಾವ ಗತಿ ಉಂಟಾಗುವುದೋ - ಅದೇ ಗತಿಯನ್ನೇ ಧರ್ಮತ್ಮನಾದ, ತೇಜಸ್ವಿಯಾದ, ಯಜ್ಞ ಶೀಲನಾದ, ಸತ್ಪುರುಷರಿಗೆ ಆಶ್ರಯನಾಗಿದ್ದ ನಿನ್ನ ತಂದೆಯೂ ಹೊಂದಿದನು."


ಭರತನು ತಾಯಿಯ ಆ ಮಾತನ್ನು ಕೇಳುತ್ತಲೇ, ಬಲವತ್ತರವಾದ ಪಿತೃ ವಿಯೋಗ ಶೋಕದಿಂದ ಪೀಡಿತನಾಗಿ ಒಡನೆಯೇ ಭೂಮಿಯ ಮೇಲೆ ಬಿದ್ದುಬಿಟ್ಟನು. ಮಹಾಬಾಹುವಾದ ಭರತನು ಎರಡುಕೈಗಳನ್ನೂ ಮುಂದಕ್ಕೆ ಚಾಚಿ, "ಅಯ್ಯೋ! ನಾನು ಹಾಳಾಗಿ ಹೋದೆನು" ಎಂದು ಬಹಳ ಸಂಕಟದಿಂದಲೂ, ದೈನ್ಯದಿಂದಲೂ ಹೇಳಿ ಕೆಳಗೆ ಬಿದ್ದನು. ತಂದೆಯ ಮರಣದಿಂದ ಪರಮಾದುಃಖಿತನಾಗಿದ್ದ, ಅದರಿಂದಲೇ ಶೋಕ ಸಾಗರದಲ್ಲಿ ಮುಳುಗಿ ಹೋಗಿದ್ದ ಬ್ರಾಂತವಾದ ಮತ್ತು ದಿಗ್ ಭ್ರಮೆಗೊಂಡಿದ್ದ ಮನಸ್ಸಿನಿಂದ ಕೂಡಿದ್ದ ಮಹಾತೆಯಸ್ವಿಯಾದ ಭರತನು ಗೋಳಾಡಿದನು.


ಶೋಕಾರ್ತನಾಗಿದ್ದ ಮಗನನ್ನು ಕೈಕೇಯಿಯು ಮೇಲೇಬ್ಬಿಸಿ "ಮಹಾ ಯಶೋವಂತನಾದ ರಾಜಪುತ್ರನೇ! ಏಳು!ಎದ್ದೇಳು, ನೀನು ಹೀಗೇಕೆ ನೆಲದ ಮೇಲೆ ಬಿದ್ದು ಗೋಳಾಡುತ್ತಿರುವೆ? ಸತ್ಪುರುಷರ ಸಭೆಗಳಲ್ಲಿ ಗೌರವಿಸಲು ಯೋಗ್ಯರಾದ ನಿನ್ನಂತಹವರು ಹೀಗೆ ದುಃಖಪಡಬಾರದು" ಎಂದಳು.


ಪರಿಶುದ್ಧವಾದ ಮನಸ್ಸಿನಿಂದ ಕೂಡಿದ್ದ ಭರತನಿಗೆ ತಾಯಿಯು ಹೇಳಿದ ಗೂಢಾರ್ಥವು ಬೇಗ ತಿಳಿಯಲಿಲ್ಲ. ತಂದೆಯ ಮರಣ ವಾರ್ತೆಯನ್ನು ಕೇಳಿ ಬಹಳ ಹೊತ್ತಿನವರೆಗೂ ರೋದನೆ ಮಾಡುತ್ತಾ ನೆಲದ ಮೇಲೆ ಹೊರಳಾಡುತ್ತಲೇ ಇದ್ದನು. ಅಪಾರವಾದ ದುಃಖದಿಂದ ತಲ್ಲಣಿಸುತ್ತ ತಾಯಿಗೆ, " ಅಮ್ಮ ನಮ್ಮ ಅಣ್ಣನಾದ ಶ್ರೀರಾಮನಿಗೆ ಪಟ್ಟಾಭಿಷೇಕವಾಗಬಹುದು ಅಥವಾ ರಾಜನು ಯಾವುದಾದರು ಯಜ್ಞವನ್ನು ಮಾಡಬಹುದು ಎಂದು ಭಾವಿಸಿ ನಾನು ಬಹಳ ಸಂತೋಷದಿಂದ ಅಯೋಧ್ಯೆಗೆ ಪ್ರಯಾಣ ಮಾಡಲು ಅಜ್ಜನ ಅನುಮತಿಯನ್ನು ಕೇಳಿದೆ. ಆದರೆ ನಾನು ಬಯಸಿದ್ದುದೇ ಒಂದು ಇಲ್ಲಿ ಆಗಿರುವುದೇ ಒಂದು. ಎಲ್ಲವೂ ದುರ್ವಿಧಿಯೇ ಸರಿ. ಇದರಿಂದಾಗಿ ನನ್ನ ಮನಸ್ಸೇ ಒಡೆದು ಹೋಗಿದೆ. ನನಗೆ ಪ್ರಿಯವನ್ನುಂಟುಮಾಡುವುದರಲ್ಲಿ ಮತ್ತು ಹಿತವನ್ನುಂಟು ಮಾಡುವುದರಲ್ಲಿ ನಿತ್ಯವೂ ನಿರತನಾಗಿದ್ದ ತಂದೆಯನ್ನು ನಾನು ಕಾಣುತ್ತಿಲ್ಲ. ಅಮ್ಮ! ಅಣ್ಣನೇ ನನಗಿಂದು ತಂದೆ ಬಂಧು ಎಲ್ಲವೂ ಆಗಿದ್ದಾನೆ. ಧೀಮಂತನಾದ ಆ ಶ್ರೀ ರಾಮನಿಗೆ ನಾನು ದಾಸನಾಗಿದ್ದೇನೆ. ಯಾವುದೇ ಕಾರ್ಯವನ್ನೂ ಸುಲಭವಾಗಿ ಸಾಧಿಸುವ ಆ ಶ್ರೀರಾಮನಿಗೆ ನಾನು ಬಂದಿರುವ ವಾರ್ತೆಯನ್ನು ಶೀಘ್ರವಾಗಿ ತಿಳಿಸು. ಅಮ್ಮ! ನನ್ನ ತಂದೆಯು ಕಡೆಗಾಲದಲ್ಲಿ ನನ್ನ ವಿಷಯವಾಗಿ ಏನು ಹೇಳಿದನು? ಅವನ ಕೊನೆಯ ಸಂದೇಶವನ್ನು ನಾನು ಕೇಳಬಯಸುತ್ತೇನೆ" ಎಂದನು.


ಭರತನಿಂದ ಆ ಮಾತನ್ನು ಕೇಳಿದ ಕೈಕೇಯಿಯು " ನಿನ್ನ ತಂದೆಯು ಸಾಯುವ ಕಡೆಗಾಲದಲ್ಲಿ ಹಾ ರಾಮ! ಹಾ ಸೀತೆ! ಹಾ ಲಕ್ಷ್ಮಣ! ಎಂದು ಕೂಗಿಕೊಂಡು, ಸೀತಾ ಸಮೇತನಾಗಿ ಬರುವ ಶ್ರೀ ರಾಮನನ್ನೂ, ಮಹಾಬಾಹುವಾದ ಲಕ್ಷ್ಮಣನನ್ನೂ, ಅವರು ಹಿಂದಿರುಗಿ ಬಂದ ನಂತರ ಯಾರು ಸಂದರ್ಶಿಸುವರೋ ಅವರೇ ನಿಶ್ಚಯವಾಗಿಯೂ ಧನ್ಯರು ಎಂದು ಹೇಳುತ್ತಾ ತಮ್ಮ ಪ್ರಾಣವನ್ನು ಬಿಟ್ಟರು" ಎಂದು ಹೇಳಿದಳು.


ಭರತನು ಈ ಎರಡನೆಯ ಅಪ್ರಿಯವಾದ ಮಾತನ್ನು ಕೇಳಿ ಅತ್ಯಂತ ಖಿನ್ನನಾಗಿ ತಾಯಿಯನ್ನು "ಅಮ್ಮ! ಕೌಸಲ್ಯೆಗೆ ಆನಂದವನ್ನು ಹೆಚ್ಚಿಸುವ ಧರ್ಮಾತ್ಮನಾದ ರಾಮನೆಲ್ಲಿ? ಸೀತಾ ಲಕ್ಷ್ಮಣರೊಡನೆ ಅವನೆಲ್ಲಿಗೆ ಹೊರಟು ಹೋಗಿದ್ದಾನೆ?ಎಂದು ಪ್ರಶ್ನಿಸಿದನು.


ಭರತನು ಹೀಗೆ ಪ್ರಶ್ನಿಸಲು ಕೈಕೇಯಿಯು ನಡೆದ ಎಲ್ಲವನ್ನೂ ಯಥಾವತ್ತಾಗಿಯೇ ಹೇಳಲು ಉಪಕ್ರಮಿಸಿದಳು. ಭರತನಿಗೆ ಪ್ರಿಯವಾಗುವುದೆಂಬ ಭ್ರಾಂತಿಯಿಂದ, "ರಾಮನಿಗೆ ಪಟ್ಟಾಭಿಷೇಕ ವಾಗುವುದೆಂಬ ವಾರ್ತೆಯನ್ನು ಕೇಳುತ್ತಲೇ ನಾನು ನಿನಗೆ ಪಟ್ಟಾಭಿಷೇಕವಾಗಬೇಕೆಂದೂ - ರಾಮನು ಅರಣ್ಯಕ್ಕೆ ಹೋಗಬೇಕೆಂದೂ ನಿನ್ನ ತಂದೆಯನ್ನು ಪ್ರಾರ್ಥಿಸಿದೆನು. ಸತ್ಯಪ್ರತಿಜ್ಞಾಪಾಲನರೂಪವಾದ ತನ್ನ ಸ್ವಭಾವಕ್ಕೆ ಅನುಗುಣವಾಗಿ ನಿನ್ನ ತಂದೆಯು ನನ್ನ ಪ್ರಾರ್ಥನೆಯನ್ನು ಅಂಗೀಕರಿಸಿದನು. ಇದರ ಪರಿಣಾಮವಾಗಿ ಲಕ್ಷ್ಮಣ ಸೀತೆಯರೊಡನೆ ರಾಮನನ್ನು ರಾಜನು ಅರಣ್ಯಕ್ಕೆ ಕಳುಹಿಸಿದನು. ಮಹಾ ಯಶೋವಂತನಾದ ಮಹಾರಾಜನು ತನ್ನ ಪ್ರೀತಿಯ ಮಗನನ್ನು ಕಾಣದೆ ಪುತ್ರಶೋಕದಿಂದ ಪೀಡಿತನಾಗಿ ಅಸುನೀಗಿದನು. ಧರ್ಮಜ್ಞೇನೇ! ಈಗ ನೀನು ರಾಜನಾಗು, ನಿನ್ನನ್ನು ರಾಜನನ್ನಾಗಿ ಮಾಡಬೇಕೆಂದೇ ನಾನು ಎಲ್ಲ ಕಾರ್ಯಗಳನ್ನೂ ಈ ರೀತಿಯಲ್ಲಿ ಮಾಡಿದೆನು. ಪುತ್ರಕ! ನೀನು ಯಾವ ಕಾರಣದಿಂದಲೂ ಶೋಕಿಸಬೇಡ, ಸಂತಾಪಪಡಬೇಡ. ಧೈರ್ಯವನ್ನು ಅವಲಂಬಿಸು. ಇಂದು ಈ ಅಯೋಧ್ಯಾ ಪಟ್ಟಣವು ನಿನ್ನ ಅಧೀನವಾಗಿದೆ. ಭರತ! ಸಂಸ್ಕಾರವಿಧಿಯನ್ನು ತಿಳಿದಿರುವ ವಸಿಷ್ಟ ಪ್ರಮುಖರಾದ ಬ್ರಾಹ್ಮಣರಿಂದ ಕೂಡಿದವನಾಗಿ ಮಹಾಪರಕ್ರಮಿಯಾದ ದಶರಥರಾಜನ ಉತ್ತರ ಕ್ರಿಯೆಗಳನ್ನು ಆಚರಿಸು. ಆನಂತರ ಭೂಮಂಡಲಕ್ಕೇ ಚಕ್ರಾಧಿಪತಿಯಾಗಿ ಪಟ್ಟಾಭಿಷಿಕ್ತನಾಗು" ಎಂದಳು.

Comments


bottom of page