top of page

ಪಟ್ಟವನ್ನೇರಲು ಒಪ್ಪದ ಭರತ (ರಾಮಾಯಣ ಕಥಾಮಾಲೆ 46)

ರಾಜನ ದಹನ ಸಂಸ್ಕಾರವು ಮುಗಿದು ಹದಿನಾಲ್ಕನೇ ದಿವಸ ಪ್ರಾತಃಕಾಲ ಮಂತ್ರಿಗಳೆಲ್ಲರೂ ಒಟ್ಟಾಗಿ ಸೇರಿ ಭರತನಿಗೆ, "ರಾಜಪುತ್ರ! ನಮಗೆ ಪರಮ ಗುರು ಆಗಿದ್ದ ದಶರಥ ಮಹಾರಾಜನು ಜೇಷ್ಠ ಪುತ್ರನಾದ ರಾಮನನ್ನೂ ಮಹಾಬಲಿಷ್ಠನಾದ ಲಕ್ಷ್ಮಣನನ್ನೂ ಅರಣ್ಯಕ್ಕೆ ಕಳುಹಿಸಿ ತಾನೂ ಸ್ವರ್ಗಕ್ಕೆ ಹೊರಟು ಹೋದನು. ಯಶೋವಂತನೇ! ಈ ಕಾರಣದಿಂದ ಇಂದು ನಮ್ಮ ರಾಜ್ಯಕ್ಕೆ ನಾಯಕನೇ ಇಲ್ಲವಾಗಿದೆ ಆದುದರಿಂದ ಈ ಸಮಯದಲ್ಲಿ ನೀನೇ ನಮಗೆ ರಾಜನಾಗುವುದು ಸೂಕ್ತವಾಗಿದೆ. ಜೇಷ್ಠನನ್ನು ಬಿಟ್ಟು ನಾನು ಹೇಗೆ ರಾಜನಾಗಲೆಂದು ಚಿಂತಿಸುವ ಕಾರಣವಿಲ್ಲ. ರಾಮನಿಗೆ ವನವಾಸ ಮತ್ತು ಭರತನಿಗೆ ಪಟ್ಟಾಭಿಷೇಕ - ಈ ಎರಡು ವರಗಳನ್ನೂ ದಶರಥನೇ ಕೈಕೇಯಿಗೆ ಕೊಟ್ಟಿದ್ದನು. ಆದುದರಿಂದ ಇದು ರಾಜಾಜ್ಞೆಯೆಂದೇ ಭಾವಿಸಿ ನೀನು ರಾಜ್ಯಭಾರವನ್ನು ವಹಿಸಬೇಕಾಗಿದೆ. ಪಿತ್ರಾರ್ಜಿತವಾದ ಮತ್ತು ಶಾಶ್ವತವಾದ ಈ ರಾಜ್ಯವನ್ನು ಸ್ವೀಕರಿಸು. ಪಟ್ಟಾಭಿಷಕ್ತನಾಗು. ನಮ್ಮೆಲ್ಲರನ್ನು ಪರಿಪಾಲಿಸು" ಎಂದರು.



ಅಮಾತ್ಯರು ಹೀಗೆ ಶುಭಕರವಾದ ಮಾತನ್ನು ಹೇಳಲು, ಕಾಂತಿಯುಕ್ತನಾಗಿದ್ದ, ಸತ್ಯನಿಷ್ಠನಾಗಿದ್ದ, ಅಂತಃಶುದ್ಧಿ-ಬಹಿಶುದ್ಧಿ ಉಳ್ಳವನಾಗಿದ್ದ ಭರತನು ಅಮಾತ್ಯರ ಆ ಮಾತುಗಳನ್ನು ಕೇಳಿ ಪಟ್ಟಾಭಿಷೇಕಕ್ಕಾಗಿ ಸಂಗ್ರಹಿಸಲ್ಪಟ್ಟಿದ್ದ ಸಾಂಭಾರಗಳನ್ನು ಪ್ರದಕ್ಷಿಣೆ ಮಾಡಿ ಸುತ್ತಲೂ ಇದ್ದ ಜನರಿಗೆ "ನಮ್ಮ ವಂಶದಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಜೇಷ್ಠ ಪುತ್ರನಿಗೇ ರಾಜಪದವಿಯು ನಿತ್ಯವಾಗಿದೆ. ಹೀಗಿರುವಾಗ ಕುಶಲರಾದ ನೀವು ಪಟ್ಟಾಭಿಷಕ್ತನಾಗುವಂತೆ ನನಗೆ ಸಲಹೆ ನೀಡುವುದು ಉಚಿತವಾಗಿ ತೋರುವುದಿಲ್ಲ. ಶ್ರೀರಾಮನು ನಮಗೆಲ್ಲರಿಗಿಂತಲೂ ಮೊದಲು ಹುಟ್ಟಿದವನು. ಅವನೇ ಹಿರಿಯಣ್ಣನು. ಆದುದರಿಂದ ಅವನೇ ರಾಜನಾಗುತ್ತಾನೆ. ಪ್ರತಿಜ್ಞಾತವಾಗಿರುವ ಹದಿನಾಲ್ಕು ವರ್ಷಗಳನ್ನು ನಮ್ಮಣ್ಣನಿಗೆ ಬದಲಾಗಿ ನಾನೇ ಕಾಡಿನಲ್ಲಿ ಕಳೆಯುತ್ತೇನೆ. ಚತುರಂಗಬಲ ಸಮೇತವಾದ ಮಹಾ ಸೈನ್ಯವನ್ನು ಈಗಲೇ ಸಿದ್ಧಪಡಿಸಿರಿ. ಹಿರಿಯಣ್ಣನಾದ ಶ್ರೀ ರಾಘವನನ್ನು ನಾನು ಅರಣ್ಯದಿಂದ ಕರೆತರುತ್ತೇನೆ. ನೀವು ಇಲ್ಲಿಗೆ ತಂದಿರುವ ಪಟ್ಟಾಭಿಷೇಕಕ್ಕೆ ಸಂಬಂಧಿಸಿದ ಎಲ್ಲ ಪದಾರ್ಥಗಳನ್ನೂ ರಾಮನ ಸಲುವಾಗಿ ಮುಂದಿಟ್ಟುಕೊಂಡು ಅರಣ್ಯಕ್ಕೆ ಹೋಗುತ್ತೇನೆ. ಅರಣ್ಯದಲ್ಲಿಯೇ ನಮ್ಮೆಲ್ಲರಿಗೂ ಪೂಜ್ಯನಾದ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ಯಜ್ಞಶಾಲೆಯಿಂದ ಯಜ್ಞ ಶ್ವರನನ್ನು ತರುವಂತೆ ಅವನನ್ನು ಅಯೋಧ್ಯೆಗೆ ಕರೆತರುತ್ತೇನೆ. ಹೆಸರಿಗೆ ಮಾತ್ರ ತಾಯಿಯಾಗಿರುವ ಈ ಕೈಕೇಯಿಯ ಮನೋಹರಥವನ್ನು ಖಂಡಿತವಾಗಿಯೂ ಆಗಮಾಡಿಸುವುದಿಲ್ಲ. ನಾನೇ ದುರ್ಗಮವಾದ ಕಾಡಿನಲ್ಲಿ ವಾಸಮಾಡುತ್ತೇನೆ. ಶ್ರೀರಾಮನೇ ನಮ್ಮೆಲ್ಲರಿಗೂ ರಾಜನಾಗುತ್ತಾನೆ. ಮಾರ್ಗಗಳನ್ನ ನಿರ್ಮಿಸುವ ಕಾರ್ಯದಲ್ಲಿ ಕುಶಲರಾದ ಶಿಲ್ಪಿಗಳು ಮುಂದಾಗಿ ಹೋಗಿ ಹಳ್ಳ ತಿಟ್ಟುಗಳಿರುವ ಪ್ರದೇಶವನ್ನು ಸಮತಟ್ಟಾಗಿ ಮಾಡಿ ಪ್ರಯಾಣಕ್ಕೆ ಯೋಗ್ಯವನ್ನಾಗಿ ಮಾಡಲಿ. ಕಾಡಿನಲ್ಲಿ ದುರ್ಗಮವಾದ ಹಾದಿಗಳು ಎಲ್ಲಿವೆ ಎಂಬುದನ್ನು ತಿಳಿದಿರುವ ದುರ್ಗಗಳ ವಿಚಾರಕರೂ ಮತ್ತು ಮಾರ್ಗದ ವಿಚಾರಕರೂ ಶಿಲ್ಪಿಗಳನ್ನು ಅನುಸರಿಸಿ ಹೋಗಲಿ" ಎಂದನು.


ಹೀಗೆ ಶ್ರೀರಾಮನನ್ನು ಕರೆ ತರುವ ಸಲುವಾಗಿ ರಾಜಪುತ್ರನಾದ ಭರತನು ಹೇಳಿದುದನ್ನು ಕೇಳಿ ಪ್ರಜೆಗಳು ಶುಭಾವಹವಾದ ಮತ್ತು ಸರ್ವೋತ್ತಮವಾದ ಈ ಮಾತುಗಳನ್ನು ಹೇಳಿದರು. "ರಾಜಪುತ್ರನೇ! ದಶರಥರಾಜನ ಜೇಷ್ಠ ಪುತ್ರನಾದ ಶ್ರೀರಾಮನಿಗೆ ಈ ಭೂಮಂಡಲವನ್ನು ಒಪ್ಪಿಸಲು ಬಯಸಿರುವೆಯಾದ ಕಾರಣ ಪದ್ಮಲಯಳಾದ ಮಹಾಲಕ್ಷ್ಮಿಯು ನಿನ್ನಲ್ಲಿ ಶಾಶ್ವತವಾಗಿ ನೆಲೆಸಲಿ."


ಭರತನ ಸುತ್ತಲೂ ನೆರೆದಿದ್ದ ಆರ್ಯಜನರಿಗೆ ಭರತನು ರಾಮನನ್ನು ಅರಣ್ಯದಿಂದ ಕರೆತರುವೆನೆಂದು ಮಾಡಿದ ಪ್ರತಿಜ್ಞೆಯನ್ನು ಕೇಳಿ ಮಹಾದಾನಂದವಾಯಿತು. ಭರತನ ವಿಷಯದಲ್ಲಿ ಕೃತಜ್ಞತಾ ಸೂಚಕವಾದ ಆನಂದಭಾಷ್ಪಗಳು ಅವರ ಕಣ್ಣುಗಳಿಂದ ಪ್ರಯತ್ನವಿಲ್ಲದೆ ಕೆಳಗುರುಳಿದವು.


ಪ್ರಜೆಗಳೆಲ್ಲರೂ ಭರತನ ಅಭಿಪ್ರಾಯವನ್ನು ಅನುಮೋದಿಸಿದ ಬಳಿಕ ಅರಣ್ಯ ಮಾರ್ಗದಲ್ಲಿರುವ ಹಳ್ಳ ತಿಟ್ಟು ಪ್ರದೇಶಗಳನ್ನು ತಿಳಿದವರೂ, ನಾನಾ ದೇಶಗಳ ನಕ್ಷೆಗಳನ್ನು ತಿಳಿದವರೂ, ಹಗ್ಗಗಳನ್ನು ಹೆಣೆಯುವುದರಲ್ಲಿ ನಿಪುಣರೂ, ಮಾರ್ಗ ರಕ್ಷಣೆಯೇ ಮೊದಲಾದ ತಮ್ಮ ತಮ್ಮ ಕಾರ್ಯಗಳಲ್ಲಿ ನಿಷ್ಠಾವಂತರೂ, ಶೂರರೂ, ಭೂಮಿಯನ್ನು ಅಗೆಯುವವರೂ, ಹಳ್ಳಗಳನ್ನೂ ಪ್ರವಾಹಗಳನ್ನೂ ದಾಟಲು ಬೇಕಾಗುವ ಯಂತ್ರ ಸಾಮಗ್ರಿಗಳನ್ನು ಹೊಂದಿರುವವರೂ, ವೇತನದಿಂದ ಜೀವಿಸುವವರೂ, ರಥವೇ ಮೊದಲಾದ ವಾಹನಗಳನ್ನು ಮಾಡುವವರೂ, ಯಂತ್ರ ಚಾಲನೆಗಳಲ್ಲಿ ಕುಶಲರೂ, ಮರ ಕೆಲಸ ಮಾಡುವವರೂ, ಅರಣ್ಯದ ಮಾರ್ಗಗಳನ್ನ ರಕ್ಷಿಸುವುದರಲ್ಲಿ ಸಮರ್ಥರಾಗಿರುವವರೂ, ಮರಗಳನ್ನು ಕಡಿಯುವವರೂ, ಬಾವಿಗಳನ್ನು ತೋಡುವವರೂ, ಬಣ್ಣ ಹಚ್ಚುವವರೂ, ಚಮ್ಮಾರರೂ, ಮೇದರೂ, ಹಿಂದೆ ಅರಣ್ಯ ಮಾರ್ಗವನ್ನು ನೋಡಿದ್ದ ಅನುಭವಿಗಳೂ ಅಯೋಧ್ಯಾ ಪಟ್ಟಣದಿಂದ ಮೊದಲು ಹೊರಟರು.

Comments


bottom of page