top of page

ಭರತನ‌‌ ಮೇಲೆ‌ ಲಕ್ಷ್ಮಣನ ಕೋಪ (ರಾಮಾಯಣ ಕಥಾಮಾಲೆ 48)

ಇತ್ತ ಚಿತ್ರಕೂಟ ಪರ್ವತದಲ್ಲಿ ಬಹಳ ದಿವಸಗಳಿಂದ ವಾಸ ಮಾಡುತ್ತಿದ್ದ ಗಿರಿಗಳನ್ನೂ ವನಗಳನ್ನೂ ಬಹಳವಾಗಿ ಪ್ರೀತಿಸುತ್ತಿದ್ದ, ದೇವಸದೃಶನಾದ ದಾಶರಥಿಯು ಭಾರ್ಯೆಯಾದ ವೈದೇಹಿಗೆ ಆಹ್ಲಾದವನ್ನುಂಟುಮಾಡಬೇಕೆಂಬ ಅಪೇಕ್ಷೆಯಿಂದಲೂ, ತನ್ನ ಮನಸ್ಸನ್ನು ಸಂತೋಷದ ಕಡೆಗೆ ಸೆಳೆಯುವುದಕ್ಕೂ ನಾನಾ ವರ್ಣಗಳಿಂದ ಕೂಡಿದ್ದ ಚಿತ್ರಕೂಟ ಪರ್ವತದ ಸೊಬಗನ್ನು, ಇಂದ್ರನು ನಂದನದ ಸೊಬವಗನ್ನು ಶಚೀದೇವಿಗೆ ವರ್ಣಿಸಿ ಹೇಳುವಂತೆ ಹೇಳಿದನು.



ಕೊಸಲೇಶ್ವರನಾದ ಶ್ರೀರಾಮನು ಚಿತ್ರಕೂಟ ಪರ್ವತದ ಸೊಬಗನ್ನು ಸೀತಾದೇವಿಗೆ ತೋರಿಸಿದ ನಂತರ ಪರ್ವತದಿಂದ ಕೆಳಗಿಳಿದು ಮಂಗಳಕರವಾದ ನೀರಿನಿಂದ ಕೂಡಿದ್ದ, ಬಹು ರಮ್ಯವಾಗಿದ್ದ ಮಂದಾಕಿನಿ ನದಿಯನ್ನು ತೋರಿಸುತ್ತಾ, "ವೈದೇಹಿ! ಚಿತ್ರಕೂಟ ಪರ್ವತವನ್ನೇ ಅಯೋಧ್ಯೆ ಎಂದು ಭಾವಿಸು. ಇಲ್ಲಿರುವ ವನಚರ ಪ್ರಾಣಿಗಳನ್ನೇ ಅಯೋಧ್ಯೆಯ ಪೌರರೆಂದು ಭಾವಿಸು. ಮಂದಾಕಿನಿ ನದಿಯನ್ನೇ ಸರಯೂ ನದಿ ಎಂದು ಭಾವಿಸು. ಧರ್ಮಾತ್ಮನಾದ ಲಕ್ಷ್ಮಣನೂ ನನ್ನ ನಿರ್ದೇಶನಾನುಸಾರವಾಗಿಯೇ ನಡೆದುಕೊಳ್ಳುತ್ತಿದ್ದಾನೆ. ನೀನು ಕೂಡ ನನ್ನ ಮನಸ್ಸಿಗೆ ಅಹ್ಲಾದವನ್ನುಂಟುಮಾಡುತ್ತಾ ನನಗೆ ಅನುಕೂಲಳಾಗಿರುವೆ. ನಿನ್ನೊಡನೆ ನಾನು ಅನುದಿನವೂ ಮೂರು ಹೊತ್ತು ಈ ಪುಣ್ಯ ನದಿಯಲ್ಲಿ ಸ್ನಾನ ಮಾಡುತ್ತಾ ಇಲ್ಲಿ ಸಿಕ್ಕುವ ಜೇನು ತುಪ್ಪವನ್ನು ಕಂದ-ಮೂಲ-ಫಲಗಳನ್ನೂ ಸೇವಿಸುತ್ತಾ ಇರುತ್ತೇನೆ. ಈಗ ನಾನು ಅಯೋಧ್ಯಾ ವಾಸಕ್ಕಾಗಲೀ ರಾಜ್ಯ ಸಿಂಹಾಸಕ್ಕಾಗಲೀ ಆಸೆ ಪಡುವುದಿಲ್ಲ" ಎಂದನು.


ಹೀಗೆ ಶ್ರೀರಾಮನು ಮೈಥಿಲಿಗೆ ಮಂದಾಕಿನಿ ನದಿಯನ್ನು ತೋರಿಸಿ ಚಿತ್ರಕೂಟ ಪರ್ವತದಲ್ಲಿದ್ದ ಪರ್ಣಶಾಲೆಗೆ ಹಿಂದಿರುಗಿದನು. ಹೀಗೆ ಧರ್ಮಾತ್ಮನಾದ ಶ್ರೀರಾಮನು, ಸೀತೆಯೊಡನೆ ಅರಣ್ಯದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿರುವಾಗ ಶ್ರೀರಾಮನ ಪರ್ಣಶಾಲೆಗೆ ಅನತಿ ದೂರದಲ್ಲಿದ್ದ ಭರತನ ಸೈನ್ಯದ ಚಲನ ವಲನಗಳಿಂದ ಹುಟ್ಟಿದ ಧೂಳಿಯು ಮತ್ತು ಶಬ್ದವು ಆಕಾಶವನ್ನೇ ವ್ಯಾಪಿಸಿತು. ಈ ಮಧ್ಯದಲ್ಲಿ ಸೈನಿಕರ ಕೋಲಾಹಲ ಶಬ್ದದಿಂದ ಭಯಪೀಡಿತವಾದ ಮದಿಸಿದ ಕಾಡಾನೆಗಳು ತಮ್ಮ ಗುಂಪುಗಳಿಂದ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದವು. ಪರ್ಣಶಾಲೆಯಲ್ಲಿದ್ದ ರಾಘವನು ಸೈನ್ಯದ ಕೋಲಾಹಲ ಶಬ್ದವನ್ನು ಕೇಳಿದನು. ಹಾಗೂ ಭಯದಿಂದ ಓಡಿ ಹೋಗುತ್ತಿದ್ದ ಮದಿಸಿದ ಸಲಗಗಳನ್ನೂ ನೋಡಿದನು. ಕೂಡಲೇ ಮಹಾತೇಜಸ್ವಿಯಾದ ಲಕ್ಷ್ಮಣನಿಗೆ " ಲಕ್ಷ್ಮಣ! ಇಲ್ಲಿ ನೋಡು; ಆನೆಗಳು ಹಿಂಡು ಹಿಂಡಾಗಿ ಓಡಿ ಹೋಗುತ್ತಿವೆ. ಬಹು ಭಯಂಕರವಾದ ಮೇಘದ ಧ್ವನಿಯಂತೆ ಗಂಭೀರವಾದ ಧ್ವನಿಯು ಕೇಳಿ ಬರುತ್ತಿದೆ. ಕೆರಳಿದ ಸಿಂಹಗಳ ಭಯದಿಂದ ಆನೆಗಳ ಗುಂಪುಗಳೂ, ಕಾಡುಕೋಣಗಳ ಗುಂಪುಗಳೂ, ಜಿಂಕೆಗಳ ಗುಂಪುಗಳೂ ದಿಕ್ಕಾಪಾಲಾಗಿ ಓಡಿ ಹೋಗುತ್ತಿರಬಹುದು. ಅಥವಾ ರಾಜನೋ, ರಾಜಪುತ್ರನೋ ಈ ಅರಣ್ಯಕ್ಕೆ ಬೇಟೆಯಾಡಲು ಬಂದಿರಬಹುದು. ಅಥವಾ ಯಾವುದಾದರೂ ಸಿಂಹವೋ ಹುಲಿಯೋ ಈ ಅರಣ್ಯಕ್ಕೆ ಬಂದು ಪ್ರಾಣಿಗಳಿಗೆ ಭಯವನ್ನುಂಟುಮಾಡಿರಬಹುದು. ಚಿತ್ರಕೂಟ ಪರ್ವತವೀಗ ಪಕ್ಷಿಗಳ ಸಂಚಾರಕ್ಕೂ ದುಸ್ಸಾಧ್ಯವಾಗಿದೆ. ಆದುದರಿಂದ ಎಲ್ಲ ವಿಷಯಗಳನ್ನೂ

ಯಥಾವತ್ತಾಗಿ ತಿಳಿದುಕೊಂಡು ಬಾ" ಎಂದನು.



ಶ್ರೀರಾಮನು ಹೇಗೆ ಹೇಳಿದೊಡನೆ ಲಕ್ಷ್ಮಣನು ತ್ವರೆಯಿಂದ, ಹೂಗಳಿಂದ ನಿಬಿಡವಾಗಿದ್ದ ಸಾಲವೃಕ್ಷವೊಂದನ್ನು ಹತ್ತಿ ಎಲ್ಲ ದಿಕ್ಕುಗಳನ್ನೂ ನೋಡಲು ಆಸಕ್ತನಾಗಿ ಮೊದಲು ಪೂರ್ವ ದಿಕ್ಕನ್ನು ನೋಡಿದನು. ಪೂರ್ವ ದಿಕ್ಕಿನಲ್ಲಿ ಏನನ್ನೂ ಕಾಣದೆ ದಕ್ಷಿಣ ದಿಕ್ಕಿಗೂ, ಪಶ್ಚಿಮ ದಿಕ್ಕಿಗೂ ತಿರುಗಿ ನೋಡಿದನು. ಆ ದಿಕ್ಕುಗಳಲ್ಲಿಯೂ ಏನೂ ಕಾಣಿಸಲಿಲ್ಲ. ಕಡೆಯದಾಗಿ ಉತ್ತರ ದಿಕ್ಕಿಗೆ ತಿರುಗಿದನು. ಆ ದಿಕ್ಕಿನಲ್ಲವನು, ಗಜಾಶ್ವ-ರಥ-ಪದಾತಿಗಳಿಂದ ಸಜ್ಜಾಗಿ ನಿಂತಿದ್ದ ದೊಡ್ಡ ಚತುರಂಗ ಬಲವನ್ನೇ ನೋಡಿದನು. ಒಡನೆಯೇ ಲಕ್ಷ್ಮಣನು ರಾಮನ ಸಮೀಪಕ್ಕೆ ಬಂದು ಆನೆಗಳಿಂದಲೂ, ಕುದುರೆಗಳಿಂದಲೂ, ದ್ವಜಗಳಿಂದ ವಿಭೂಷಿತವಾದ ರಥಗಳಿಂದಲೂ ಪರಿಪೂರ್ಣವಾಗಿರುವ ಮಹಾ ಸೈನ್ಯವು ಬಂದಿರುವುದನ್ನೂ, ಮುಂದೆ ಮಾಡಿಕೊಳ್ಳಬೇಕಾದ ಸಿದ್ಧತೆಯ ವಿಷಯವನ್ನೂ ಶ್ರೀರಾಮನಿಗೆ ಹೇಳುತ್ತಾ "ಆರ್ಯನೇ! ಯಜ್ಞೇಶ್ವರನನ್ನು ಬೇಗ ಆರಿಸಿ ಬಿಡು. ಸೀತೆಯು ಗುಹೆಯ ಒಳಗಡೆ ಹೊರಟುಹೋಗಲಿ. ನೀನು ಧನುರ್ಬಾಣಗಳನ್ನು ಧರಿಸಿ, ಧನುಸ್ಸಿಗೆ ಹೆದೆಯೇರಿಸಿ ಸಿದ್ಧನಾಗು. ಕವಚವನ್ನು ತೊಟ್ಟುಕೋ" ಎಂದನು.


ಲಕ್ಷ್ಮಣನು ಆತುರಾತುರವಾಗಿ ಹೀಗೆ ಹೇಳಿದರೂ ಶ್ರೀರಾಮನು ಸಾವಧಾನದಿಂದಲೇ ಲಕ್ಷ್ಮಣನಿಗೆ "ಮಗು! ಲಕ್ಷ್ಮಣ! ಸರಿಯಾಗಿ ನೋಡು ಧ್ವಜಾದಿ ಚಿಹ್ನೆಗಳಿಂದ ಇದು ಯಾರ ಸೈನ್ಯ ವಿರಬಹುದು ಎಂಬುದನ್ನು ತಿಳಿದುಕೊಂಡೆಯಾ?" ಎಂದು ಕೇಳಿದನು. ಶ್ರೀರಾಮನು ಹೀಗೆ ಹೇಳಲು ಲಕ್ಷ್ಮಣನು ಯಜ್ಞೇಶ್ವರನೋಪಾದಿಯಲ್ಲಿ ತನ್ನ ಅಮಿತವಾದ ತೇಜಸ್ಸಿನಿಂದ ಅಖಂಡ ಸೇನೆಯನ್ನೂ ದಹಿಸಿಬಿಡುವನೋ ಎಂಬಂತೆ ಅತ್ಯಂತ ಕೋಪಾವಿಷ್ಟನಾಗಿ "ನಾನದೆಲ್ಲವನ್ನೂ ನೋಡಿಯೇ ಹೇಳುತ್ತಿರುವೆನಣ್ಣ! ಕೈಕೇಯಿಯ ಮಗನಾದ ಭರತನು, ತಾಯಿಯು ಕೃತ್ರಿಮದಿಂದ ಕೊಡಿಸಿಕೊಟ್ಟ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿಕೊಂಡು, ಅಷ್ಟರಿಂದಲೂ ತೃಪ್ತನಾಗದೆ ನಿಷ್ಕಂಟಕವಾದ ರಾಜ್ಯವನ್ನು ಶಾಶ್ವತವಾಗಿ ಆಳಬೇಕೆನ್ನುವ ದುರಾಸೆಯಿಂದ ನಮ್ಮಿಬ್ಬರನ್ನೂ ಸಂಹರಿಸಲು ಸೈನ್ಯ ಸಮೇತವಾಗಿ ಇಲ್ಲಿಗೆ ಆಗಮಿಸಿದ್ದಾನೆ. ಅದೋ ನೋಡು; ಅಲ್ಲಿ ಎತ್ತರವಾದ ಮತ್ತು ಶೋಭಾಯಮಾನವಾದ ವೃಕ್ಷವೊಂದು ಕಾಣುತ್ತಿದೆಯಲ್ಲವೇ? ಅದರ ಸಮೀಪದಲ್ಲಿಯೇ ಇರುವ ರಥದಲ್ಲಿ ಎತ್ತರವಾದ ದಂಡದಿಂದ ಕೂಡಿರುವ ಕೋವಿದಾರಧ್ವಜವು ವಿರಾಜಿಸುತ್ತಿದೆ. ಗಜಾರೋಹಿಗಳೂ ಆನೆಗಳ ಮೇಲೆ ಕುಳಿತು ಆನಂದೋತ್ಸಾಹಗಳಿಂದದ್ದಾರೆ. ಈ ಸಮಯದಲ್ಲಿ ನಾವಿಬ್ಬರೂ ಧನಸ್ಸುಗಳನ್ನು ಹಿಡಿದು ಚಿತ್ರಕೂಟ ಗಿರಿದುರ್ಗದಲ್ಲಿ ಸಿದ್ಧರಾಗಿ ನಿಲ್ಲೋಣ, ಅಥವಾ ಸನ್ನದ್ಧರಾಗಿ ಆಯುಧಗಳನ್ನೆತ್ತಿ ಇಲ್ಲಿಯಾದರೂ ಇರೋಣ. ಕೋವಿದಾರಧ್ವಜನಾದ ಭರತನು ಯುದ್ಧಕ್ಕೆ ಬರುವನೇ? ಹಾಗೆ ಬಂದ ಅವನನ್ನು ಪರಾಜಯಗೊಳಿಸಿ ನಮ್ಮ ಬಂಧಿಯನ್ನಾಗಿ ಎಂದು ಮಾಡಿಕೊಳ್ಳುವೆವು? ಇದೇ ನನ್ನ ನಿರಂತರವಾದ ಬಯಕೆಯಾಗಿತ್ತು. ಯಾವನ ಸಲುವಾಗಿ ನಾವಿಷ್ಟೊಂದು ಕಷ್ಟಕ್ಕೆ ಸೆಲುಕಿದೆವೋ ಅಂತಹ ಭರತನನ್ನು ನಾನು ಯಾವಾಗ ನೋಡಿವೆನು? ಅವನ ಮೇಲಿನ ಸೇಡನ್ನು ಯಾವಾಗ ತೀರಿಸಿಕೊಳ್ಳುವೆನು? ಎಂದೇ ಯಾವಾಗಲೂ ನಾನು ಯೋಚಿಸುತ್ತಿದ್ದೆನು. ಇವನ ಕಾರಣದಿಂದಲೇ ನೀನು ಶಾಶ್ವತವಾದ ರಾಜ್ಯ ಸಿಂಹಾಸನದಿಂದ ಚ್ಯುತನಾದೆ. ನಿನಗೂ, ನನಗೂ ಮತ್ತು ಜಾನಕಿಗೂ ಅರಣ್ಯವಾಸವು ಪ್ರಾಪ್ತವಾಯಿತು. ಈಗ ನಮ್ಮ ಶತ್ರು ತಾನಾಗಿಯೇ ಇಲ್ಲಿಗೆ ಬಂದಿದ್ದಾನೆ. ಈಗ ಇವನು ವಧಾರ್ಹನೇ ಸರಿ" ಎಂದನು.

Comments


bottom of page