ಶ್ರೀರಾಮನನ್ನು ಕಂಡ ಗುಹ (ರಾಮಾಯಣ ಕಥಾಮಾಲೆ 34)
- Ganapati Hegde Moodkani

- 2 days ago
- 2 min read
ಶ್ರೀರಾಮನು ರಮಣೀಯವಾಗಿಯೂ, ವಿಶಾಲವಾಗಿಯೂ ಇಂದ ದಕ್ಷಿಣ ಕೋಸಲ ದೇಶದ ಗಡಿಯನ್ನು ದಾಟಿ, ಅಯೋಧ್ಯೆಗೆ ಅಭಿಮುಖವಾಗಿ ನಿಂತು ಕೈಮುಗಿದುಕೊಂಡು, "ಕಕುತ್ಸ ವಂಶದ ರಾಜರಿಂದ ಪರಿಪಾಲಿತಳಾದ ಜಗತ್ತಿನಲ್ಲಿರುವ ಸಕಲ ನಗರಗಳಿಗೂ ಶ್ರೇಷ್ಠಳಾದ ಅಯೋಧ್ಯಾ ನಗರದ ಅಧಿದೇವತೆಯೇ! ಅರಣ್ಯವಾಸಕ್ಕೆ ನಿನ್ನ ಅನುಮತಿಯನ್ನು ಪ್ರಾರ್ಥಿಸುತ್ತಿದ್ದೇನೆ. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ದಶರಥ ರಾಜನ ಋಣದಿಂದ ಮುಕ್ತನಾಗಿ ತಂದೆಯಿಂದಲೂ, ತಾಯಿಯಿಂದಲೂ ಕೂಡಿ ನಿನ್ನನ್ನು ಪುನಃ ಸಂದರ್ಶಿಸುತ್ತೇನೆ" ಎಂದನು.
ಬಳಿಕ ಶ್ರೀರಾಮನು ರಕ್ತದಂತೆ ಕೆಂಪಾದ ಕಣ್ಣುಗಳಿಂದಲೂ, ಕಣ್ಣೀರಿನಿಂದ ತೋಯಿಸಲ್ಪಟ್ಟ ಮುಖದಿಂದಲೂ, ದೀನಭಾವದಿಂದಲೂ ಕೂಡಿ, ತೋಳನ್ನು ಮೇಲೆತ್ತಿ ತನ್ನನ್ನು ನೋಡಲು ಬಂದಿದ್ದ ಹಳ್ಳಿಯ ಜನರಿಗೆ, "ಪ್ರಜೆಗಳೇ! ನೀವು ನನ್ನ ವಿಷಯದಲ್ಲಿ ಆದರವನ್ನೂ, ದಯೆಯನ್ನೂ, ಯಥಾಯೋಗ್ಯವಾಗಿ ತೋರಿರುವಿರಿ. ಚಿರಕಾಲ ದುಃಖಿಸುತ್ತಿರುವುದು ಒಳ್ಳೆಯದಲ್ಲ. ಗೃಗಕೃತ್ಯದ ನಿರ್ವಹಣೆಗಾಗಿ ಕೆಲಸ ಮಾಡಲು ಹೋಗಿರಿ" ಎಂದನು.
ಶ್ರೀರಾಮನ ಮಾತುಗಳನ್ನು ಕೇಳಿ ಹಳ್ಳಿಗರು ಮಹಾತ್ಮನಾದ ಅವನನ್ನು ಪ್ರದಕ್ಷಿಣ ಪೂರ್ವಕವಾಗಿ ನಮಸ್ಕರಿಸಿ ರಾಮವಿಯೋಗ ದುಃಖವನ್ನು ತಾಳಲಾರದೇ ಗಟ್ಟಿಯಾಗಿ ಅಳುತ್ತಾ ಅಲ್ಲಲ್ಲಿಯೇ ನಿಂತುಕೊಂಡರು. ಶ್ರೀರಾಮನನ್ನು ಎಷ್ಟು ನೋಡಿದರೂ ತೃಪ್ತರಾಗದೇ ಅವನಲ್ಲಿಯೇ ನೆಟ್ಟದೃಷ್ಟಿಯುಳ್ಳವರಾಗಿ ಗೋಳಿಡುತ್ತಾ ನಿಂತಿದ್ದ ಹಳ್ಳಿಗರ ದೃಷ್ಟಿ ಪಥದಿಂದ ರಾತ್ರಿಯು ಆರಂಭವಾಗುತ್ತಲೇ ಸೂರ್ಯನು ಕಣ್ಮರೆಯಾಗುವಂತೆ ಶ್ರೀರಾಮನು ಮರೆಯಾದನು.
ಕೋಸಲ ದೇಶವನ್ನು ಬಿಟ್ಟು ಅರಣ್ಯಕ್ಕೆ ಹೋಗುವ ಮಧ್ಯಮಾರ್ಗದಲ್ಲಿ ಶ್ರೀರಾಮನು ಸಂತೋಷವಾಗಿಯೂ, ಪೈರು ಪಚ್ಛೆಗಳಿಂದ ಕಂಗೊಳಿಸುತ್ತಲೂ, ರಮ್ಯವಾದ ಉದ್ಯಾನವನಗಳಿಂದ ಸಮಾವೃತವಾಗಿಯೂ ಇಂದ ಅನೇಕ ಸಾಮಂತ ರಾಜರಿಂದ ಪರಿಪಾಲಿಸಲ್ಪಡುತ್ತಿದ್ದ ರಾಜ್ಯಗಳ ಸೊಬಗನ್ನು ನೋಡುತ್ತಾ ಪ್ರಯಾಣ ಮಾಡಿದನು ಹಾಗೆ ಪ್ರಯಾಣ ಮಾಡುತ್ತಿದ್ದ ಆ ಮಾರ್ಗದಲ್ಲಿ ಶ್ರೀರಾಮನು ಸ್ವರ್ಗ-ಮರ್ತ್ಯ-ಪಾತಾಳ ಈ ಮೂರು ಲೋಕಗಳಲ್ಲಿಯೂ ಪ್ರವಹಿಸುವ ದೇವಲೋಕ ಸಂಭೂತಳಾದ, ಮಂಗಳಕರವಾದ ತೀರ್ಥಗಳಿಂದ ಕೂಡಿರುವ ಪಾಚಿಯಿಲ್ಲದ ಋಷಿ ಮಹರ್ಷಿಗಳಿಂದ ಸಂಸೇವಿತವಾದ ಮಹಾಪುಣ್ಯವತಿಯಾದ ಗಂಗಾನದಿಯನ್ನು ನೋಡಿದನು. ಮೇಲಿಂದ ಮೇಲೆ ಬರುತ್ತಿದ್ದ ಅಲೆಗಳಿಂದಲೂ ಸುಳಿಗಳಿಂದಲೂ ಶೋಭಾಯಮಾನವಾಗಿ ಕಾಣುತ್ತಿದ್ದ ಪರಮ ಪವಿತ್ರವಾದ ಗಂಗಾನದಿಯನ್ನು ನೋಡಿ ಮಹಾರಥನಾದ ಶ್ರೀರಾಮನು ಸುಮಂತ್ರನಿಗೆ "ಸುಮಂತ್ರ! ಇಂದು ಇಲ್ಲಿಯೇ ತಂಗೋಣ. ಈ ನದಿಯ ಸಮೀಪದಲ್ಲಿಯೇ ಬಹುಪುಷ್ಪಗಳಿಂದಲೂ, ಚಿಗುರೆಲೆಗಳಿಂದಲೂ ಕೂಡಿರುವ ಹೆಚ್ಚು ದೊಡ್ಡದಾದ ಇಂಗಳದ ಮರವಿದೆ. ಆದ್ದರಿಂದ ನಾವಿಲ್ಲಿಯೇ ವಿಶ್ರಮಿಸಿಕೊಳ್ಳೋಣ ದೇವ, ದಾನವ, ಗಂಧರ್ವರಿಂದಲೂ, ಮೃಗ, ಪಕ್ಷಿಗಳಿಂದಲೂ, ಮಾನವರಿಂದಲೂ ಸಮ್ಮಾನ್ಯವಾದ ನೀರಿನಿಂದ ಕೂಡಿರುವ ಮಂಗಳದಾಯಕವಾದ ಎಲ್ಲ ನದಿಗಳಿಗೂ ಶ್ರೇಷ್ಠವಾದ ಗಂಗಾನದಿಯನ್ನು ಸಂದರ್ಶಿಸೋಣ" ಎಂದನು.
ರಾಘವನ ಮಾತುಗಳನ್ನು ಕೇಳಿ ಲಕ್ಷ್ಮಣ-ಸುಮಂತ್ರರು ಹಾಗೆಯೇ ಆಗಲೆಂದು ಹೇಳಿ ರಥದಲ್ಲಿದ್ದ ಸೀತಾ ರಾಮರೊಡನೆ ಇಂಗಳ ಮರದ ಬಳಿಗೆ ಹೋದರು. ಇಕ್ಷ್ವಾಕು ಕುಲನಂದನನಾದ ಶ್ರೀರಾಮನು ಬಹುರಮ್ಯವಾಗಿದ್ದ ಇಂಗಳ ಮರದ ಸಮೀಪದಲ್ಲಿ ಸೀತಾ ಲಕ್ಷ್ಮಣರೊಡನೆ ರಥದಿಂದಿಳಿದನು.

ಶೃಂಗಬೇರ ಪುರದಲ್ಲಿ ಶ್ರೀರಾಮನಿಗೆ ಪ್ರಾಣ ಸಮಾನನಾದ, ಪ್ರಿಯಸಖನಾದ ಮಹಾಬಲಿಷ್ಠನಾದ, ನಿಷಾದಜಾತಿಯ, ನಿಷಾದರಿಗೆ ಅಧಿಪತಿಯಾದ ಗುಹನೆಂಬ ಹೆಸರಿನಿಂದ ವಿಖ್ಯಾತನಾದ ರಾಜನಿದ್ದನು. ಅವನು ಪುರುಷ ವ್ಯಾಘ್ರನಾದ ಶ್ರೀರಾಮನು ತನ್ನ ದೇಶಕ್ಕೆ ಆಗಮಿಸಿರುವನೆಂಬುದನ್ನು ಕೇಳಿ ವೃದ್ಧರಿಂದಲೂ, ಅಮಾತ್ಯರಿಂದಲೂ, ಜ್ಞಾತಿ ಬಾಂಧವರಿಂದಲೂ ಪರಿವೃತನಾಗಿ ಶ್ರೀರಾಮನ ಬಳಿಗೆ ಆಗಮಿಸಿದನು. ಪ್ರಿಯಸಖನಾದ ಗುಹನು ಪರಿವಾರ ಸಮೇತವಾಗಿ ತನ್ನನ್ನು ಕಾಣಲು ಬರುತ್ತಿರುವುದನ್ನು ಶ್ರೀರಾಮನು ದೂರದಿಂದಲೇ ನೋಡಿ ಲಕ್ಷ್ಮಣನೊಡನೆ ತಾನೂ ಸ್ವಲ್ಪ ಮುಂದೆ ಹೋಗಿ ಗುಹನನ್ನು ಸಂಧಿಸಿದನು. ನಾರುಮಡಿಯನ್ನುಟ್ಟು ಬಂದಿರುವ ಶ್ರೀರಾಮನನ್ನು ನೋಡಿ ಗುಹನು ದುಃಖಿತನಾಗಿ ಶ್ರೀರಾಮನನ್ನು ಗಾಢವಾಗಿ ಆಲಂಗಿಸಿಕೊಂಡು, "ನಿನಗೆ ಅಯೋಧ್ಯೆಯು ಹೇಗೋ ಈ ಶೃಂಗಬೇರಪುರವೂ ಹಾಗೆಯೇ ಕೋಸಲ ದೇಶವು ನಿನ್ನದಾಗಿರುವಂತೆ ಈ ರಾಜ್ಯವೂ ನಿನ್ನದೇ ಆಗಿರುವುದು. ಈಗ ನಾನು ನಿನಗಾಗಿ ಏನು ಮಾಡಬೇಕು ಎಂಬುದನ್ನು ಆಜ್ಞಾಪಿಸು. ಮಹಾಬಾಹುವೇ ಇಂತಹ ಸಕಲ ಸದ್ಗುಣ ಸಂಪನ್ನನಾದ, ಪುರುಷ ಶ್ರೇಷ್ಠನಾದ, ಧರ್ಮಪ್ರಿಯನಾದ ಅತಿಥಿಯನ್ನು ಮಹಾ ಪುಣ್ಯ ವಿಶೇಷದಿಂದ ನಾನು ಪಡೆದೆನಲ್ಲದೇ ಮತ್ತಾರು ತಾನೇ ಪಡೆಯುವರು" ಎಂದನು.
ಹೀಗೆ ಹೇಳಿದ ಗುಹನಿಗೆ ಶ್ರೀರಾಮನು ಯಥೋಚಿತವಾಗಿ "ಮಿತ್ರನೇ! ನೀನು ಕಾಲ್ನಡಿಗೆಯಲ್ಲಿ ಪರಿವಾರ ಸಮೇತನಾಗಿ ನನ್ನನ್ನು ಕಾಣಲು ಬಂದಿರುವುದರಿಂದಲೂ ನಮ್ಮ ಮೇಲೆ ನಿನಗಿರುವ ಪ್ರೇಮಾತಿಶಯವನ್ನು ತೋರಿದುದರಿಂದಲೂ ನಾವು ನಿನ್ನಿಂದ ಬಹುಮಾನಿತರಾಗಿದ್ದೇವೆ ಮತ್ತು ಕೃಷ್ಣಾಜಿನಗಳಿಂದ ಸಿದ್ಧವಾದ ಬಟ್ಟೆಯನ್ನು ಉಟ್ಟಿದ್ದೇನೆ. ತಂದೆಯ ಆಜ್ಞೆಯನ್ನು ಪರಿಪಾಲಿಸುವ ಧರ್ಮದಲ್ಲಿ ನಿಯುಕ್ತನಾಗಿರುವೆ ನಾನು ಕಂದ-ಮೂಲ-ಫಲಗಳನ್ನು ಮಾತ್ರವೇ ತಿನ್ನುತ್ತೇನೆ. ಈಗ ನಾನು ಅರಣ್ಯದಲ್ಲಿ ಸಂಚರಿಸುವ ತಾಪಸನೆಂದು ತಿಳಿ ಈಗ ನಾನು ನಿನ್ನಿಂದ ಕುದುರೆಗಳಿಗೆ ಬೇಕಾದ ಆಹಾರವನ್ನು ಮಾತ್ರವೇ ಯಾಚಿಸುತ್ತೇನೆ. ಅದೊಂದುಳಿದು ಬೇರಾವ ವಸ್ತುವೂ ನನಗೆ ಬೇಕಾಗಿಲ್ಲ. ಅಶ್ವಗ್ರಾಸಪ್ರದಾನದಿಂದಲೇ ನಾನು ನಿನ್ನಿಂದ ಚೆನ್ನಾಗಿ ಪೂಜಿಸಲ್ಪಟ್ಟವನಾಗುತ್ತೇನೆ. ನನ್ನ ತಂದೆಯಾದ ದಶರಥನಿಗೆ ಈ ಕುದುರೆಗಳೆಂದರೆ ಅತಿಶಯವಾದ ಪ್ರೀತಿ. ಆದುದರಿಂದ ಈ ಕುದುರೆಗಳಿಗೆ ಆಹಾರವನ್ನು ಒದಗಿಸುವುದರಿಂದಲೇ ನಾನು ತೃಪ್ತಿ ಹೊಂದುತ್ತೇನೆ" ಎಂದನು.
ಶ್ರೀರಾಮನು ಹೀಗೆ ಹೇಳುತ್ತಲೇ ಗುಹನು ಸೇವಕರನ್ನು ಕರೆದು ಕುದುರೆಗಳಿಗೆ ಯಥೇಚ್ಛವಾಗಿ ಹುಲ್ಲನ್ನೂ ನೀರನ್ನೂ ಒದಗಿಸುವಂತೆ ಆಜ್ಞೆ ಮಾಡಿದನು.




Comments