top of page

ಶ್ರೀರಾಮನಿಗೆ ಬೇಟೆಯ ಬಯಕೆ (ರಾಮಾಯಣ‌ ಕಥಾಮಾಲೆ 33)

ಶ್ರೀರಾಮನ ಈ ಮಾತನ್ನು ಕೇಳಿ ಲಕ್ಷ್ಮಣನು, "ಪ್ರಾಜ್ಞನೇ! ನನಗೂ ಅದೇ ಉಚಿತವಾಗಿ ಕಾಣುತ್ತದೆ. ಕೂಡಲೇ ರಥವನ್ನು ಹತ್ತು" ಎಂದನು.

ಬಳಿಕ ಶ್ರೀರಾಮನು ಸುಮಂತ್ರನಿಗೆ, "ಸುಮಂತ್ರ! ಕುದುರೆಗಳನ್ನು ಶೀಘ್ರವಾಗಿ ರಥಕ್ಕೆ ಹೂಡು. ಇಲ್ಲಿಂದ ಮುಂದೆ ಶೀಘ್ರವಾಗಿ ಹೋಗು. ಯಾವ ಆತಂಕವೂ ಇಲ್ಲದೇ ಕಾಡಿಗೆ ಹೋಗುತ್ತೇವೆ" ಎಂದು ತಿಳಿಸಿದನು.


ಒಡನೆಯೇ ಸೂತನು ತ್ವರೆಯಿಂದ ರಥಕ್ಕೆ ಕುದುರೆಗಳನ್ನು ಕಟ್ಟಿ ಪ್ರಯಾಣಕ್ಕೆ ಸಜ್ಜುಗೊಳಿಸಿ, "ರಥವನ್ನು ಪ್ರಯಾಣಕ್ಕೆ ಸಜ್ಜುಗೊಳಿಸಲಾಗಿದೆ. ಸೀತಾ ಲಕ್ಷ್ಮಣರೊಡನೆ ಶೀಘ್ರವಾಗಿ ರಥದಲ್ಲಿ ಕುಳಿತುಕೋ" ಎಂದನು.

ಶ್ರೀರಾಮನು ಸುಮಂತ್ರನ ಮಾತಿನಂತೆ ಸೀತಾ ಲಕ್ಷ್ಮಣರೊಡನೆ ರಥದಲ್ಲಿ ಕುಳಿತು ರಭಸದಿಂದ ಪ್ರವಹಿಸುತ್ತಿದ್ದ, ಸುಳಿಗಳಿಂದ ಯುಕ್ತವಾಗಿದ್ದ ತಮಸಾ ನದಿಯನ್ನು ದಾಟಿದನು.


ಹೀಗೆ ತಮಸಾ ನದಿಯನ್ನು ದಾಟಿದ ನಂತರ ಶ್ರೀರಾಮನು ರಥದಿಂದಿಳಿದು ಮಂಗಳಕರವಾಗಿಯೂ, ಮುಳ್ಳುಗಳಿಲ್ಲದೆಯೂ, ಪೀಡಾರಹಿತವಾಗಿಯೂ, ದುಷ್ಟ ಪ್ರಾಣಿಗಳ ಭಯದಿಂದ ಭಯಪಡುವವರಿಗೆ ಅಭಯಪ್ರದವಾಗಿಯೂ ಇದ್ದ ಹೆದ್ದಾರಿಯನ್ನು ಸೇರಿದನು. ತನ್ನನ್ನು ಅನುಸರಿಸಿ ಬಂದಿರುವ ಪಟ್ಟಣಿಗರಿಗೆ ಭ್ರಾಂತಿಯನ್ನುಂಟು ಮಾಡುವ ಸಲುವಾಗಿ ಶ್ರೀರಾಮನು ಸುಮಂತ್ರನಿಗೆ, "ಸಾರಥಿಯೇ! ನೀನು ರಥದಲ್ಲಿ ಕುಳಿತು ಉತ್ತರಾಭಿಮುಖವಾಗಿ ಪ್ರಯಾಣ ಮಾಡು. ಮುಹೂರ್ತಕಾಲ ಉತ್ತರದಿಕ್ಕಿನೆಡೆಗೆ ಪ್ರಾಯಣಮಾಡಿ ಅನಂತರ ರಥವನ್ನು ಹಿಂದಕ್ಕೆ ತಿರುಗಿಸಿಕೊಂಡು ಬಾ. ಪಟ್ಟಣಿಗರು ನಾನು ಯಾವ ಕಡೆಗೆ ಹೋಗಿರುವೆನೆಂಬುದನ್ನು ತಿಳಿಯಲು ಸಾಧ್ಯವಾಗದಂತೆ, ಅವರಿಗೆ ಭ್ರಾಂತಿಯುಂಟಾಗುವ ರೀತಿಯಲ್ಲಿ ರಥವನ್ನು ಜಾಗರೂಕನಾಗಿ ನಡೆಸಿಕೊಂಡು ಬಾ" ಎಂದನು. ಶ್ರೀರಾಮನ ಮಾತನ್ನು ಕೇಳಿ ಸೂತನು ಹಾಗೆಯೇ ಮಾಡಿದನು. ಸೀತಾಸಮೇತರಾದ, ರಘುವಂಶವರ್ಧನರಾದ ರಾಮ ಲಕ್ಷ್ಮಣರು ಸುಮಂತ್ರನು ತಂದ ರಥದಲ್ಲಿ ಸೀತೆಯೊಡನೆ ಉಪಸ್ಥಿತರಾದರು. ಶಕುನಶಾಸ್ತ್ರದಲ್ಲಿ ಪರಿಣಿತನಾಗಿದ್ದ ಸುಮಂತ್ರನು ಪ್ರಯಾಣಕಾಲದಲ್ಲಿ ಮಂಗಳದ ನಿಮಿತ್ತವಾಗಿ ರಥವನ್ನು ಉತ್ತರದಿಕ್ಕಿಗೆ ಅಭಿಮುಖವಾಗಿ ನಿಲ್ಲಿಸಿದನು. ಮಹಾರಥನಾದ ಶ್ರೀರಾಮನು ಸುಮಂತ್ರನೊಡನೆಯೂ ಸೀತಾ ಲಕ್ಷ್ಮಣರೊಡನೆಯೂ ರಥದಲ್ಲಿ ಕುಳಿತು ಅರಣ್ಯಕ್ಕೆ ಪ್ರಯಾಣಮಾಡಿದನು.


ರಾತ್ರಿಯು ಕಳೆದು ಬೆಳಗಾಗಲಾಗಿ ನಿದ್ರೆಯಿಂದ ಎಚ್ಚೆತ್ತ ಅಯೋಧ್ಯಾ ಪ್ರವಾಸಿಗಳು, ಪ್ರಿಯನಾದ ಶ್ರೀರಾಮನನ್ನು ಕಾಣದೇ ಶೋಕಪೀಡಿತರಾಗಿ ಮುಂದೇನು ಮಾಡಬೇಕೆಂದು ತೋರದೇ ನಿಶ್ಚೇಷ್ಟರೂ ಬುದ್ಧಿಗೆಟ್ಟವರೂ ಆದರು. ಹೀಗೆ ಬಹಳ ವಿಷಣ್ಣರಾಗಿದ್ದ, ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ಶೋಕಾಯುಕ್ತರಾಗಿದ್ದ ಶ್ರೀರಾಮನನ್ನು ಅನುಸರಿಸಿ ಹೋಗಿ ಕೃತಕೃತ್ಯರಾಗದೇ ಹಿಂದಿರುಗಿದ್ದ ಬದುಕಿರಲು ಇಚ್ಚೆಯೇ ಇಲ್ಲದೆ ಪ್ರಾಣತೊರೆಯಬೇಕೆಂದು ಬಯಸಿದ್ದ, ಯಾವ ಕಾರ್ಯವನ್ನೂ ಮಾಡಲು ಮನಸ್ಸಿಲ್ಲದೇ ಎಲ್ಲದರಲ್ಲಿಯೂ ಜಿಗುಪ್ಸೆ ಹೊಂದಿದ್ದ ಅಯೋಧ್ಯಾ ನಗರವಾಸಿಗಳು, ಪ್ರಾಣಿಗಳಿಗಿಂತಲೂ ಹೀನರಾದವರಂತೆ ಕಾಣುತ್ತಿದ್ದಾರೆ. ಶ್ರೀರಾಮನನ್ನು ಕಾಣದೇ ಹತಾಶರಾದ ಅಯೋಧ್ಯೆಗೆ ಬಂದ ಪಟ್ಟಣಿಗರು ತಮ್ಮ ತಮ್ಮ ಮನೆಗಳಿಗೆ ಹೋಗಿ ಮಡದಿ ಮಕ್ಕಳೊಡನೆ ಶ್ರೀರಾಮನ ಸಲುವಾಗಿ ಕಣ್ಣೀರಿಟ್ಟರು.



ಅತ್ತಲಾಗಿ ಪುರುಷಸಿಂಹನಾದ ಶ್ರೀರಾಮನು ತಂದೆಯ ಆಜ್ಞೆಯನ್ನು ಸ್ಮರಿಸುತ್ತಾ ರಾತ್ರಿಯ ಉಳಿದ ಭಾಗದಲ್ಲಿ ಬಹಳ ದೂರ ಪ್ರಯಾಣ ಮಾಡಿದನು. ಹೀಗೆಯೇ ಶ್ರೀರಾಮನು ಮುಂದೆ ಮುಂದೆ ಪ್ರಯಾಣ ಮಾಡುತ್ತಿರಲು ಮಂಗಳಕರವಾದ ಆ ರಾತ್ರಿಯು ಕಳೆದು ಹೋಯಿತು. ಬೆಳಗಾದೊಡನೆಯೇ ಪ್ರಾತಃ ಸಂಧ್ಯಾದೇವಿಯನ್ನು ಉಪಾಸನೆ ಮಾಡಿ ಪುನಃ ಪ್ರಯಾಣ ಮಾಡುತ್ತಾ ಉತ್ತರ ಕೋಸಲದ ದಕ್ಷಿಣ ಎಲ್ಲೆಯ ಬಳಿಗೆ ಹೋದನು. ಬಳಿಕ ಮಂಗಳಕರವಾದ ನೀರಿನ ಪ್ರವಾಹದಿಂದ ಕೂಡಿದ್ದ ವೇದಶ್ರುತಿ ಎಂಬ ನದಿಯನ್ನೂ ದಾಟಿ, ಅಗಸ್ತ್ಯರಿಂದ ಸಂಸೇವ್ಯಮಾನವಾದ ದಕ್ಷಿಣ ದಿಕ್ಕಿನ ಕಡೆಗೆ ಶ್ರೀರಾಮನು ಹೊರಟನು. ದಕ್ಷಿಣ ದಿಕ್ಕಿನ ಹಾದಿಯಲ್ಲಿಯೇ ಬಹಳ ಹೊತ್ತು ಪ್ರಯಾಣ ಮಾಡಿ ಮಂಗಳಕರವಾದ ನೀರಿನಿಂದಲೂ, ಗೋವುಗಳಿಂದ ವ್ಯಾಪ್ತವಾದ ತೀರ ಪ್ರದೇಶಗಳಿಂದಲೂ ಕೂಡಿದ್ದ ಗಂಗಾ ನದಿಯೊಡನೆ ಸೇರಿ ಸಮುದ್ರಕ್ಕೆ ಹೋಗುವ ಗೋಮತೀ ನದಿಯನ್ನು ದಾಟಿದನು. ಬಳಿಕ ಶ್ರೀರಾಮನು ಶೀಘ್ರಗಾಮಿಗಳಾದ ಕುದುರೆಗಳಿಂದ ಎಳೆಯಲ್ಪಡುತ್ತಿದ್ದ ರಥದಲ್ಲಿ ಕುಳಿತು ಪ್ರಯಾಣ ಮಾಡುತ್ತಾ ನವಿಲು ಮತ್ತು ಹಂಸಪಕ್ಷಿಗಳ ನಿನಾದದಿಂದ ವ್ಯಾಪ್ತವಾಗಿದ್ದ ಸ್ಯಂದಿಕಾ ಎಂಬ ನದಿಯನ್ನು ದಾಟಿದನು.

ಹಿಂದೆ ಮನು ಚಕ್ರವರ್ತಿಯಿಂದ ಇಕ್ಷ್ವಾಕು ಮಹಾರಾಜನಿಗೆ ಕೊಡಲ್ಪಟ್ಟಿದ್ದ, ಧನ ಧಾನ್ಯ ಸಮೃದ್ಧವಾಗಿದ್ದ ಅನೇಕ ರಾಷ್ಟ್ರಗಳಿಂದ ಸಮಾವೃತವಾಗಿದ್ದ ಕೋಸಲರಾಜ್ಯವನ್ನು ಶ್ರೀರಾಮನು ವೈದೇಹಿಗೆ ತೋರಿಸಿದನು. ನಂತರ ಪುರುಷ ಶ್ರೇಷ್ಠನಾದ ಶ್ರೀರಾಮನು ಸಾರಥಿಯಾದ ಸುಮಂತ್ರನನ್ನು ಉದ್ದೇಶಿಸಿ, "ಸೂತ! ನಾನು ಅರಣ್ಯದಿಂದ ಹಿಂದಿರುಗಿ ಬಂದು ನನ್ನ ತಂದೆ ತಾಯಿಗಳೊಡನೆ ಸರಯೂ ನದಿಯ ತೀರದಲ್ಲಿರುವ ಪುಷ್ಪ ಭರಿತವಾದ ಉದ್ಯಾನವನದಲ್ಲಿ ಮೃಗಗಳನ್ನು ಬೇಟೆಯಾಡುತ್ತಾ ಯಾವಾಗ ಸಂಚರಿಸುವೆನು? ಈ ಲೋಕದಲ್ಲಿ ರಾಜರ್ಷಿಗಳು ವಿಹಾರಾರ್ಥವಾಗಿ ಅರಣ್ಯದಲ್ಲಿ ಬೇಟೆಯಾಡಬೇಕೆಂದು ನಿಯತವಾಗಿದೆ. ಧನುರ್ಧಾರಿಗಳಾದ ಮನುಷ್ಯರಿಂದ ಅಪೇಕ್ಷಿತವಾದ ಹಿಂದಿನ ಕಾಲದಿಂದಲೂ ಅಂಗೀಕರಿಸಲ್ಪಟ್ಟಿರುವ ಈ ಬೇಟೆಯ ವಿನೋದವನ್ನು ನಾನು ಹೆಚ್ಚು ಅಪೇಕ್ಷಿಸುವುದಿಲ್ಲ. ಅರಣ್ಯದಿಂದ ಹಿಂದಿರುಗಿ ಬಂದ ನಂತರ ಸರಯೂ ನದಿಯ ತೀರದಲ್ಲಿರುವ ಸುಂದರವಾದ ಉಪವನದಲ್ಲಿ ಸ್ವಲ್ಪ ಕಾಲ ಮಾತ್ರ ಕ್ರೂರ ಮೃಗಗಳನ್ನು ಬೇಟೆಯಾಡುವ ಅಪೇಕ್ಷೆಯಿದೆ. ರಾಜರ್ಷಿಗಳಿಗೂ ಸಮ್ಮತವಾಗಿರುವ ಈ ಬೇಟೆಯಾಟವು ಈ ಲೋಕದಲ್ಲಿ ಎಲ್ಲಾ ರಾಜರಿಗೂ ಅತ್ಯಂತ ಪ್ರಿಯವಾಗಿದೆ" ಎಂದನು.

ಹೀಗೆ ಇಕ್ಷ್ವಾಕುವಂಶಜನಾದ ಶ್ರೀರಾಮನು ಸರಯೂ ನದಿಯ ತೀರದ ವನದಲ್ಲಿ ಬೇಟೆಯಾಡಬೇಕೆನ್ನುವ ತನ್ನ ಅಭಿಲಾಷೆಯನ್ನು ಸುಮಂತ್ರನಿಗೆ ಮಧುರವಾದ ಮಾತುಗಳಿಂದ ವ್ಯಕ್ತಪಡಿಸುತ್ತಾ ಪ್ರಯಾಣ ಮಾಡಿದನು.

Comments


bottom of page