top of page

ಶ್ರೀರಾಮ-ಲಕ್ಷ್ಮಣರ ದಂಡಕಾರಣ್ಯ ಪ್ರವೇಶ: ವಿರಾಧ ವಧೆ ಮತ್ತು ಶರಭಂಗ ಮಹರ್ಷಿಗಳ ಶಾಪವಿಮೋಚನೆ (ರಾಮಾಯಣ ಕಥಾಮಾಲೆ 58)

41 minutes ago
2 min read

ದಂಡಕಾರಣ್ಯದಲ್ಲಿ ಸಂಚರಿಸುತ್ತಿರುವಾಗ ರಾಮ-ಲಕ್ಷ್ಮಣರಿಗೆ ಭಯಂಕರನಾದ ವಿರಾಧನೆಂಬ ರಾಕ್ಷಸನು ಎದುರಾದನು. ಲಕ್ಷ್ಮಣನು ಮಂದಹಾಸವನ್ನು ಬೀರುತ್ತಾ ನಸುನಗುತ್ತಾ "ಈ ಅರಣ್ಯಕ್ಕೆ ಬಂದು ಸ್ವಚ್ಛೆಯಿಂದ ಸಂಚರಿಸುತ್ತಿರುವ ನೀನು ಯಾರು ಮತ್ತು ನಿನ್ನ ಕುಲ-ಗೋತ್ರಗಳೇನು?" ಎಂದು ಪ್ರಶ್ನಿಸಿದನು. ಆ ಮಾತಿಗೆ ವಿರಾಧನು ಅರಣ್ಯವನ್ನೇ ಮೊಳಗಿಸುತ್ತಾ ಮೊದಲು ನೀವು ಯಾರೆಂಬುದನ್ನೂ, ಎಲ್ಲಿಗೆ ಹೋಗುತ್ತಿರುವಿರೆಂಬುದನ್ನೂ ಹೇಳುವಂತೆ ಮರುಪ್ರಶ್ನಿಸಿದನು. ಅದಕ್ಕೆ ಮಹಾತೇಜಸ್ವಿಯಾದ ಶ್ರೀರಾಮನು ತಾವಿಬ್ಬರೂ ಇಕ್ಷಾಕುಕುಲಸಂಭೂತರಾದ ಕ್ಷತ್ರಿಯರೆಂದು ತಿಳಿಸಿ, ಅರಣ್ಯದಲ್ಲಿ ಮನಬಂದಂತೆ ಸಂಚರಿಸುತ್ತಿರುವ ಆ ರಾಕ್ಷಸನ ವೃತ್ತಾಂತವನ್ನು ಕೇಳಿದನು.


ಆಗ ವಿರಾಧನು ತಾನು ಜಯನೆಂಬುವವನ ಮಗನೆಂದೂ, ಶತಪ್ರದಾ ಎಂಬಾಕೆಯ ತಾಯೆಂದೂ ತಿಳಿಸಿ, ಎಲ್ಲರೂ ತನ್ನನ್ನು 'ವಿರಾಧ' ಎಂದು ಕರೆಯುವರೆಂದನು. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ್ದರಿಂದ ತನಗೆ ಶಸ್ತ್ರಗಳಿಂದಾಗಲಿ ಬಂಡೆಗಳಿಂದಾಗಲಿ ಸಾವಿಲ್ಲವೆಂದು ಹೇಳಿದ ಅವನು, ಸೀತೆಯನ್ನು ಬಿಟ್ಟು ಬೇಗ ಹೊರಟುಹೋಗುವಂತೆ ಬೆದರಿಕೆ ಹಾಕಿದನು. ರಾಕ್ಷಸನ ಈ ಮಾತನ್ನು ಕೇಳಿ ಕ್ರುದ್ಧನಾದ ಶ್ರೀರಾಮನು ರಕ್ತದಂತೆ ಕೆಂಪು ಕಣ್ಣುಗಳಿಂದ ಕೂಡಿಕೊಂಡು, "ಕ್ಷುದ್ರನೇ! ಕುತ್ತಿತವಾದ ವ್ಯವಹಾರವುಳ್ಳ ನಿನಗೆ ಧಿಕ್ಕಾರವಿರಲಿ... ನಿನ್ನ ಮೃತ್ಯುವನ್ನು ನನ್ನೊಡನೆ ಮಾಡಲಿರುವ ಯುದ್ಧದಲ್ಲಿ ಪಡೆದುಕೊಳ್ಳುವೆ" ಎಂದು ನುಡಿದನು. ತಕ್ಷಣವೇ ಧನುಸ್ಸಿಗೆ ಹೆದೆಯೇರಿಸಿ ಸ್ವರ್ಣಮಯವಾದ ರೆಕ್ಕೆಗಳಿಂದ ಕೂಡಿದ ಗರುಡ-ವಾಯುಗಳಿಗೆ ಸಮಾನವಾದ ವೇಗವುಳ್ಳ ಏಳು ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ಆ ಬಾಣಗಳು ವಿರಾಧನ ಶರೀರವನ್ನು ಭೇದಿಸಿ, ರಕ್ತದಿಂದ ತೋಯ್ದು ಕೆಂಪಾದ ಅಗ್ನಿಯ ರೂಪಗಳನ್ನು ಧರಿಸಿ ನೆಲದ ಮೇಲೆ ಬಿದ್ದುವು.


ಬಾಣಗಳ ಪ್ರಹಾರದಿಂದ ವಿರಾಧನು ಸೀತಾದೇವಿಯನ್ನು ಕೆಳಗಿಳಿಸಿ, ಶೂಲವನ್ನು ಮೇಲೆತ್ತಿಕೊಂಡು ಅಗಲವಾಗಿ ಬಾಯ್ದೆರೆದು ಪ್ರಳಯಕಾಲದ ಯಮನೋಪಾದಿಯಲ್ಲಿ ರಾಮ-ಲಕ್ಷ್ಮಣರ ಕಡೆಗೆ ಧಾವಿಸಿದನು. ರಾಮ-ಲಕ್ಷ್ಮಣರು ಬಾಣಗಳ ಮಳೆಯನ್ನೇ ಸುರಿಸಿದರೂ, ವಿರಾಧನು ಲೆಕ್ಕಿಸದೆ ಗಹಗಹಿಸಿ ನಗುತ್ತಾ ಮೈಮುರಿದುಕೊಂಡನು. ವರದಾನದ ಬಲದಿಂದ ಪ್ರಾಣಗಳನ್ನು ತಡೆಹಿಡಿದು ಬರುತ್ತಿದ್ದ ಆ ರಾಕ್ಷಸನ ಶೂಲಾಯುಧವನ್ನು ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಶ್ರೀರಾಮನು ಎರಡು ಬಾಣಗಳಿಂದ ಕತ್ತರಿಸಿಹಾಕಿದನು. ಮರುಕ್ಷಣದಲ್ಲಿಯೇ ರಾಮ-ಲಕ್ಷ್ಮಣರು ಕತ್ತಿಗಳಿಂದ ಅವನನ್ನು ಬಲವಾಗಿ ಪ್ರಹರಿಸಿದರು. ಆ ಸಂದರ್ಭದಲ್ಲಿ ಭಯಂಕರನಾದ ವಿರಾಧನು ಪುರುಷಸಿಂಹರಾದ ರಾಮ-ಲಕ್ಷ್ಮಣರನ್ನು ತನ್ನ ಎರಡು ಕೈಗಳಿಂದಲೂ ಹಿಡಿದೆತ್ತಿ ಹೆಗಲುಗಳ ಮೇಲಿಟ್ಟುಕೊಂಡು ಅರಣ್ಯಾಭಿಮುಖವಾಗಿ ಹೊರಟೇಬಿಟ್ಟನು.


ರಾಕ್ಷಸನಿಂದ ಹಿಡಿದು ಒಯ್ಯಲ್ಪಡುತ್ತಿರುವ ರಾಮ-ಲಕ್ಷ್ಮಣರನ್ನು ನೋಡಿ ವೈದೇಹಿಯು ತನ್ನ ಎರಡು ತೋಳುಗಳನ್ನು ಮೇಲೆತ್ತಿ, "ಅಯ್ಯೋ! ದಶರಥನ ಮಗನಾದ ಈ ಶ್ರೀರಾಮನು ಸತ್ಯವಂತನು, ಶೀಲವಂತನು ಮತ್ತು ಪರಮಪವಿತ್ರನು... ತೋಳಗಳೋ, ಹುಲಿಗಳೋ ಅಥವಾ ಚಿರತೆಗಳೋ ನನ್ನನ್ನು ತಿಂದುಹಾಕಿಬಿಡುತ್ತವೆ" ಎಂದು ಗಟ್ಟಿಯಾಗಿ ಕಿರುಚಿಕೊಂಡು ಹಲುಬಿದಳು. ಸೀತೆಯ ಆ ಮಾತನ್ನು ಕೇಳಿ ರಾಮ-ಲಕ್ಷ್ಮಣರು ವಿರಾಧನ ಸಂಹಾರವನ್ನು ಬೇಗ ಮುಗಿಸಲು ಉಪಕ್ರಮಿಸಿದರು. ಲಕ್ಷ್ಮಣನು ಮುಷ್ಟಿಪ್ರಹಾರದಿಂದ ಎಡತೋಳನ್ನು, ಶ್ರೀರಾಮನು ಬಲತೋಳನ್ನು ಮುರಿದರು. ಮುಷ್ಟಿಗಳಿಂದಲೂ ಮೊಣಕಾಲುಗಳಿಂದಲೂ ಗುದ್ದಿ ಜಜ್ಜಿದರೂ ಅವನು ಸಾಯಲಿಲ್ಲ. ಆದುದರಿಂದ "ಇವನು ಮಾಡಿರುವ ತಪಸ್ಸಿನಿಂದಲೂ ವರದಿಂದಲೂ ನಾವು ಇವನನ್ನು ಶಸ್ತ್ರಾಸ್ತ್ರಗಳಿಂದ ಜಯಿಸಲಾರೆವು, ಆದುದರಿಂದ ಹಳ್ಳದಲ್ಲಿ ಹೂತುಬಿಡೋಣ" ಎಂದು ರಾಮನು ಲಕ್ಷ್ಮಣನಿಗೆ ಹೇಳಿದನು.


ಆಗ ವಿರಾಧನು ವಿನಯಪೂರ್ವಕವಾಗಿ ತಾನು ತುಂಬುರು ಎಂಬ ಗಂಧರ್ವನಾಗಿದ್ದು, ಕುಬೇರನ ಶಾಪದಿಂದ ರಾಕ್ಷಸ ಶರೀರವನ್ನು ಪಡೆಯಬೇಕಾಯಿತೆಂದೂ, ದಶರಥನ ಮಗನಾದ ಶ್ರೀರಾಮನು ಯುದ್ಧದಲ್ಲಿ ತನ್ನನ್ನು ಸಂಹರಿಸಿದಾಗ ನಿಜರೂಪ ತಾಳಿ ಸ್ವರ್ಗಕ್ಕೆ ಹೋಗುವೆನೆಂಬ ಕುಬೇರನ ಶಾಪವಿಮೋಚನೆಯ ವೃತ್ತಾಂತವನ್ನು ತಿಳಿಸಿದನು. ಬಳಿಕ ಶ್ರೀರಾಮನು ವಿರಾಧನ ಕುತ್ತಿಗೆಯ ಮೇಲೆ ಕಾಲಿಟ್ಟು ಆಕ್ರಮಿಸಿ ನಿಂತುಕೊಳ್ಳಲು, ಲಕ್ಷ್ಮಣನು ಗುದ್ದಲಿಯನ್ನು ತೆಗೆದುಕೊಂಡು ದೊಡ್ಡದಾದ ಮತ್ತು ಆಳವಾದ ಹಳ್ಳವನ್ನು ತೋಡಿದನು. ಅನಂತರ ರಾಮ-ಲಕ್ಷ್ಮಣರು ಆನಂದಭರಿತರಾಗಿ ವಿರಾಧನನ್ನು ಮೇಲಕ್ಕೆತ್ತಿ ಹಳ್ಳದಲ್ಲಿ ಹಾಕಿ ಕಲ್ಲು-ಮಣ್ಣುಗಳಿಂದ ಮುಚ್ಚಿ ಸಂಹರಿಸಿದರು.


ರಾಕ್ಷಸನನ್ನು ಸಂಹರಿಸಿದ ನಂತರ ವೀರ್ಯವಂತನಾದ ಶ್ರೀರಾಮನು ಭಯಭೀತಳಾದ ಸೀತಾದೇವಿಯನ್ನು ಆಲಿಂಗನ ಮಾಡಿ ಸಮಾಧಾನಪಡಿಸಿ, ಲಕ್ಷ್ಮಣನಿಗೆ ಶರಭಂಗ ಮಹರ್ಷಿಗಳ ಆಶ್ರಮಕ್ಕೆ ಹೋಗೋಣವೆಂದು ಹೇಳಿದನು. ಅಲ್ಲಿ ತಪಸ್ಸಿನಿಂದ ಶುದ್ಧಾತ್ಮರಾದ ಶರಭಂಗರ ಆಶ್ರಮದ ಸಮೀಪದಲ್ಲಿ ದೇವತೆಗಳ ಒಡೆಯನಾದ ಇಂದ್ರನು ದಿವ್ಯರಥದಲ್ಲಿ ಬಂದು ಶರಭಂಗರನ್ನು ಭೇಟಿಯಾಗಿ ತೆರಳುವ ಅದ್ಭುತ ದೃಶ್ಯವನ್ನು ರಾಮ-ಲಕ್ಷ್ಮಣರು ಕಂಡರು. ನಂತರ ಸೀತಾ-ರಾಮ-ಲಕ್ಷ್ಮಣರು ಶರಭಂಗ ಮಹರ್ಷಿಗಳನ್ನು ಭೇಟಿಯಾಗಿ ನಮಸ್ಕರಿಸಿದರು. ಇಂದ್ರನ ಆಗಮನದ ಕಾರಣವನ್ನು ಕುರಿತು ರಾಮನು ಪ್ರಶ್ನಿಸಿದಾಗ, ಮಹರ್ಷಿಗಳು ವರದನಾದ ಇಂದ್ರನು ತಪಸ್ಸಿನಿಂದ ಜಯಿಸಲ್ಪಟ್ಟ ಬ್ರಹ್ಮಲೋಕಕ್ಕೆ ತನ್ನನ್ನು ಕೊಂಡೊಯ್ಯಲು ಬಂದಿದ್ದರೂ, ಪ್ರಿಯಾತಿಥಿಯಾದ ರಾಮನನ್ನು ಸಂದರ್ಶಿಸದೆ ಹೋಗಬಾರದೆಂದು ತಾನು ನಿಶ್ಚಯಿಸಿರುವುದಾಗಿ ತಿಳಿಸಿದರು.


ತದನಂತರ ಮಹರ್ಷಿಗಳು ತಾವು ಜಯಿಸಿರುವ ಅಕ್ಷಯವಾದ ಲೋಕಗಳನ್ನು ಸ್ವೀಕರಿಸುವಂತೆ ರಾಮನಿಗೆ ಹೇಳಿದಾಗ, ಸರ್ವಶಾಸ್ತ್ರವಿಶಾರದನಾದ ಶ್ರೀರಾಮನು ವಿನಯದಿಂದ ತಾನೇ ಸ್ವಪ್ರಯತ್ನದಿಂದ ಎಲ್ಲವನ್ನೂ ಪಡೆದುಕೊಳ್ಳುವುದಾಗಿ ತಿಳಿಸಿ, ಈ ಅರಣ್ಯದಲ್ಲಿ ತಮಗಿರುವ ವಾಸಸ್ಥಳದ ಕುರಿತು ಮಾರ್ಗದರ್ಶನ ಮಾಡುವಂತೆ ಕೋರಿದನು. ಆಗ ಶರಭಂಗರು ಪರಮಧಾರ್ಮಿಕನಾದ ಸುತೀಕ್ಷ್ಯನೆಂಬ ಮುನಿಯ ಆಶ್ರಮಕ್ಕೆ ಹೋಗುವ ಮಾರ್ಗವನ್ನು ವಿವರವಾಗಿ ತಿಳಿಸಿದರು. ಕೊನೆಯಲ್ಲಿ ಶರಭಂಗ ಮಹರ್ಷಿಗಳು "ಹಾವು ಪೊರೆಯನ್ನು ಕಳಚುವಂತೆ ನಾನೀಗ ಈ ದೇಹವನ್ನು ತ್ಯಾಗಮಾಡುತ್ತೇನೆ" ಎಂದು ಹೇಳಿ ಅಗ್ನಿಯನ್ನು ಪ್ರವೇಶಿಸಿ ತಮ್ಮ ದೇಹವನ್ನು ದಹಿಸಿಕೊಂಡರು. ಮಹರ್ಷಿಗಳು ಯಕ್ಷೇಶ್ವರನಿಗೆ ಸದೃಶವಾದ ದಿವ್ಯ ಶರೀರವನ್ನು ತಾಳಿ, ಸಪರಿವಾರನಾದ ಬ್ರಹ್ಮನನ್ನು ಸಂದರ್ಶಿಸಿ ಬ್ರಹ್ಮಲೋಕವನ್ನು ಸೇರಿದರು.

Comments


bottom of page