top of page

ಚಿತ್ರಕೂಟದಿಂದ ಅರಣ್ಯದೆಡೆಗೆ (ರಾಮಾಯಣ ಕಥಾಮಾಲೆ 56)

6 minutes ago
3 min read

ಕುಲಪತಿಯು ಸಂಗಡ ಎಲ್ಲ ತಪಸ್ವಿಗಳೂ ಚಿತ್ರಕೂಟದ ಆಶ್ರಮಗಳಿಂದ ಹೊರಟುಹೋದುದರಿಂದಲೂ ಇನ್ನೂ ಹಲವಾರು ಕಾರಣಗಳಿಂದಲೂ ಶ್ರೀರಾಮನು ಚಿತ್ರಕೂಟಪರ್ವತದ ಆಶ್ರಮದಲ್ಲಿ ವಾಸಮಾಡಿಕೊಂಡಿರಲು ಇಷ್ಟಪಡಲಿಲ್ಲ.


'ಇಲ್ಲಿಯೇ ನಾನು ಭರತನನ್ನೂ, ತಾಯಂದಿರನ್ನೂ ಮತ್ತು ನಾಗರಿಕರನ್ನೂ ನೋಡಿದೆನು. ಭರತನಿಲ್ಲಿಗೆ ಬಂದಿದ್ದು, ರಾಜ್ಯಭಾರವನ್ನು ವಹಿಸುವಂತೆ ಅಂಗಲಾಚಿ ಬೇಡಿದ್ದು, ನನ್ನ ತಾಯಂದಿರು ದುಃಖಿಸಿದ್ದು, ಪ್ರಜೆಗಳ ಶೋಕ, ನಮ್ಮ ತಂದೆಯ ನಿಧನವಾರ್ತೆಯನ್ನು ಕೇಳಿದ್ದು-ಮುಂತಾದ ವೆಲ್ಲವೂ ನನ್ನ ಸ್ಮರಣೆಗೆ ಬರುತ್ತಲೇ ಇರುತ್ತವೆ. ಇದರಿಂದ ನನ್ನ ಮನಸ್ಸು ಸಮಾಧಾನವನ್ನು ಕಳೆದುಕೊಳ್ಳುತ್ತಿದೆ. ಎರಡನೆಯದಾಗಿ: ಈ ಚಿತ್ರಕೂಟದ ಪ್ರಸ್ಥಭೂಮಿಯು ಮಹಾತ್ಮನಾದ ಭರತನ ಅಪಾರವಾದ ಸೈನ್ಯಕ್ಕೆ ವಿಶ್ರಾಂತಿ ಸ್ಥಳವಾಗಿದ್ದುದರಿಂದ ಆನೆ-ಕುದುರೆ ಮೊದಲಾದ ವಾಹನಗಳ ಲಡ್ಡಿಗಳಿಂದ ತುಂಬಿಹೋಗಿದೆ. ಆದುದರಿಂದ ನಾವು ಬೇರೆಡೆಗೆ ಹೊರಟುಹೋಗುವುದೇ ಸೂಕ್ತ' - ಹೀಗೆ ಶ್ರೀರಾಮನು ಯೋಚಿಸಿ ಸೀತಾ-ಲಕ್ಷ್ಮಣರೊಡನೆ ಚಿತ್ರಕೂಟದ ಆಶ್ರಮವನ್ನು ಬಿಟ್ಟುಹೊರಟನು.


ಹೀಗೆ ಭಾರ್ಯಾಭ್ರಾತೃಸಮೇತನಾಗಿ ಹೊರಟ ಯಶಸ್ವಿಯಾದ ಶ್ರೀರಾಮನು ಅತ್ರಿಮಹರ್ಷಿಗಳ ಆಶ್ರಮಕ್ಕೆ ಹೋಗಿ ಸುಖಾಸೀನರಾಗಿದ್ದ ಮಹರ್ಷಿಗಳಿಗೆ ಅಭಿವಾದನಪೂರ್ವಕವಾಗಿ ನಮಸ್ಕರಿಸಿದನು. ಪೂಜ್ಯರಾದ ಅತ್ರಿಗಳು ಶ್ರೀರಾಮನನ್ನು ಮಗನನ್ನೋಪಾದಿಯಲ್ಲಿ ತಬ್ಬಿಕೊಂಡು ನೆತ್ತಿಯನ್ನು ಆಘ್ರಾಣಿಸಿದರು. ಆನಂತರ ಮಹರ್ಷಿಗಳೇ ಶ್ರೀರಾಮನಿಗೆ ಆತಿಥ್ಯವನ್ನಿತ್ತು ಸತ್ಕರಿಸಿದರು. ಬಳಿಕ ಲಕ್ಷ್ಮಣನನ್ನೂ ಸೀತಾದೇವಿಯನ್ನೂ ಸಂತೈಸಿದರು. ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆಗಮಿಸಿದ, ಸರ್ವರಿಂದಲೂ ಸತ್ಕರಿಸಲ್ಪಡುತ್ತಿದ್ದ, ಮಹಾಭಾಗ್ಯಶಾಲಿನಿಯಾದ, ಸುಶೀಲೆಯಾದ, ತಪಸ್ವಿನಿಯಾದ, ವೃದ್ಧೆಯಾದ ಅನಸೂಯಾದೇವಿಯನ್ನು-ಧರ್ಮಜ್ಞರಾದ, ಋಷಿಶ್ರೇಷ್ಠರಾದ ಅತ್ರಿಮಹರ್ಷಿಗಳು ಸವಿಮಾತುಗಳಿಂದ ಸಂತೈಸುತ್ತಾ ಹೇಳಿದರು:


“ಪ್ರತಿಗೃಹೀಷ್ವ ವೈದೇಹೀಂ-”ನಮ್ಮ ಆಶ್ರಮಕ್ಕೆ ಆಗಮಿಸಿರುವ ವೈದೇಹಿಯನ್ನು ಕರೆದುಕೊಂಡು ಹೋಗು.”


ಆನಂತರ ಅತ್ರಿಮಹರ್ಷಿಗಳು ಧರ್ಮಚಾರಿಣಿಯಾದ, ತಪಸ್ವಿನಿಯಾದ ಅನಸೂಯಾದೇವಿಯನ್ನು ಶ್ರೀರಾಮನಿಗೆ ಪರಿಚಯಮಾಡಿಕೊಡುತ್ತಾ ಹೇಳಿದರು:


“ರಾಘವ! ಹಿಂದೊಮ್ಮೆ ಹತ್ತು ವರ್ಷಗಳ ಕಾಲ ನಿರಂತರವಾದ ಅನಾವೃಷ್ಟಿಯಿಂದಾಗಿ ಲೋಕವೆಲ್ಲವೂ ಬೆಂದು-ಬೆಂಡಾಗಿ ಹೋಗಿತ್ತು. ಆ ಸಮಯದಲ್ಲಿಳು ತನ್ನ ತಪಸ್ಸಿನ ಪ್ರಭಾವದಿಂದ ಕಂದ-ಮೂಲ-ಫಲಗಳನ್ನು ಋಷಿಗಳ ಆಹಾರಾರ್ಥವಾಗಿ ಸೃಷ್ಟಿಸಿದಳು. ಜಾನ್ಹವೀನದಿಯು ಋಷಿಗಳ ಸ್ನಾನಾರ್ಥವಾಗಿ ಆಶ್ರಮಗಳ ಮೂಲಕವಾಗಿಯೇ ಹರಿದುಹೋಗುವಂತೆ ಮಾಡಿದಳು. ಉಗ್ರವಾದ ತಪಸ್ಸನ್ನು ಮಾಡಲು ಸಂಕಲ್ಪಿಸಿ ನಿಯಮಬದ್ಧಳಾಗಿ ಹತ್ತು ಸಾವಿರ ವರ್ಷಗಳ ಮಹಾತಪಸ್ಸನ್ನು ಮಾಡಿದಳು. ವ್ರತಸ್ನಾತೆಯಾದ ಇವಳ ತಪಃಪ್ರಭಾವದಿಂದ ಋಷಿಗಳ ತಪಸ್ಸಿಗೆ ಉಂಟಾಗಿದ್ದ ವಿಘ್ನಗಳೆಲ್ಲವೂ ದೂರಮಾಡಲ್ಪಟ್ಟವು. ದೇವಕಾರ್ಯದ ಕಾರಣದಿಂದಾಗಿ ಈ ಅನಸೂಯಾದೇವಿಯು ಒಮ್ಮೆ ಒಂದೇ ರಾತ್ರಿಯನ್ನು ಹತ್ತು ರಾತ್ರಿಗಳುಷ್ಟು ದೀರ್ಘವಾಗುವಂತೆ ಮಾಡಿದಳು. ಇಂತಹ ಮಹಾಮಹಿಮಳಾದ ಅನಸೂಯಾದೇವಿಯನ್ನು ನೀನು ನಿನ್ನ ತಾಯಿಯಂತೆಯೇ ಭಾವಿಸು, ರಾಮ!ಸರ್ವಪ್ರಾಣಗಳಿಂದಲೂ ಅನುದಿನವೂ ನಮಸ್ಕರಿಸಲ್ಪಡುತ್ತಿರುವ, ತಪಸ್ವಿನಿಯಾದ, ವೃದ್ಧೆಯಾದ, ಕ್ರೋಧರಹಿತಳಾದ ಅನಸೂಯಾದೇವಿ ಬಳಿಗೆ ಸೀತಾದೇವಿಯು ಹೋಗಲಿ.”

ಅತ್ರಿ ಮಹರ್ಷಿಗಳು ಹೀಗೆ ಹೇಳಲು ಹಾಗೆಯೇ ಆಗಲಿ ಎಂದು ರಾಘವನು ಸೀತಾದೇವಿಯನ್ನು ಅನಸೂಯ ದೇವಿಯ ಬಳಿಗೆ ಕಳುಹಿಸಿಕೊಟ್ಟನು.

ಅನುಸೂಯಾದೇವಿಯು ಪ್ರೀತಿಪೂರ್ವಕವಾಗಿ ಕೊಟ್ಟ ಉತ್ತಮೋತ್ತಮವಾದ ಆ ವಸ್ತ್ರವನ್ನೂ, ಅಂಗರಾಗವನ್ನೂ, ಒಡವೆಗಳನ್ನೂ, ಮಾಲೆಯನ್ನೂ ವೈದೇಹಿಯು ಪ್ರತಿಗ್ರಹಿಸಿದಳು. ಅನಂತರ ಯಶಸ್ವಿನಿಯಾದ ಸೀತಾ ದೇವಿಯು ಕೈಮುಗಿದುಕೊಂಡು ಅನುಸೂಯಾದೇವಿಯ ಸಮೀಪದಲ್ಲಿಯೇ ಕುಳಿತುಕೊಂಡಳು. ಹಾಗೆ ತನ್ನ ಬಳಿಯಲ್ಲಿ ಕುಳಿತ ಸೀತಾದೇವಿಯನ್ನು ನೋಡಿ ದೃಢವ್ರತಳಾದ ಅನುಸೂಯಾದೇವಿಗೆ ತನಗೆ ಅತಿಪ್ರಿಯವಾದ ಒಂದು ಕಥೆಯನ್ನು ಸೀತೆಯ ಮುಖಾರವಿಂದದಿಂದ ಕೇಳಬೇಕೆನ್ನಿಸಿತು. ಅಂತೆಯೇ ಅವಳು ಸೀತೆಯನ್ನು ಪ್ರಶ್ನಿಸಿತು:


“ಸೀತೆ! ಸ್ವಯಂವರದ ಮೂಲಕವಾಗಿ ಶ್ರೀರಾಮನು ನಿನ್ನನ್ನು ಪಡೆದುಕೊಂಡನೆಂಬ ವಾರ್ತೆಯನ್ನು ನಾನು ಈ ಹಿಂದೆ ಕೇಳಿದ್ದೆನು. ಆ ಸ್ವಯಂವರದ ಕಥೆಯನ್ನು ನಾನು ವಿಸ್ತಾರವಾಗಿ ಕೇಳಲು ಅಪೇಕ್ಷಿಸುವೆನು. ಹೇಗೆ ನಡೆಯಿತೋ ಹಾಗೆಯೇ ಸಮಗ್ರವಾಗಿ ಆ ಸ್ವಯಂವರದ ಕಥೆಯನ್ನು ಹೇಳು.”

ಧರ್ಮಚಾರಿಣಿಯಾದ ತಾಪಸಿಯು ಹೀಗೆ ಹೇಳಲು ಸೀತೆಯು – “ಹಾಗೆಯೇ ಆಗಲಿ. ಅದನ್ನು ಯಥಾವತ್ತಾಗಿ ಹೇಳುವೆನು. ತಾಯೇ! ಅವಧರಿಸು” – ಎಂದು ಹೇಳಿ ಕಥೆಯನ್ನು ಪ್ರಾರಂಭಿಸಿದಳು:


“ಮಿಥಿಲಾದೇಶದ ಅಧಿಪತಿಯು ಜನಕನೆಂಬ ಹೆಸರಿನಿಂದ ಖ್ಯಾತನಾಗಿದ್ದಾನೆ. ಅವನು ಪರಮಧಾರ್ಮಿಕನು ಮತ್ತು ವೀರನು. ಕ್ಷತ್ರಧರ್ಮದ ಪರಿಪಾಲನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಆ ರಾಜನು ನ್ಯಾಯಸಮ್ಮತವಾದ ರೀತಿಯಲ್ಲಿ ರಾಜ್ಯವನ್ನಾಳುತ್ತಿದ್ದನು. ಅವನೊಮ್ಮೆ ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಅದೇ ಸ್ಥಳದಲ್ಲಿ ಭೂಮಿಯಲ್ಲಿ ಹುದುಗಿಕೊಂಡಿದ್ದ ನಾನು ಭೂಮಿಯನ್ನು ಭೇದಿಸಿಕೊಂಡು ಹೊರಗೆ ಬಂದೆನು. ಅದರಿಂದಲೇ ನಾನು ಜನಕರಾಜನ ಮಗಳಾದೆನು. ಮುಷ್ಟಿಯಲ್ಲಿ ಬೀಜಗಳನ್ನು ಹಿಡಿದು ಅವುಗಳನ್ನು ಬಿತ್ತುವುದರಲ್ಲಿ ಆಸಕ್ತನಾಗಿದ್ದ ರಾಜನು ಧೂಳಿನಿಂದ ಆವೃತಳಾಗಿದ್ದ ನನ್ನನ್ನು ಕಂಡು ವಿಸ್ಮಿತನಾದನು. ಜನಕನಿಗೆ ಆ ಸಮಯದಲ್ಲಿ ಬೇರೆಯ ಮಕ್ಕಳಿಲ್ಲದಿದ್ದರಿಂದ ಭೂಮಿಯಲ್ಲಿದ್ದ ನನ್ನನ್ನು ವಾತ್ಸಲ್ಯದಿಂದ ಮೇಲತ್ತಿ ತೊಡೆಯ ಮೇಲೆ ಮಲಗಿಸಿಕೊಂಡು - 'ಮಮೇಯಂ ತನಯಾ - ಇವಳು ನನ್ನ ಮಗಳು' - ಎಂದು ಉದ್ಘೋಷಿಸಿ ನನ್ನನ್ನು ಆತ್ಮಜೆಯಂದೇ ಭಾವಿಸಿ ಬಹಳವಾಗಿ ಪ್ರೀತಿಸತೊಡಗಿದನು. ಅದೇ ಸಮಯದಲ್ಲಿ ಅಶರೀರವಾಣೆಯೂ ಕೇಳಿಸಿತು.


“ಮಹಾರಾಜ! ಇದು ಹೀಗೆಯೇ ಸರಿ. ನಿನ್ನ ಕ್ಷೇತ್ರದಲ್ಲಿಯೇ ಇವಳು ಲಭಿಸಿರುವುದರಿಂದ ಧರ್ಮದ ದೃಷ್ಟಿಯಿಂದ ಇವಳು ನಿನ್ನ ಮಗಳೇ ಆಗಿರುತ್ತಾಳೆ.”


ಅಶರೀರವಾಣಿಯ ಆ ಮಾತನ್ನು ಕೇಳಿ ನನ್ನ ತಂದೆಯಾದ ಧರ್ಮಾತ್ಮನಾದ ಜನಕನು ಆನಂದಭರಿತನಾದನು. ನನ್ನನ್ನು ಪಡೆದುಕೊಂಡ ನಂತರ ಅವನು ಸಂಪದ್ಭರಿತನು ಆದನು. ಪುಣ್ಯಕರ್ಮನಾದ ಜನಕನು ತನಗೆ ಬಹಳ ಇಷ್ಟಳಾಗಿದ್ದ ಹಿರಿಯ ಹೆಂಡತಿಗೆ ನನ್ನನ್ನೊಪ್ಪಿಸಿದನು. ಸ್ನೇಹಮಯಿಯಾಗಿದ್ದು, ಅವಳು ಮಾತೃವಾತ್ಸಲ್ಯದಿಂದಲೇ ನನ್ನನ್ನು ಲಾಲಿಸಿ ಪೋಷಿಸಿದಳು. ಹಲವಾರು ವರ್ಷಗಳು ಕಳೆದನಂತರ ನನಗೆ ಪತಿಯನ್ನು ಪಡೆಯಲು ಯೋಗ್ಯವಾದ ವಯಸ್ಸಾಯಿತು. ಅದನ್ನು ಗಮನಿಸಿದ ನನ್ನ ತಂದೆಯು ಸಂಗ್ರಹಿಸಿಟ್ಟಿದ್ದ ಐಶ್ವರ್ಯವನ್ನು ಕಳೆದುಕೊಂಡು ದರಿದ್ರನಾದವನು ಚಿಂತಿಸುವಂತೆಯೇ ಚಿಂತಿಸತೊಡಗಿದನು.


ಸಕಾಲದಲ್ಲಿ ಮಗಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡದಿದ್ದರೆ ಜನರಿಂದ ತನಗೂ ಮಾನಭಂಗವು ಅತ್ಯಲ್ಪಕಾಲದಲ್ಲಿಯೇ ಆಗುವುದೆಂದು ಜನಕನು ಚಿಂತಿಸತೊಡಗಿದನು.ಮೇಲಾಗಿ ನಾನು ಆಯೋನಿಜೆಯು. ನನಗೆ ಅನುರೂಪನಾದ ವರನನ್ನೇ ರಾಜನು ಹುಡುಕಬೇಕಾಗಿದ್ದಿತು. ಎಷ್ಟೇ ಯೋಚಿಸಿದರೂ ನನಗೆ ಪತಿಯಾಗಲು ಯೋಗ್ಯನಾದ ಒಬ್ಬ ವರನೂ ನಮ್ಮ ತಂದೆಯ ಗಮನಕ್ಕೆ ಬರಲಿಲ್ಲ. ಆ ವಿಷಯವನ್ನೇ ಯಾವಾಗಲೂ ಯೋಚಿಸುತ್ತಿದ್ದ ನಮ್ಮ ತಂದೆಯ ಬುದ್ಧಿಗೆ ಒಂದು ವಿಷಯವು ಹೊಳೆಯಿತು. ಧೀಮಂತನಾದ ನನ್ನ ತಂದೆಯು ನನಗೆ ಸ್ವಯಂವರದ ಪದ್ಧತಿಯನ್ನು ಅನುಸರಿಸಿ ವಿವಾಹಮಾಡುವುದಾಗಿ ನಿಶ್ಚಯಿಸಿದನು.


ನಮ್ಮ ತಂದೆಯು ಮಹಾಯಜ್ಞವೊಂದನ್ನು ಮಾಡಿದ್ದಾಗ ಮಹಾತ್ಮನಾದ ವರುಣನು ಸುಪ್ರೀತನಾಗಿ ನಮ್ಮ ತಂದೆಗೆ ಶ್ರೇಷ್ಠವಾದ ಒಂದು ಧನುಸ್ಸನ್ನೂ-ಬಾಣಗಳಿಂದ ಯಾವಾಗಲೂ ತುಂಬಿರುತ್ತಿದ್ದ ಎರಡು ಬತ್ತಳಿಕೆಗಳನ್ನೂ ಅನುಗ್ರಹಿಸಿ ಕೊಟ್ಟಿದ್ದನು. ಆ ಶಿವಧನುಸ್ಸು ಬಹಳ ಭಾರವಾಗಿದ್ದರಿಂದ ಸಾಮಾನ್ಯರಾದ ಮಾನವರಿಂದ ಬಹಳ ಪ್ರಯತ್ನದಿಂದಲೂ ಅಲ್ಲಾಡಿಸುವ ಸಾಧ್ಯತೆಯಿರಲಿಲ್ಲ. ಮಹಾವೀರನೆನಿಸಿದ ಕ್ಷತ್ರಿಯರಾಜರು ಅದನ್ನು ಪ್ರಯತ್ನಿಸಿ ಎತ್ತಬಹುದಾಗಿದ್ದರೂ ಧನುಸ್ಸನ್ನು ಬಗ್ಗಿಸಿ ಹೆದೆಯೇರಿಸಲು ಅವರಿಗೆ ಕನಸಿನಲ್ಲೂ ಸಾಧ್ಯವಾಗುತ್ತಿರಲಿಲ್ಲ. ಅಂತಹ ಮಹಾಶಿವ ಧನುಸ್ಸನ್ನು ನಮ್ಮ ತಂದೆಯು ಸಭಾಮಂದಿರದಲ್ಲಿರಿಸಿದನು. ಎಲ್ಲ ದೇಶಗಳ ರಾಜರನ್ನೂ ಆಹ್ವಾನಿಸಿ ನರೇಂದ್ರರ ಮಧ್ಯದಲ್ಲಿ ಉದ್ಘೋಷಿಸಿದನು.


“ರಾಜೇಂದ್ರರೇ! ಯಾವ ವೀರಪುರುಷನು ಈ ಧನುಸ್ಸನ್ನೆತ್ತಿ ಹೆಡೆಯೇರಿಸುವನೋ-ಅಂತಹವನಿಗೆ ನನ್ನ ಮಗಳಾದ ಸೀತೆಯು ಪತಿಯಾಗುತ್ತಾಳೆ. ಇದರಲ್ಲಿಲ್ಲವ ಸಂಶಯವೂ ಇಲ್ಲ.”


ಆರ್ಯೇ! ರಾಜಕುಮಾರರೆಲ್ಲರೂ ಪರ್ವತೋಪಮವಾಗಿದ್ದ ಧನುಸ್ಸನ್ನು ನೋಡಿ ಅದು ಬಹಳ ಭಾರವಾಗಿದ್ದರಿಂದ ಅದನ್ನು ಎತ್ತಲು ಅಶಕ್ತರಾಗಿ ಮಹಾಧನುಸ್ಸಿಗೆ ನಮಸ್ಕರಿಸಿ ತಮ್ಮ-ತಮ್ಮ ದೇಶಗಳಿಗೆ ಹೊರಟು ಹೋದರು. ಅದಾದ ಅನೇಕ ದಿವಸಗಳು ಕಳೆದಾನಂತರ ಕಾಂತಿಯಿಂದ ಬೆಳಗುತ್ತಿದ್ದ ರಾಘವನು ವಿಶ್ವಾಮಿತ್ರಮುನಿಗಳ ಸಮೇತನಾಗಿ ನಮ್ಮ ತಂದೆಯು ಮಾಡುತ್ತಿದ್ದ ಯಜ್ಞವನ್ನು ನೋಡಲು ಮಿಥಿಲಾಪಟ್ಟಣಕ್ಕೆ ಬಂದನು. ತಮ್ಮನಾದ ಲಕ್ಷ್ಮಣನೋಡನಿದ್ದ ಸತ್ಯಪರಾಕ್ರಮನಾದ ಶ್ರೀರಾಮನನ್ನೂ-ಧರ್ಮಾರ್ಥರಾದ ವಿಶ್ವಾಮಿತ್ರರನ್ನು ನನ್ನ ತಂದೆಯು ಯಥೋಚಿತವಾಗಿ ಸತ್ಕರಿಸಿದನು. ಅನಂತರ ವಿಶ್ವಾಮಿತ್ರರು ತಮ್ಮೊಡನಿದ್ದ ರಾಮ-ಲಕ್ಷ್ಮಣರನ್ನು ನನ್ನ ತಂದೆಗೆ ಪರಿಚಯ ಮಾಡಿಕೊಡುತ್ತಾ ಹೇಳಿದರು:


“ಜನಕರಾಜ! ಈ ಇಬ್ಬರೂ ದಶರಥರಾಜನ ಮಕ್ಕಳು. ನೀನು ಸ್ವಯಂವರಕ್ಕೆ ಪಣವನ್ನಿಟ್ಟಿರುವ ಧನುಸ್ಸನ್ನು ನೋಡ ಬಯಸಿದ್ದಾರೆ, ದೈವದತ್ತವಾದ ಆ ಧನುಸ್ಸನ್ನು ರಾಜಪುತ್ರನಾದ ರಾಮನಿಗೆ ತೋರಿಸು.”


ವಿಶ್ವಾಮಿತ್ರರು ಹೀಗೆ ಹೇಳುತ್ತಲೇ ಜನಕರಾಜನು ಮಹಾಧನುಸ್ಸನ್ನು ಅನೇಕ ರಾಜಭಟರ ಮೂಲಕವಾಗಿ ಸಭಾಭವನಕ್ಕೆ ತರಿಸಿ ದೈವದತ್ತವಾದ ಆ ಶಿವಧನುಸ್ಸನ್ನು ರಾಜಪುತ್ರನಾದ ಶ್ರೀರಾಮನಿಗೆ ತೋರಿಸಿದನು.


ಮಹಾಬಾಹುವಾದ ವೀರ್ಯವಂತನಾದ ಶ್ರೀರಾಮನು ರೆಪ್ಪೆಯನ್ನು ಮುಚ್ಚಿ ತೆಗೆಯುವಷ್ಟು ಕಾಲದಲ್ಲಿಯೇ ಆ ಮಹಾಧನುಸ್ಸನ್ನೆತ್ತಿ ಬಗ್ಗಿಸಿ , ನಾಣೇರಿಸಿ ಸಜ್ಜುಗೊಳಿಸಿದನು. ಆದರೆ ಅವನು ಹಾಗೆ ವೇಗದಿಂದ ನಾಣನ್ನು ಸೆಳೆದು ಕಟ್ಟುತ್ತಿದ್ದಂತೆಯೇ ಆ ಮಹಾಧನುಸ್ಸು ಮಧ್ಯಕ್ಕೆ ಸರಿಯಾಗಿ ಮುರಿದು ಎರಡು ಭಾಗವಾಯಿತು. ಆ ಸಮಯದಲ್ಲಿ ಸಿಡಿಲು ಬಡಿದಾಗ ಉಂಟಾಗುವ ಘೋರಶಬ್ದದಂತೆ ಭಯಂಕರವಾದ ಶಬ್ದವಾಯಿತು. ಹೀಗೆ ಶ್ರೀರಾಮನು ನನ್ನ ಸ್ವಯಂವರಕ್ಕೆ ಪಣವನ್ನಿಟ್ಟಿದ್ದ ಧನುಸ್ಸನ್ನು ಭಗ್ನಗೊಳಿಸಿದೊಡನೆಯೇ ಸತ್ಯಪ್ರತಿಜ್ಞನಾದ ನಮ್ಮ ತಂದೆಯು ಜಲಕುಂಭವನ್ನೆತ್ತಿಕೊಂಡು ನನ್ನನ್ನು ಶ್ರೀರಾಮನಿಗೆ ಧಾರೆಯೆರೆದುಕೊಡಲು ಸಿದ್ಧನಾದನು. ಸ್ವಯಂವರದ ವಿಷಯದಲ್ಲಿ ತಂದೆಯಾದ, ಪ್ರಭುವಾದ ದಶರಥನ ಅಭಿಪ್ರಾಯವೇನೆಂಬುದು ತಿಳಿಯದಿದ್ದ ಕಾರಣ ಶ್ರೀರಾಮನು ಒಡನೆಯೇ ನನ್ನ ಪಾಣಿಗ್ರಹಣ ಮಾಡಲಿಲ್ಲ.


ಅನಂತರ ನಮ್ಮ ತಂದೆಯು ದೂತರನ್ನು ಕಳುಹಿಸಿ ವೃದ್ಧನಾದ ದಶರಥನನ್ನು ಮಿಥಿಲಾಪಟ್ಟಣಕ್ಕೆ ಕರೆಸಿಕೊಂಡನು. ಅವನ ಅನುಮತಿಯನ್ನು ಪಡೆದು ನಮ್ಮ ತಂದೆಯು ನನ್ನನ್ನು ಆತ್ಪುದನಾದ ಶ್ರೀರಾಮನಿಗೆ ಧಾರೆಯೆರೆದುಕೊಟ್ಟನು. ನನ್ನ ತಂಗಿಯಾದ, ಪ್ರಿಯದರ್ಶನೆಯಾದ, ಸಾಧ್ವಿಯಾದ ಊರ್ಮಿಳಾದೇವಿಯನ್ನು ಜನಕನು ಲಕ್ಷ್ಮಣನಿಗೆ ಧಾರೆಯೆರೆದುಕೊಟ್ಟನು. ತಾಯೇ! ಹೀಗೆ ನನ್ನನ್ನು ನಮ್ಮ ತಂದೆಯು ಆ ಸ್ವಯಂವರದಲ್ಲಿ ಶ್ರೀರಾಮನಿಗೆ ವಿವಾಹಮಾಡಿಕೊಟ್ಟನು. ನಾನೂ ಕೂಡ ಧರ್ಮಕ್ಕೆ ಅನುಸಾರವಾಗಿ ವೀರರಲ್ಲಿ ಶ್ರೇಷ್ಠನಾದ ನನ್ನ ಪತಿಯಲ್ಲಿ ಸದಾ ಅನುರಕ್ತಳಾಗಿರುವೆನು.”

ಧರ್ಮಜ್ಞಳಾದ ಅನಸೂಯಾದೇವಿಯು ಸೀತೆಯು ಹೇಳಿದ ಸ್ವಯಂವರದ ಮಹಾಕಥೆಯನ್ನು ಕೇಳಿ ಸಂತೋಷಭರಿತಾಳಾಗಿ ತನ್ನೆರಡು ತೋಳುಗಳಿಂದಲೂ ಸೀತೆಯನ್ನು ಬಾಚಿ ತಬ್ಬಿಕೊಂಡಳು.

ದೇವಕನ್ಯೆಯಂತೆಯೇ ಇದ್ದ ಸೀತಾದೇವಿಯು ಅನಸೂಯಾದೇವಿಯು ಹೇಳಿದಂತೆಯೇ ಋಷಿ ಪತ್ನಿಯು ಕೊಟ್ಟಿದ್ದ ವಸ್ತ್ರಾಭರಣಗಳಿಂದ ಸಿಂಗರಿಸಿಕೊಂಡು ಅನಸೂಯಾ ದೇವಿಯನ್ನು ಕಾಲು ಮುಟ್ಟಿ ನಮಸ್ಕರಿಸಿ ಶ್ರೀರಾಮನಿದ್ದೆಡೆಗೆ ಬಂದಳು.

ಹೀಗೆ ಅರಣ್ಯ ವಾಸಿಗಳಾದ ತಪಸ್ವಿಗಳು ಮತ್ತು ಬ್ರಾಹ್ಮಣರು ಶ್ರೀರಾಮನಿಗೆ ಕೈಮುಗಿದು ಪ್ರಾರ್ಥಿಸಿ ಸುಖ ಪ್ರಯಾಣಕ್ಕಾಗಿ ಸ್ವಸ್ತಿ ವಾಚನವನ್ನು ಮಾಡಿದರು. ಬಳಿಕ ಶತ್ರುತಾಪಕನಾದ ಶ್ರೀರಾಮನು ನಭೋ ಮಂಡಲವನ್ನು ಸೂರ್ಯನು ಪ್ರವೇಶಿಸುವಂತೆ ಸೀತಾ ಲಕ್ಷ್ಮಣರೊಡನೆ ಅರಣ್ಯ ಮಂಡಲವನ್ನು ಪ್ರವೇಶಿಸಿದನು.

Comments


bottom of page