top of page

ಭರತನ ರಾಜ್ಯಭಾರ ಮತ್ತು ಚಿತ್ರಕೂಟದಲ್ಲಿ ಋಷಿಗಳ ಆತಂಕ (ರಾಮಾಯಣ ಕಥಾಮಾಲೆ 55)

7 hours ago
2 min read

ದಿವ್ಯ ಪಾದುಕೆಗಳು ದೊರೆತದ್ದರಿಂದ ಸಂತುಷ್ಟನಾದ ಭರತನು ಪಾದಕ್ಕೆಗಳನ್ನು ಶಿರಸ್ಸಿನಲ್ಲಿ ಧರಿಸಿಕೊಂಡು ಶತ್ರುಘ್ನನೊಡನೆ ರಥವನ್ನು ಹತ್ತಿ ಅಯೋಧ್ಯಾ ಪಟ್ಟಣಕ್ಕೆ ಪ್ರಯಾಣ ಮಾಡಿದನು. ದುರವಸ್ಥೆಯಲ್ಲಿದ್ದ ಅಯೋಧ್ಯೆಯನ್ನು ಪ್ರವೇಶಿಸಿದ ಭರತನು ತನ್ನ ಅಂತಪುರಕ್ಕೆ ಹೋಗಿ ಬಹಳವಾಗಿ ದುಃಖಿಸಿದನು.


ಬಳಿಕ ದೃಢವ್ರತನಾದ ಭರತನು ಎಲ್ಲ ಮಾತೃಜನರನ್ನೂ ಅಯೋಧ್ಯೆಯಲ್ಲಿ ಬಿಟ್ಟು ಶೋಕಸಂತಪ್ತನಾಗಿ ತನ್ನೊಡನಿದ್ದ ವಸಿಷ್ಠರೇ ಮೊದಲಾದ ಗುರುಜನರಿಗೆ ಹೇಳಿದನು:


"ಗುರುಜನರೇ! ನಾನಿನ್ನು ನಂದಿಗ್ರಾಮಕ್ಕೆ ಪ್ರಯಾಣಮಾಡುತ್ತೇನೆ. ಇದಕ್ಕಾಗಿ ತಮ್ಮೆಲ್ಲರ ಅನುಜ್ಞೆಯನ್ನೂ ಪ್ರಾರ್ಥಿಸುತ್ತೇನೆ. ಅಲ್ಲಿಗೆ ಹೋಗಲು ನೀವೆಲ್ಲರೂ ನನಗೆ ಅನುಮತಿಯನ್ನು ನೀಡಿರಿ. ಶ್ರೀರಾಮನಿಲ್ಲದಿರುವುದರಿಂದ ನನಗೆ ಒದಗಿರುವ ಈ ಎಲ್ಲ ದುಃಖಗಳನ್ನೂ ನಾನಲ್ಲಿ ಸಹಿಸಿಕೊಂಡಿರಲು ಪ್ರಯತ್ನಿಸುತ್ತೇನೆ. ಪೂಜ್ಯನಾದ ಮತ್ತು ರಾಜನಾದ ನನ್ನ ತಂದೆಯು ದಿವಂಗತನಾದನು. ಪೂಜ್ಯನಾದ ನಮ್ಮಣ್ಣ ಶ್ರೀರಾಮನು ವನವಾಸಿಯಾಗಿದ್ದಾನೆ. ಇಂತಹ ದುಃಖವನ್ನು ಸಹಿಸಿಕೊಂಡು ನಾನು ಈ ರಾಜ್ಯವನ್ನು ನಮ್ಮಣ್ಣನಾದ ಶ್ರೀರಾಮನಿಗೆ ಒಪ್ಪಿಸುವ ಸಲುವಾಗಿ ಅವನು ಬರುವ ಕಾಲವನ್ನೇ ಎದುರುನೋಡುತ್ತಿರುವೆನು. ಏಕೆಂದರೆ ಮಹಾಯಶೋವಂತನಾದ ಆ ನನ್ನ ಅಣ್ಣ ಶ್ರೀರಾಮನೇ ನಮ್ಮೆಲ್ಲರಿಗೂ ರಾಜನು."


ಭರತನು ದೈನ್ಯದಿಂದ ಹೀಗೆ ಹೇಳಿ ದುಃಖದಿಂದಲೇ ಮಂತ್ರಿಗಳೊಡನೆ ನಂದಿಗ್ರಾಮದಲ್ಲಿ ರಾಜ್ಯಭಾರಮಾಡಲು ಉಪಕ್ರಮಿಸಿದನು. ವೀರನಾದ, ಭರತಪ್ರಭುವು ಅಣ್ಣನಂತೆಯೇ ಜಟಾವಲ್ಕಲಧರನಾಗಿ ಋಷಿವೇಷವನ್ನು ಧರಿಸಿ ಸೇನಾಸಹಿತನಾಗಿ ನಂದಿಗ್ರಾಮದಲ್ಲಿ ವಾಸಮಾಡುತ್ತಿದ್ದನು.


ಭ್ರಾತೃಪ್ರೇಮಿಯಾದ, ಅಣ್ಣನ ಮಾತನ್ನು ನಡೆಸುವುದರಲ್ಲಿ ಉತ್ಸುಕನಾಗಿದ್ದ, ಪ್ರತಿಜ್ಞೆಯನ್ನು ಯಥಾವತ್ತಾಗಿ ಪರಿಪಾಲಿಸುತ್ತಿದ್ದ ಭರತನು ಶ್ರೀರಾಮನ ಪಾದುಕೆಗಳಿಗೆ ಪಟ್ಟಾಭಿಷೇಕವನ್ನು ಮಾಡಿ ಅಣ್ಣನ ಆಗಮನವನ್ನೇ ನಿರೀಕ್ಷಿಸುತ್ತಾ ನಂದಿಗ್ರಾಮದಲ್ಲಿ ವಾಸಮಾಡುತ್ತಿದ್ದನು. ಭರತನು ಅನುದಿನವೂ ಪಾದುಕೆಗಳಿಗೆ ಪೂಜೆಮಾಡಿ ತಾನೇ ಅವುಗಳಿಗೆ ಚಾಮರವನ್ನು ಬೀಸುತ್ತಿದ್ದನು. ಛತ್ರವನ್ನು ಹಿಡಿಯುತ್ತಿದ್ದನು. ಅನಂತರ ಅನುದಿನದ ರಾಜ್ಯವ್ಯವಹಾರಗಳೆಲ್ಲವನ್ನೂ ಆ ದಿವ್ಯಪಾದುಕೆಗಳಿಗೆ ಒಪ್ಪಿಸುತ್ತಿದ್ದನು. ಹೀಗೆ ಶ್ರೀಮಂತನಾದ ಭರತನು ಆರ್ಯನಾದ ಶ್ರೀರಾಮನ ಪಾದುಕೆಗಳಿಗೆ ಪಟ್ಟಾಭಿಷೇಕಮಾಡಿ, ಆ ಪಾದುಕೆಗಳನ್ನೇ ತನ್ನ ಸ್ವಾಮಿಯೆಂದು ಭಾವಿಸಿ ಅವುಗಳಿಗೆ ಅಧೀನನಾಗಿ ರಾಜ್ಯಭಾರಮಾಡುತ್ತಿದ್ದನು.


ಭರತನು ಅಯೋಧ್ಯೆಗೆ ಹಿಂದಿರುಗಿದ ನಂತರ ಶ್ರೀರಾಮನು ಚಿತ್ರಕೂಟ ಪರ್ವತದಲ್ಲಿದ್ದ ಅರಣ್ಯದಲ್ಲೇ ವಾಸಮಾಡುತ್ತಿರುವಾಗ ತನ್ನ ಸುತ್ತಲೂ ವಾಸಮಾಡಿಕೊಂಡಿದ್ದ ತಪಸ್ವಿಗಳ ಉದ್ವೇಗವನ್ನೂ ಉತ್ಸುಕತೆಯನ್ನೂ ಗಮನಿಸಿದನು.

ಹಿಂದೆ ಇದೇ ಚಿತ್ರಕೂಟಪರ್ವತದಲ್ಲಿದ್ದ ಆಶ್ರಮಗಳಲ್ಲಿ ಯಾವ ಮಹರ್ಷಿಗಳು ಶ್ರೀರಾಮನನ್ನು ಆಶ್ರಯಿಸಿಕೊಂಡು ನಿಶ್ಚಿಂತರಾಗಿ ತಪಸ್ಸಿನಲ್ಲೇ ನಿರತರಾಗಿದ್ದರೋ-ಆ ಮಹರ್ಷಿಗಳೇ ಈಗ ಭೀತರಾಗಿಯೂ ಉತ್ಸುಕರಾಗಿಯೂ ಇರುವುದನ್ನು ಶ್ರೀರಾಮನು ಗಮನಿಸಿದನು.

ಶ್ರೀರಾಮನು ಋಷಿಗಳ ಹಾವ-ಭಾವಗಳಿಂದ ಅವರ ಉತ್ಸುಕತೆಯನ್ನು ಗಮನಿಸಿದನು. ಅವರ ಚಿಂತಾ-ಭಯಗಳಿಗೆ ತಾನು ಕಾರಣವಾಗಿರಬಹುದೆಂದು ಶಂಕಿಸಿ ಆಶ್ರಮಗಳಿಗೆ ಯಜಮಾನನಾದ ಋಷಿಯನ್ನು ಸಂದರ್ಶಿಸಿ ಕೈಮುಗಿದುಕೊಂಡು ಹೇಳಿದನು:

"ಪೂಜ್ಯರೇ! ನನ್ನ ಪೂರ್ವಜರಲ್ಲಿದ್ದ ಯಾವುದಾದರೂ ಸದ್ಗುಣಗಳು ನನ್ನಲ್ಲಿ ಕಾಣುತ್ತಿಲ್ಲವೇ? ಅಥವಾ ನನ್ನಲ್ಲೇನಾದರೂ ವಿಕೃತವಾದ ಸ್ವಭಾವವನ್ನು ಇವರು ಕಾಣುತ್ತಿರುವರೇ? ಯಾವ ಕಾರಣದಿಂದ ಈ ತಪಸ್ವಿಗಳು ನನ್ನನ್ನೇ ನೋಡಿಕೊಂಡು ತಮ್ಮ ಮನಸ್ಸಿನ ಉದ್ವೇಗವನ್ನು ಹೊರಗೆಡಹುತಿದ್ದಾರೆ?

ನನ್ನ ತಮ್ಮನಾದ ಲಕ್ಷ್ಮಣನೇನಾದರೂ ಪ್ರಮಾದವಶದಿಂದ ತಮಗೆ ತಕ್ಕುದಲ್ಲದ ಯಾವುದಾದರೂ ಕುತ್ಸಿತವಾದ ಕಾರ್ಯಮಾಡಿರುವುದನ್ನು ಈ ತಪಸ್ವಿಗಳೇನಾದರೂ ಕಂಡರೇ? ಯಾವಾಗಲೂ ಅರ್ಘ್ಯ-ಪಾದ್ಯಾದಿಗಳನ್ನುತ್ತು ನಿಮ್ಮನ್ನು ಸತ್ಕರಿಸುವುದರಲ್ಲೇೆ ನಿರತಳಾಗಿರುವ ಸೀತಾದೇವಿಯು ನನ್ನ ಶುಶ್ರೂಷೆಯಲ್ಲಿಯೇ ನಿರತಳಾಗಿ ಶ್ರೇಷ್ಠಸ್ತ್ರೀಗೆ ಉಚಿತವಾದ ಋಷಿಸೇವೆಯನ್ನೇನಾದರೂ ಮಾಡಲಿಲ್ಲವೇ?"

ಶ್ರೀರಾಮನು ಹೀಗೆ ಪ್ರಶ್ನಿಸಲು, ಅನೇಕ ವರ್ಷಗಳ ತಪಶ್ಚರ್ಯೆಯಿಂದಲೂ ಮತ್ತು ವಯಸ್ಸಿನಿಂದಲೂ ವೃದ್ಧಾಪ್ಯವನ್ನು ಹೊಂದಿದ್ದ ಕುಲಪತಿಯು, ಭಯದಿಂದ ನಡುಗುತ್ತಿರುವನೋ ಎಂಬಂತೆ ವಯಸ್ಸಿಗನುಗುಣವಾದ ಗದ್ಗದಧ್ವನಿಯಿಂದ ಭೂತದಯಾಪರನಾದ ಶ್ರೀರಾಮನಿಗೆ ಹೇಳಿದನು:

“ಮಗು! ಶುಭಸ್ಭಾವದವಳಾದ, ಇತರರ ಕಲ್ಯಾಣದಲ್ಲೇ ಯಾವಾಗಲೂ ನಿರತಳಾಗಿರುವ ವೈದೇಹಿಯು ತನ್ನ ಸಾಧ್ವೀವೃತ್ತಿಯಿಂದ ಹೇಗೆ ವಿಚಲಿತಳಾಗುವಳು? ಅದರಲ್ಲಿಯೂ ವಿಶೇಷವಾಗಿ ತಪಸ್ವೀಜನರ ವಿಷಯದಲ್ಲಿ ಇವಳ ಪೂಜ್ಯಭಾವನೆಯು ಹೇಗೆತಾನೇ ವಿಚಲಿತವಾದೀತು?"


ಭಾರ್ಯಾಸಮೇತನಾಗಿ ನೀನಿಲ್ಲಿರುವ ಕಾರಣದಿಂದಲೇ ರಾಕ್ಷಸರಿಂದ ಈ ತಪಸ್ವಿಗಳಿಗೆ ಉಪದ್ರವವುಂಟಾಗಿದೆ. ಇದರಿಂದ ಉದ್ವಿಗ್ನರಾಗಿರುವ ಇವರು ಪಿಸುಮಾತುಗಳನ್ನಾಡುತ್ತಿದ್ದಾರೆ. ರಾವಣನ ತಮ್ಮನಾದ ಖರನೆಂಬ ರಾಕ್ಷಸನು ಜನಸ್ಥಾನದಲ್ಲಿ ವಾಸಮಾಡುತ್ತಿರುವ ಎಲ್ಲ ಋಷಿಗಳನ್ನೂ ಕಿತ್ತೊಗೆಯುತ್ತಾ ಎಲ್ಲೆಡೆಗಳಲ್ಲಿಯೂ ನಿರ್ಭಯದಿಂದ ತಿರುಗುತ್ತಿದ್ದಾನೆ. ಅವನು ಅತಿದುರುಳನು. ಎಲ್ಲೆಡೆಗಳಲ್ಲಿ ಜಯಗಳಿಸುತ್ತಾ ವಿಜೃಂಭಿಸುತ್ತಿದ್ದಾನೆ. ಅವನು ಮಹಾಕ್ರೂರಿಯು; ನರಮಾಂಸಭಕ್ಷಕನು; ಅತಿಗರ್ವಿಷ್ಣು; ಪಾಪಕರ್ಮಿಯು. ನಿನ್ನ ಪರಾಕ್ರಮವನ್ನು ಅವನು ಸಹಿಸತಕ್ಕವನಲ್ಲ. ನೀನು ಎಂದಿನಿಂದ ಈ ಚಿತ್ರಕೂಟದ ಆಶ್ರಮದಲ್ಲಿ ವಾಸಮಾಡುತ್ತಿರುವೆಯೋ-ಅಂದಿನಿಂದಲೂ ಆ ದುಷ್ಟರಾಕ್ಷಸನ ಅನುಯಾಯಿಗಳು ತಪಸ್ವಿಗಳಿಗೆ ಯಾವುದಾದರೂ ರೀತಿಯಲ್ಲಿ ತೊಂದರೆಯನ್ನು ಕೊಡುತ್ತಲೇ ಇದ್ದಾರೆ. ಬಹುಜುಗುಪ್ಸಿತವಾದ, ಬಹುಕ್ರೂರವಾದ, ಬಹುಭಯಾನಕವಾದ, ನೋಡಲು ದಾರುಣವಾದ ರೂಪ-ವಿರೂಪಗಳನ್ನು ಧರಿಸಿ ಆ ರಾಕ್ಷಸರು ತಪಸ್ವಿಗಳಿಗೆ ಕಾಣಿಸಿಕೊಳ್ಳುತ್ತಾರೆ. ತಮ್ಮ ಮುಂದೆ ನಿಂತಿರುವ ಮುನಿಗಳ ಮೇಲೆ ಅಪ್ರಶಸ್ತವಾದ ಮತ್ತು ಅಪವಿತ್ರವಾದ ಮದ್ಯ-ಮಾಂಸಾದಿಗಳನ್ನು ಸುರಿಯುತ್ತಾರೆ. ಅವರು ಅಶುಚಿಗಳಾದೆವೆಂಬ ಭಾವನೆಯಿಂದ ಆತ್ತಲಿತ್ತ ಪರದಾಡುತ್ತಿರುವಾಗಲೇ ಆ ಕ್ರೂರಿಗಳಾದ ರಾಕ್ಷಸರು ಬಹಳ ಬೇಗ ಇತರ ಮುನಿಗಳನ್ನೂ ನಾನಾರೀತಿಯಿಂದ ಪೀಡಿಸುತ್ತಾರೆ. ಕ್ಷುದ್ರಬುದ್ಧಿಯವರಾದ ಆ ರಾಕ್ಷಸರು ಒಂದೊಂದು ಆಶ್ರಮದಲ್ಲಿಯೂ ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಂಡಿದ್ದು ಅಜಾಗರೂಕತೆಯಿಂದಿರುವ ಮುನಿಗಳು ಕಾಣಿಸಿಕೊಂಡೊಡನೆಯೇ ಅವರನ್ನು ಹೆದರಿಸಿ ಓಡಿಸುತ್ತಾ ಆನಂದಪಡುತ್ತಾರೆ. ಯಜ್ಞವು ನಡೆಯುತ್ತಿರುವಾಗ ಆ ರಾಕ್ಷಸಾಧಮರು ಸ್ರುಕ್-ಸ್ರುವಗಳನ್ನೂ, ಪುಣ್ಯಾಹಕಲಶಗಳನ್ನೂ ತೆಗೆದೆಸೆಯುತ್ತಾರೆ. ಯಜ್ಞೇಶ್ವರನ ಮೇಲೆ ನೀರು ಚೆಲ್ಲುತ್ತಾರೆ. ದೇವತೆಗಳನ್ನು ಆವಾಹಿಸಿ ಸ್ಥಾಪಿಸಲ್ಪಟ್ಟಿರುವ ಕಲಶಗಳನ್ನು ಒಡೆದುಹಾಕುತ್ತಾರೆ. ಅಂತಹ ದುರಾತ್ಮರಾದ ರಾಕ್ಷಸರಿಂದ ಸಮಾವೃತವಾಗಿರುವ ಮತ್ತು ಅವರ ದುಷ್ಟಕಾಯ೯ಗಳಿಂದ ವಿದೂಷಿತವಾಗಿರುವ ಈ ಆಶ್ರಮಗಳನ್ನು ಬಿಟ್ಟು ಹೋಗಲು ಬಯಸಿರುವ ಈ ಮುನಿಗಳು ರಾಕ್ಷಸರ ಉಪಟಳವಿಲ್ಲದ ಬೇರೆಯ ಸ್ಥಳಕ್ಕೆ ಹೋಗಲು ನನ್ನನ್ನು ಪ್ರಚೋದಿಸುತ್ತಿದ್ದಾರೆ.

ಆ ದುಷ್ಟರಾದ ರಾಕ್ಷಸರು ಶರೀರಸಂಬಂಧವಾದ ಹಿಂಸೆಯನ್ನು ಮಾಡುವುದರ ಮೊದಲೇ ನಾವು ಈ ಆಶ್ರಮವನ್ನು ಪರಿತ್ಯಜಿಸುತ್ತೇವೆ. ಕಂದ-ಮೂಲ-ಫಲಗಳಿಂದ ಸಮೃದ್ಧವಾಗಿರುವ, ಚಿತ್ರ-ವಿಚಿತ್ರವಾಗಿರುವ, ಇಲ್ಲಿಗೆ ಸ್ವಲ್ಪ ದೂರದಲ್ಲಿಯೇ ಇರುವ ಅಶ್ವಮುನಿಗಳ ಆಶ್ರಮದಲ್ಲಿ ನನ್ನ ಶಿಷ್ಯಸಮೂಹದೊಡನೆ ಆಶ್ರಯವನ್ನು ಪಡೆಯುತ್ತೇನೆ. ನಿನ್ನ ವಿಷಯದಲ್ಲಿಯೂ ಖರನು ಅಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳುವುದರ ಮೊದಲೇ ಪರಿವಾರದೊಡನೆ ಬರಲು ಇಷ್ಟಪಡುವುದಾದರೆ ನೀನೂ ಬಂದುಬಿಡು."


ಹೀಗೆ ಹೇಳಿದ ಕುಲಪತಿಗೆ ಶ್ರೀರಾಮನು ನಾನಾರೀತಿಯಲ್ಲಿ ಸಮಾಧಾನ ಹೇಳಿದನು. ಆದರೂ ಪ್ರಯಾಣದಲ್ಲಿ ಉತ್ಸುಕನಾಗಿದ್ದ ಕುಲಪತಿಯನ್ನೂ ಮತ್ತು ಅವನ ಶಿಷ್ಯರನ್ನೂ ತಡೆಯಲು ಶ್ರೀರಾಮನು ಸಮರ್ಥನಾಗಲಿಲ್ಲ. ಕುಲಪತಿಯು ಶ್ರೀರಾಮನನ್ನು ಅಭಿನಂದಿಸಿ ಹೋಗಿಬರುತ್ತೇನೆಂದು ತಿಳಿಸಿ, ಶ್ರೀರಾಮನಿಗೆ ಸಾಂತ್ವನದ ಮಾತುಗಳನ್ನು ಹೇಳಿ ಚಿತ್ರಕೂಟದಲ್ಲಿದ್ದ ಆಶ್ರಮವನ್ನು ಪರಿತ್ಯಜಿಸಿ ಶಿಷ್ಯಸಮೇತನಾಗಿ ಅಶ್ವಮಹರ್ಷಿಯ ಆಶ್ರಮಕ್ಕೆ ಹೊರಟುಹೋದನು. ಶ್ರೀರಾಮನು ಪ್ರಯಾಣಹೊರಟಿದ್ದ ಋಷಿಗಳ ಸಮೂಹದ ಹಿಂದೆಯೇ ಸ್ವಲ್ಪ ದೂರದವರೆಗೆ ಹೋಗಿ ಅವರನ್ನು ಬೀಳ್ಕೊಟ್ಟನು. ಹಿಂದಿರುಗುವ ಸಮಯದಲ್ಲಿ ಪುನಃ ಕುಲಪತಿಗೆ ಅಭಿವಾದನಪೂರ್ವಕವಾಗಿ ನಮಸ್ಕಾರವನ್ನು ಮಾಡಿದನು. ಅತ್ಯಂತಸುಪ್ರೀತರಾದ ಋಷಿಗಳಿಂದ ಆಶೀರ್ವಾದಗಳನ್ನೂ, ಹಿಂದಿರುಗಲು ಅನುಮತಿಯನ್ನೂ ಮತ್ತು ಸಮಯೋಚಿತವಾದ ಉಪದೇಶವನ್ನೂ ಪಡೆದು ಪುಣ್ಯತಮವಾದ ತನ್ನ ಆಶ್ರಮಕ್ಕೆ ಹಿಂದಿರುಗಿದನು.

Comments


bottom of page