top of page

ಜಾಬಾಲಿಗಳಿಂದ ನಾಸ್ತಿಕ ಮಾತು (ರಾಮಾಯಣ ಕಥಾಮಾಲೆ 52)

14 hours ago
2 min read

ಜಾಬಾಲಿಗಳಿಂದ ನಾಸ್ತಿಕ ಮಾತು (ರಾಮಾಯಣ ಕಥಾಮಾಲೆ 52)

ಜಾಬಾಲಿಗಳಿಂದ ನಾಸ್ತಿಕ ಮಾತು (ರಾಮಾಯಣ ಕಥಾಮಾಲೆ 52)

ಈ ಪ್ರಕಾರವಾಗಿ ಭರತನನ್ನು ಸಂತೆೈಸುತ್ತಿದ್ದ ಧರ್ಮಜ್ಞನಾದ ಶ್ರೀರಾಮನನ್ನು ಕುರಿತು ಬ್ರಾಹ್ಮಣಶ್ರೇಷ್ಠರಾದ ಜಾಬಾಲಿಗಳು ವೈದಿಕ ಧರ್ಮಕ್ಕೆ ವಿರುದ್ಧವಾದ ಮಾತುಗಳನ್ನು ಹೇಳತೊಡಗಿದರು :

“ರಾಘವ! ಶ್ರೇಷ್ಠವಾದ ಬುದ್ಧಿಯನ್ನು ಹೊಂದಿರುವ ಮನನಶೀಲನಾದ ನೀನು ಸಾಧಾರಣನಾದೊಬ್ಬ ಮನುಷ್ಯನಂತೆ ನಿಷ್ಪ್ರಯೋಜಕವಾದ ಬುದ್ಧಿಯನ್ನು ಆಶ್ರಯಿಸಬೇಡ. ಯಾರು ಯಾರಿಗೆ ಬಂಧು? ಯಾರಿಂದ ಯಾರಿಗೆ ಏನಾಗಬೇಕಾಗಿದೆ? ಪ್ರಪಂಚದಲ್ಲಿ ಒಬ್ಬೊಬ್ಬರಿಗೂ ಪರಸ್ಪರವಾಗಿ ಯಾವ ಸಂಬಂಧವೂ ಇಲ್ಲ. ಹುಟ್ಟುವಾಗ ಒಬ್ಬನೇ ಹುಟ್ಟುತ್ತಾನೆ. ಸಾಯುವಾಗಲೂ ಒಬ್ಬನೇ ಸಾಯುತ್ತಾನೆ. ಆದುದರಿಂದ- 'ಇವನು ತಂದೆ', 'ಇವಳು ತಾಯಿ', 'ಇವನು ಮಗ', 'ಇವಳು ಮಗಳು' – ಮುಂತಾಗಿ ಯಾವನು ಇಂತಹವರಲ್ಲಿ ಆಸಕ್ತನಾಗುವನೋ-ಅವನೊಬ್ಬ ಹುಚ್ಚನೇ ಸರಿ. ಏಕೆಂದರೆ : ಯಾರು ಯಾರವನೂ ಅಲ್ಲ. ಒಬ್ಬನಿಗೂ ಮತ್ತೊಬ್ಬನಿಗೂ ಯಾವ ಸಂಬಂಧವೂ ಇಲ್ಲ. ಮಗುವು ಹುಟ್ಟಲು ತಂದೆ ಎನಿಸಿಕೊಂಡವನು ಕೇವಲ ಬೀಜಪ್ರಾಯ ನಾಗುತ್ತಾನೆ. ಋತುಮತಿಯಾದ ಹೆಂಗಸಿನ ಗರ್ಭದಲ್ಲಿ ಬೀಜರೂಪವಾದ ಶುಕ್ರ ಮತ್ತು ಶೋಣಿತಗಳು ಬೆರೆತು ಸೇರುವುದರಿಂದ ಗರ್ಭವು ಉತ್ಪತ್ತಿ ಯಾಗಿ ಮನುಷ್ಯನ ಹುಟ್ಟಿಗೆ ಕಾರಣವಾಗುತ್ತದೆ. ನಿನ್ನ ತಂದೆಯು ಎಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿಗೇ ಹೋಗಿದ್ದಾನೆ. ಸರ್ವಪ್ರಾಣಿಗಳಿಗೂ ಈ ಪ್ರವೃತ್ತಿ-ನಿವೃತ್ತಿಗಳು ಸಮಾನವಾಗಿವೆ. ವಿಷಯವು ಹೀಗಿದ್ದರೂ ನೀನು ಮಿಥ್ಯಾಸಂಬಂಧವನ್ನು ಕಲ್ಪಿಸಿಕೊಂಡು ಸಂಕಟ ಪಡುತ್ತಿರುವೆ.

ಅರ್ಥ ಮತ್ತು ಧರ್ಮ ಇವುಗಳ ಸಂಪಾದನೆಗಾಗಿ ಯಾರು ಶ್ರಮಿಸುವರೋ–ಅಂತಹವರ ವಿಷಯವಾಗಿ ನಾನು ಪರಿತಾಪಪಡುತ್ತೇನೆ. ಧರ್ಮಕ್ಕಾಗಿ ಅರ್ಥವನ್ನು ಸಂಪಾದಿಸುವ ಅವರಿಗೆ ಕಾಮೋಪಭೋಗಗಳ ಪರಿವೆಯೇ ಇರುವುದಿಲ್ಲ. ಅರ್ಥ-ಧರ್ಮಗಳ ಸಿದ್ಧಿಗಾಗಿ ಅವರು ಈ ಲೋಕದಲ್ಲಿ ದುಃಖ ವನ್ನನುಭವಿಸುತ್ತಿದ್ದು ಅವಸಾನಾನಂತರದಲ್ಲಿ ವಿನಾಶಹೊಂದುತ್ತಾರೆ. ಮಹಾಮತಿಯೇ! ಪರಲೋಕವಿಲ್ಲವೆಂಬ ವಿಷಯದಲ್ಲಿ ನಿನ್ನ ಬುದ್ಧಿಯನ್ನು ದೃಢಪಡಿಸು. ಪ್ರತ್ಯಕ್ಷಸುಖವು ಎಲ್ಲಿ ಕಾಣುವುದೋ ಅದನ್ನೇ ಆಶ್ರಯಿಸು. ಪರೋಕ್ಷವೆಂಬುದನ್ನು ಹಿಂದಕ್ಕೆ ತಳ್ಳು. ಅದನ್ನು ನಂಬಬೇಡ.

ಸಕಲರಿಗೂ ಸಮ್ಮತವಾಗಿರುವ, ಪ್ರತ್ಯಕ್ಷವೊಂದೇ ಪ್ರಮಾಣವಾಗಿರುವ, ಸತ್ಪುರುಷರ ಬುದ್ಧಿಯನ್ನು ಪುರಸ್ಕರಿಸಿ ಭರತನಿಂದ ಪೂಜಿಸಲ್ಪಟ್ಟವನಾಗಿ ಕೋಸಲರಾಜ್ಯವನ್ನು ಪ್ರತಿಗ್ರಹಿಸು" ಎಂದರು.


ಸತ್ಯವಂತರಲ್ಲಿ ಶ್ರೇಷ್ಠನಾದ ಶ್ರೀರಾಮನು ಜಾಬಾಲಿಯ ಮಾತುಗಳನ್ನು ಕೇಳಿದನು. ಆದರೆ ಅವನ ಬುದ್ಧಿಯು ಸ್ವಲ್ಪವೂ ವಿಚಲಿತವಾಗಲಿಲ್ಲ, ಶ್ರುತಿಸಮ್ಮತವಾದ ಸದುಕ್ತಿಗಳನ್ನು ಆಶ್ರಯಿಸಿ ಜಾಬಾಲಿಗಳೊಡನೆ ಮಾತನಾಡಿದನು :

“ಮಹರ್ಷಿಗಳೇ! ನನಗೆ ಪ್ರಿಯವನ್ನುಂಟುಮಾಡಲು ಬಯಸಿ ನೀವು ಯಾವುದನ್ನು ಉಪದೇಶಿಸಿರುವಿರೋ ಅದು ತೋರಿಕೆಗೆ ಆಚರಿಸಲು ಯೋಗ್ಯವೆಂದೇ ಕಾಣುತ್ತದೆ. ಆದರೆ ಹಾಗೆ ಮಾಡುವುದು ಅಕಾರ್ಯವಾಗುತ್ತದೆ. ಮನುಷ್ಯನು ಸರ್ಪವನ್ನು ನೋಡಿ ಭಯಪಡುವಂತೆಯೇ ಸುಳ್ಳು ಹೇಳುವವನನ್ನು ಕಂಡರೂ ಭಯಪಡುತ್ತಾನೆ. ಪ್ರಪಂಚದಲ್ಲಿ ಸತ್ಯವೇ ಉತ್ಕೃಷ್ಟವಾದ ಧರ್ಮವಾಗಿದೆ. ಇದೇ ಸ್ವರ್ಗಪ್ರಾಪ್ತಿಗೂ ಮೂಲ ಕಾರಣವೆಂದು ನಿಶ್ಚಿತವಾಗಿದೆ. ನನ್ನ ತಂದೆಯ ಸನ್ನಿಧಿಯಲ್ಲಿ ನಾನು ಸ್ಥಿರಪ್ರತಿಜ್ಞೆಯನ್ನು ಮಾಡಿರುವೆನು. ನಾನು ಪ್ರತಿಜ್ಞೆಮಾಡಿದ ಸಮಯದಲ್ಲಿ ಕೈಕೇಯಿದೇವಿಗೆ ಬಹಳ ಸಂತೋಷವಾಯಿತು. ತಂದೆಯ ಋಣಮೋಚಕವೂ ತಾಯಿಗೆ ಆನಂದದಾಯಕವೂ ಆದ ಆ ಪ್ರತಿಜ್ಞೆಯನ್ನು ನಾನೀಗ ಮುರಿಯಲೇ? ಮುಂದೆಯೂ ನಾನು ಹೀಗೆಯೇ ಅರಣ್ಯದಲ್ಲಿ ವಾಸಮಾಡುತ್ತಾ ಶುಚಿಯಾಗಿದ್ದು ನಿಯತವಾದ ಆಹಾರವನ್ನು ಸೇವಿಸುತ್ತಿರುತ್ತೇನೆ. ಮಂಗಳಕರವಾದ ಮೂಲ-ಫಲಗಳಿಂದಲೂ ಪುಷ್ಪಗಳಿಂದಲೂ ದೇವತೆಗಳನ್ನೂ ಪಿತೃಗಳನ್ನೂ ಆರಾಧಿಸುತ್ತೇನೆ. ಸಂತುಷ್ಟವಾದ ಪಂಚೇಂದ್ರಿಯಗಳಿಂದ ಕೂಡಿದವನಾಗಿ ಯಾವ ಕಾರ್ಯವನ್ನು ಮಾಡಬೇಕು ; ಯಾವ ಕಾರ್ಯವನ್ನು ಮಾಡಬಾರದು?-ಎಂಬುದನ್ನು ವಿವೇಚಿಸಿ ಕಾರ್ಯಮಾಡುತ್ತಾ ಶ್ರದ್ಧೆಯಿಂದಲೂ, ನಿಷ್ಕಾಪಟ್ಯದಿಂದಲೂ ತಂದೆಯ ಆಜ್ಞೆಯನ್ನು ಪರಿಪಾಲಿಸುತ್ತಾ ಜೀವನವನ್ನು ನಿರ್ವಹಿಸುತ್ತೇನೆ. ಕರ್ಮಭೂಮಿಯಾದ ಈ ಭರತಖಂಡದಲ್ಲಿ ಅವತರಿಸಿದ ಮೇಲೆ ಯಾವ ಕರ್ಮವು ಶುಭಾವಹವೋ-ಅಂತಹ ಕರ್ಮವನ್ನೇ ಮಾಡಬೇಕು. ಅಗ್ನಿ, ವಾಯು ಮತ್ತು ಚಂದ್ರರು ಅವರವರು ಮಾಡಿದ ಕರ್ಮಫಲಗಳಿಂದಲೇ ಇಂದು ಉಚ್ಚಸ್ಥಾನಗಳಲ್ಲಿ ಉಪಸ್ಥಿತರಾಗಿದ್ದಾರೆ. ತಾವು ಹೇಳಿದಂತೆ ಕರ್ಮಗಳಿಗೆ ಫಲವಿಲ್ಲದೇ ಇಲ್ಲ, ನೂರು ಯಾಗಗಳನ್ನು ಮಾಡಿದ ನಂತರವೇ ಇಂದ್ರನು ದೇವತೆಗಳ ರಾಜನಾಗಿ ಸ್ವರ್ಗಕ್ಕೆ ತೆರಳಿದನು. ಉಗ್ರವಾದ ತಪಸ್ಸುಗಳನ್ನು ಮಾಡಿ ಮಹರ್ಷಿಗಳೂ ಸ್ವರ್ಗವನ್ನೈದಿರುವರು”.


ಹೀಗೆ ಕೋಪಾವಿಷ್ಟನಾಗಿ ನಿಷ್ಠುರದ ಮಾತುಗಳನ್ನಾಡುತ್ತಿದ್ದ, ಮಹಾತ್ಮನಾದ ಶ್ರೀರಾಮನನ್ನು ಕುರಿತು ಜಾಬಾಲಿಗಳು ನಯ-ವಿನಯಯುಕ್ತವಾದ ಸತ್ಯವಾದ, ವೇದಮಾರ್ಗಾನುಸಾರಿಯಾದ ಹಿತಕರವಾದ ಈ ಮಾತನ್ನು ಹೇಳಿದರು

“ರಾಮ! ನಾನು ಸ್ವಾಭಾವಿಕವಾಗಿ ಯಾವಾಗಲೂ ನಾಸ್ತಿಕರಾಡುವ ಮಾತುಗಳನ್ನು ಆಡುವುದಿಲ್ಲ. ನಾನು ನಾಸ್ತಿಕನೂ ಅಲ್ಲ. ಪರಲೋಕವಿಲ್ಲವೆಂದು ಹೇಳತಕ್ಕವನೂ ಅಲ್ಲ. ನಿನ್ನಿಂದ ಈ ಮಾತನ್ನು ಕೇಳಿದ ನಾನು ಈಗಲೇ ಆಸ್ತಿಕನಾಗಿಬಿಟ್ಟಿದ್ದೇನೆ. ಸಮಯವು ಬಂದಾಗ ಪುನಃ ನಾಸ್ತಿಕನೂ ಆಗುವೆನು. ನಾಸ್ತಿಕವಾದವನ್ನು ನಿನ್ನ ಮುಂದೆ ಮಂಡಿಸುವ ಕಾಲವು ಪ್ರಾಪ್ತವಾಗಿದ್ದುದರಿಂದ ನಾನು ಹಾಗೆ ಮಾಡಬೇಕಾಯಿತು. ನನಗೂ ಭರತನಂತೆ ನೀನು ಅಯೋಧ್ಯೆಗೆ ಹಿಂದಿರುಗಬೇಕಾದ ಅವಶ್ಯಕತೆಯು ಕಂಡು ಬಂದುದರಿಂದಲೂ–ಭರತನನ್ನು ಪ್ರಸನ್ನಗೊಳಿಸುವ ಸಲುವಾಗಿಯೂ ನಾನು ಈ ನಾಸ್ತಿಕವಾದವನ್ನು ನಿನ್ನ ಮುಂದಿಟ್ಟೆನು.”

Comments


bottom of page