top of page

ಪಿತೃವಿಯೋಗದಲ್ಲಿ ರಾಮ (ರಾಮಾಯಣ ಕಥಾಮಾಲೆ 51)

9 minutes ago
3 min read

ಯುದ್ಧದಲ್ಲಿ ದಾನವರ ಶತ್ರುವಾದ ದೇವೇಂದ್ರನಿಂದ ಪ್ರಯೋಗಿಸಲ್ಪಟ್ಟ ವಜ್ರಾಯುಧದಂತೆ - ಬಹುಕಠೋರವಾಗಿದ್ದ, ಮನಸ್ಸಿಗೆ ಬೇಸರವಾದ, ವಾಗ್ವಜ್ರರೂಪವಾದ ಭರತನು ಹೇಳಿದ ತಂದೆಯ ಮರಣವಾರ್ತೆಯನ್ನು ಕೇಳಿ ರಾಮನು ತೋಳುಗಳನ್ನು ಮೇಲಕ್ಕೆ ಎತ್ತಿ - ಪುಷ್ಪಭರಿತವಾಗಿರುವ ಮರವೊಂದು ಕೊಡಲಿಯಿಂದ ಕತ್ತರಿಸಲ್ಪಟ್ಟು ಕೆಳಗೆ ಬೀಳುವಂತೆ - ಬಿದ್ದನು. ನದಿಯ ದಂಡೆಯನ್ನು ಸೊಂಡಿಲಿನಿಂದಲೂ, ಕೊಂಬುಗಳಿಂದಲೂ ಸತತವಾಗಿ ಉಜ್ಜಿ, ಬಳಲಿ ಮಲಗಿರುವ ಆನೆಯೋಪಾದಿಯಲ್ಲಿ ಮೂರ್ಛಿತನಾಗಿ ನೆಲದ ಮೇಲೆ ಬಿದ್ದಿದ್ದ, ಜಗತೀಪತಿಯಾದ, ಮಹಾಧನುಸ್ಸನ್ನು ಧರಿಸಿದ್ದ, ಶೋಕಾಭಿಭೂತನಾಗಿದ್ದ ಶ್ರೀರಾಮನನ್ನು ಮೂವರೂ ಅನುಜರೂ ಸುತ್ತುವರಿದು ವೈದೇಹಿಯೊಡಗೂಡಿ ಅಳುತ್ತಾ ನೀರುತಟ್ಟಿ ಉಪಚರಿಸಿದರು. ಶೀತೋದಕದಿಂದ ಉಪಚರಿಸಲ್ಪಟ್ಟ ಶ್ರೀರಾಮನು ಮೂರ್ಛೆಯಿಂದ ಎಚ್ಚೆತ್ತು ಕಣ್ಣುಗಳೆರಡರಿಂದಲೂ ದುಃಖಾಶ್ರುವನ್ನು ಸುರಿಸುತ್ತಾ ಕರುಣಾಪೂರ್ಣವಾದ ಮಾತುಗಳನ್ನಾಡಲು ಉಪಕ್ರಮಿಸಿದನು.


ಪಿತೃವಿಯೋಗದಲ್ಲಿ ರಾಮ (ರಾಮಾಯಣ ಕಥಾಮಾಲೆ 52)

ಧರ್ಮಾತ್ಮನಾದ ಶ್ರೀರಾಮನು - ಪೃಥಿವೀಪತಿಯಾದ ತಂದೆಯು ಸ್ವರ್ಗಸ್ಥನಾದನೆಂಬ ಮಾತನ್ನು ಭರತನಿಂದ ಕೇಳಿ ಧರ್ಮಸಮ್ಮತವಾದ ಈ ಮಾತುಗಳನ್ನು ಹೇಳಿದನು:


“ಅಯ್ಯೋ! ತಂದೆಯು ಕಾಲವಾದ ಬಳಿಕ ಅಯೋಧ್ಯೆಗೆ ಬಂದು ನಾನೇನು ಮಾಡಲಿ? ರಾಜಶ್ರೇಷ್ಠನಾದ ದಶರಥಮಹಾರಾಜನಿಂದ ವಿಹೀನವಾದ ಅಯೋಧ್ಯಾಪಟ್ಟಣವನ್ನು ಮತ್ತಾರು ರಕ್ಷಿಸುತ್ತಾರೆ? ಆ ಮಹಾನುಭಾವನಿಗೆ ನಾನು ಮಗನಾಗಿ ಹುಟ್ಟಿಯೂ ಪ್ರಯೋಜನವಾಗಲಿಲ್ಲ. ನನ್ನ ಜನ್ಮವೇ ನಿಶ್ಚಯವಾಗಿಯೂ ವ್ಯರ್ಥವಾಗಿ ಹೋಯಿತು. ಯಾವ ಮಹಾನುಭಾವನು ನನ್ನ ವಿಯೋಗಶೋಕದಿಂದಲೇ ಮರಣಹೊಂದಿದನೋ-ಅಂತಹವನಿಗೆ ನಾನು ಉತ್ತರಕ್ರಿಯೆಯನ್ನೂ ಮಾಡಲಾಗಲಿಲ್ಲ. ನಿಷ್ಪಾಪನೇ! ಭರತ! ನೀನೇ ಸಿದ್ಧಾರ್ಥನು. ಮಹಾಪುಣ್ಯಶಾಲಿಯು. ಶತ್ರುಘ್ನನೊಡನೆ ರಾಜನನ್ನು ಸಮಸ್ತವಾದ ಪ್ರೇತಕಾರ್ಯಗಳ ಮೂಲಕವಾಗಿ ಸಂಸ್ಕರಿಸಿದೆ. ನರೇಂದ್ರನಾದ ದಶರಥನಿಂದ ಹೀನವಾದ ಅದರಿಂದಲೇ ಪ್ರಧಾನನಾಯಕನಿಲ್ಲದ, ವ್ಯಾಕುಲಗೊಂಡಿರುವ ಅಯೋಧ್ಯಾನಗರಿಯನ್ನು ವನವಾಸವು ಮುಗಿದ ನಂತರವೂ ಪ್ರವೇಶಿಸಲು ನಾನು ಇಚ್ಛೆಯುಳ್ಳವನಾಗಿಲ್ಲ. ಪರಂತಪನೇ! ನಮ್ಮ ತಂದೆಯು ಲೋಕಾಂತರ ಹೊಂದಿರುವಾಗ ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮತ್ತೆ ಬರುವ ನನಗೆ ಧರ್ಮಾಧರ್ಮಗಳ ವಿಷಯದಲ್ಲಿ ತಿಳಿವಳಿಕೆಯನ್ನು ಕೊಡುವವರು ಯಾರಿದ್ದಾರೆ? ಅವನ ನಿರ್ದೇಶಾನುಸಾರವಾಗಿ ನಡೆದುಕೊಳ್ಳುತ್ತಿದ್ದ ನನ್ನ ಸದ್ವೃತ್ತಿಯನ್ನೂ, ವಿಧೇಯತೆಯನ್ನೂ ನೋಡಿ ನನ್ನನ್ನು ಸಂತೈಸಿ ಕರ್ಣಾನಂದಕರವಾದ ಮಧುರವಾಕ್ಯಗಳನ್ನು ಹೇಳುತ್ತಿದ್ದನು. ಇನ್ನು ಮೇಲೆ ಅಂತಹ ಸುಮಧುರವಾಕ್ಯಗಳನ್ನು ನಾನು ಯಾರಿಂದ ಕೇಳಲಿ?”


ರಾಘವನು ಭರತನಿಗೆ ಹೀಗೆ ಹೇಳಿ, ಪೂರ್ಣಚಂದ್ರನಿಗೆ ಸದೃಶವಾದ ಮುಖಕಾಂತಿಯಿಂದ ಕೂಡಿದ್ದ, ಭಾರ್ಯೆಯಾದ ಸೀತಾದೇವಿಗೆ ಅಭಿಮುಖವಾಗಿ ನಿಂತು ಶೋಕಸಂತಪ್ತನಾಗಿ ಹೇಳಿದನು:

“ಸೀತೆ! ನಿನ್ನ ಮಾವನು ಸತ್ತುಹೋದನು” ಲಕ್ಷ್ಮಣನ ಕಡೆಗೆ ತಿರುಗಿ “ಲಕ್ಷ್ಮಣ! ನೀನೂ ಪಿತೃಹೀನನಾದೆಯಪ್ಪಾ! ದಶರಥರಾಜನು ಸ್ವರ್ಗಸ್ಥನಾದ ದುಃಖವಾರ್ತೆಯನ್ನು ಭರತನು ಹೇಳುತ್ತಿದ್ದಾನೆ” ಎಂದು ಹೇಳುತ್ತಾ ಕಣ್ಣೀರಿಟ್ಟನು.


ಇಕ್ಷ್ವಾಕುವಂಶೀಯರ ನಿಕಟವರ್ತಿಯೂ, ಪ್ರಖ್ಯಾತನೂ , ಮಹಾಬುದ್ಧಿಶಾಲಿಯೂ, ಸರಳಸ್ವಭಾವವುಳ್ಳವನೂ, ಜಿತೇಂದ್ರಿಯನೂ, ಶಾಂತಸ್ವಭಾವವುಳ್ಳವನೂ, ರಾಮನಲ್ಲಿ ದೃಢವಾದ ಭಕ್ತಿಯುಳ್ಳವನೂ ಆದ ಸುಮಂತ್ರನು ಆ ರಾಜಕುಮಾರರೊಡನೆ ರಾಮನನ್ನು ನಯ-ವಿನಯದ ಮಾತುಗಳಿಂದ ಸಂತೈಸುತ್ತ ಕೈಹಿಡಿದು ಮಂಗಳಕರವಾದ ಮಂದಾಕಿನೀನದಿಗೆ ಕರೆದೊಯ್ದು ನದಿಗೆ ಇಳಿಸಿದನು. ಸೀತಾಪ್ರಮುಖರಾದ ಯಶಸ್ವಿಗಳಾದ ಆ ರಾಜಕುಮಾರರು ಪುಣ್ಯತೀರ್ಥದಿಂದ ಕೂಡಿದ್ದ, ಬಹುರಮ್ಯವಾಗಿದ್ದ, ಸದಾ ಪುಷ್ಪಭರಿತವಾದ ವೃಕ್ಷಗಳುಳ್ಳ ಕಾನನದಿಂದ ಆವೃತವಾಗಿದ್ದ, ರಭಸವಾದ ಪ್ರವಾಹದಿಂದ ಕೂಡಿದ್ದ ಮಂದಾಕಿನೀನದಿಯನ್ನು ಸೇರಿ ಕೆಸರಿಲ್ಲದ ಬಹುಪರಿಶುದ್ಧವಾದ ತೀರ್ಥದಲ್ಲಿ ಇಳಿದು “ಹೇ ತಾತ! ತುಭ್ಯಮೇತದ್ಭವತು” “ತಂದೆಯೇ! ಈ ತೀರ್ಥವು ನಿನಗೆ ಅರ್ಪಿತವಾಗಲಿ” ಎಂದು ಹೇಳಿ ದಶರಥರಾಜನ ಸಲುವಾಗಿ ಜಲತರ್ಪಣವನ್ನು ಬಿಟ್ಟರು.


ಜಲಪ್ರದಾನಾನಂತರದಲ್ಲಿ ತೇಜಸ್ವಿಯಾದ ರಾಘವನು ತಮ್ಮಂದಿರಿಂದೊಡಗೂಡಿ ಮಂದಾಕಿನೀನದಿಯ ತೀರಕ್ಕೆ ಬಂದು ತಂದೆಗೆ ಪಿಂಡಪ್ರದಾನವನ್ನು ಮಾಡಿದನು.

ಭರತನು ಗುರುಜನರಲ್ಲಿ ವಾತ್ಸಲ್ಯಯುಕ್ತನಾಗಿರುವನೆಂಬುದನ್ನು (ತನ್ನಲ್ಲಿ ಭಕ್ತಿಭಾವದಿಂದಿರುವುದನ್ನು) ತಿಳಿದ ಶ್ರೀರಾಮನು ಅನುಜನಾದ ಲಕ್ಷ್ಮಣನೊಡನೆ ಭರತನನ್ನು ಪ್ರಶ್ನಿಸಲು ಪ್ರಾರಂಭಿಸಿದನು :

“ಭರತ! ನೀನು ರಾಜ್ಯವನ್ನು ಬಿಟ್ಟು ನಾರುಮಡಿ-ಕೃಷ್ಣಾಜಿನಗಳನ್ನುಟ್ಟು ಜಟೆಯನ್ನು ಧರಿಸಿ ಈ ಕಾಡಿಗೆ ಬಂದಿರುವ ಕಾರಣವೇನು? ಈ ವಿಷಯವನ್ನು ನಾನು ನಿನ್ನಿಂದಲೇ ಕೇಳಿ ತಿಳಿಯಬಯಸುತ್ತೇನೆ. ಎಲ್ಲ ವಿಷಯಗಳನ್ನೂ ಯಥಾವತ್ತಾಗಿ ಹೇಳು”.


ಮಹಾತ್ಮನಾದ ಶ್ರೀರಾಮನು ಹೀಗೆ ಪ್ರಶ್ನಿಸಲು ಭರತನು ಉಕ್ಕಿ ಬರುತ್ತಿದ್ದ ದುಃಖವನ್ನು ಬಲಪೂರ್ವಕವಾಗಿ ತಡೆಹಿಡಿದು ಕೈಮುಗಿದು ಕೊಂಡೇ ಹೇಳಿದನು :

“ಅಣ್ಣಾ! ಮಹಾಬಾಹುವಾದ ನಮ್ಮ ತಂದೆಯು ಆರ್ಯನಾದ ನಿನ್ನನ್ನು ಪರಿತ್ಯಜಿಸುವುದರ ಮೂಲಕ ಅತ್ಯಂತದುಷ್ಕರವಾದ ಕಾರ್ಯವನ್ನು ಮಾಡಿ ಪುತ್ರವಿರಹಶೋಕದಿಂದಲೇ ಪೀಡಿತನಾಗಿ ದಿವಂಗತನಾದನು. ನನ್ನ ತಾಯಿಯ ರೂಪದಲ್ಲಿರುವ ಕೈಕೇಯಿಯೆಂಬ ಈ ಹೆಂಗಸಿನ ನಿರ್ದೇಶದಂತೆ ನಮ್ಮ ತಂದೆಯು ಆತ್ಮಘಾತವೂ, ಯಶೋಹರವೂ ಆದ ಈ ಮಹಾಪಾಪ ಕಾರ್ಯವನ್ನು ಮಾಡಿಬಿಟ್ಟನು. ಇಂದು ವಿಧವೆಯಾಗಿರುವ ಈ ನನ್ನ ತಾಯಿಯಾದರೋ ತಾನಾಶಿಸಿದ್ದ ರಾಜ್ಯಫಲವನ್ನು ಹೊಂದಲಾಗದೇ ಜೀವಪರ್ಯಂತವಾಗಿ ದುಃಖಪಡುತ್ತಿದ್ದು ಅವಸಾನಾನಂತರದಲ್ಲಿಯೂ ಮಹಾಘೋರವಾದ ನರಕದಲ್ಲಿ ಬೀಳುತ್ತಾಳೆ. ಅಂತಹವಳ ಮಗನಾಗಿ ಹುಟ್ಟಿಯೂ ನಿನ್ನ ದಾಸ್ಯವನ್ನು ಅಪೇಕ್ಷಿಸಿ ಬಂದಿರುವ ನನ್ನನ್ನು ಅನುಗ್ರಹಿಸುವುದು ನಿನಗೆ ಯೋಗ್ಯವಾಗಿದೆ. ಇಂದ್ರನೋಪಾದಿಯಲ್ಲಿ ಕೊಸಲರಾಜ್ಯಕ್ಕೆ ರಾಜನಾಗಿ ಪಟ್ಟಾಭಿಷೇಕಮಾಡಿಕೊಳ್ಳುವುದೇ ನೀನು ನನಗೆ ಮಾಡಬೇಕಾಗಿರುವ ಪರಮಾನುಗ್ರಹವಾಗಿದೆ. ಆದುದರಿಂದ ಈಗಲೇ ರಾಜ್ಯಾಭಿಷಿಕ್ತನಾಗು. ಸಕಲ ಪ್ರಜೆಗಳೂ, ವಿಧವೆಯಾಗಿರುವ ಈ ನಮ್ಮ ಮಾತೆಯರೂ ಈ ಕಾರಣದಿಂದಲೇ ನಿನ್ನ ಬಳಿಗೆ ಬಂದಿರುತ್ತಾರೆ. ಇವರೆಲ್ಲರ ಮೇಲೂ ಕೃಪೆದೋರುವುದು ನಿನಗೆ ಉಚಿತವಾಗಿದೆ.


ಮಾನವಪ್ರಧನೇ! ನೀನು ಜ್ಯೇಷ್ಠನಾಗಿರುವುದರಿಂದ ಹಿಂದಿನಿಂದಲೂ ನಡೆದುಬಂದಿರುವ ನಮ್ಮ ವಂಶದ ಪದ್ಧತಿಯಂತೆ ಈ ರಾಜ್ಯವನ್ನು ಪಡೆಯುವ ಅಧಿಕಾರವು ನಿನಗೇ ಇರುವುದು. ನಿನಗೆ ಈ ರಾಜ್ಯವು ಸೇರಬೇಕಾದುದು ಉಚಿತವಾಗಿಯೂ ಇದೆ. ಧರ್ಮಾನುಸಾರವಾಗಿಯೇ ಈ ರಾಜ್ಯವನ್ನು ನೀನು ಪಡೆದುಕೊ. ನಿನ್ನ ಸುಹೃದರ ಇಷ್ಟಾರ್ಥಗಳನ್ನು ಈಡೇರಿಸು.

ಸಮಗ್ರವಾದ ಅಖಂಡವಾದ ಈ ಭೂಮಿಯು ನಿನ್ನ ಒಡೆತನದಿಂದಾಗಿ ಸುಮಾಂಗಲಿಯಾಗಿ ಸನಾಥಳಾಗಲಿ. ಕಳಂಕ ರಹಿತನಾದ ಚಂದ್ರನಿಂದ ಯುಕ್ತವಾದ, ಶರತ್ಕಾಲದ ರಾತ್ರಿಯೋಪಾದಿಯಲ್ಲಿ ನಿನ್ನನ್ನು ಒಡೆಯನನ್ನಾಗಿ ಪಡೆದು ಈ ಭೂಮಿಯು ವಿರಾಜಿಸಲಿ. ದಕ್ಷರಾದ ಈ ಸಚಿವರೊಡನೆ ಕೈಮುಗಿದು ತಲೆಬಾಗಿ ಬೇಡಿಕೊಳ್ಳುತ್ತೇನೆ. ನಿನ್ನ ತಮ್ಮನೂ, ಶಿಷ್ಯನೂ ಮತ್ತು ಸೇವಕನೂ ಆಗಿರುವ ನನ್ನ ಈ ಪ್ರಾರ್ಥನೆಯನ್ನು ನಡೆಸಿಕೊಟ್ಟು ಅನುಗ್ರಹಿಸು. ಪುರುಷವ್ಯಾಘ್ರನೇ! ಈ ಸಚಿವರಮಂಡಲವು ವಂಶಪರಂಪರೆಯಿಂದ ಬಂದಿರುವುದಲ್ಲದೇ ನಮ್ಮ ತಂದೆಯಿಂದಲೂ ಬಹಳವಾಗಿ ಗೌರವಿಸಲ್ಪಟ್ಟಿದೆ. ಇದು ಶಾಶ್ವತವೂ ಸುಭದ್ರವೂ ಆದ ಮಂತ್ರಿಮಂಡಲವಾಗಿದೆ. ಇಂತಹ ಮಂತ್ರಿಮಂಡಲದ ಅಭಿಪ್ರಾಯವನ್ನು ನೀನು ಅತಿಕ್ರಮಿಸುವುದು ಖಂಡಿತವಾಗಿಯೂ ಸರಿಯಲ್ಲ.”


ಮಹಾಬಾಹುವಾದ ಕೈಕೇಯಿಪುತ್ರನು ಬಹುದುಃಖದಿಂದ ಕಣ್ಣೀರು ಸುರಿಸುತ್ತ ಹೀಗೆ ಹೇಳಿ ಪುನಃ ರಾಮನ ಪಾದಕಮಲಗಳನ್ನು ಹಿಡಿದು ತಲೆಯನ್ನೂ ಮುಟ್ಟಿಸಿ ನಮಸ್ಕರಿಸಿದನು. ಮದಿಸಿದ ಆನೆಯೋಪಾದಿಯಲ್ಲಿ ಕ್ಷಣ-ಕ್ಷಣಕ್ಕೂ ದೀರ್ಘವಾಗಿ ನಿಟ್ಟುಸಿರುಬುಡುತ್ತಿದ್ದ ತಮ್ಮನ ಎರಡೂ ತೋಳುಗಳನ್ನೂ ಹಿಡಿದು ಮೇಲೆತ್ತಿ ಗಾಢಾಲಿಂಗನಮಾಡಿಕೊಂಡು ರಾಮನು ಈ ಮಾತುಗಳನ್ನು ಹೇಳಿದನು :

“ಅನುಜನೇ! ಸತ್ಕುಲಪ್ರಸೂತನೂ, ಸತ್ವಗುಣಸಂಪನ್ನನೂ, ತೇಜಸ್ವಿಯೂ, ಅನೇಕಾನೇಕ ವ್ರತಾನುಷ್ಠಾನಗಳನ್ನು ಮಾಡಿರುವವನೂ ಆಗಿರುವ ನಿನ್ನಂತಹವನು ರಾಜ್ಯದ ಕಾರಣಕ್ಕಾಗಿ ಪಾಪಕಾರ್ಯವನ್ನು ಮಾಡಿಯಾನೇ? ಶತ್ರುವಿಧ್ವಂಸಕನೇ! ನಿನ್ನಲ್ಲಿ ಲೇಶಮಾತ್ರದೋಷವೂ ನನಗೆ ಕಾಣಿಸುತ್ತಿಲ್ಲ. ನಿನ್ನ ತಾಯಿಯಾದ ಕೈಕೇಯಿಯೇನೋ ಮಹಾಪಾಪವನ್ನು ಮಾಡಿರುವಳೆಂಬ ಅಜ್ಞಾನದಿಂದ ನೀನವಳನ್ನು ನಿಂದಿಸುವುದೂ ಯೋಗ್ಯವಲ್ಲ.


ಮಹಾಪ್ರಾಜ್ಞನೇ! ನಿಷ್ಪಾಪನೇ! ಹಿರಿಯರು ತಮಗೆ ಪ್ರಿಯರಾದ ಪತ್ನಿ-ಪುತ್ರರ ವಿಷಯದಲ್ಲಿ ಹೆಚ್ಚು ಒಲುಮೆಯನ್ನು ತೋರಿಸಬಹುದು. ಅವರಿಗೆ ಇಷ್ಟಬಂದಂತೆ ಮಾಡಲು ಶಾಸ್ತ್ರದ ಸಮ್ಮತಿಯೂ ಇದೆ. ಭಾರ್ಯಾ -ಪುತ್ರ-ಶಿಷ್ಯವರ್ಗದಲ್ಲಿ ಸೇರಿರುವ ನಾವೆಲ್ಲರೂ ತಂದೆಯ ಆಜ್ಞೆಗೆ ಒಳಪಡ ತಕ್ಕವರೆಂಬುದು ಸತ್ಪುರುಷರ ಅಭಿಪ್ರಾಯವೂ ಆಗಿದೆ. ನೀನು ಈ ವಿಷಯವನ್ನು ಗಮನಿಸಬೇಕು. ತಂದೆಯೇ ನಮ್ಮೆಲ್ಲರಿಗೂ ಈಶ್ವರನಾದುದರಿಂದ ಮತ್ತು ಶಾಸಕನಾದುದರಿಂದ ಅವನು ನನ್ನನ್ನು ಕೃಷ್ಣಾಜಿನ-ನಾರುಮಡಿಗಳನ್ನುಡಿಸಿ ಅರಣ್ಯಕ್ಕಾದರೂ ಕಳುಹಿಸಬಹುದು. ರಾಜ್ಯದ ಸಿಂಹಾಸನದಲ್ಲಾದರೂ ಕೂರಿಸಬಹುದು. ಧರ್ಮಜ್ಞನಾದ ತಂದೆಯ ವಿಷಯದಲ್ಲಿ ಜನರಿಂದ ಶ್ಲಾಘಿಸಲ್ಪಟ್ಟ ಗೌರವವು ಎಷ್ಟಿರುವುದೋ-ಅಷ್ಟೇ ಗೌರವವು ತಾಯಿಯ ವಿಷಯದಲ್ಲಿಯೂ ಇರಬೇಕು. ಧರ್ಮಶೀಲರಾದ ನಮ್ಮ ತಾಯಿ-ತಂದೆಗಳಿಬ್ಬರೂ ನನಗೆ 'ವನಂ ಗಚ್ಛ ರಾಘವ-ರಾಘವನೇ! ಅರಣ್ಯಕ್ಕೆ ಹೋಗು'-ಎಂದು ಆಜ್ಞೆ ಮಾಡಿದರು. ಪೂಜ್ಯರಾದ ತಂದೆ-ತಾಯಿಗಳ ಮಾತಿಗೆ ವಿರುದ್ಧವಾಗಿ ನಾನು ಹೇಗೆ ತಾನೇ ನಡೆದುಕೊಳ್ಳಲಿ? ಅಯೋಧ್ಯೆಯಲ್ಲಿ ನೀನು ಲೋಕಸತ್ಕೃತವಾದ ರಾಜ್ಯಭಾರವನ್ನು ವಹಿಸಿಕೊಳ್ಳಬೇಕು. ನಾನು ನಾರುಮಡಿಯನ್ನುಟ್ಟು ದಂಡಕಾರಣ್ಯದಲ್ಲಿ ವಾಸಮಾಡಬೇಕು. ಎಲ್ಲ ಪ್ರಜೆಗಳ ಸಮ್ಮುಖದಲ್ಲಿ ಮಹಾರಾಜನು ಅಣ್ಣ-ತಮ್ಮಂದಿರಿಗೆ ಹೀಗೆ ವಿಭಾಗ ಮಾಡಿಕೊಟ್ಟು, ಆಜ್ಞೆಯನ್ನು ಪರಿಪಾಲಿಸುವಂತೆ ಹೇಳಿ ಸ್ವರ್ಗವನ್ನೈದಿದನು. ಲೋಕಗುರುವಾದ, ಧರ್ಮಾತ್ಮನಾದ, ತಂದೆಯಾದ ದಶರಥನೇ ನಿನಗೆ ಪ್ರಮಾಣಭೂತನು. ತಂದೆಯು ನಿನ್ನ ಭಾಗಕ್ಕೆ ಕೊಟ್ಟಿರುವ ರಾಜ್ಯವನ್ನು ಅನುಭವಿಸಲು ನೀನು ಯೋಗ್ಯನಾಗಿರುವೆ. ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದಲ್ಲಿದ್ದುಕೊಂಡು ಮಹಾತ್ಮನಾದ ತಂದೆಯು ನನಗೆ ಕೊಟ್ಟಿರುವ ಭಾಗದ ಫಲವನ್ನು ನಾನು ಅನುಭವಿಸುತ್ತೇನೆ. ಮನುಷ್ಯಲೋಕದ ಪ್ರಜೆಗಳಿಂದ ಸತ್ಕರಿಸಲ್ಪಡುತ್ತಿದ್ದ , ಇಂದ್ರನಿಗೆ ಸಮಾನನಾದ, ಮಹಾತ್ಮನಾದ ತಂದೆಯು ನನಗೆ ಏನೊಂದು ಹೇಳಿರುವನೋ ಅದೇ ನನಗೆ ಪರಮಹಿತಕರವಾದುದೆಂದು ಭಾವಿಸುತ್ತೇನೆ. ಅವನ ಆಜ್ಞೆಗೆ ವಿರುದ್ಧವಾಗಿ ಅನುಭವಿಸುವ ಸಮಸ್ತಲೋಕಗಳ ಶಾಶ್ವತವಾದ ಒಡೆತನವೂ ನನಗೆ ಶ್ರೇಯಸ್ಕರವೆನಿಸುವುದಿಲ್ಲ."

Comments


bottom of page