top of page

ಅಯೋಧ್ಯೆಯ ಕುಶಲವಾರ್ತೆ ಕೇಳಿದ ರಾಮ (ರಾಮಾಯಣ ಕಥಾಮಾಲೆ 50)

ಅಯೋಧ್ಯೆಯ ಕುಶಲವಾರ್ತೆ ಕೇಳಿದ ರಾಮ (ರಾಮಾಯಣ ಕಥಾಮಾಲೆ 50)

ಅಯೋಧ್ಯೆಯ ಕುಶಲವಾರ್ತೆ ಕೇಳಿದ ರಾಮ (ರಾಮಾಯಣ ಕಥಾಮಾಲೆ 50)

ಜಟಾಧಾರಿಯಾಗಿದ್ದ, ನಾರುಮಡಿಯುಟ್ಟು, ಯುಗಾಂತ್ಯದ ಸೂರ್ಯನೋಪಾದಿಯಲ್ಲಿ ನೋಡಲು ಅಶಕ್ಯನಾಗಿದ್ದ, ಕೈಮುಗಿದುಕೊಂಡೇ ನೆಲದ ಮೇಲೆ ಬಿದ್ದಿರುವ ಭರತನನ್ನು ಶ್ರೀರಾಮನು ನೋಡಿದನು. ಭರತನ ಗುರುತೇ ರಾಮನಿಗೆ ಸಿಗಲಿಲ್ಲ. ಅವನು ಅಷ್ಟು ಕೃಶನಾಗಿದ್ದನು. ಕುಂದಿದ ಮುಖಭಾವದಿಂದ ಕೂಡಿದ್ದ ಅತ್ಯಂತಕೃಶನಾಗಿರುವ ಅವನು ತನ್ನ ತಮ್ಮನಾದ ಭರತನೇ ಎಂಬುದನ್ನು ಹೇಗೋ ತಿಳಿದು ಅವನನ್ನು ತನ್ನೆರಡು ತೋಳುಗಳಿಂದಲೂ ಹಿಡಿದೆತ್ತಿದನು. ಬಳಿಕ ಶ್ರೀರಾಮನು ಭರತನ ನೆತ್ತಿಯನ್ನು ಆಘ್ರಾಣಿಸಿ ಗಾಢವಾಗಿ ಆಲಿಂಗಿಸಿಕೊಂಡು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆದರಪೂರ್ವಕವಾಗಿ ಪ್ರಶ್ನಿಸಿದನು: “ಮಗು! ತಂದೆಯಲ್ಲಿ? ಅವನನ್ನು ಬಿಟ್ಟು ನೀನೊಬ್ಬನೇ ಈ ಕಾಡಿಗೆ ಬಂದಿರುವೆಯಲ್ಲವೇ? ಅವನು ಜೀವಿಸಿರುವಾಗ ನೀನು ಅಯೋಧ್ಯೆಯನ್ನು ಬಿಟ್ಟುಬಂದುದು ಸರಿಯಲ್ಲ. ಬಹಳ ದೂರದಲ್ಲಿರುವ ಸೋದರಮಾವನ ಮನೆಯಿಂದ ಬಂದಿರುವ ಭರತನನ್ನು ನಾನು ಬಹಳ ಕಾಲಾನಂತರ ಈ ಕಾಡಿನಲ್ಲಿ ನೋಡುತ್ತಿದ್ದೇನೆ. ನಿನ್ನ ಶರೀರವನ್ನಂತೂ ನೋಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಬಡವಾಗಿ ಹೋಗಿರುವೆ. ಭರತ! ನೀನು ಕಾಡಿಗೇಕೆ ಬಂದೆ? ರಾಜನು ರಾಜ್ಯವಾಳಿಕೊಂಡಿರುವನೇ? ಅವನ ಆಜ್ಞಾನುಸಾರವಾಗಿ ನೀನಿಲ್ಲಿಗೆ ಬಂದಿರುವೆಯಾ? ದೀನನಾದ ಮತ್ತು ದುಃಖಿತನಾದ ರಾಜನು ಇಷ್ಟು ಬೇಗ ಲೋಕಾಂತರವನ್ನು ಹೊಂದಿಲ್ಲ ತಾನೇ? ನೀನು ಬಾಲಕನಾಗಿರುವ ಕಾರಣ ಶಾಶ್ವತವಾದ ರಾಜ್ಯಸಿಂಹಾಸನದಿಂದ ಭ್ರಷ್ಟನಾಗಿಲ್ಲ ತಾನೇ? ಸತ್ಯವಿಕ್ರಮನಾದ ತಂದೆಯ ಶುಶ್ರೂಷೆಯನ್ನು ಮಾಡುತ್ತಿರುವೆಯಲ್ಲವೇ? ರಾಜಸೂಯಾಶ್ವಮೇಧಾದಿ ಯಾಗಗಳನ್ನು ಮಾಡಿರುವ, ಧರ್ಮದಲ್ಲಿಯೇ ಅಚಲವಾದ ನಿಷ್ಠೆಯುಳ್ಳ, ಸತ್ಯನಿಷ್ಠನಾದ ದಶರಥನು ಕುಶಲಿಯಾಗಿರುವನೇ? ವಿದ್ವಾಂಸರಾದ, ಧರ್ಮನಿಷ್ಠರಾದ, ಮಹಾತೇಜಸ್ವಿಗಳಾದ ಇಕ್ಷ್ವಾಕುಕುಲದರಸರಿಗೆ ಪುರೋಹಿತರಾದ, ಬ್ರಾಹ್ಮಣಶ್ರೇಷ್ಠರಾದ ವಸಿಷ್ಠರನ್ನು ಹಿಂದಿನಂತೆಯೇ ಗೌರವದಿಂದ ಸತ್ಕರಿಸುತ್ತಿರುವೆಯಾ? ಕೌಸಲ್ಯಯೂ-ಸುಪುತ್ರವತಿಯಾದ ಸುಮಿತ್ರೆಯೂ ಸುಖವಾಗಿರುವರೇ! ಕೈಕೇಯೀದೇವಿಯೂ ಆನಂದದಿಂದಿರುವಳೇ? ವಿನಯಸಂಪನ್ನನಾದ, ಸತ್ಕುಲಪ್ರಸೂತನಾದ, ಮಹಾವಿದ್ವಾಂಸನಾದ, ಅಸೂಯಾರಹಿತನಾದ, ಶಾಸ್ತ್ರೋಕ್ತವಾದ ಧರ್ಮಗಳಲ್ಲಿಯೇ ಯಾವಾಗಲೂ ದೃಷ್ಟಿಯುಳ್ಳ ವಸಿಷ್ಠರ ಪುತ್ರನಾದ ಸುಯಜ್ಞನನ್ನು ನೀನು ಹಿಂದಿನಂತೆ ಸತ್ಕರಿಸುತ್ತಿರುವೆಯಲ್ಲವೇ?"


"ನಮ್ಮ ತಂದೆಯಾದ ದಶರಥಮಹಾರಾಜನು ಯಾವ ಧರ್ಮವೃತ್ತಿಯನ್ನು ಅವಲಂಬಿಸಿ ರಾಜ್ಯಭಾರಮಾಡುತ್ತಿದ್ದನೋ ಮತ್ತು ನಮ್ಮ ಪ್ರಪಿತಾಮಹರು ಯಾವ ಧರ್ಮಮಾರ್ಗವನ್ನು ಅನುಸರಿಸಿ ರಾಜ್ಯ ವಾಳುತ್ತಿದ್ದರೋ- ಅಂತಹ ಧರ್ಮವೃತ್ತಿಯನ್ನೇ ನೀನೂ ಅವಲಂಬಿಸಿರುವೆ ಯಲ್ಲವೇ? ನಿಶ್ಚಯವಾಗಿಯೂ ಅವರು ಅನುಸರಿಸಿರುವ ಮಾರ್ಗವು ಶುಭದಾಯಕವಾದ ಸನ್ಮಾರ್ಗವು" ಎಂದನು.


ಶ್ರೀರಾಮನ ಉಪದೇಶವನ್ನು ಕೇಳಿ ಭರತನು, “ಅಣ್ಣ! ಧರ್ಮವಿಹೀನನಾಗಿರುವ ನನಗೆ ರಾಜಧರ್ಮವೇನು ಮಾಡುತ್ತದೆ?

ಜ್ಯೇಷ್ಠಪುತ್ರನಿರುವಾಗ ಕನಿಷ್ಠನು ರಾಜನಾಗಕೂಡದೆಂಬ ಶಾಶ್ವತವಾದ, ಶ್ರೇಯಸ್ಕರವಾದ ಈ ಧರ್ಮವು ನಮ್ಮ ವಂಶದಲ್ಲಿ ಬಹಳ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಮೀರಿದರೆ ನಾನು ಧರ್ಮಹೀನನಾದಂತಾಗುವುದಿಲ್ಲವೇ? ಸಕಲವಾದ ಸಂಪತ್ತಿನಿಂದಲೂ ಸಮೃದ್ಧವಾಗಿರುವ ಅಯೋಧ್ಯೆಗೆ ನೀನೀಗಲೇ ಪ್ರಯಾಣಮಾಡು. ನಮ್ಮ ವಂಶದ ಶುಭೋದಯಕ್ಕಾಗಿ ಪಟ್ಟಾಭಿಷಿಕ್ತನಾಗು.

ರಾಜನೂ ಒಬ್ಬ ಮನುಷ್ಯಮಾತ್ರದವನೆಂದು ಪ್ರಾಕೃತಜನರು ಹೇಳುತ್ತಾರೆ. ಆದರೆ ರಾಜನನ್ನು ದೇವತ್ವದಿಂದ ಕಾಣುವುದೇ ನನಗೆ ಸಮ್ಮತ. ಏಕೆಂದರೆ: ಧರ್ಮಾರ್ಥಸಹಿತವಾದ ಕರ್ತವ್ಯದ ಪಾಲನೆಯು ನಿಶ್ಚಯವಾಗಿಯೂ ಅಮಾನುಷವಾದುದು. ಸಾಮಾನ್ಯಮನುಷ್ಯರಿಂದ ಆಚರಿಸಲು ಸಾಧ್ಯವಾಗುವಂತಹದಲ್ಲ. ಅಣ್ಣ! ನಾನು ಕೇಕಯದೇಶದಲ್ಲಿದ್ದಾಗ-ನೀನೂ ಅರಣ್ಯವಾಸಕ್ಕೆ ಬಂದುಬಿಟ್ಟಾಗ - ಯಜ್ಞಶೀಲನಾದ ಮತ್ತು ಸತ್ಪುರುಷರಿಗೆ ಇಷ್ಟನಾಗಿದ್ದ ನಮ್ಮ ರಾಜನು ಸ್ವರ್ಗಸ್ಥನಾದನು. ನೀನು ಲಕ್ಷ್ಮಣ-ಸೀತೆಯರೊಡನೆ ಅರಣ್ಯಕ್ಕೆ ಹೊರಟೊಡನೆಯೇ ದುಃಖ - ಶೋಕಗಳಿಂದ ಪೀಡಿತನಾಗಿ ರಾಜನು ದಿವಂಗತನಾದನು.


ಪುರುಷಶ್ರೇಷ್ಠನೇ! ಏಳು. ತಂದೆಗೆ ಉದಕಕ್ರಿಯೆಗಳನ್ನು ಮಾಡು. ನಾನೂ ಮತ್ತು ಶತ್ರುಘ್ನನೂ ಈ ಮೊದಲೇ ಔರ್ಧ್ವದೈಹಿಕಕರ್ಮಗಳನ್ನು ಮಾಡಿದ್ದೇವೆ.

'ಪ್ರಿಯೇಣ ಖಲು ದತ್ತಂ ಹಿ ಪಿತೃಲೋಕೇಷು ರಾಘವ l ಅಕ್ಷಯ್ಯಂ ಭವತೀತ್ಯಾಹುರ್ಭರ್ವಾಂಶ್ಚೈವ ಪಿತುಃ ಪ್ರಿಯಃ ||'

ಆಕ್ಕರೆಯ ಮಗನಿಂದ ಕೊಡಲ್ಪಡುವ ತರ್ಪಣವು ಪಿತೃಲೋಕಗಳಲ್ಲಿ ಅಕ್ಷಯವಾದ ಫಲವನ್ನು ನೀಡುವುದೆಂದು ತಿಳಿದವರು ಹೇಳುತ್ತಾರೆ. ನೀನಾದರೋ ತಂದೆಗೆ ಪರಮಪ್ರಿಯನಾದ ಮಗನಾಗಿರುವೆ.


ಅಣ್ಣ! ನಿನ್ನ ವಿಯೋಗದುಃಖವನ್ನು ತಾಳಲಾರದೇ ನಿನಗಾಗಿ ನಮ್ಮ ತಂದೆಯು ಶೋಕಪಡುತ್ತಿದ್ದನು. ನಿನ್ನನ್ನು ಪುನಃ ನೋಡಬೇಕೆಂದು ಹಂಬಲಿಸುತ್ತಿದ್ದನು. ನಿನ್ನಲ್ಲಿಯೇ ಅವನ ಬುದ್ಧಿಯು ಲೀನವಾಗಿ ಹೋಗಿತ್ತು. ನಿನ್ನಿಂದವನು ತನ್ನ ಮನಸ್ಸನ್ನು ಹಿಂತೆಗೆದುಕೊಳ್ಳಲೇ ಇಲ್ಲ. ನಿನ್ನಿಂದ ವಿಹೀನನಾಗಿ ಪುತ್ರವಿಯೋಗವೆಂಬ ಮನೋರೋಗಕ್ಕೆ ತುತ್ತಾಗಿ ನಿನ್ನನ್ನೇ ಸ್ಮರಿಸುತ್ತಾ ಸ್ವರ್ಗಕ್ಕೆ ಹೊರಟುಹೋದನು” ಎಂದನು.

Comments


bottom of page