top of page

ಪಾದುಕಾ ಪ್ರದಾನ (ರಾಮಾಯಣ ಕಥಾಮಾಲೆ 54)

2 days ago
4 min read

ರಾಮನಿಂದಲೂ ಆಜ್ಞೆಯನ್ನು ನಿರೀಕ್ಷಿಸಿ ರಾಮನ ಮುಖವನ್ನೇ ನೋಡುತ್ತಾ ನಿಂತಿದ್ದ ಸುಮಂತ್ರನನ್ನು ನೋಡಿ ಭರತನು ಮನಸ್ಸಿಗೆ ಮತ್ತಷ್ಟು ಖೇದವನ್ನು ತಂದುಕೊಂಡು ತಾನೇ ಹೋಗಿ ದರ್ಭೆಯ ಕಟ್ಟನ್ನು ತೆಗೆದುಕೊಂಡು ಬಂದು, ಪರ್ಣಕುಟೀರದ ಬಾಗಿಲಿನಲ್ಲಿ ಹಾಕಿ, ಅದರ ಮೇಲೆ ಮಲಗಿಬಿಟ್ಟನು. ಕಾರ್ಯಸಾಧನೆಯಾಗುವವರೆಗೂ ಮೇಲೇಳುವುದಿಲ್ಲವೆಂದು ಪ್ರತಿಜ್ಞೆಮಾಡಿ ದರ್ಭೆಯ ಆಸ್ತರಣದ ಮೇಲೆ ಮಲಗಿದ್ದ ಭರತನಿಗೆ ಮಹಾತೇಜಸಿಯಾದ, ರಾಜರ್ಷಿಸತ್ತಮನಾದ ರಾಮನು ಹೇಳಿದನು :


“ಮಗು, ಭರತ! ನಾನು ನಿನ್ನ ವಿಷಯದಲ್ಲಿ ಯಾವ ಅಪರಾಧವನ್ನು ಮಾಡಿರುವುದಕ್ಕೆ ನೀನಿಂದು ಈ ವ್ರತವನ್ನು ಕೈಗೊಂಡಿರುವೆ? ಬ್ರಾಹ್ಮಣನಾದವನು ತನಗೆ ಅಪಕಾರಮಾಡಿರುವವರ ಮನೆಯ ಬಾಗಿಲ ಮುಂದೆ ದರ್ಭಾಸ್ತರಣದಲ್ಲೇ ಒಂದೇ ಮುಗ್ಗುಲಾಗಿ ಮಲಗಿ ತನ್ನ ಕಾರ್ಯ ಸಾಧನೆಯನ್ನು ಮಾಡಿಕೊಳ್ಳಬೇಕಾದುದು ವಿಹಿತವಾಗಿದೆ. ಅಪಕಾರಿಗೆ ಅಪಕಾರವನ್ನೂ, ಮೋಸಕ್ಕೆ ಮೋಸವನ್ನೂ ಮಾಡುವುದು ಬ್ರಾಹ್ಮಣನ ಧರ್ಮವಲ್ಲವಾದ್ದರಿಂದ ತನಗೆ ಮಾಡಿದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಯೋಗ್ಯಸಮಯದಲ್ಲಿ ಬ್ರಾಹ್ಮಣನಾದವನು ಪ್ರತ್ಯುಪವೇಶವನ್ನು ಕೈಗೊಳ್ಳಬಹುದೆಂಬುದು ವಿಧಿಸಮ್ಮತವಾಗಿದೆ.ಆದರೆ ಪಟ್ಟಾಭಿಷಕ್ತರಾದ ರಾಜರಿಗೆ ಈ ವಿಧಿಯು ಯುಕ್ತವಾಗಿಲ್ಲ. ಪಟ್ಟಾಭಿಷಕ್ತರಾದ ರಾಜರು ಪ್ರತ್ಯುಪವೇಶವನ್ನು ಕೈಗೊಳ್ಳಬಾರದು. ಪುರುಷಸಿಂಹನೇ! ಎದ್ದೇಳು. ದಾರುಣವಾದ, ಕಠಿಣವಾದ, ವಿಧೀಹೀನವಾದ ಮತ್ತು ನಿಷಿದ್ಧವಾದ ಈ ಪ್ರತ್ಯುಪವೇಶವ್ರತವನ್ನು ಬಿಟ್ಟು ಈ ಕ್ಷಣದಲ್ಲೇ ನೀನು ಅಯೋಧ್ಯಾಪಟ್ಟಣಕ್ಕೆ ಪ್ರಯಾಣಮಾಡು”.


ರಾಮನು ಹೀಗೆ ಹೇಳಿದರೂ ಭರತನು ಅವನ ಮಾತನ್ನು ಕೇಳಿಯೂ ಕೇಳದವನಂತೆ, ಕುಳಿತಿದ್ದ ಜಾಗದಿಂದಲೇ ಸುತ್ತಲೂ ನೋಡಿ ಪಟ್ಟಣಿಗರನ್ನು ಸಂಭೋಧಿಸಿ ಹೇಳಿದನು : “ನೀವೇಕೆ ಸುಮ್ಮನೆ ಪ್ರೇಕ್ಷಕರಾಗಿ ನಿಂತಿರುವಿರಿ? ಅಯೋಧ್ಯೆಗೆ ಬಂದೇ ತೀರಬೇಕೆಂದು ಒಕ್ಕೊರಳಿನಿಂದ ಆರ್ಯನಿಗೆ ಶಾಸನವನ್ನು ಮಾಡುವುದಿಲ್ಲವೇಕೆ?”


ಭರತನು ಹೀಗೆ ಪ್ರಶ್ನಿಸಲಾಗಿ ಅಯೋಧ್ಯ್ಯಾಪುರವಾಸಿಗಳು ಏಕಕಂಠದಿಂದ ಹೇಳಿದರು : “ಭರತ! ರಾಮನು ಯಾರು? ಅವನ ಸಹಜಗುಣಗಳೇನು? ಎಂಬುದಲ್ಲವನ್ನೂ ನಾವು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿರುತ್ತೇವೆ. ರಾಘವನು ಯಾವ ಮಾತನ್ನೇ ಹೇಳಿದರೂ ಸ್ಪಷ್ಟವಾಗಿ, ಸಮೀಚೀನವಾಗಿ ಹೇಳುತ್ತಾನೆ. ಮಹಾಭಾಗನಾದ ರಾಮನಾದರೋ ತಂದೆಯ ಆಜ್ಞೆಯನ್ನು ಪರಿಪಾಲನೆಮಾಡುವುದರಲ್ಲೇ ಬದ್ಧಕಂಕಣನಾಗಿ ನಿಂತಿದ್ದಾನೆ. ಇದು ಸಾಧುವಾಗಿಯೇ ಇದೆ. ಈ ಕಾರಣದಿಂದಲೇ ನಾವು ಅವನನ್ನು ಅಯೋಧ್ಯೆಗೆ ಕೂಡನೆಯೇ ಹಿಂದಿರುಗುವಂತೆ ಹೇಳಲು ಅಸಮರ್ಥರಾಗಿದ್ದೇವೆ”.


ಪ್ರಜೆಗಳು ಹೇಳಿದ ಆ ಮಾತುಗಳನ್ನು ಕೇಳಿ ಶ್ರೀರಾಮನು ಭರತನಿಗೆ ಹೇಳಿದನು :


“ಭರತ! ಧರ್ಮ್ಯಕದೃಷ್ಟಿಯುಳ್ಳ ಸುಹೃದರ ಈ ಮಾತುಗಳನ್ನು ಮನಸ್ಸಿಗೆ ತಂದುಕೋ. ಪುರಜನರು ಹೇಳಿದ ಮಾತುಗಳು ಮತ್ತು ನಾನು ಹೇಳಿದ ಮಾತುಗಳು-ಇವೆರಡನ್ನೂ ಮನಸ್ಸಿನಲ್ಲಿ ಸ್ಮರಿಸಿಕೊಂಡು ಸೂಕ್ತಾಸೂಕ್ತತೆಗಳನ್ನು ನೀನೇ ನಿಶ್ಚಯಿಸು. ನಾನು ಹೇಳಿರುವುದು ಸೂಕ್ತವಾಗಿದೆಯೆಂಬ ಜ್ಞಾನವು ನಿನಗೆ ಖಂಡಿತವಾಗಿಯೂ ಉಂಟಾಗುವುದು. ದರ್ಭೆಯ ಆಸ್ತರಣದಿಂದ ಮೇಲದ್ದು, ಕ್ಷತ್ರಿಯನಿಗೆ ಅನುಚಿತವಾದ ಪ್ರತ್ಯುಪವೇಶ ಕಾರ್ಯಕ್ಕೆ ಉದ್ಯುಕ್ತನಾದುದಕ್ಕೆ ಪ್ರಾಯಶ್ಚಿತ್ತಾರ್ಥವಾಗಿ ಜಲಸ್ಪರ್ಶ ಮಾಡು ಮತ್ತು ನನ್ನನ್ನೂ ಸ್ಪರ್ಶಿಸು.”


ರಾಮನು ಹೀಗೆಂದು ಹೇಳಲು ಭರತನು ದರ್ಭಾರ್ಸ್ತರಣದಿಂದ ಮೇಲದ್ದು ಶುದ್ಧಾಚಮನಮಾಡಿ ರಾಮನಿಗೆ ನಮಸ್ಕರಿಸಿ ಹೇಳಿದನು.: “ವಿದ್ವದ್ವರೇಣ್ಯರೇ! ಮಂತ್ರಿಸತ್ತಮರೇ! ಮತ್ತು ಪ್ರಜೆಗಳೇ! ನಾನೀಗ ಹೇಳಿರುವ ಮಾತುಗಳನ್ನು ಆಲಿಸಿ ಕೇಳಿರಿ. ನಾನೆಂದೂ ರಾಜ್ಯಕ್ಕಾಗಿ ನಮ್ಮ ತಂದೆಯನ್ನು ಯಾಚಿಸಿದವನಲ್ಲ. ನನಗೆ ಹೇಗಾದರೂ ಮಾಡಿ ರಾಜ್ಯವನ್ನು ಕೊಡಿಸುವಂತೆ ನಮ್ಮ ತಾಯಿಗೆ ಆಜ್ಞೆಯನ್ನೂ ಮಾಡಿದವನಲ್ಲ. ಇದೇ ರೀತಿಯಲ್ಲಿ ಪರಮಧಾರ್ಮಿಕನಾದ ರಾಮನನ್ನು ಅರಣ್ಯಕ್ಕೆ ಹೋಗಲು ಅನುಮೋದಿಸಿದವನೂ ನಾನಲ್ಲ. ನಾನು ನಿರಪರಾಧಿಯು... ನನಗೆ ಈ ವಿಷಯಗಳೊಂದೂ ತಿಳಿಯದು. ಒಂದು ವೇಳೆ ತಂದೆಯ ಆಜ್ಞೆಯನ್ನು ನಡೆಸಲೇಬೇಕೆನ್ನುವುದಾದರೆ-ಆ ಆಜ್ಞೆಯನ್ನು ನೆರವೇರಿಸುವುದು ಅತ್ಯವಶ್ಯವೆಂದು ಭಾವಿಸುವುದಾದರೆ-ನಾನೇ ದಂಡಕಾರಣ್ಯದಲ್ಲಿ ಹದಿನಾಲ್ಕು ವರ್ಷಗಳ ಕಾಲ ವಾಸಮಾಡಿ ಕೊಂಡಿರುತ್ತೇನೆ. ನನ್ನ ಪ್ರತಿನಿಧಿಯಾಗಿ ರಾಮನು ಅಯೋಧ್ಯೆಯನ್ನು ಪರಿಪಾಲನೆ ಮಾಡಲಿ.”


ಭರತನು ಪುನಃ ಹಿಂದಿನಂತೆಯೇ ಹಠ ಹಿಡಿಯುವನೆಂದು ರಾಮನು ಭಾವಿಸಿರಲಿಲ್ಲ. ಭರತನ ಮಾತುಗಳನ್ನು ಕೇಳಿ ರಾಮನಿಗೆ ವಿಸ್ಮಯವೇ ಉಂಟಾಯಿತು. ಧರ್ಮಾತ್ಮನಾದ ಶ್ರೀರಾಮನು ಭರತನ ಮಾತನ್ನು ಕೇಳಿ ವಿಸ್ಮಿತನಾಗಿ ಪುರಜನರನ್ನು ದಿಟ್ಟಿಸಿನೋಡುತ್ತಾ ಶಪಥರೂಪವಾದ ಈ ಮಾತನ್ನು ಹೇಳಿದನು.:


“ನಮ್ಮ ತಂದೆಯು ಜೀವಿಸಿದ್ದಾಗ ಮಾಡಿದ್ದ ಕ್ರಯವನ್ನಾಗಲಿ, ಮಾರಾಟವನ್ನಾಗಲಿ, ನಿಕ್ಷೇಪವನ್ನಾಗಲಿ ಲೋಪಗೊಳಿಸಲು ನನ್ನಿಂದಾಗಲಿ, ಭರತಿನಿಂದಾಗಲಿ ಸಾಧ್ಯವೇ ಇಲ್ಲ.”

ತಂದೆಯ ಮಾತನ್ನು ಹೇಗಾದರೂ ಮಾಡಿ ಸತ್ಯವನ್ನಾಗಿ ಮಾಡಲು ನನ್ನ ಬದಲು ನೀನು ವನವಾಸಮಾಡಬೇಕಾದರೆ-ನಾನು ಅಶಕ್ತನಾಗಿರಬೇಕು . ನಾನೇನೂ ಅಶಕ್ತನಲ್ಲ . ಹೀನಕಲ್ಪನೆಂದು ಪರಿಗಣಿಸಲ್ಪಟ್ಟಿರುವುದನ್ನು ನಾನೆಂದಿಗೂ ಮಾಡಲಾರರು. ನಾನು ಮಾಡಬೇಕಾದುದನ್ನು ಪ್ರತಿನಿಧಿಯ ಮೂಲಕವಾಗಿ ಮಾಡಲಾರರು. ಕೈಕೆಯಿಯು ಹೇಳಿರುವುದು ಸಾಧುವಾಗಿಯೇ ಇದೆ. ತಂದೆಯ ಆಜ್ಞೆಯೂ ಧರ್ಮಸಮ್ಮತವಾಗಿಯೇ ಇದೆ. ಅದರಂತೆ ನಡೆಯದಿದ್ದರೆ ನಾವಿಬ್ಬರೂ ತಂದೆಯನ್ನು ಸುಳ್ಳುಗಾರನನ್ನಾಗಿ ಮಾಡಿದಂತಾಗುತ್ತದೆ. ಭರತನ ವಿಷಯವು ನನಗೆ ಸಂಪೂರ್ಣವಾಗಿ ತಿಳಿದಿರುವುದು . ಇವನು ಕ್ಷಮಾಶೀಲನು. ಗುರುಜನರನ್ನು ಆದರದಿಂದ ಸ್ವಾಗತಿಸಿ ಸತ್ಕರಿಸುವ ಸೌಶೀಲ್ಯವುಳ್ಳವನು. ಸತ್ಯಸಂಧನಾದ, ಮಹಾತ್ಮನಾದ ಭರತನಲ್ಲಿ ರಾಜ್ಯವಾಳಲು ಬೇಕಾಗಿರುವ ಸಕಲಕಲ್ಯಾಣಗುಣಗಳೂ ಇರುವವು. ಮೇಲಾಗಿ ನಾನು ಈ ರಾಜ್ಯದ ಭಾರವನ್ನು ಎಂದೆಂದಿಗೂ ಇವನ ಮೇಲೆಯೇ ಬಿಟ್ಟಿರುವುದೂ ಇಲ್ಲ. ಪ್ರತಿಜ್ಞಾತವಾದ ಅರಣ್ಯವಾಸವು ಮುಗಿದನಂತರ ಅಯೋಧ್ಯೆಗೆ ಪುನರಾಗಮಿಸಿ ಧರ್ಮಶೀಲನಾದ ತಮ್ಮನೊಡನೆ ಸೇರಿಕೊಂಡು ಈ ಭೂಮಿಗೆ ಉತ್ತಮವಾದ ಒಡೆಯನು ನಾನೇ ಆಗುತ್ತೇನೆ.

ಕೈಕೇಯಿಯು ರಾಜನನ್ನು ಎರಡು ವರಗಳನ್ನು ಕೊಡುವಂತೆ ಕೇಳಿದಳು. ಅವನು ಕೈಕೇಯಿಗಿತ್ತ ವರಗಳಲ್ಲಿ ನನ್ನ ಸಂಬಂಧವಾದ ವರದ ನಿಬಂಧನೆಯನ್ನು ನಾನು ಪರಿಪಾಲಿಸುತ್ತಲೇ ಇದ್ದೇನೆ. ನಿನ್ನ ಸಂಬಂಧವಾಗಿ ಕೈಕೇಯಿಗಿತ್ತಿರುವ ರಾಜನ ಮಾತುಗಳನ್ನು ನೀನೂ ಪರಿಪಾಲಿಸಿ ರಾಜ್ಯದ ಆಡಳಿತಭಾರವನ್ನು ವಹಿಸಿ ನಮ್ಮ ತಂದೆಯನ್ನು, ಸುಳ್ಳು ಹೇಳುವುದರಿಂದುಂಟಾಗಬಹುದಾದ ಪಾಪದಿಂದ ಪಾರುಮಾಡು.”

ಅಪ್ರತಿಮವಾದ ತೇಜಸ್ವಿನಿಂದ ವಿರಾಜಿಸುತ್ತಿದ್ದ ಆ ಇಬ್ಬರು ಸಹೋದರರ ರೋಮಾಂಚಕಾರಕವಾದ ಸಮಾಗಮವನ್ನು ಕಂಡು ಪ್ರಶಂಸೆಮಾಡುತ್ತಾ ಲೋಕಕಂಟಕನಾದ ರಾವಣನ ವಧೆಯಲ್ಲಿಯೇ ಆಸಕ್ತರಾಗಿದ್ದ ಮಹರ್ಷಿಗಳೂ ಒಕ್ಕೊರಲಿನಿಂದ ರಾಜಶಾರ್ದೂಲನಾದ ಭರತನಿಗೆ ಹೇಳಿದರು:


“ಸತ್ಕುಲಪ್ರಸೂತನಾದ, ಮಹಾಪ್ರಾಜ್ಞನಾದ, ಮಹಾಯಶಸ್ವಿಯಾದ, ಮಹಾಸದ್ವೃತ್ತಿಯುಳ್ಳ ಭರತನೇ! ನಿಮ್ಮ ತಂದೆಗೆ ಸುಖವುಂಟಾಗಬೇಕಾಗಿದ್ದರೆ ರಾಮನ ಮಾತನ್ನು ಅಂಗೀಕರಿಸಿ. ರಾಮನು ಸದಾ ಋಣವಿಲ್ಲದವನಾಗಿರಬೇಕೆಂದು ನಾವು ಇಚ್ಛಿಸುತ್ತೇವೆ. ಪಿತ್ರವಾಕ್ಯಪರಿಪಾಲನೆಯೆಂಬುದೇ ರಾಮನ ಋಣವಾಗಿರುತ್ತದೆ. ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡಿ ರಾಮನು ತಂದೆಯ ಈ ಋಣವನ್ನು ತೀರಿಸಬೇಕಾಗಿದೆ. ಅದರಂತೆ ರಾಮನು ವನವಾಸಕ್ಕೆ ಬಂದಿರುವುದರಿಂದಲೇ ದಶರಥನೂ ಕೈಕೇಯಿಯ ಋಣದಿಂದ ವಿಮುಕ್ತನಾಗಿ ಸ್ವರ್ಗಕ್ಕೆ ಹೋಗಿರುವನು.”


ಇಷ್ಟು ಮಾತ್ರ ಹೇಳಿ ಗಂಧರ್ವರೂ, ರಾಜರ್ಷಿಗಳೂ, ಮಹರ್ಷಿಗಳೂ ತಮ್ಮ-ತಮ್ಮ ನಿವಾಸಗಳಿಗೆ ತೆರಳಿದರು. ಋಷಿ-ಮಹರ್ಷಿಗಳ ಕರ್ಣಾನಂದಕರವಾದ ಆ ಶುಭವಾಕ್ಯವನ್ನು ಕೇಳಿ, ಮಂಗಳಸ್ವರೂಪನಾದ ರಾಮನು ಆನಂದದಿಂದರಳಿದ ಮುಖಾರವಿಂದವುಳ್ಳವನಾಗಿ ಆ ಮಹರ್ಷಿಗಳನ್ನು ಅಭಿನಂದಿಸಿದನು. ಮಹರ್ಷಿಗಳ ಮಾತನ್ನು ಕೇಳಿ ನಡುಗುತ್ತಿದ್ದ ಶರೀರದಿಂದಲೂ, ತೊದಲುತ್ತಿದ್ದ ನುಡಿಯಿಂದಲೂ ಕೂಡಿದ್ದ ಭರತನು ಕೈಮುಗಿದುಕೊಂಡು ರಾಮನಿಗೆ ಪುನಃ ಹೇಳಿದನು:


“ಅಗ್ರಜ! ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಜ್ಯೇಷ್ಠಾಭಿಷೇಕರೂಪವಾದ ನಮ್ಮ ಕುಲಧರ್ಮವನ್ನೂ-ರಾಜಧರ್ಮವನ್ನೂ ಸಂಪೂರ್ಣವಾಗಿ ಸಮಾಲೋಚಿಸಿ, ನಮ್ಮ ತಾಯಿಯ ಯಾಚನೆಯನ್ನೂ ನೆರವೇರಿಸಿ ಕೊಡುವುದು ಉಚಿತವಾಗಿದೆ. ದೊಡ್ಡದಾಗಿಯೂ-ವಿಸ್ತಾರವಾಗಿಯೂ ಇರುವ ಕೋಸಲರಾಜ್ಯವನ್ನು ನಿನ್ನ ನೆರವಿಲ್ಲದೆ ನಾನೊಬ್ಬನೇ ರಕ್ಷಿಸಲು ಉತ್ಸಾಹವುಳ್ಳವನಾಗಿಲ್ಲ ಮತ್ತು ನಿನ್ನಲ್ಲಿಯೇ ಹೆಚ್ಚು ಅನುರಕ್ತರಾಗಿರುವ ಪ್ರಜೆಗಳನ್ನು ತೃಪ್ತಿಪಡಿಸಲು ಸಮರ್ಥನಾಗಿಲ್ಲ. ರೈತರು ತಮ್ಮ ಇಚ್ಛಾಪೂರ್ತಿಗಾಗಿ ಪರ್ಜನ್ಯನನ್ನೇ ಪ್ರಾರ್ಥಿಸುವಂತೆ-ನಮ್ಮ ಜ್ಞಾತಿ-ಬಾಂಧವರೂ, ಯೋಧರೂ, ಮಿತ್ರರೂ, ಸುಹೃದರೂ ನಿನ್ನನ್ನೇ ರಾಜನನ್ನಾಗಿ ಪಡೆಯುವ ಆಕಾಂಕ್ಷೆಯುಳ್ಳವರಾಗಿದ್ದಾರೆ. ಮಹಾಪ್ರಾಜ್ಞನೇ! ದಯಮಾಡಿ ಈ ರಾಜ್ಯವನ್ನು ಸ್ವೀಕರಿಸಿ ರಾಜ್ಯದ ಆಡಳಿತವನ್ನು ಸುವ್ಯವಸ್ಥೆಗೊಳಿಸು . ಈ ವಿಶ್ವದ ಪರಿಪಾಲನೆಯಲ್ಲಿ ನಿಶ್ಚಯವಾಗಿಯೂ ನೀನು ಅತ್ಯಂತಸಮರ್ಥನಾಗಿರುವೆ.”


ಹೀಗೆಂದು ಹೇಳಿ ಭರತನು ರಾಮನ ಕಾಲಗಳಿಗೆ ಬಿದ್ದು ಅಂಗಲಾಚಿ ಬೇಡಿಕೊಂಡನು. “ರಾಘವ! ಕೃಪೆಮಾಡು. ನನ್ನ ಪ್ರಾರ್ಥನೆಯನ್ನು ತಿರಸ್ಕರಿಸಬೇಡ! ಅಯೋಧ್ಯೆಗೆ ಬಾ! ನೀನು ಅರಣ್ಯದಲ್ಲಿರುವುದನ್ನು ನಾನು ಸಹಿಸಲಾರೆ. ರಾಘವ! ರಾಮ! ಮಹಾನುಭಾವ! ಪ್ರಭೋ! ಕರುಣೆ ತೋರು!” ಇವೇ ಮುಂತಾದ ಕರುಣಾಜನಕವಾದ ಮಾತುಗಳನ್ನಾಡುತ್ತಾ ಕಣ್ಣೀರಿನಿಂದ ರಾಮನ ಕಾಲಗಳಡಿಯನ್ನು ಅಭಿಷೇಕಿಸುತ್ತಾ ಬೇಡಿಕೊಂಡನು. ಹೀಗೆ ಕಾಲುಗಳನ್ನು ಭದ್ರವಾಗಿ ಹಿಡಿದುಕೊಂಡು ಗೋಳಾಡುತ್ತಿದ್ದ ಭರತನನ್ನು ರಾಮನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ನೆತ್ತಿಯನ್ನು ಆಘ್ರಾಣಿಸಿ ಮೈದಡವಿ ಸಂತವಿಸುತ್ತಾ ಶ್ಯಾಮಲವರ್ಣದ ಕಮಲದಳದಂತೆ ವಿಶಾಲವಾದ ಕಣ್ಣುಗಳಿಂದ ಕೂಡಿದ್ದ ಭರತನನ್ನು ಕುರಿತು ಮದಿಸಿದ ಹಂಸದ ಧ್ವನಿಯಂತೆ ಬಹುಗಂಭೀರವಾದ, ಕರ್ಣಾನಂದಕರವಾದ, ಮಾಧುರ್ಯದಿಂದ ಕೂಡಿದ್ದ ಈ ಮಾತನ್ನು ಹೇಳಿದನು:


“ಮಗು! ನಿನಗೆ ಉಂಟಾಗಿರುವ ಸ್ವಾಭಾವಿಕವಾದ ಮತ್ತು ವಿನಯಶೀಲವಾದ ಈ ಬುದ್ಧಿಯಿಂದಲೇ ನೀನು ಪೃಥ್ವಿಯನ್ನೇ ಬೇಕಾದರೂ ರಕ್ಷಿಸಲು ಸಮರ್ಥನಾಗಿರುವೆ. ಪ್ರಧಾನಾಮಾತ್ಯರೊಡನೆಯೂ, ಸುಹೃದ ರೊಡನೆಯೂ ಮತ್ತು ಬುದ್ಧಿವಂತರಾದ ಮಂತ್ರಿಗಳೊಡನೆಯೂ ಕೂಡಿ ರಾಜ್ಯಾಡಳಿತದಲ್ಲಿ ಮಾಡಬೇಕಾದ ದೊಡ್ಡ-ದೊಡ್ಡ ಕಾರ್ಯಗಳನ್ನೂ ಸಮಾಲೋಚಿಸಿ ನಿರ್ವಹಿಸು. ಪೂರ್ಣಚಂದ್ರನಿಂದ ನಯನ ಮನೋಹರವಾದ ಕಾಂತಿಯಾದರೂ ಬೇರ್ಪಡಬಹುದು; ಹಿಮವಂತನು ಹಿಮವನ್ನಾದರೂ ತ್ಯಜಿಸಬಹುದು; ಸಮುದ್ರವು ಎಲ್ಲೆಯನ್ನೂ ಮೀರಿಹೋಗಬಹುದು-ಆದರೆ ನಾನು ಮಾತ್ರ ತಂದೆಯ ಪ್ರತಿಜ್ಞಾವಚನ ವನ್ನು ಮೀರಿ ನಡೆಯಲಾರೆನು. ಕಾಮದಿಂದಲೋ, ಲೋಭದಿಂದಲೋ ನಿನ್ನ ತಾಯಿಯು ನಿನಗಾಗಿ ಈ ಕಾರ್ಯವನ್ನು ಮಾಡಿರುವಳು. ಅವಳೇಕೆ ಹಾಗೆ ಮಾಡಿದಳೆಂದು ನೀನು ಮನಸ್ಸಿನಲ್ಲಿಯೂ ಚಿಂತಿಸಬಾರದು. ತಾಯಿಯ ವಿಷಯದಲ್ಲಿ ಹಿಂದಿನಂತೆಯೇ ಸೌಜನ್ಯದಿಂದಿರುತ್ತಾ ಅವಳ ಶುಶ್ರೂಷೆ ಯನ್ನೂ ಮಾಡುತ್ತಿರಬೇಕು.”


ಈ ರೀತಿಯಾಗಿ ಹೇಳುತ್ತಿದ್ದ, ಸೂರ್ಯನ ತೇಜಸ್ಸಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದ್ದ, ಪ್ರಥಮೆಯ ಚಂದ್ರನಂತೆ ಸರ್ವರಿಂದಲೂ ಸಂದರ್ಶಿಸಲು ಯೋಗ್ಯನಾಗಿದ್ದ ಕೌಸಲ್ಯೆಯ ಮಗನಿಗೆ ಭರತನು ಹೇಳಿದನು:


“ಆರ್ಯನೇ! ಚಿನ್ನದ ತಗಡಿನಿಂದ ಅಲಂಕರಿಸಲ್ಪಟ್ಟಿರುವ ಈ ಎರಡು ದಿವ್ಯಪಾದುಕೆಗಳ ಮೇಲೆ ನಿನ್ನ ಅಡಿದಾವರೆಗಳನ್ನಿಡು. ಈ ದಿವ್ಯಪಾದುಕೆಗಳೇ ಅಖಿಲಲೋಕದ ಯೋಗ-ಕ್ಷೇಮಗಳನ್ನೂ ನಿರ್ವಹಿಸಲು ಸಮರ್ಥವಾಗಿವೆ.”


ಭರತನ ಪ್ರಾರ್ಥನೆಯಂತೆ ಮಹಾತೇಜಸ್ವಿಯಾದ, ನರವ್ಯಾಘ್ರನಾದ, ದಯಾಮಯನಾದ ಶ್ರೀರಾಮನ ದಿವ್ಯವಾದ ಆ ಪಾದುಕೆಗಳ ಮೇಲೆ ಕಾಲುಗಳನ್ನಿಟ್ಟು ಪಾದುಕೆಗಳನ್ನು ತನ್ನ ಪಾದಾರವಿಂದಗಳಿಂದ ಅಲಂಕರಿಸಿ ಅನಂತರ ಮಹಾತ್ಮನಾದ ಭರತನಿಗೆ ಅವನ್ನು ದಯಪಾಲಿಸಿದನು. ಭರತನಾದರೋ ಆ ದಿವ್ಯಪಾದುಕೆಗಳಿಗೆ ದೀರ್ಘದಂಡನಮಸ್ಕಾರಮಾಡಿ ರಾಮನಿಗೆ ಹೇಳಿದನು:


“ರಾಮ! ಈ ಹದಿನಾಲ್ಕು ವರ್ಷಗಳು ನಾನೂ ಜಟೆ-ನಾರುಮಡಿಗಳನ್ನೇ ಧರಿಸಿ, ಹಣ್ಣು-ಹಂಪಲುಗಳನ್ನು ಮಾತ್ರವೇ ತಿನ್ನುತ್ತ ಜೀವಿಸಿರುವೆನು. ನಿನ್ನ ಆಗಮನವನ್ನೇ ನಿರೀಕ್ಷಿಸುತ್ತ ಅಯೋಧ್ಯಾಪಟ್ಟಣದ ಹೊರಭಾಗದಲ್ಲಿ ನಿವಾಸಮಾಡಿಕೊಂಡಿರುವೆನು. ನಿನ್ನ ಪಾದುಕೆಗಳನ್ನೇ ರಾಜ್ಯಸಿಂಹಾಸನದಲ್ಲಿಟ್ಟು ನಾನು ಪ್ರತಿನಿಧಿಯಾಗಿ ರಾಜ್ಯಭಾರ ಮಾಡುತ್ತಿರುವೆನು. ಹದಿನಾಲ್ಕನೆಯ ವರ್ಷವು ಮುಗಿದ ಮರುದಿನವೇ ನಾನೇನಾದರೂ ನಿನ್ನನ್ನು ಕಾಣದಿದ್ದರೆ ಅಗ್ನಿಪ್ರವೇಶಮಾಡುವೆನು.”


ಭರತನ ಆ ಮಾತಿಗೆ ರಾಮನು ಹಾಗೆಯೇ ಆಗಲೆಂದು ಪ್ರತಿವಚನವಿತ್ತು , ಭರತನನ್ನೂ, ಮತ್ತು ಶತ್ರುಘ್ನನನ್ನೂ ಗಾಢವಾಗಿ ಆಲಿಂಗನೆಮಾಡಿ ಕೊಂಡು ಭರತನಿಗೆ ಹೇಳಿದನು:


“ಮಗು, ಭರತ! ನಿನ್ನ ತಾಯಿಯಾದ ಕೈಕೇಯಿಯನ್ನು ರಕ್ಷಣೆಮಾಡು. ಅವಳ ಶುಶ್ರೂಷೆಮಾಡು.ಅವಳ ಮೇಲೆ ಕೋಪಗೊಳ್ಳಬೇಡ. ಈ ವಿಷಯದಲ್ಲಿ ನನ್ನ ಮೇಲೆ ಮತ್ತು ಸೀತೆಯ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ.” ಹೀಗೆ ಹೇಳಿ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ಶ್ರೀರಾಮನು ತಮ್ಮನನ್ನು ಬೀಳ್ಕೊಟ್ಟನು. ಧರ್ಮವಿದನಾದ ಭರತನು ಸಾಲಂಕೃತವಾದ, ಉಜ್ವಲವಾದ ಕಾಂತಿಯಿಂದ ಕೂಡಿದ್ದ ಆ ದಿವ್ಯಪಾದುಕೆಗಳನ್ನು ಶಿರಸ್ಸಿನಲ್ಲಿ ಧಾರಣೆಮಾಡಿಕೊಂಡು ಶ್ರೀರಾಮನನ್ನು ಪ್ರದಕ್ಷಿಣೆಮಾಡಿ, ರಾಜರಾದವರು ಮಾತ್ರವೇ ಕುಳಿತುಕೊಳ್ಳಲು ಯೋಗ್ಯವಾಗಿದ್ದ ಪಟ್ಟದಾನೆಯ ಮೇಲೆ ಆ ಪಾದುಕೆಗಳನ್ನಿಟ್ಟು. ರಘುವಂಶವರ್ಧಕನಾದ, ಸ್ವಧರ್ಮದ ಅನುಷ್ಠಾನದಲ್ಲಿ ಹಿಮವತ್ಪರ್ವತದಂತೆ ಅಚಲನಾದ ಶ್ರೀರಾಮನು ಯಥಾಕ್ರಮವಾಗಿ ತಾಯಂದಿರನ್ನೂ, ಗುರುಜನರನ್ನೂ, ಅಮಾತ್ಯರನ್ನೂ, ಮಂತ್ರಿಗಳನ್ನೂ ಮತ್ತು ಭರತ-ಶತ್ರುಘ್ನರನ್ನು ಯಥಾಯೋಗ್ಯವಾಗಿ ಪುರಸ್ಕರಿಸಿ ಬೀಳ್ಕೊಟ್ಟನು. ರಾಮನನ್ನು ಅಗಲಿ ಹೋಗಬೇಕೆನ್ನುವ ದುಃಖಾತಿಶಯದಿಂದ ಕೌಸಲ್ಯಾ-ಸುಮಿತ್ರಾ-ಕೈಕೇಯಿಯರು ಗದ್ಗದಕಂಠವುಳ್ಳವರಾದರು. ಅವರ ಕಣ್ಣುಗಳಿಂದ ಅಶ್ರುಬಿಂದುಗಳು ತೊಟ್ಟಿಕ್ಕುತ್ತಿದ್ದುವು. ರಾಮನಿಗೆ ಒಂದು ಮಾತು ಹೇಳಲು ಕೂಡ ಅವರಿಗೆ ಸಾಧ್ಯವಾಗದೇ ಹೋಯಿತು. ಹೀಗಿದ್ದ ತಾಯಂದಿರಿಗೆ ರಾಮನೇ ನಮಸ್ಕರಿಸಿ ತಾನೂ ರೋದನಮಾಡುತ್ತಾ ಪರ್ಣಶಾಲೆಯೊಳಕ್ಕೆ ಹೊರಟುಹೋದನು.

Comments


bottom of page