top of page

ರಾಮನ ಮನವೊಲಿಸುವ ಯತ್ನ (ರಾಮಾಯಣ ಕಥಾಮಾಲೆ 53)

20 hours ago
2 min read

ಜಾಬಾಲಿಗಳ ನಾಸ್ತಿಕವಾದವನ್ನು ಕೇಳಿ ರಾಮನು ಕೋಪಗೊಂಡಿರುವ ನೆಂಬುದನ್ನು ತಿಳಿದ ವಸಿಷ್ಠರು ಶ್ರೀರಾಮನಿಗೆ ಹೇಳಿದರು :

“ರಾಮ! ಜಾಬಾಲಿಗಳೂ ಕೂಡ ಜನರ ಹುಟ್ಟು-ಸಾವುಗಳ ರಹಸ್ಯವನ್ನು ಚೆನ್ನಾಗಿ ತಿಳಿದಿರುವರು. ನಿನ್ನನ್ನು ಅಯೋಧ್ಯೆಗೆ ಹಿಂದಿರುಗಿಸಬೇಕೆನ್ನುವ ಆಶಯದಿಂದ ನಾಸ್ತಿಕವಾದವನ್ನು ಆಶ್ರಯಿಸಿ ಹೀಗೆ ಮಾತನಾಡಿದರು. ಲೋಕನಾಥನೇ! ಈ ಲೋಕದ ನಿಯಮ ಏನು ಎಂಬುದನ್ನು ಹೇಳುವೆನು, ಕೇಳು : ದಶರಥ ರಾಜನಿಗೆ 'ರಾಮ'ನೆಂದು ಪ್ರಸಿದ್ಧನಾಗಿರುವ ನೀನು ಹಿರಿಯ ಮಗನಾಗಿರುವೆ. ಪರಂಪರೆಯಿಂದ ಬಂದಿರುವ ನಿನ್ನ ವಂಶದ ಧರ್ಮವೇನೆಂಬುದನ್ನು ಅವಲೋಕಿಸು. ನಿನ್ನ ವಂಶದಲ್ಲಿ ಪಟ್ಟಾಭಿಷೇಕವು ಹಿರಿಯ ಮಗನಿಗೆ ವಿಹಿತವಾಗಿಯೇ ಹೊರತು ಕಿರಿಯರಿಗೆ ಪಟ್ಟಾಭಿಷೇಕವು ಯಾವಾಗಲೂ ನಡೆದಿಲ್ಲ.ಇಕ್ಷ್ವಾಕುವಂಶದ ಅರಸರಲ್ಲಿ ಹಿರಿಯ ಮಕ್ಕಳೇ ರಾಜರಾಗಿರುತ್ತಾರೆ. ಇದು ಇಕ್ಷ್ವಾಕುವಂಶದವರ ಕುಲಧರ್ಮವಾಗಿರುತ್ತದೆ. ಜ್ಯೇಷ್ಠಪುತ್ರರಿರುವಾಗ ಕನಿಷ್ಠರಿಗೆ ರಾಜ್ಯಾಭಿಷೇಕವನ್ನು ಮಾಡುವುದಿಲ್ಲ. ರಘುವಂಶೋತ್ಪನ್ನರಿಗೆ ಸಂಬಂಧಿಸಿದ ಸನಾತನವಾದ ನಿನ್ನ ಕುಲಧರ್ಮವನ್ನು ನೀನೀಗ ಪ್ರಪ್ರಥಮವಾಗಿ ಬಿಟ್ಟುಬಿಡುವುದು ಯೋಗ್ಯವಲ್ಲ. ಅತುಲವಾದ ರತ್ನಗಳಿಂದಲೂ ಅನೇಕಾನೇಕ ರಾಷ್ಟ್ರ ಗಳಿಂದಲೂ ಕೂಡಿರುವ ಈ ಭೂಮಂಡಲವನ್ನು ನಿನ್ನ ತಂದೆಯಾದ ದಶರಥ ರಾಜನಂತೆಯೇ ನೀನೂ ಅನುಶಾಸನ ಮಾಡುವವನಾಗು. "



ಈ ರೀತಿಯಲ್ಲಿ ವಸಿಷ್ಠರು ಕುಲಧರ್ಮವನ್ನು ಹೇಳಿ, ಅದರಂತೆ ನಡೆಯಬೇಕೆಂದು ಹೇಳಿದರೂ ರಾಮನು ಒಪ್ಪುವ ಸೂಚನೆಯು ಕಾಣಿದಿದ್ದುದರಿಂದ ರಾಜಪುರೋಹಿತರಾದ ವಸಿಷ್ಠರು ಧರ್ಮಯುಕ್ತವಾದ ಮತ್ತೊಂದು ಮಾತನ್ನು ರಾಮನಿಗೆ ಹೇಳಿದರು :

“ಕಾಕುತ್ಸ್ಥ! ಭೂಮಿಯಲ್ಲಿ ಹುಟ್ಟಿದ ಮನುಷ್ಯನಿಗೆ ತಂದೆ-ತಾಯಿ-ಆಚಾರ್ಯರೆಂಬ ಮೂವರು ಗುರುಗಳಿರುತ್ತಾರೆ. ಪುರುಷಶ್ರೇಷ್ಠನೇ! ತಾಯಿ-ತಂದೆಗಳು ಮನುಷ್ಯನಿಗೆ ಜನ್ಮದಾತರು. ಆದರೆ ಆಚಾರ್ಯನು ಜ್ಞಾನವನ್ನು ಉಪದೇಶಿಸುತ್ತಾನೆ. ಆದುದರಿಂದಲೇ ‘ಗುರು’ ಎಂದು ಕರೆಯಲ್ಪಡುತ್ತಾನೆ. ರಾಮ! ನಿನಗೆ ತಿಳಿದಿರುವಂತೆ ನಾನು ನಿಮ್ಮ ತಂದೆಗೆ ಆಚಾರ್ಯನಾಗಿದ್ದೆನು. ಈಗ ನಿನಗೂ ಆಚಾರ್ಯನಾಗಿದ್ದೇನೆ. ನನ್ನ ಮಾತನ್ನು ಕೇಳಿ ಅದರಂತೆ ನಡೆದಲ್ಲಿಯೂ ಸತ್ಪುರುಷರು ಅನುಸರಿಸಿದ ಮಾರ್ಗವನ್ನು ಖಂಡಿತವಾಗಿಯೂ ಉಲ್ಲಂಘಿಸಿದಂತಾಗುವುದಿಲ್ಲ. ಈ ಬ್ರಾಹ್ಮಣಸಮೂಹ, ಈ ನಿನ್ನ ಜ್ಞಾತಿ-ಬಾಂಧವರು, ಈ ಮಂಡಲೇಶ್ವರರು ಮತ್ತು ಈ ನಿನ್ನ ಸಮಸ್ತಪ್ರಜೆಗಳು-ಇವರೆಲ್ಲರನ್ನೂ ನೀನು ಧರ್ಮದಿಂದ ಪರಿಪಾಲನೆ ಮಾಡುತ್ತಿದ್ದರೆ ಸತ್ಪುರುಷರು ಅನುಸರಿಸಿದ ಧರ್ಮಮಾರ್ಗವನ್ನು ಉಲ್ಲಂಘಿಸಿದಂತಾಗುವುದಿಲ್ಲ. ವೃದ್ಧೆಯಾದ, ಧರ್ಮಶೀಲೆಯಾದ ನಿನ್ನ ತಾಯಿಯ ಮಾತನ್ನು ಉಲ್ಲಂಘಿಸುವುದೂ ನಿನಗೆ ತಕ್ಕದಲ್ಲ. ಇವಳ ಮಾತಿನಂತೆ ನಡೆದರೂ-ಇವಳ ಮಾತಿನಂತೆ ನೀನಂದು ಅಯೋಧ್ಯೆಗೆ ಹಿಂದಿರುಗಿದರೂ-ಸತ್ಪುರುಷರು ಅನುಸರಿಸಿದ ಧರ್ಮಮಾರ್ಗವನ್ನು ಉಲ್ಲಂಘಿಸಿದಂತಾಗುವುದಿಲ್ಲ. ಸತ್ಯ-ಧರ್ಮಗಳ ಅನುಷ್ಠಾನದಲ್ಲಿ ಶೂರನಾದ ರಾಘವನೇ! ಅಂಗಲಾಚಿ ಬೇಡುತ್ತಿರುವ, ನಿನ್ನ ಆತ್ಮಭೂತನೇ ಆಗಿರುವ, ಭರತನ ಮಾತನ್ನು ಪರಿಪಾಲಿಸು. ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಸತ್ಪುರುಷರ ಮಾರ್ಗವನ್ನು ಉಲ್ಲಂಘಿಸಿದಂತಾಗುವುದಿಲ್ಲ”


ಹೀಗೆ ಕಿವಿಗಳಿಗೆಗಿಂಪಾಗುವ ರೀತಿಯಲ್ಲಿ ವಸಿಷ್ಠರು ಹೇಳಿ ಸುಖಾಸೀನರಾಗಲು ಪುರುಷರ್ಷಭನಾದ ರಾಮನು ಹೇಳಿದನು :“ಪೂಜ್ಯರೇ! ತಾಯಿ-ತಂದೆಗಳು ಮೊಟ್ಟಮೊದಲು ಸೀಮಂತ ಪುತ್ರನನ್ನು ಪಡೆಯುವ ಸಲುವಾಗಿಯೇ ಅನೇಕಾನೇಕ ಪೂಜೆ, ಮಂತ್ರ, ಜಪ, ವ್ರತ, ಉಪವಾಸಾದಿಗಳನ್ನು ಮಾಡುತ್ತಾರೆ. ಪುತ್ರಪ್ರಾಪ್ತಿಗಾಗಿಯೇ ಇಷ್ಟು ಕಷ್ಟಪಡುವ ತಾಯಿ-ತಂದೆಗಳ ಋಣವನ್ನು ಎಷ್ಟು ಸೇವೆಮಾಡಿದರೂ ತೀರಿಸಲು ಸಾಧ್ಯವಿರುವದೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಹುಟ್ಟಿದ ಮಗುವಿಗೆ ತಾಯಿಯಾದವಳು ತನ್ನ ಪ್ರಸವವೇದನೆಗಳೆಲ್ಲವನ್ನೂ ಕ್ಷಣಮಾತ್ರದಲ್ಲಿ ಮರೆತು ಸ್ತನ್ಯವನ್ನು ಕೊಡುತ್ತಾಳು. ತನ್ನ ಸುಖ, ನಿದ್ರೆ, ಆಹಾರಗಳೆಲ್ಲವನ್ನೂ ಬದಿಗೊತ್ತಿ ಆಹಾರಕೊಡುವುದು, ಬೆಚ್ಚಗೆ ಮಲಗಿಸುವುದು, ಸ್ನಾನಮಾಡುವುದು, ಮೈ ತಿಕ್ಕುವುದು-ಮುಂತಾದ ಮಗುವಿನ ಲಾಲನೆ-ಪೋಷಣೆಗಳಲ್ಲೇ ಸರ್ವದಾ ನಿರತಳಾಗಿರುತ್ತಾಳೆ. ತಂದೆಯೂ ಅನುದಿನವೂ ಮಗನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ತೊದಲುನುಡಿಗಳನ್ನಾಡುವ ಮಗುವಿನೊಡನೆ ತಾನೂ ತೊದಲುಮಾತುಗಳನ್ನಾಡುತ್ತಾ, ಮಗುವನ್ನು ಕ್ಷಣ-ಕ್ಷಣಕ್ಕೂ ಮುದ್ದಾಡುತ್ತಾ, ಅದಕ್ಕೆ ಬೇಕಾದ ಆಟಗಳ ವಸ್ತುಗಳನ್ನು ತಂದುಕೊಟ್ಟು ಬೆಳೆಸುತ್ತಾನೆ. ಇಂತಹ ತಾಯಿ-ತಂದೆಗಳ ಋಣವನ್ನು ತೀರಿಸಲು ಖಂಡಿತವಾಗಿಯೂ ಯಾರಿಂದಲೂ ಸಾಧ್ಯವಿಲ್ಲ. ನನ್ನ ಹುಟ್ಟಿಗೆ ಕಾರಣನಾದ ನಮ್ಮ ತಂದೆ ದಶರಥನು ನನಗೆ ಮೊದಲೇ ಆಜ್ಞೆಮಾಡಿರುವನು. ಅವನ ಪ್ರತಿಜ್ಞೆಯಾಗಲೀ, ಆಜ್ಞೆಯಾಗಲೀ ಈಗ ಸುಳ್ಳಾಗುವುದಿಲ್ಲ,ಸುಳ್ಳಾಗಬಾರದು ಕೂಡ.”

ರಾಮನು ಹೀಗೆಂದು ಹೇಳಿದ ನಂತರ ವಿಶಾಲವಕ್ಷನಾದ ಮತ್ತು ಬಹುದುಃಖವಾದ ಮನಸ್ಸಿನಿಂದ ಕೂಡಿದ್ದ ಭರತನು ತನ್ನ ಸಮೀಪದಲ್ಲಿಯೇ ಇದ್ದ ಸುಮಂತ್ರನಿಗೆ ಹೇಳಿದನು :


“ಸುಮಂತ್ರ! ನೀನೀಗಲೇ ಹೋಗಿ ದರ್ಭೆಯ ಕಟ್ಟನ್ನು ತಂದು ನೆಲದ ಮೇಲೆ ಹರಡು. ನನ್ನ ಆರ್ಯನು ಎಂದಿನವರೆಗೆ ನನ್ನ ವಿಷಯದಲ್ಲಿ ಪ್ರಸನ್ನನಾಗುವುದಿಲ್ಲವೋ, ನನ್ನ ಪ್ರಾರ್ಥನೆಯನ್ನು ನಡೆಸಿಕೊಡುವುದಿಲ್ಲವೋ ಅಂದಿನವರಗೂ ಇವನ ಮುಂದೆಯೇ ಪ್ರತ್ಯುಪವೇಶ ಮಾಡುತ್ತೇನೆ. ಬಡ್ಡಿಯ ಆಸೆಗಾಗಿ ಹಣವನ್ನು ಕೊಟ್ಟು ಅಸಲನ್ನೇ ಕಳೆದುಕೊಂಡ ಬ್ರಾಹ್ಮಣನೊಬ್ಬನು ಯಾವ ರೀತಿಯಲ್ಲಿ ನಿರಾಹಾರನಾಗಿ, ಮುಖಕ್ಕೆ ಮುಸುಕು ಹಾಕಿಕೊಂಡು ಸಾಲಗಾರನ ಮನೆಯ ಬಾಗಿಲಿನಲ್ಲಿ ಮಲಗಿಬಿಡುವನೋ-ಅದೇ ರೀತಿಯಲ್ಲಿ ರಾಮನು ನನ್ನ ಜೊತೆಯಲ್ಲಿ ಅಯೋಧ್ಯೆಗೆ ಬರಲೊಪ್ಪುವವರೆಗೂ ಈ ಪರ್ಣಕುಟೀರದ ಬಾಗಿಲಿನಲ್ಲಿ ದರ್ಭೆಯ ಮೇಲೆ ನಿರಾಹಾರನಾಗಿ ಮಲಗಿಬಿಡುತ್ತೇನೆ”.



Comments


bottom of page