top of page

ದಂಡಕಾರಣ್ಯ ಪ್ರವೇಶ ಮತ್ತು ವಿರಾಧನ ಆಕ್ರಮಣ (ರಾಮಾಯಣ ಕಥಾಮಾಲೆ 57)

22 hours ago
1 min read

ಮಹಾಧೈರ್ಯಶಾಲಿಯೂ, ಶತ್ರುಗಳಿಂದ ಎದುರಿಸಲು ಅಸಾಧ್ಯನಾದ ಶ್ರೀರಾಮನು ದೊಡ್ಡ ಕಾಡಾದ ದಂಡಕಾರಣ್ಯವನ್ನು ಪ್ರವೇಶಿಸಿ ಅಲ್ಲಿ ತಪಸ್ವಿಗಳು ವಾಸಮಾಡುತ್ತಿದ್ದ ಆಶ್ರಮಗಳ ಮಂಡಲವನ್ನು ಸಂದರ್ಶಿಸಿದನು. ದರ್ಭೆಗಳಿಂದಲೂ, ಒಗೆದು ಒಣಗಲು ಹಾಕಿದ್ದ ನಾರುಮಡಿಗಳಿಂದಲೂ, ಅಂತರ್ಮುಖಿಗಳಾದ ಬ್ರಹ್ಮರ್ಷಿಗಳ ದಿವ್ಯಪ್ರಭೆಯಿಂದ ಬೆಳಗುತ್ತಿದ್ದ ಆ ಆಶ್ರಮಮಂಡಲವನ್ನು ರಾಮನು ನೋಡಿದನು. ಹಣ್ಣು-ಹಂಪಲುಗಳನ್ನೂ, ಗೆಡ್ಡೆ-ಗೆಣಸುಗಳನ್ನೂ ತಿಂದು ಜೀವಿಸುತ್ತಿದ್ದ, ಜಿತೇಂದ್ರಿಯರಾದ, ನಾರುಮಡಿಯನ್ನೂ ಕೃಷ್ಣಾಜಿನವನ್ನೂ ಧರಿಸಿರುವ ಪುರಾತನ ತಪಸ್ವಿಗಳಿಂದ ಆ ಆಶ್ರಮವು ತುಂಬಿಹೋಗಿತ್ತು. ಬ್ರಹ್ಮವಿದರಾದ ಬ್ರಾಹ್ಮಣರಿಂದ ಪರಿಶೋಭಿಸುತ್ತಿರುವ ತಪಸ್ವಿಗಳ ಆಶ್ರಮವನ್ನು ನೋಡಿ, ಶ್ರೀರಾಮನು ಧನುಸ್ಸಿನ ಹಗ್ಗವನ್ನು ಬಿಚ್ಚಿ ಸೀತಾ-ಲಕ್ಷ್ಮಣರೊಡನೆ ಅವರ ಬಳಿಗೆ ಹೋದನು.


ದಿವ್ಯದೃಷ್ಟಿಯಿಂದ ಸಂಪನ್ನರಾದ ಆ ಮಹರ್ಷಿಗಳು ಶ್ರೀರಾಮನನ್ನೂ, ಸೀತಾದೇವಿಯನ್ನೂ ನೋಡಿ ಪರಮಪ್ರೀತರಾಗಿ ಸ್ವಾಗತಿಸಿದರು. ಶ್ರೀರಾಮನ ರೂಪ, ಶರೀರದ ಮೈಕಟ್ಟು, ಮುಖದ ಕಾಂತಿ ಮತ್ತು ಸುಂದರ ವೇಷವನ್ನು ವನವಾಸಿಗಳಾದ ಋಷಿಗಳು ಆಶ್ಚರ್ಯಚಕಿತರಾಗಿ ನೋಡಿದರು. ಮಹರ್ಷಿಗಳು ಶ್ರೀರಾಮನನ್ನು ತಮ್ಮ ಪರ್ಣಶಾಲೆಗೆ ಅತಿಥಿಯನ್ನಾಗಿ ಬರಮಾಡಿಕೊಂಡು, ವಿಧಿಪೂರ್ವಕವಾಗಿ ಸ್ವಾಗತವನ್ನಿತ್ತು ಉಚಿತಾಸನದಲ್ಲಿ ಕುಳ್ಳಿರಿಸಿ ಅರ್ಘ್ಯ-ಪಾದ್ಯಾದಿಗಳನ್ನು ಸಮರ್ಪಿಸಿದರು. ನಂತರ ಮುನಿಗಳು ಕೈಮುಗಿದುಕೊಂಡು, 'ರಾಘವ! ನೀನು ಧರ್ಮದ ರಕ್ಷಕನಾಗಿರುವೆ, ಮುನಿಜನಕ್ಕೆ ಶರಣ್ಯನಾಗಿರುವೆ, ರಾಜನೂ ಮತ್ತು ಗುರುವೂ ನೀನೇ ಆಗಿರುವೆ' ಎಂದು ಪ್ರಾರ್ಥಿಸಿದರು. ರಾಜನು ಇಂದ್ರನ ಅಂಶದಿಂದ ಹುಟ್ಟಿ ಪ್ರಜೆಗಳನ್ನು ರಕ್ಷಿಸುತ್ತಾನೆ ಎಂದೂ, ನಿನ್ನ ದೇಶದಲ್ಲಿ ವಾಸಮಾಡುತ್ತಿರುವ ನಮ್ಮನ್ನು ನೀನೇ ರಕ್ಷಿಸಬೇಕೆಂದೂ ವಿನಂತಿಸಿಕೊಂಡರು.


ತಪಸ್ವಿಗಳ ಆತಿಥ್ಯವನ್ನು ಸ್ವೀಕರಿಸಿ ಅಪ್ಪಣೆಯನ್ನು ಪಡೆದ ಶ್ರೀರಾಮನು ಸೀತಾಸಮೇತನಾಗಿ ಅರಣ್ಯದಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿದನು. ಹುಲಿ, ಸಿಂಹ ಮುಂತಾದ ಘೋರಮೃಗಗಳಿಂದ ನಿಬಿಡವಾಗಿದ್ದ ಆ ಮಹಾರಣ್ಯದಲ್ಲಿ, ನರಮಾಂಸಭಕ್ಷಕನಾದ ವಿರಾಧನೆಂಬ ವಿಕಾರಾಕೃತಿಯ ಭಯಂಕರ ರಾಕ್ಷಸನೊಬ್ಬನು ರಾಮ-ಲಕ್ಷ್ಮಣ-ಸೀತೆಯರನ್ನು ಕಂಡು ಕುಪಿತನಾಗಿ ಪ್ರಳಯಕಾಲದ ಅಂತಕನಂತೆ ಮುನ್ನುಗ್ಗಿ ಬಂದನು. ಭೂಮಿಯನ್ನೇ ನಡುಗಿಸುವಂತೆ ಶಬ್ದಮಾಡುತ್ತಾ ವೈದೇಹಿಯನ್ನು ಸೊಂಟದಲ್ಲಿ ಇರುಕಿಕೊಂಡು ಮುಂದೆಹೋಗುತ್ತಾ, ನೀವಿಬ್ಬರೂ ಜಟಾಚೀರಧಾರಿಗಳಾಗಿ ತಾಪಸರಂತೆ ವೇಷ ಧರಿಸಿ ಧನುರ್ಬಾಣಗಳನ್ನು ಹಿಡಿದು ಈ ಅರಣ್ಯಕ್ಕೆ ಬಂದಿರುವುದು ನಿಮ್ಮ ಜೀವಿತವು ಕ್ಷೀಣಿಸಿತೆಂಬುದನ್ನು ತೋರಿಸುತ್ತದೆ ಎಂದು ಗದರಿದನು. ಸುಂದರಿಯಾದ ಈ ಹೆಂಗಸು ನನ್ನ ಪತ್ನಿಯಾಗುತ್ತಾಳೆ ಮತ್ತು ನಿಮ್ಮಿಬ್ಬರ ರಕ್ತವನ್ನು ಕುಡಿಯುತ್ತೇನೆ ಎಂದು ದುರಾತ್ಮನಾದ ವಿರಾಧನು ಅಹಂಕಾರದಿಂದ ನುಡಿದನು.


ವಿರಾಧನ ಸೊಂಟದಲ್ಲಿದ್ದ ಸೀತಾದೇವಿಯನ್ನು ಕಂಡು ಶ್ರೀರಾಮನ ಮುಖವು ಬಾಡಿಹೋಯಿತು. ದುಃಖತಪ್ತನಾದ ಶ್ರೀರಾಮನು ಲಕ್ಷ್ಮಣನಿಗೆ, ನನ್ನ ಕಣ್ಣೆದುರಿನಲ್ಲಿಯೇ ಪರಪುರುಷನು ವೈದೇಹಿಯನ್ನು ಮುಟ್ಟಿದುದರಿಂದ ಉಂಟಾಗಿರುವ ಈ ದುಃಖವು ಪಿತೃವಿಯೋಗದ ಮತ್ತು ರಾಜ್ಯಾಪಹರಣದ ದುಃಖಕ್ಕಿಂತಲೂ ಮಿಗಿಲಾದುದು ಎಂದು ಕಂಬನಿಗರೆಯುತ್ತಾ ನುಡಿದನು. ಇದನ್ನು ಕೇಳಿ ಅತಿಕ್ರುದ್ಧನಾದ ಲಕ್ಷ್ಮಣನು ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, ಮೂರು ಲೋಕಗಳ ಒಡೆಯನಾದ ನೀನು ಅನಾಥನಂತೆ ಏಕೆ ಪರಿತಾಪಪಡುತ್ತಿರುವೆ? ಕೋಪಗೊಂಡಿರುವ ನನ್ನ ತೀಕ್ಷ್ಣ ಬಾಣಗಳಿಂದ ವಿರಾಧರಾಕ್ಷಸನನ್ನು ಸಂಹರಿಸಿ, ಅವನ ರಕ್ತವನ್ನು ಭೂದೇವಿಯು ಪಾನಮಾಡುವಂತೆ ಮಾಡುತ್ತೇನೆ ಎಂದು ಅಣ್ಣನಿಗೆ ಧೈರ್ಯ ತುಂಬಿದನು.

Comments


bottom of page