top of page

ವಾರಣಾವತಕ್ಕೆ ತೆರಳಿದ ಪಾಂಡವರು (ಮಹಾಭಾರತ ಕಥಾಮಾಲೆ 51)

3 hours ago
2 min read

ವಾರಣಾವತಕ್ಕೆ ತೆರಳಿದ ಪಾಂಡವರು (ಮಹಾಭಾರತ ಕಥಾಮಾಲೆ 51)

"ದುರ್ಯೋಧನ! ಭೀಷ್ಮ, ದ್ರೋಣ, ವಿದುರ, ಗೌತಮರು ನಮ್ಮನ್ನೂ ಪಾಂಡವರನ್ನೂ ಸಮಾನ ದೃಷ್ಟಿಯಲ್ಲಿ ನೋಡುವುದರಿಂದ, ನಾವು ಪಾಂಡವರ ವಿಚಾರದಲ್ಲಿ ಅಪಚಾರವೆಸಗಿ ಅವರನ್ನು ದೇಶ ಭ್ರಷ್ಟರಾಗಿಸುವುದನ್ನು ಒಪ್ಪಲಾರರು" ಧೃತರಾಷ್ಟ್ರನು ಮಾರುತ್ತರಿಸಿದನು.

ವಾರಣಾವತಕ್ಕೆ ತೆರಳಿದ ಪಾಂಡವರು (ಮಹಾಭಾರತ ಕಥಾಮಾಲೆ 51)

ಅದಕ್ಕೆ ದುರ್ಯೋಧನನು "ತಂದೆಯೇ! ಭೀಷ್ಮನು ನಮ್ಮೀರ್ವರಲ್ಲಿಯೂ ಸಮಾನ ಪ್ರೀತಿಯನ್ನು ಹೊಂದಿದವನಾದ್ದರಿಂದ, ನಮ್ಮ ನಡುವೆ ವೈಮನಸ್ಯ ಉಂಟಾದಾಗ ತಟಸ್ಥ ಭಾವವನ್ನೇ ತಾಳುವನೇ ಹೊರತು, ಪಾಂಡವರ ಪರ ವಹಿಸಲಾರನು. ದ್ರೋಣರೂ ಗೌತಮರೂ ಪಾಂಡವರಲ್ಲೇ ಅಧಿಕ ಪ್ರೀತಿಯನ್ನು ಹೊಂದಿದ್ದರೂ ದ್ರೋಣ ಪುತ್ರನಾದ ಅಶ್ವತ್ಥಾಮನು ನಮ್ಮ ಕಡೆ ಇರುವುದರಿಂದ, ಅವರು ಪಾಂಡವರ ಪಕ್ಷವನ್ನು ಸೇರಲಾರರು. ಇನ್ನುಳಿದವನು ವಿದುರ ಮಾತ್ರ. ಆತ ಒಂದು ವೇಳೆ ಪ್ರತ್ಯಕ್ಷವಾಗಿಯೇ ಪಾಂಡವ ಪಕ್ಷವನ್ನು ಸೇರಿದರೂ ನಮಗಾವ ಆತಂಕವೂ ಎದುರಾಗದು. ಆದ್ದರಿಂದ, ಭಯಗೊಳ್ಳದೇ ಪಾಂಡವರನ್ನು ವಾರಣಾವತಕ್ಕೆ ಕಳಿಸು; ನನ್ನ ಸಂಕಟವನ್ನು ನಿವಾರಿಸು" ಎಂದನು.

ಮಗನ ಮಾತಿಗೆ ರಾಜನು ಸಮ್ಮತಿಸಿದನು. ಸಂತೋಷಗೊಂಡ ದುರ್ಯೋಧನನು ಅನುಜರಿಂದೊಡಗೂಡಿ ಪ್ರಜೆಗಳ ನಾಯಕರನ್ನೂ, ರಾಜ್ಯದ ಅಧಿಕಾರಿಗಳನ್ನೂ ಸಂಪರ್ಕಿಸಿ, ಅವರಿಗೆ ಯಥೇಚ್ಛವಾಗಿ ಧನ-ಕನಕ-ರಾಜಮರ್ಯಾದೆಗಳನ್ನು ಕೊಟ್ಟು ತನ್ನತ್ತ ಸೆಳೆದುಕೊಳ್ಳಲು ಆರಂಭಿಸಿದನು. ಧೃತರಾಷ್ಟ್ರನು ತನ್ನ ವಿಶ್ವಾಸಿಕರಾದ ಮಂತ್ರಿಗಳನ್ನು ಕರೆದು, ಅವರಿಗೆ ಏನು ಮಾಡಬೇಕೆಂದು ಸೂಚಿಸಿದನು.

ಒಮ್ಮೆ ರಾಜಸಭೆಯಲ್ಲಿ ಪಾಂಡವರು ಕುಳಿತಿರುವ ಸಮಯದಲ್ಲಿ ಧೃತರಾಷ್ಟ್ರ ಪ್ರೇರಿತರಾದ ಮಂತ್ರಿಗಳು ವಾರಣಾವತದ ಸೊಬಗನ್ನು ಬಣ್ಣಿಸತೊಡಗಿದರು. ಅಲ್ಲಿ ಅನೇಕ ದಿನಗಳ ಕಾಲ ನಡೆಯುವ ಪಶುಪತಿಯ ಉತ್ಸವದ ವಿಜೃಂಭಣೆಯನ್ನು ಬಣ್ಣಿಸಿದರು. ಅಲ್ಲಿ ದಿವ್ಯ ವಸ್ತ್ರಾಭರಣಗಳನ್ನು ಧರಿಸಿ, ದೇಶಾಂತರಗಳಿಂದ ಬರುವ ಲಕ್ಷೋಪಲಕ್ಷ ಜನರ ಕುರಿತಾಗಿ ವಿವರಿಸಿದರು. ಪ್ರಪಂಚದಲ್ಲಿ ಇದುವರೆಗೆ ಎಲ್ಲಿಯೂ ನಡೆಯದ ವಿಜೃಂಭಣೆಯು ಈ ಉತ್ಸವದ್ದು ಎಂದವರು ವರ್ಣಿಸಿದರು.

ಈ ಬಣ್ಣನೆಯನ್ನು ಪದೇ ಪದೇ ಮಾಡಿದ್ದರಿಂದ ಪಾಂಡವರೂ ಈ ಕುರಿತು ಸ್ವಲ್ಪ ಕುತೂಹಲವನ್ನು ತಾಳಿದರು. ಇದನ್ನೇ ಕಾಯುತ್ತಿದ್ದ ಅಂಬಿಕಾ ಸುತನು ಪಾಂಡವರನ್ನು ಉದ್ದೇಶಿಸಿದನು, "ನನ್ನ ದೂತರೂ, ಮಂತ್ರಿಗಳೂ ವಾರಣಾವತದ ಸೊಬಗನ್ನು ಯಾವಾಗಲೂ ಹೇಳುತ್ತಿರುತ್ತಾರೆ. ನೀವು ಆ ಸುಂದರ ನಗರಿಯನ್ನು ನೋಡಲು ಬಯಸುವಿರಾದರೆ, ಅಲ್ಲಿ ಹೋಗಿ, ಸುಖವಾಗಿ ಕೆಲದಿನಗಳನ್ನು ಕಳೆದು ಬನ್ನಿ. ಪಶುಪತಿಯ ಉತ್ಸವದಲ್ಲಿ ಬ್ರಾಹ್ಮಣರಿಗೂ ಗಾಯಕರಿಗೂ ಧನ-ಕನಕ-ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿ. ಬಳಿಕ ಹಸ್ತಿನಾಪುರಕ್ಕೆ ಮರಳಬಹುದು" ಎಂದನು.

ಧೃತರಾಷ್ಟ್ರನ ಮುಖಭಾವ ಮತ್ತು ಧ್ವನಿಯಿಂದಲೇ ಆತನ ಹೃದಯದಲ್ಲಿ ಅಡಗಿರುವ ಕಪಟವನ್ನು ಯುಧಿಷ್ಠಿರನು ಅರಿತನು. ಆದರೂ ಮಾಡುವುದೇನು? ಈ ದೊಡ್ಡ ಸಂಸಾರದಲ್ಲಿ ತಾವು ಐವರು ಮಾತ್ರ. ಅದನ್ನೇ ಯೋಚಿಸಿದ ಯುಧಿಷ್ಠಿರನು ಕೃತಕ ಮಂದಹಾಸ ಬೀರಿ, 'ಆಗಲಿ ದೊಡ್ಡಪ್ಪ' ಎಂದನು. ಅಲ್ಲಿದ್ದ ಭೀಷ್ಮ ದ್ರೋಣಾದಿ ಹಿರಿಯರನ್ನು ನಮಿಸಿ, ವಾರಣಾವತಕ್ಕೆ ತೆರಳಲು ಆಶೀರ್ವಾದ ಕೇಳಿದನು. ಕುರು ಮುಖ್ಯರೆಲ್ಲರೂ ಪ್ರಸನ್ನವದನರಾಗಿ ಏಕಕಂಠದಿಂದ "ಪಾಂಡು ಪುತ್ರರೇ! ನಿಮಗೆ ಮಂಗಳವಾಗಲಿ ಪ್ರಯಾಣಕಾಲದಲ್ಲಿ ಪಂಚಭೂತಗಳೂ ನಿಮಗೆ ಕ್ಷೇಮವುಂಟು ಮಾಡಲಿ. ನಿಮಗೆ ಸ್ವಲ್ಪವೂ ಅಶುಭವುಂಟಾಗದಿರಲಿ" ಎಂದು ಹಾರೈಸಿದರು. ಯುಧಿಷ್ಠಿರನು ಸಭೆಗೆ ಸಾಷ್ಟಾಂಗ ನಮಸ್ಕರಿಸಿ, ಅನುಜರೊಡಗೂಡಿ ತನ್ನ ಅರಮನೆಗೆ ಬಂದು, ವಿದ್ಯುಕ್ತ ಕರ್ಮಗಳೆಲ್ಲವನ್ನೂ ಮಾಡಿ, ಸಕಲ ಸಂಭಾರಗಳೊಡನೆ, ತಾಯಿ ಹಾಗೂ ತಮ್ಮಂದಿರಿಂದ ಒಡಗೂಡಿ ವಾರಣಾವತಕ್ಕೆ ಹೊರಟನು.


ಇತ್ತ, ಪಾಂಡವರನ್ನು ಮುಗಿಸಿಯೇ ಬಿಡುವ ದುರುದ್ದೇಶವನ್ನು ಹೊಂದಿದ್ದ ದುರ್ಯೋಧನನು ಅನಿಷ್ಟ ಕ್ರಿಯೆಗಳಲ್ಲಿ ಅಗ್ರಗಣ್ಯನೆನಿಸಿದ್ದ ಪುರೋಚನನೆಂಬ ಮಂತ್ರಿಯನ್ನು ಏಕಾಂತದಲ್ಲಿ ಕಂಡು, ಆತನನ್ನು ಉಪಚರಿಸಿ, ಗೌರವಿಸಿ, ಆತನಲ್ಲಿ ಹೇಳಿದನು "ಮಹಾಮಂತ್ರಿ! ಈ ಸಕಲೈಶ್ವರ್ಯಗಳಿಂದ ಕೂಡಿದ ಕುರು ಸಾಮ್ರಾಜ್ಯವು ನನ್ನದಾಗಿರುವಂತೆ ನಿನ್ನದೂ ಆಗಿದೆ. ಅದನ್ನು ರಕ್ಷಿಸಲು ನೀನು ಸಹಕಾರ ನೀಡಬೇಕು".

"ಮಿತ್ರ! ನಿನ್ನಷ್ಟು ನಂಬಿಕಸ್ಥರು ನನಗೆ ಬೇರಾರೂ ಇಲ್ಲ. ನನ್ನ ಸಲಹೆಯನ್ನು ಕೇಳಿ ಕೂಡಲೇ ನಮ್ಮ ಶತ್ರುಗಳಾದ ಪಾಂಡವರನ್ನು ಚಾತುರ್ಯದಿಂದ ಮುಗಿಸಿಬಿಡುವ ಹೊಣೆ ನಿನ್ನದು".


"ಧೃತರಾಷ್ಟ್ರನ ಅಪ್ಪಣೆಯಂತೆ ವಾರಣಾವತಕ್ಕೆ ಹೊರಟ ಪಾಂಡವರು, ಅಲ್ಲಿಗೆ ತಲುಪುವ ಮೊದಲೇ ನೀನು ಅಲ್ಲಿಗೆ ಹೋಗಿ, ಅವರನ್ನು ಸ್ವಾಗತಿಸು. ಅವರಿಗೆ ಒಂದು ತಾತ್ಕಾಲಿಕ ವಾಸಗೃಹ ಮಾಡಿಕೊಟ್ಟು, ನಂತರ ಅವರಿಗಾಗಿ ಅರಮನೆಯೊಂದನ್ನು ನಿರ್ಮಿಸಿಕೊಡು. ಈ ಅರಮನೆಯು ಊರ ಹೊರಗಿದ್ದು ಮದ್ದು ಗುಂಡುಗಳ ಕೋಠಿಗೆ ಸಮೀಪವಿರಲಿ. ನಾನು ಹೇಳಿದ ವಸ್ತುಗಳನ್ನೇ ಬಳಸಿ, ಈ ಅರಮನೆ ನಿರ್ಮಿಸಬೇಕು".

ದುರ್ಯೋಧನನು ಮುಂದುವರಿದನು, "ಈ ಅರಮನೆ ನಿರ್ಮಾಣದಲ್ಲಿ ಬೇಗನೆ ಹೊತ್ತಿಕೊಳ್ಳುವ ಪದಾರ್ಥಗಳಾದ ಸೆಣಬು, ರಾಳಗಳನ್ನು ಬಳಸಬೇಕು. ಮಣ್ಣು, ತುಪ್ಪ, ಮರದ ಪುಡಿ, ಅರಗನ್ನು ಬಳಸಬೇಕು. ಇವುಗಳನ್ನು ಬಳಸಿದ್ದು ತಿಳಿಯದಂತೆ ಹೊರಗೆ ಗಿಲಾವು ಮಾಡಿಸಬೇಕು. ಈ ಅರಮನೆಯಲ್ಲಿ ಯಾವ ನ್ಯೂನತೆ ಇರಬಾರದು. ರಾಜಯೋಗ್ಯವಾದ, ಉತ್ತಮ ವಸ್ತುಗಳಿರಬೇಕು. ಇದರಿಂದ ಧೃತರಾಷ್ಟ್ರನು ತೃಪ್ತನಾಗುವನು. ಈ ಅರಮನೆಯಲ್ಲಿ ಕುಂತೀ ಸಮೇತರಾದ ಪಾಂಡವರು ವಾಸಿಸುವಂತೆ ಪ್ರೇರೇಪಿಸಬೇಕು. ಯಾರೊಬ್ಬರಿಗೂ ಈ ಸಂಗತಿಯು ತಿಳಿಯದಂತೆ ರಹಸ್ಯ ಕಾಪಾಡಬೇಕು. ನೀನು ಪಾಂಡವರಿಗೆ ಪೂರ್ವ ಪರಿಚಿತನಾದುದರಿಂದ ಅನುಮಾನ ಬರಲಾರದು".

"ಪಾಂಡವರು ಈ ಅರಗಿನ ಅರಮನೆಯಲ್ಲಿ ನಿಶ್ಚಿಂತರಾಗಿ ಮಲಗಿರುವರೆಂಬ ಭರವಸೆ ನಿನಗೆ ಬಂದೊಡನೆಯೇ, ಬಾಗಿಲ ಕಡೆಯಿಂದ ಬೆಂಕಿಯಿಟ್ಟುಬಿಡು ಎಚ್ಚರವಾದರೂ ಪಾಂಡವರು ಅರಮನೆಯಿಂದ ಹೊರ ಬರಲಾರದೇ ಭಸ್ಮವಾಗಿ ಹೋಗುವರು. ಪ್ರಜೆಗಳೂ ಸಹ, ಅರಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಪಾಂಡವರು ಸುಟ್ಟು ಹೋದರು ಎಂದು ಭಾವಿಸುವರು" ಎಂದನು.

Comments


bottom of page