top of page

ಕಣಿಕನ ನೀತಿ (ಮಹಾಭಾರತ‌ ಕಥಾಮಾಲೆ 48)

6 hours ago
2 min read

ಕಣಿಕನ ನೀತಿ (ಮಹಾಭಾರತ‌ ಕಥಾಮಾಲೆ 48)

ಕಣಿಕನ ನೀತಿ (ಮಹಾಭಾರತ‌ ಕಥಾಮಾಲೆ 48)

ತನಗೆ ಆಪತ್ತು ಒದಗಿದಾಗ ಹೇಗಿರಬೇಕೆಂಬುದನ್ನು ಕಣಿಕನು ಹೇಳತೊಡಗಿದನು,

"ಆಪತ್ತೆಂಬುದು ಸರ್ವಸಾಮಾನ್ಯವಾದುದು. ಅದು ಯಾರನ್ನೂ ಕೇಳಿ ಬರುವುದಿಲ್ಲ. ಜಾಗರೂಕನಾಗಿರುವವನಿಗೂ ಆಪತ್ತು ತಪ್ಪಿದ್ದಲ್ಲ. ಆಪತ್ತು ಒದಗಿದಾಗ ಶತ್ರುಗಳು ತನ್ನೀದಿರಲ್ಲಿಯೇ ತನ್ನ ಆಪ್ತರನ್ನೂ ವಿಶ್ವಾಸಿಗಳನ್ನೂ ಅವಮಾನಿಸುತ್ತಾರೆ. ಅದನ್ನು ನೋಡಿಯೂ ಕುರುಡನಂತೆ ಇರಬೇಕು. ದುರ್ಭಾಗ್ಯನನ್ನು ಅನೇಕರು ಅನೇಕ ವಿಧವಾಗಿ ತೆಗಳುತ್ತಾರೆ. ಆ ಭರ್ತ್ಸನೆಯ ವಾಕ್ಯಗಳನ್ನು ಕೇಳಿಯೂ ಕಿವುಡನಂತೆ ಇರಬೇಕು. ಪ್ರತೀಕಾರ ಮಾಡಲು ಹೋದರೆ ತನ್ನ ಪ್ರಾಣವೇ ಉಳಿಯಲಾರದು. ತಾನು ನಿರ್ಬಲನಾಗಿರುವಾಗ ತನ್ನ ಕೈಯಲ್ಲಿನ ಆಯುಧವನ್ನು ತೃಣ ಸಮಾನವಾಗಿ ಕಾಣಬೇಕು. ಸೂಕ್ತ ಸಮಯಕ್ಕಾಗಿ ಕಾದು, ಪ್ರತೀಕಾರ ತೆಗೆದುಕೊಳ್ಳಬೇಕು."

"ಶತ್ರುವು ವಶನಾದಾಗ ಆತನನ್ನು ಉಪಾಯವಾಗಿ ಸಾಯಿಸಬೇಕು. ಶರಣಾಗತನಾದ ಶತ್ರುವೆಂದು ಆತನಲ್ಲಿ ದಯೆತೋರಕೂಡದು"

"ನಿರುದ್ವಿಗ್ನೋಹಿ ಭವತಿ ನ ಹತಾಜ್ಜಾಯತೇ ಭಯಮ್|

ಹನ್ಯಾದಮಿತ್ರಂ ದಾನೇನ ತಥಾ ಪೂರ್ವಾಪಕಾರಿಣಮ್||

"ಸತ್ತು ಹೋದ ಶತ್ರುವಿನಿಂದ ಭಯವಿಲ್ಲ. ಅಮಿತ್ರರಾದವರನ್ನೂ, ಹಿಂದೆ ಅಪಕಾರ ಮಾಡಿದವರನ್ನೂ, ಅವರ ಭೃತ್ಯ ವರ್ಗದವರಿಗೆ ಧನ ನೀಡಿ ವಶಪಡಿಸಿಕೊಂಡು ವಿಷ ಪ್ರಯೋಗ ಮಾಡಿಸಿಯಾದರೂ ಕೊಲ್ಲಬೇಕು. ಏಕೆಂದರೆ, ಶತ್ರು ವಿನಾಶದಿಂದ ಮಾತ್ರ ರಾಜನು ನೆಮ್ಮದಿಯಿಂದಿರಲು ಸಾಧ್ಯ"

"ಶತ್ರುವಿನ ಪಟ್ಟಣವನ್ನು ಆಕ್ರಮಿಸಿ, ಆತನ ಐಶ್ವರ್ಯವನ್ನು ಕೊಳ್ಳೆ ಹೊಡೆಯಬೇಕು. ಶತ್ರುವಿನ ಆಪ್ತರನ್ನು ಅನ್ನದಾನ ತಾಂಬೂಲ ಧನಾದಿಗಳಿಂದ ವಶಪಡಿಸಿಕೊಂಡು, ಅವರಿಂದಲೇ ಶತ್ರುವಿನ ಮುಖಭಂಗ ಮಾಡಿ ಆತನ ಉತ್ಸಾಹ ಕುಂದಿಸಬೇಕು. ಅವನ ರಾಜಧಾನಿಯಲ್ಲಿನ ವಿಷಯಗಳನ್ನು ಗ್ರಹಿಸಬೇಕು. ಅಮಾತ್ಯ-ರಾಷ್ಟ್ರ-ದುರ್ಗ-ಕೋಶ-ದಂಡ ಇವೇ ರಾಜನ ಸತ್ವಗಳು. ಇವುಗಳನ್ನು ಸಾಮ-ದಾನ-ಭೇದ-ದಂಡ, ಉದ್ಬಂಧನ-ವಿಷ-ವಹ್ನಿ ಇವುಗಳ ಬಳಕೆಯಿಂದ ನಾಶಪಡಿಸಬೇಕು ಹೀಗೆ ಶತ್ರುವು ತಲೆಯೆತ್ತದಂತೆ ಮಾಡಬೇಕು".

"ದೊಡ್ಡ ಮರದ ಬುಡವೇ ಕತ್ತರಿಸಲ್ಪಟ್ಟರೆ, ಕೊಂಬೆಗಳೂ, ಚಿಗುರೆಲೆಗಳೂ ಇರಲು ಅಸಾಧ್ಯ. ಅಂತೆಯೇ, ಮುಖ್ಯ ಶತ್ರುವನ್ನೇ ವಿನಾಶ ಮಾಡಿದ ಮೇಲೆ, ಆತನ ಆಪ್ತರನ್ನು ಸುಲಭವಾಗಿ ನಿರ್ಮೂಲ ಮಾಡಬಹುದು".


"ಏಕಾಗ್ರಾಃ ಸ್ಯಾದವಿವೃತೋ ನಿತ್ಯಂ ವಿವರ ದರ್ಶಕಃ|

ರಾಜನ್ನಿತ್ಯಂ ಸಪತ್ನೇಷು ನಿತ್ಯೋದ್ವಿಗ್ನಃ ಸಮಾಚರೇತ್||


"ಶತ್ರುಗಳ ನಿರ್ಮೂಲನೆಯನ್ನು ಏಕಾಗ್ರತೆಯಿಂದ ಸಾಧಿಸಬೇಕು. ಯಾರ ಬಳಿಯೂ ತನ್ನ ಮನದಿಂಗಿತವನ್ನು ಹೇಳಬಾರದು. ಶತ್ರುವಿನ ವಿವರಗಳನ್ನು ಸದಾ ಸಂಗ್ರಹಿಸುತ್ತಲೇ ಇರಬೇಕು. ವೈರಿಯ ವಿಷಯದಲ್ಲಿ ಸದಾ ಉದ್ವಿಗ್ನನಾಗಿಯೇ ಇರಬೇಕು ಹೊರತು ಶತ್ರುವು ತನ್ನನ್ನು ಏನೂ ಮಾಡಲಾರ ಎಂಬ ಭ್ರಾಂತಿಯಿಂದ ಆಲಸ್ಯವನ್ನು ತಳೆಯಬಾರದು. ಶತ್ರುವು ಸಂಪೂರ್ಣ ನಿರ್ಮೂಲನಾಗುವವರೆಗೂ ದೇಶಕ್ಕಾಗಲಿ, ರಾಜನಿಗಾಗಲಿ, ಯಾವ ವಿಧವಾದ ಶಾಂತಿ ಸಮಾಧಾನಗಳೂ ಲಭಿಸಲಾರವು".


"ಶತ್ರು ವಿನಾಶಕ್ಕೆ ಬೇಕಾಗಿ ಕಾಲ ಕಾಲಕ್ಕೆ ಅನೇಕ ಸೋಗುಗಳನ್ನು ಹಾಕುತ್ತಲೇ ಇರಬೇಕು. ಅಗ್ನಿ ಹೋತ್ರಾದಿಗಳನ್ನೂ, ಯಜ್ಞ ಯಾಗಾದಿಗಳನ್ನೂ ಸಮಯವರಿತು ಮಾಡಬೇಕು. ತ್ಯಾಗದ ದ್ಯೋತಕವಾದ ಕಾಷಾಯ ವಸ್ತ್ರ, ಜಟೆ, ಕೃಷ್ಣಾಜಿನ ಧಾರಣೆಯನ್ನೂ ಮಾಡಿ, ಪ್ರಜೆಗಳ ವಿಶ್ವಾಸ ಗಳಿಸಿಕೊಳ್ಳಬೇಕು. ಸೂಕ್ತ ಸಮಯ ಸಿಕ್ಕಿದಾಗ, ತೋಳವು ಕುರಿಗಳ ಮೇಲೆ ಬೀಳುವಂತೆ ಶತ್ರುವಿನ ಮೇಲೆ ಬಿದ್ದು ಆತನನ್ನು ಧ್ವಂಸ ಮಾಡಬೇಕು".


"ಶೌಚಾ ಸದಾಚಾರಗಳನ್ನೂ ಜನಾಕರ್ಷಣೆ ಮತ್ತು ಧನಾರ್ಜನೆಯ ಸಾಧನವಾಗಿ ಬಳಸಬೇಕು. ಕೆಲವೊಮ್ಮೆ ವಿನಮ್ರತೆಯ ಪ್ರದರ್ಶನದಿಂದ ಉಪಾಯವಾಗಿ ಜನರ ಧನವನ್ನು ಸೆಳೆದುಕೊಳ್ಳಬೇಕು".


ಕಣಿಕನು ಮುಂದುವರಿದನು, "ಕೋಪ ತಾಪಗಳಿಗೆ ಮನಸೋತು ಅಕಾಲದಲ್ಲಿ ಶತ್ರುವಿನ ಧ್ವಂಸಕ್ಕೆ ಪ್ರಯತ್ನಿಸಬಾರದು. ಕಾಲವು ಅನುಕೂಲಕರವಾಗುವವರೆಗೆ ಇಂತಹವರ ಮೇಲೆ ತನಗೆ ಶತ್ರುತ್ವವಿದೆ ಎಂಬುದನ್ನೇ ತೋರಗೊಡಬಾರದು. ಶತ್ರುವನ್ನಾದರೂ ಸರಸದಿಂದಲೇ ಮಾತನಾಡಿಸಬೇಕು. ಹೆಗಲ ಮೇಲೆ ಹೊತ್ತುಕೊಳ್ಳಬೇಕು. ಕಾಲವು ಪಕ್ವವಾದಾಗ, ಮಡಿಕೆಯನ್ನು ಕಲ್ಲಿನ ಮೇಲೆ ಕುಕ್ಕಿ ಒಡೆದು ಹಾಕುವಂತೆ ಕೆಳಕ್ಕೆ ಕೆಡವಿ ಧ್ವಂಸಗೊಳಿಸಬೇಕು".


ತನ್ನ ಯೋಚನೆಗಳನ್ನೇ ಕಣಿಕನು ಪುಷ್ಟೀಕರಿಸುತ್ತಿದ್ದನಾದ ಕಾರಣ ಅರಳಿದ ಮುಖ ಹೊಂದಿದ ಧೃತರಾಷ್ಟ್ರನು ಆಸಕ್ತಿಯಿಂದ ಮುಖ ಕೇಳುತ್ತಿದ್ದನು. ಕಣಿಕನು ಮುಂದುವರಿಯುತ್ತಾ, "ಶತ್ರು ಸಂಹಾರಕ್ಕೆ ಇಂತಹುದೇ ಮಾರ್ಗ ಅನುಸರಿಸಬೇಕೆಂಬ ನಿಯಮವಿಲ್ಲ. ಸರ್ವ ಉಪಾಯಗಳನ್ನು ವಿನಿಯೋಗಿಸಿಯಾದರೂ ಶತ್ರುವಿನ ವಿನಾಶವನ್ನು ಸಾಧಿಸಬೇಕು" ಎಂದನು.

Comments


bottom of page