top of page

ಧೃತರಾಷ್ಟ್ರನಿಗೆ ಕಣಿಕನ ಉಪದೇಶ (ಮಹಾಭಾರತ ಕಥಾಮಾಲೆ 47)

20 hours ago
2 min read

ಧೃತರಾಷ್ಟ್ರನಿಗೆ ಕಣಿಕನ ಉಪದೇಶ (ಮಹಾಭಾರತ ಕಥಾಮಾಲೆ 47)


ಸಹದೇವನು ಸುರಗುರುವಾದ ಬೃಹಸ್ಪತಿಯ ನೀತಿ ಶಾಸ್ತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದನು. ನಕುಲನು ಎಲ್ಲರ ಅಚ್ಚುಮೆಚ್ಚಿನವನಾಗಿ, ಸುಂದರನಾಗಿದ್ದನು. ಅವನು ದ್ರೋಣರಲ್ಲಿ ಧನುರ್ವಿದ್ಯೆಯನ್ನು ಅಧ್ಯಯನ ಮಾಡಿ, 'ಚಿತ್ರಯೋಧಿ' ಎಂದು ಪ್ರಸಿದ್ಧನಾಗಿ, ಅತಿರಥನೆನಿಸಿದನು.

ಮೂರು ವರ್ಷಗಳ ಯಜ್ಞ ಫಲದಿಂದಾಗಿ ಗಂಧರ್ವರನ್ನೂ ಹಿಮ್ಮೆಟ್ಟಿಸಿದ್ದ ಸೌವೀರ ರಾಜನನ್ನು ಪಾಂಡವರು ಅರ್ಜುನನ ಮುಂದಾಳ್ತನದಲ್ಲಿ ಯುದ್ಧದಲ್ಲಿ ಹಿಮ್ಮೆಟ್ಟಿಸಿ, ಸಂಹರಿಸಿದರು, ಮಹಾವೀರರೆನಿಸಿದರು. ಸೌವೀರ ದೇಶದಲ್ಲಿದ್ದ, ಕುರುವಂಶವನ್ನು ತಾತ್ಸಾರದಿಂದ ಕಾಣುತ್ತಿದ್ದ ವಿಪುಲನೆಂಬ ಮತ್ತೊಬ್ಬ ರಾಜನೂ ಅರ್ಜುನನ ಪ್ರಭಾವದ ಮುಂದೆ ಮಂಕಾದನು. ಕುರುವಂಶದ ಸಾರ್ವಭೌಮತ್ವವನ್ನು ಅಂಗೀಕರಿಸಿದನು. ಸೌವೀರದ ಮತ್ತೊಬ್ಬ ರಾಜನಾದ ಸುಮಿತ್ರನು ಮದಾಂಧನಾಗಿ ಮೆರೆಯುತ್ತಿದ್ದನು. ದತ್ತಾ ಮಿತ್ರನೆಂಬ ಖ್ಯಾತಿಯನ್ನೂ ಅವನು ಗಳಿಸಿದ್ದನು. ಆತನೂ ಸಹ ಪಾರ್ಥನಿಂದ ಪರಾಜಿತನಾದನು.

ಪಾಂಡುವಿನಿಂದಲೂ ಸೋಲಿಸಲು ಅಸಾಧ್ಯವಾಗಿಯೇ ಉಳಿದಿದ್ದ, ಸೊಕ್ಕಿನಿಂದ ಮೆರೆಯುತ್ತಿದ್ದ ಯುವನರಾಜನನ್ನು ಅರ್ಜುನನು ಸೋಲಿಸಿ, ತನ್ನ ಆಶ್ರಿತನಾಗಿ ಮಾಡಿಕೊಂಡನು.

ಭೀಮಾರ್ಜುನರು ಪೂರ್ವ ದಕ್ಷಿಣ ದಿಕ್ಕುಗಳೆಡೆಗೆ ಚೈತ್ರ ಯಾತ್ರೆ ಕೈಗೊಂಡು, ಅಲ್ಲಿನ ರಾಜರನ್ನೆಲ್ಲ ಜಯಿಸಿ, ಕಪ್ಪ ಕಾಣಿಕೆಗಳನ್ನು ಸಂಗ್ರಹಿಸಿ, ಕುರುರಾಷ್ಟ್ರದ ಬೊಕ್ಕಸವು ಸಂಪದ್ಭರಿತವಾಗುವಂತೆ ಮಾಡಿದರು. ಕುರುಜಾಂಗಲವನ್ನು ಅಭಿವೃದ್ಧಿಪಡಿಸಿದರು. ಕುರು ರಾಷ್ಟ್ರವು ಮತ್ತೊಮ್ಮೆ ಚಕ್ರವರ್ತಿ ಪೀಠವೆಂಬುದು ಸಿದ್ಧವಾಯಿತು.

ಹೀಗೆ ಯುಧಿಷ್ಠಿರನು ಯುವರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಪಾಂಡವರ ಕೀರ್ತಿಯು ದಶದಿಕ್ಕುಗಳಲ್ಲಿಯೂ ಪಸರಿಸಿತು. ಪ್ರಜೆಗಳ ಪ್ರೀತ್ಯಾದರಗಳಿಗೆ ಪಾಂಡವರು ಪಾತ್ರರಾದರು.

ಪಾಂಡವರ ಈ ಏಳ್ಗೆಯನ್ನು ಕಂಡು ಧೃತರಾಷ್ಟ್ರನು ಮಾತ್ರ ಚಿಂತಿತನೇ ಆದನು. ಅಸೂಯೆಯನ್ನು ಆತ ತಾಳಿ, ರಾತ್ರಿಯ ನಿದ್ದೆಯನ್ನೂ ಸರಿಯಾಗಿ ಮಾಡದಾದನು. ಪಾಂಡವರು ತನ್ನ ಮಕ್ಕಳಿಗಿಂತಲೂ ಮಿಗಿಲಾದ ಜೌನ್ನತ್ಯವನ್ನು ಹೊಂದುತ್ತಿರುವುದು ಆತನ ಪಾಲಿಗೆ ನುಂಗಲಾರದ ತುತ್ತಾಗಿತ್ತು.


ಧೃತರಾಷ್ಟ್ರನ ಬಳಿಯಲ್ಲಿ 'ಕಣಿಕ' ನೆಂಬ ಅಮಾತ್ಯ ಶ್ರೇಷ್ಠನೊಬ್ಬನಿದ್ದನು. ಆತನು ರಾಜ ನೀತಿಜ್ಞನೂ ಆಗಿದ್ದನು. ಧೃತರಾಷ್ಟ್ರನು ತನ್ನಲ್ಲಿ ಉಂಟಾಗುತ್ತಿರುವ ತಳಮಳವನ್ನು ತಾಳಲಾರದೆ, ತನ್ನ ವಿಶ್ವಾಸಿಕನಾದ ಈ ಬ್ರಾಹ್ಮಣನನ್ನು ಕರೆದು, ಏಕಾಂತದಲ್ಲಿ ಆತನೊಡನೆ ಮಾತನಾಡಿದನು. ತನ್ನಲ್ಲಿ ಪಾಂಡವರ ಉತ್ಕರ್ಷದ ಕಾರಣದಿಂದ ಉಂಟಾಗುತ್ತಿರುವ ಮಾತ್ಸರ್ಯದ ದಾವಾಗ್ನಿಯು ಹೃದಯವನ್ನು ಸುಡುತ್ತಿರುವ ಕುರಿತಾಗಿ ವಿವರಿಸಿದನು. ಪಾಂಡವರೊಡನೆ ತಾನು (ಧೃತರಾಷ್ಟ್ರನು) ಅನುಸರಿಸಬೇಕಾದ ನೀತಿ ಯಾವುದೆಂದು ಪ್ರಶ್ನಿಸಿದನು.


ಧೃತರಾಷ್ಟ್ರನಿಗೆ ಕಣಿಕನ ಉಪದೇಶ (ಮಹಾಭಾರತ ಕಥಾಮಾಲೆ 47)

ಧೃತರಾಷ್ಟ್ರನಿಂದ ಪರಿಪ್ರಷ್ಠನಾದ, ಕುಶಲ ರಾಜನೀತಿಜ್ಞನಾದ ಕಣಿಕನು, ಬಹು ಕಠೋರವಾದ ರಾಜ ನೀತಿಯ ಸಿದ್ಧಾಂತವನ್ನು ಹೇಳತೊಡಗಿದನು. ಕಣಿಕನು ರಾಜರಾದವರು ಶತ್ರುಗಳ ವಿಷಯದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಕೂಲಂಕಷವಾಗಿ ಹೇಳುತ್ತಾನೆ. 'ಪಾಂಡವರೇ ನಿನ್ನ ಶತ್ರಗಳು' ಎಂದು ಆತ ನೇರವಾಗಿ ಹೇಳದಿದ್ದರೂ, 'ಪಾಂಡು ಪುತ್ರೇಭ್ಯಃ ಆತ್ಮಾನಂ ರಕ್ಷ' 'ಪರಾಕ್ರಮಿಗಳಾದ ಪಾಂಡು ಪುತ್ರರಿಂದ ನಿನ್ನನ್ನು ರಕ್ಷಿಸಿಕೋ' ಎಂಬ ಕಣಿಕನ ಮಾತು ಅದೇ ಅಭಿಪ್ರಾಯವನ್ನು ಧೃತರಾಷ್ಟ್ರನಲ್ಲಿ ದೃಢವಾಗಿಸಿತು. ಈಗಾಗಲೇ ಪಾಂಡವರ ಕುರಿತಾಗಿ ಅಸೂಯಾಪರನಾಗಿ, ಅವರನ್ನು ನಾಶಮಾಡಬೇಕೆಂದು ಯತ್ನಿಸುತ್ತಿದ್ದ ದುರ್ಯೋಧನನ ಯೋಜನೆಗಳಿಗೆ ಧೃತರಾಷ್ಟ್ರನು ಒತ್ತಾಸೆಯಾಗಿ ನಿಲ್ಲಲು ಕಣಿಕನ ಈ ಉಪದೇಶಗಳೇ ಕಾರಣವಾದವು.

"ಮಹಾರಾಜ! ನಾನು ಹೇಳುವುದನ್ನು ಏಕಾಗ್ರತೆಯಿಂದ ಕೇಳಿ, ತಮಗೆ ಸೂಕ್ತ ಕಂಡಂತೆ ಮಾಡಬಹುದು. ರಾಜನೀತಿಯನ್ನು ಅನುಸರಿಸಿ ಹೇಳುವ ನನ್ನ ಮಾತುಗಳು ತಮಗೆ ಸಹ್ಯವಾಗಲೀ, ಅಸಹ್ಯವಾಗಲೀ ನನ್ನಲ್ಲಿ ದೋಷವೆಣಿಸಬಾರದು" ಎಂದು ಪ್ರಾರ್ಥಿಸಿ, ಕಣಿಕನು ಪ್ರಾರಂಭಿಸಿದನು.


"ರಾಜನಾದವನು ಕತ್ತಿಯನ್ನು ಒರೆಯಿಂದ ಹೊರ ತೆಗೆದೇ ನಿಂತಿರಬೇಕು. ತನ್ನ ಪರಾಕ್ರಮವನ್ನು ಸದಾಕಾಲ ಪ್ರದರ್ಶಿಸುತ್ತಿರಬೇಕು. ತಮ್ಮಲ್ಲಿನ ನ್ಯೂನತೆಗಳು ಬಹಿರಂಗವಾಗದಂತೆ ನೋಡಿಕೊಳ್ಳಬೇಕು ಹಾಗೂ ಶತ್ರುವಿನ ನ್ಯೂನತೆಗಳನ್ನು ತಿಳಿದುಕೊಳ್ಳಬೇಕು".

"ಯಾವಾಗಲೂ ಮೇಲೆ ಬೀಳುವ ಸ್ವಭಾವದಿಂದಿರುವ ರಾಜನನ್ನು ಕಂಡರೆ ಎಲ್ಲರೂ ಭಯ ಪಡುವರು. ರಾಜನಾದವನು ದಂಡದ ಮೂಲಕವಾಗಿಯೇ ಕಾರ್ಯಗಳನ್ನೆಲ್ಲ ಸಾಧಿಸಬೇಕು" ಎಂದು ಕಣಿಕನು ನುಡಿದನು.

ಇಲ್ಲಿ, ದಂಡವೆಂದರೆ ಶಿಕ್ಷೆ. ಕಠಿಣ ಶಿಕ್ಷೆಯನ್ನು ಕೊಡುವ ರಾಜನ ಕುರಿತಾಗಿ ಭಯವಿರುತ್ತದೆ. ಅಂತವನನ್ನು 'ಕ್ರೂರೀ' ಎಂದೂ ಕರೆಯುತ್ತಾರೆ. ಶಿಕ್ಷೆಯು ಕ್ರೂರವಾದಷ್ಟೂ ಅಪರಾಧಗಳು ಕಡಿಮೆಯಾಗುತ್ತವೆ. ಮಾನವೀಯತೆಯಿಂದಲೂ, ಅನುಕಂಪದಿಂದಲೂ ಅಪರಾಧಿಗಳನ್ನು ಸರಿಯಾಗಿ ಶಿಕ್ಷಿಸದೇ ಇರುವುದರಿಂದ ಅನರ್ಥಗಳು ಉಂಟಾಗುತ್ತವೆ. ಕಣಿಕನು ಮುಂದುವರಿದನು, "ಶತ್ರುಗಳನ್ನು ಸಂಪೂರ್ಣವಾಗಿ ವಿನಾಶ ಮಾಡುವುದು ರಾಜನ ಕರ್ತವ್ಯ. ಶತ್ರುವು ಆಪತ್ತಿನಲ್ಲಿದ್ದಾನೆಂದು ಕರುಣೆ ತೋರದೆ, ಸಂಹರಿಸಬೇಕು. ಭೇದೊಪಾಯ, ಪರಾಕ್ರಮ, ಯುದ್ಧ, ಪಲಾಯನ ಇವುಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ, ಶತ್ರು ವಧೆಯನ್ನು ಸಾಧಿಸಬೇಕು."

Comments


bottom of page