top of page

ಯುಧಿಷ್ಠಿರನ ಯೌವರಾಜ್ಯಾಭಿಷೇಕ (ಮಹಾಭಾರತ ಕಥಾಮಾಲೆ 46)

7 hours ago
2 min read

ಯುಧಿಷ್ಠಿರನ ಯೌವರಾಜ್ಯಾಭಿಷೇಕ (ಮಹಾಭಾರತ ಕಥಾಮಾಲೆ 46)

ದ್ರುಪದನು ದ್ರೋಣರಲ್ಲಿ ಹೇಳಿದನು "ಬ್ರಾಹ್ಮಣೋತ್ತಮ! ಪರಾಕ್ರಮಿಗಳೂ, ಮಹಾತ್ಮರೂ ಆದವರು ಹೇಳಬಹುದಾದ ಮಾತುಗಳನ್ನು ನೀನು ಹೇಳಿದೆ. ನಾನು ನಿನ್ನ ವಿಷಯದಲ್ಲಿ ಸುಪ್ರೀತನೂ ಕೃತಜ್ಞನೂ ಆಗಿದ್ದೇನೆ. ನಿನ್ನೊಡನೆ ಶಾಶ್ವತವಾದ ಮೈತ್ರಿಯನ್ನು ಅಪೇಕ್ಷಿಸುತ್ತೇನೆ".


ಈ ಮಾತುಗಳಿಂದ ಪ್ರೀತಾತ್ಮರಾದ ದ್ರೋಣರು ದ್ರುಪದನನ್ನು ಬಂಧಮುಕ್ತಗೊಳಿಸಿದರು. ರಾಜೋಚಿತವಾಗಿ ಸತ್ಕರಿಸಿ, ಅರ್ಧರಾಜ್ಯವನ್ನೂ ವಹಿಸಿಕೊಟ್ಟರು. ಈಗ ದ್ರುಪದನು ಗಂಗಾನದಿಯ ದಕ್ಷಿಣ ಭಾಗದ ಚರ್ಮಣ್ವತೀ ನದಿಯವರೆಗೂ ವ್ಯಾಪಿಸಿದ್ದ ದಕ್ಷಿಣ ಪಾಂಚಾಲ ರಾಜ್ಯಕ್ಕೆ ರಾಜನಾದನು. ಈ ಪ್ರದೇಶವು ಪ್ರಜೆಗಳಿಂದ ನಿಬಿಡವಾದುದಾಗಿತ್ತು. ನಗರಗಳಲ್ಲಿ ಶ್ರೇಷ್ಠವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಂಪಿಲ್ಯ ನಗರವನ್ನು ಹೊಂದಿತ್ತು. ಮಾಕಂದೀ ಎಂಬ ಇನ್ನೊಂದು ನಗರವೂ ಇತ್ತು.

ದ್ರೋಣರೊಂದಿಗೆ ದ್ರುಪದನು ಕೃತಜ್ಞತೆಯ ಸ್ನೇಹದ ಮಾತುಗಳನ್ನಾಡಿದ್ದನಾದರೂ ಹೃದಯವು ಮಾತ್ರ ಬಹಳ ಕಠೋರವಾಗಿಯೇ ಇತ್ತು. ತನ್ನ ಕ್ಷಾತ್ರ ಬಲದಿಂದ ಬ್ರಾಹ್ಮಣನನ್ನು ಪರಾಜಯಗೊಳಿಸಲು ಅಸಾಧ್ಯವೆಂಬುದೂ ನಿಶ್ಚಿತವಾಗಿತ್ತು. ದ್ರೋಣರನ್ನು ಪರಾಜಯಗೊಳಿಸಬಲ್ಲ ಪುತ್ರನೊಬ್ಬನನ್ನು ಪಡೆಯಬೇಕೆಂಬ ಆಶಯವು ದ್ರುಪದನಲ್ಲಿ ಉಂಟಾಯಿತು.

ದ್ರೋಣರು ತಾವು ಗೆದ್ದಿದ್ದ ಪಾಂಚಾಲ ದೇಶದಲ್ಲಿ ಗಂಗಾನದಿಯ ಉತ್ತರ ತೀರದ ಉತ್ತರ ಪಾಂಚಾಲ ದೇಶವನ್ನು ಪರಿಪಾಲಿಸತೊಡಗಿದರು. 'ಅಹಿಚ್ಛತ್ರ' ಎಂಬ ನಗರವು ಅದರ ರಾಜಧಾನಿಯಾಗಿದ್ದಿತು. ಹೀಗೆ ಅಹಿಚ್ಛತ್ರ ನಗರವು ಪಾರ್ಥನಿಂದ ಜಯಿಸಲ್ಪಟ್ಟು, ಗುರುದಕ್ಷಿಣೆಯ ರೂಪದಲ್ಲಿ ದ್ರೋಣರಿಗೆ ಕೊಡಲ್ಪಟ್ಟಿತು.


ಯುಧಿಷ್ಠಿರನ ಯೌವರಾಜ್ಯಾಭಿಷೇಕ (ಮಹಾಭಾರತ ಕಥಾಮಾಲೆ 46)

ಒಂದು ವರ್ಷವು ಕಳೆಯಿತು. ಪ್ರಜೆಗಳ ಅನುರಾಗಕ್ಕೆ ಪಾತ್ರನಾಗಿದ್ದ ಯುಧಿಷ್ಠಿರನಿಗೆ ಧೃತರಾಷ್ಟ್ರನು ಯೌವರಾಜ್ಯಾಭಿಷೇಕವನ್ನು ಮಾಡಿದನು. ಯುಧಿಷ್ಠಿರನು

"ಧೃತಿಸ್ಥೈರ್ಯಸಹಿಷ್ಣುತ್ವಾದಾನೃಶಂಸ್ಯಾತ್ತಥಾರ್ಜವಾತ್ |

ಭೃತ್ಯಾನಾಮನುಕಂಪಾರ್ಥಂ ತಥೈವ ಸ್ಥಿರಸಾಹೃದಾತ್ ||"

ಧೃತಿ, ಸ್ಥೈರ್ಯ, ಕ್ಷಮೆ, ಅನಿಷ್ಠುರತೆ, ಋಜುತ್ವ ಮುಂತಾದ ಸದ್ಗುಣಗಳಿಂದ ಕೂಡಿದವನೂ, ಪ್ರಜೆಗಳ ವಿಷಯದಲ್ಲಿ ಸ್ಥಿರವಾದ ಸೌಹಾರ್ದಭಾವ ಹೊಂದಿದವನೂ ಆಗಿದ್ದನು. ಆದ್ದರಿಂದ ಪ್ರಜಾಪ್ರೀತಿಗೆ ಪಾತ್ರನಾಗಿದ್ದನು. ಆದ್ದರಿಂದಲೇ ಧೃತರಾಷ್ಟ್ರನು ಯುಧಿಷ್ಠಿರನನ್ನು ಯುವರಾಜನನ್ನಾಗಿ ಮಾಡಿದನು.

ಸದಾಚಾರ, ಸದ್ವ್ಯವಹಾರ, ಪ್ರಜಾಪಾಲನೆಯಲ್ಲಿನ ಏಕಾಗ್ರತೆ ಇವುಗಳಿಂದಾಗಿ ಯುಧಿಷ್ಠಿರನು ತನ್ನ ತಂದೆಯಾದ ಪಾಂಡುವಿನಂತೆಯೇ ಕೀರ್ತಿವಂತನಾದನು. ಭೀಮನು ಬಲರಾಮನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ಗದಾಯುದ್ಧ, ಖಡ್ಗಯುದ್ಧ ಮತ್ತು ರಥಯುದ್ಧಗಳಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆದು ಅಪಾರ ಬಲಶಾಲಿ ಎನಿಸಿದನು.

ದೃಢಮುಷ್ಠಿ, ಲಾಘವ, ಲಕ್ಷ್ಯವೇಧ ಇವುಗಳಲ್ಲಿ ಪಾರ್ಥನು ಅಗ್ರಗಣ್ಯನೆನಿಸಿದನು. ಕ್ಷುರ, ನಾರಾಚ, ಭಲ್ಲ, ವಿಪಾಠಗಳ ಪ್ರಯೋಗಗಳಲ್ಲಿ ಪರಿಣಿತನೆನಿಸಿದ್ದನು.

( ಕ್ಷುರಃ - ನಾಪಿತನ ಕತ್ತಿ. ಅದರಂತೆ, ಬಾಣದ ಒಂದು ಭಾಗದಲ್ಲಿ ಅಲುಗು ಇರುವುದಕ್ಕೆ ಕ್ಷುರವೆಂದು ಹೆಸರು.

ನಾರಾಚಃ - ನೆಟ್ಟಗಿದ್ದು ಆಗ್ರಭಾಗವು ಚೂಪಾಗಿ ಲೋಹಮಯವಾಗಿರುವುದಕ್ಕೆ ನಾರಾಚವೆಂದು ಹೆಸರು.

'ನಾರಾಚೋ ಲೋಹ ಸಾಯಕೇ'

ಭಲ್ಲ - ತುದಿಯಲ್ಲಿ ಅರ್ಧಚಂದ್ರಾಕಾರವಿರುವ ಬಾಣ.

ವಿಪಾಠಾಃ - ನೆಲವನ್ನು ಅಗೆಯುವ ಖನಕ ಅಥವಾ ಪಿಕಾಸಿಯಂತಿರುವ ಬಾಣ.)

ಒಂದು ದಿನ ದ್ರೋಣರು ರಾಜಕುಮಾರರ ನಡುವೆ ಕುಳಿತಿದ್ದ ಅರ್ಜುನನನ್ನು ಉದ್ದೇಶಿಸಿ,

"ಅರ್ಜುನ! ಅಗಸ್ತ್ಯ ಶಿಷ್ಯರಾದ ಅಗ್ನಿವೇಶರೆಂಬ ಧನುರ್ವಿದ್ಯಾ ಪಾರಂಗತರು ನನ್ನ ಆಚಾರ್ಯರು. ಬಹುಕಾಲದ ಶಿಷ್ಯತ್ವದಿಂದ ಅವರಲ್ಲಿದ್ದ ಬ್ರಹ್ಮಶಿರವೆಂಬ ಮಹಾಸ್ತ್ರವನ್ನು ನಾನು ಪಡೆದೆನು. ನನ್ನ ಪರಮ ಶಿಷ್ಯನಾದ ನೀನು ನನ್ನಿಂದ ಈ ಅಪ್ರತಿಹತವಾದ ಅಸ್ತ್ರದ ಉಪದೇಶವನ್ನು ಪಡೆದಿರುವೆ. ಅದನ್ನು ಸ್ವೀಕರಿಸಿದ ನೀನು ನನಗೊಂದು ಗುರುದಕ್ಷಿಣೆಯನ್ನು ಸಲ್ಲಿಸಬೇಕು" ಎಂದರು.

ಒಡನೆಯೇ ಗುರುಗಳ ಪಾದಕ್ಕೆರಗಿದ ಅರ್ಜುನನು, ಗುರುಗಳು ಕೇಳುವ ಗುರುದಕ್ಷಿಣೆಯನ್ನು ಅರ್ಪಿಸಲು ಸಿದ್ಧನಿರುವುದಾಗಿ ತಿಳಿಸಿದನು.

ದ್ರೋಣರು,

"ಯುದ್ಧೇಹಂ ಪ್ರತಿಯೋದ್ಧವ್ಯೋ ಯುಧ್ಯಮಾನಸ್ತ್ವಯಾನಘ"

"ಅನಘನೇ! ನಾನು ನಿನ್ನೊಡನೆ ಯುದ್ಧಕ್ಕೆ ನಿಂತಾಗ, ನೀನೂ ನನಗೆ ಎದುರಾಗಿ ನಿಂತು ಯುದ್ಧ ಮಾಡಲೇಬೇಕು" ಎಂದು ಹೇಳಿದರು.

ತ್ರಿಕಾಲಜ್ಞಾನಿಗಳಾದ ದ್ರೋಣರು, ತಾವು ದುರ್ಯೋಧನನ ಕಡೆಯಲ್ಲಿರುವುದರಿಂದ ತಮಗೂ ಅರ್ಜುನನಿಗೂ ಭವಿಷ್ಯದಲ್ಲಿ ಯುದ್ಧವು ಸಂಭವಿಸುವುದೆಂದು ಅರಿತಿದ್ದರು. ಅರ್ಜುನನು ಗುರುಭಕ್ತಿಯ ಕಾರಣದಿಂದ ತನ್ನಲ್ಲಿ ಯುದ್ಧ ಮಾಡಲು ಹಿಂಜರಿದರೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲೆಂದೇ ಎಲ್ಲರ ಸಮ್ಮುಖದಲ್ಲಿ ಅರ್ಜುನನಲ್ಲಿ ಈ ಬೇಡಿಕೆಯನ್ನು ಮುಂದಿಟ್ಟರು.

ಅರ್ಜುನನು ಗುರುಗಳ ಈ ಮಾತಿಗೆ, ಸ್ಥಿರಚಿತ್ತದಿಂದಲೇ ಉತ್ತರಿಸಿದನು

"ತಮ್ಮ ಇಚ್ಛೆಯು ಹಾಗಿರುವುದಾದರೆ, ತಾವು ಅದರಿಂದಲೇ ಸುಪ್ರೀತರಾಗುವಿರಾದರೆ, ತಾವು ಹೇಳಿದಂತೆಯೇ ಮಾಡುವೆನು" ಎಂದನು.

Comments


bottom of page