top of page

ದ್ರುಪದನನ್ನು ಸೆರೆಹಿಡಿದುದು (ಮಹಾಭಾರತ ಕಥಾಮಾಲೆ 45)

ದ್ರುಪದನನ್ನು ಸೆರೆಹಿಡಿದುದು (ಮಹಾಭಾರತ ಕಥಾಮಾಲೆ 45)

ಅರ್ಜುನನ ಬಾಣಗಳ ತೀಕ್ಷ್ಣತೆಗೆ ತುತ್ತಾಗಿ ಹತರಾಗುತ್ತಿದ್ದ ತನ್ನ ಸೇನೆಯನ್ನು ಕಂಡು ಸ್ವತಃ ಪಾಂಚಾಲ (ದ್ರುಪದ) ನೇ ತನ್ನ ಸೇನಾ ನಾಯಕನಾದ ಸತ್ಯಜಿತನೊಡಗೂಡಿ ಅರ್ಜುನನ ಮುಂದೆ ಬಂದು ನಿಂತನು.


ಪಾಂಚಾಲ ಪಾರ್ಥರ ನಡುವೆ ಭಯಂಕರ ಯುದ್ಧವು ನಡೆಯಿತು. ಪಾರ್ಥನು ತನ್ನ ಶರವರ್ಷಗಳಿಂದ ಪಾಂಚಾಲವನ್ನು ಸೆರೆ ಹಿಡಿಯಲು ಮುಂದಾದನು. ಈ ಸನ್ನಾಹವನ್ನು ಕಂಡು ಸತ್ಯಜಿತನು ಮಧ್ಯದಲ್ಲಿ ನುಗ್ಗಿ ಬಂದನು. ಅರ್ಜುನನೊಡನೆ ಹೋರಾಟದಲ್ಲಿ ತೊಡಗಿದನು. ಅರ್ಜುನನು ಸತ್ಯಜಿತನ ಶರೀರದಲ್ಲಿ ಆಳವಾಗಿ ನಾಟಿಕೊಳ್ಳುವಂತೆ ದಶ ಶರಗಳನ್ನು ಪ್ರಯೋಗಿಸಿದನು. ಅದನ್ನು ಸಹಿಸಿಕೊಂಡ ಸತ್ಯಜಿತನು ಪಾರ್ಥನ ಮೇಲೆ ಶತ ಶರಗಳನ್ನು ಪ್ರಯೋಗಿಸಿದನು. ಪಾರ್ಥನು ತನ್ನ ಬಾಣಗಳ ಮೂಲಕ ಸತ್ಯಜಿತನ ಧನುಸ್ಸನ್ನೇ ಕತ್ತರಿಸಿಬಿಟ್ಟನು. ಆದರೂ ಹಿಂಜರಿಯದ ಸತ್ಯಜಿತನು ಮತ್ತೊಂದು ಧನುಸ್ಸನ್ನು ತೆಗೆದುಕೊಂಡು, ದ್ರುಪದನ ಕಡೆಗೆ ವೇಗವಾಗಿ ಹೊರಟಿದ್ದ ಪಾರ್ಥನನ್ನು ತಡೆದು, ಪಾರ್ಥನನ್ನೂ, ಪಾರ್ಥನ ಸಾರಥಿಯನ್ನೂ, ರಥಕ್ಕೆ ಹೂಡಿದ್ದ ಕುದುರೆಗಳನ್ನೂ ತೀಕ್ಷ್ಣ ಶರಗಳಿಂದ ಘಾಸಿಗೊಳಿಸಿದನು.

ಹೀಗೆ ಸತ್ಯಜಿತನಿಂದ ಪ್ರಹೃತನಾದ ಪಾರ್ಥನು ಒಡನೆಯೇ ಸತ್ಯಜಿತನ ಮೇಲೆ ಅವ್ಯಾಹತವಾಗಿ ಬಾಣಗಳನ್ನು ಪ್ರಯೋಗಿಸಿ, ಅವನ ರಥ, ಕುದುರೆಗಳು, ಸಾರಥಿ ಮತ್ತು ರಂಗರಕ್ಷಕರನ್ನು ಧ್ವಂಸ ಮಾಡಿಬಿಟ್ಟನು. ಅವನ ಧನುಸ್ಸನ್ನು ಕತ್ತರಿಸಿ ಹಾಕಿದನು. ಇದರಿಂದ ದಾರಿ ಕಾಣದಾದ ಸತ್ಯಜಿತನು ಯುದ್ಧದಿಂದ ವಿಮುಖನಾದನು.

ಯುದ್ಧದಲ್ಲಿ ಪರಾಭವ ಹೊಂದಿದ ತನ್ನ ಸೇನಾ ನಾಯಕನನ್ನು ನೋಡಿದ ದ್ರುಪದನು ಅರ್ಜುನನೆಡೆಗೆ ಧಾವಿಸಿ, ಆತನ ಮೇಲೆ ಬಾಣಗಳನ್ನು ಎಸೆದನು. ಆಗ ಅರ್ಜುನನು ದ್ರುಪದನೊಡನೆ ಅತಿ ಘೋರವಾದ ಯುದ್ಧವನ್ನೇ ಮಾಡಬೇಕಾಯಿತು. ದ್ರುಪದನ ಧನುವನ್ನು ಕತ್ತರಿಸಿ ಹಾಕಿದ ಅರ್ಜುನನು, ಆತನ ರಥದ ಧ್ವಜದಂಡವನ್ನು ಕತ್ತರಿಸಿದನು. ತನ್ನ ಶರಗಳಿಂದ ದ್ರುಪದನ ಸಾರಥಿಯನ್ನೂ, ಕುದುರೆಗಳನ್ನೂ ಪ್ರಹರಿಸಿದನು. ಏನಾಗುತ್ತಿದೆಯೆಂದು ದ್ರುಪದನು ಗ್ರಹಿಸುವುದರೊಳಗಾಗಿ, ಕತ್ತಿಯನ್ನು ಹಿಡಿದ ಅರ್ಜುನನು ಸಿಂಹನಾದ ಮಾಡುತ್ತಾ ದ್ರುಪದನ ರಥದೊಳಕ್ಕೆ ನುಗ್ಗಿದನು. ಗರುಡನು ಸಮುದ್ರವನ್ನೇ ಅಲ್ಲೋಲ ಕಲ್ಲೋಲ ಮಾಡಿ ಒಳಗಿರುವ ಸರ್ಪವನ್ನು ಹಿಡಿಯುವಂತೆ ಅರ್ಜುನನು ಕತ್ತಿಯ ಸಹಾಯದಿಂದ ದ್ರುಪದನನ್ನು ಬಂಧಿಸಿದನು. ತನ್ನ ರಥದಲ್ಲಿಯೇ ಬಂಧಿತನಾದ ರಾಜನನ್ನು ನೋಡಿ, ಪಾಂಚಾಲ ಸೇನೆಯು ದಿಕ್ಕಾಪಾಲಾಗಿ ಚದುರಿ ಹೋಯಿತು.

ಸಿಂಹನಾದಗೈಯುತ್ತಾ, ದ್ರುಪದನನ್ನು ಬಂಧಿಸಿ ರಥದಲ್ಲಿ ಕರೆತರುತ್ತಿದ್ದ ಅರ್ಜುನನನ್ನು ಕಂಡು ಉತ್ಸಾಹಿತರಾದ ರಾಜಕುಮಾರರು ಅರಕ್ಷಿತವಾದ ದ್ರುಪದನ ಪಟ್ಟಣವನ್ನು ಧ್ವಂಸ ಮಾಡಲು ಮುಂದಾದರು. ಈ ಅಕಾರಣ ಧ್ವಂಸವನ್ನು ಭೀಮಸೇನನ ಮೂಲಕ ತಡೆದ ಪಾರ್ಥನು, ಸೆರೆ ಸಿಕ್ಕ ದ್ರುಪದನನ್ನು ಆತನ ಅಮಾತ್ಯಸಹಿತವಾಗಿ ಕರೆ ತಂದು, ಆಚಾರ್ಯ ದ್ರೋಣರಿಗೆ ಅರ್ಪಿಸಿದನು. ಆ ವೇಳೆಗೆ ದ್ರುಪದನ ದರ್ಪವೆಲ್ಲವೂ ಸಂಪೂರ್ಣವಾಗಿ ಕರಗಿ ಹೋಗಿದ್ದಿತು. ಯುದ್ಧದ ಕಾರಣದಿಂದ ಅಪಾರ ನಷ್ಟವೂ ಸಂಭವಿಸಿದ್ದಿತು.

ತನ್ನ ವಶನಾಗಿದ್ದ ದ್ರುಪದನನ್ನು ಕಂಡು ಅಂದಿನ ವೈರಕ್ಕೆ ಕಾರಣವಾಗಿದ್ದ ದ್ರುಪದನ ಹಿಂದಿನ ಮಾತುಗಳನ್ನು ಸ್ಮರಿಸುತ್ತಾ ದ್ರೋಣರು ಹೇಳಿದರು, "ದ್ರುಪದ! ನಿನ್ನನ್ನು ಪರಾಭವಗೊಳಿಸಿ, ನಿನ್ನ ರಾಷ್ಟ್ರವನ್ನು ವಶಪಡಿಸಿಕೊಂಡಿರುವೆ ಈಗ ನಿನ್ನ ಪ್ರಾಣಗಳು ನನ್ನ ವಶವಾಗಿ ಹೋಗಿವೆ. ಈಗ ನಾನು ವಿಜಯಿ, ನೀನು ಪರಾಜಿತ. ಈಗಲಾದರೂ ಹಿಂದಿನ ಮೈತ್ರಿಯನ್ನು ಬಯಸುವೆಯಾ? ನಮ್ಮಿಬ್ಬರಲ್ಲಿ ಹಿಂದಿನ ಗೆಳೆತನ ಹೇಗಿರುವುದು?"


ದ್ರುಪದನನ್ನು ಸೆರೆಹಿಡಿದುದು (ಮಹಾಭಾರತ ಕಥಾಮಾಲೆ 45)

ಒಮ್ಮೆ ಗಹಗಹಿಸಿದ ದ್ರೋಣರು ಮುಂದುವರಿದರು "ವೀರನೇ! ಪ್ರಾಣವು ಹೋಗಿಬಿಡುವುದೆಂದು ಭಯಪಡದಿರು 'ಕ್ಷಮಿಣೋ ಬ್ರಾಹ್ಮಣಾ ವಯಂ' ಬ್ರಾಹ್ಮಣರಾದ ನಾವು ಯಾವಾಗಲೂ ಕ್ಷಮಾವಂತರಾಗಿರುತ್ತೇವೆ. ನಾವಿಬ್ಬರೂ ಆಶ್ರಮದಲ್ಲಿದ್ದಾಗ ನಮ್ಮೀರ್ವರಲ್ಲಿ ಸ್ನೇಹ ಪ್ರೀತಿಗಳ ಸಂವರ್ಧನೆಯಾಯಿತು.

"ಪ್ರಾರ್ಥಯೇಯಂ ತ್ವಯಾ ಸಖ್ಯಂ ಪುನರೇವ ಜನಾಧಿಪ|

ವರಂ ದದಾಮಿ ತೇ ರಾಜನ್ರಾಜ್ಯಸ್ಯಾರ್ಧಮವಾಪ್ನುಹಿ||

"ಕ್ಷತ್ರಿಯ ಶ್ರೇಷ್ಠನೇ! ನಿನ್ನೊಡನೆ ನಾನು ಪುನಃ ಮೈತ್ರಿಯನ್ನು ಪ್ರಾರ್ಥಿಸುತ್ತೇನೆ. ನಮ್ಮ ಸ್ನೇಹದ ಕುರುಹಾಗಿ ನಾನೀಗ ಗೆದ್ದಿರುವ ನಿನ್ನ ಸಂಪೂರ್ಣ ರಾಜ್ಯದಲ್ಲಿ ಅರ್ಧವನ್ನು ನಿನಗೇ ಕೊಟ್ಟುಬಿಡುತ್ತೇನೆ. ದ್ರುಪದ! ನಿನ್ನ ಸ್ನೇಹವನ್ನು ಮರಳಿ ಪಡೆಯುವುದಕ್ಕಾಗಿ ನಿನ್ನ ದೇಶದ ಮೇಲೆ ಆಕ್ರಮಣವು ಅನಿವಾರ್ಯವಾಯಿತು. ಏಕೆಂದರೆ, "ಅರಾಜಾ ಕಿಲ ನೋ ರಾಜ್ನಾಃ ಸಖಾ ಭವಿತುಮರ್ಹಸಿ|

ಅತಃ ಪ್ರಯತಿತಂ ರಾಜ್ಯೇ ಯಜ್ಞಸೇನ ಮಯಾ ತವ||"

"ಯಜ್ಞ ಸೇನ! 'ರಾಜನಲ್ಲದ ನೀನು ರಾಜನಾದ ನನಗೆ ಸ್ನೇಹಿತನಾಗಲು ಅರ್ಹನಾಗುವುದಿಲ್ಲ' ಎಂದು ನೀನು ಸ್ಪಷ್ಟಪಡಿಸಿದ್ದೆ. ಆ ಕಾರಣದಿಂದಲೇ ನಾನು ರಾಜ್ಯವನ್ನು ಗೆದ್ದು ರಾಜತ್ವವನ್ನು ಪಡೆಯಬೇಕಾಯಿತು. ನಿನ್ನ ಅಖಂಡ ರಾಜ್ಯವನ್ನು ಗೆದ್ದು, ರಾಜತ್ವವನ್ನು ಗಳಿಸಿದ ನಾನು, ನಿನ್ನ ಸ್ನೇಹದ ಆಕಾಂಕ್ಷೆಯಿಂದ ಅರ್ಧರಾಜ್ಯವನ್ನು ನಿನಗೇ ಕೊಟ್ಟು, ನಿನ್ನನ್ನೂ ರಾಜನನ್ನಾಗಿ ಮಾಡುವ ಆಶಯ ಹೊಂದಿದ್ದೇನೆ.

'ರಾಜಾಸಿ ದಕ್ಷಿಣೇ ಕೂಲೇ ಭಾಗೀರಥ್ಯಾಹಮುತ್ತರೇ|

ಸಖಾಯಂ ಮಾಂ ವಿಜಾನೀಹಿ ಪಾಂಚಾಲ ಯದಿ ಮನ್ಯಸೇ||'

"ಭಾಗೀರಥಿ ನದಿಯ ದಕ್ಷಿಣ ತೀರದ ಪ್ರದೇಶಗಳಿಗೆ ನೀನು ರಾಜನಾಗುವೆ. ಉತ್ತರ ತೀರದ ಪ್ರದೇಶಗಳಿಗೆ ನಾನು ರಾಜನಾಗಿರುತ್ತೇನೆ. ನಿನಗೂ ಇದು ಸರಿಯೆನಿಸುವುದಾದರೆ, ನನ್ನನ್ನು ಮಿತ್ರನೆಂದು ಪರಿಗ್ರಹಿಸು"

ಎಂದು ದ್ರೋಣರು ದ್ರುಪದನಿಗೆ ಹೇಳಿದರು.

Comments


bottom of page