top of page

ಕರ್ಣನಿಗೆ ದುರ್ಯೋಧನನಿಂದ ಅಂಗರಾಜ್ಯಾಭಿಷೇಕ (ಮಹಾಭಾರತ ಕಥಾಮಾಲೆ 42)

ಕರ್ಣನಿಗೆ ದುರ್ಯೋಧನನಿಂದ ಅಂಗರಾಜ್ಯಾಭಿಷೇಕ


ಪ್ರದರ್ಶನ ರಂಗ ಮಂಟಪವೇ ನಿಬ್ಬೆರಗಾಗುವಂತೆ, ಧೀರ ನಿಲುಮೆಯಿಂದ ನಿಂತ ಸೂರ್ಯಪುತ್ರ ಕರ್ಣನು ಗುಡುಗಿನಂಥ ಗಂಭೀರ ಧ್ವನಿಯಲ್ಲಿ, ಪಾರ್ಥನನ್ನು ಉದ್ದೇಶಿಸಿ "ಪಾರ್ಥ! ತೆರೆದ ಕಂಗಳಿಂದ ನೋಡುತ್ತಿರುವ ಈ ಸಭಾಸದರ ಮುಂದೆ ನೀನು ತೋರಿದ ಧನುರ್ವಿದ್ಯಾ ಚಾತುರ್ಯವನ್ನು ಮೀರಿಸಿ, ನಾನು ನನ್ನ ಚಾತುರ್ಯವನ್ನು ತೋರುವೆನು. ನೀನೂ ಸಹ ಅಚ್ಚರಿ ಹೊಂದುವಂತೆ ತೋರುವೆನು" ಎಂದು ಹೇಳಿ, ತನ್ನ ಧನುವನ್ನು ಎಡಗೈಲಿ ಹಿಡಿದು, ಬತ್ತಳಿಕೆಯಿಂದ ಬಾಣವನ್ನು ಹೊರಸೆಳೆದು ಸಂಯೋಜಿಸಿದನು. "ಇವನಾರು? ಎಲ್ಲಿಯವನು?" ಎಂದು ಯೋಚಿಸುತ್ತಿದ್ದ ಜನರೆಲ್ಲರೂ ಈ ಧ್ವನಿಯಿಂದ ಮಂತ್ರ ಮುಗ್ಧರಾಗಿ, ಮೇಲೆದ್ದು ನಿಂತರು ದ್ರೋಣರ ಅನುಮತಿಯನ್ನು ಪಡೆದ ಪಡೆದ ಕರ್ಣನು ಪಾರ್ಥನು ಹಿಂದೆ ಪ್ರದರ್ಶಿಸಿದ್ದ ಧನುರ್ವಿದ್ಯಾ ಕೌಶಲವೆಲ್ಲವನ್ನೂ ಪ್ರದರ್ಶಿಸಿದನು. ಸಭಿಕರೆಲ್ಲರೂ 'ಭಲಾ! ಭಲಾ!' ಎನ್ನುತ್ತಿರುವಾಗಲೇ, ಅಪಾರ ಸಂತೋಷ ತಾಳಿದ ದುರ್ಯೋಧನನು ರಂಗ ಮಂಟಪದೊಳಕ್ಕೆ ಬಂದು ಕರ್ಣನನ್ನು ತಬ್ಬಿಕೊಂಡು ಹೇಳಿದನು, "ವೀರಾಗ್ರಣಿಯೇ! ನನ್ನ ಅದೃಷ್ಟದಿಂದಲೇ ಇಂದು ನೀನು ನನಗೆ ಲಭಿಸಿರುವೆ. ನನ್ನ ರಾಜ್ಯದಲ್ಲಿ ನಿನಗೆ ಸಕಲ ಗೌರವಗಳೂ ಲಭಿಸುವವು. ನೀನು ನನ್ನೊಡನಿದ್ದು, ಸಕಲ ಭೋಗಗಳನ್ನೂ ಅನುಭವಿಸುತ್ತಾ ಸುಖವಾಗಿರು" ಎಂದು ಹೇಳಿ, ತನ್ನ ನೂರು ಸಹೋದರರನ್ನೂ, ಅಶ್ವತ್ಥಾಮನನ್ನೂ ಕರ್ಣನಿಗೆ ಪರಿಚಯ ಮಾಡಿಕೊಟ್ಟನು. ಕರ್ಣನಾದರೋ, ದುರ್ಯೋಧನನೊಡನೆ ಮೈತ್ರಿ, ದ್ವಂದ್ವ ಯುದ್ಧ ಈ ಎರಡನ್ನು ಅಪೇಕ್ಷಿಸಿದನು.


ಕರ್ಣನ ಮಾತು-ವರ್ತನೆಗಳಿಂದ ಕ್ರೋಧಿತನಾದ ಪಾರ್ಥನು ಕೌರವ ಸಹೋದರರ ನಡುವೆ ನಿಂತಿದ್ದ ಕರ್ಣನನ್ನು ಕುರಿತು ಹೇಳಿದನು, "ಕರ್ಣ! ಆಹ್ವಾನವಿಲ್ಲದೆ ಬರುವವರಿಗೂ, ಬಾಯಿಗೆ ಬಂದಂತೆ ಮಾತನಾಡುವವರಿಗೂ ಯಾವ ಲೋಕಗಳು ಸಿಗುತ್ತವೆಯೋ ಆ ಲೋಕಗಳಿಗೆ ನಿನ್ನನ್ನು ಈಗಲೇ ಸಂಹರಿಸಿ ಕಳುಹುವೆನು".


"ಪಾರ್ಥ! ಈ ರಂಗಮಂಟಪವು ಕೇವಲ ನಿನಗಾಗಿ ರಚಿತವಾಗಿದ್ದಲ್ಲ. ಎಲ್ಲಾ ಯುದ್ಧ ವಿದ್ಯಾ ಚತುರರ ಪ್ರದರ್ಶನಾರ್ಥವಾಗಿ ರಚಿತವಾದದ್ದು. ರಾಜರು ಪರಾಕ್ರಮದಿಂದಲೇ ಶ್ರೇಷ್ಠರಾಗುತ್ತಾರೆ. ಧರ್ಮವು ಬಾಹುಬಲವನ್ನೇ ಅನುಸರಿಸುತ್ತದೆ. ಬರೀ ಆಕ್ಷೇಪಗಳಿಂದೇನು ಪ್ರಯೋಜನ? ಇದು ದೌರ್ಬಲ್ಯವೆನಿಸುವುದು. ಶಕ್ತಿಯಿದ್ದರೆ ಬಾಣಗಳ ಮೂಲಕ ಮಾತನಾಡು, ನಿನ್ನ ತಲೆಯನ್ನು ತನ್ನ ತೀಕ್ಷ್ಣವಾದ ಕಂಗಳಿಂದ ಕತ್ತರಿಸುವೆನು" ಎಂದು ಕರ್ಣನು ಮಾರುತ್ತರಿಸಿದನು.


ಈ ಮಾತುಗಳಿಂದ ಪಾರ್ಥನಲ್ಲಿ ವೀರಾವೇಶ ಉಕ್ಕಿತು. ಗುರು ದ್ರೋಣರ ಅನುಜ್ಞೆಯನ್ನು ಪಡೆದು ದ್ವಂದ್ವಯುದ್ಧಕ್ಕೆ ಸಿದ್ಧನಾದ ಪಾರ್ಥನನ್ನು ಪಾಂಡವರು ಹುರಿದುಂಬಿಸಿದರು. ಕರ್ಣನನ್ನು ದುರ್ಯೋಧನಾದಿಗಳು ಉತ್ತೇಜಿಸಿದರು. ಸಭೆಯಲ್ಲಿಯೂ ಅನೇಕರು ಅರ್ಜುನನನ್ನೂ, ಇನ್ನು ಅನೇಕರು ಕರ್ಣನನ್ನೂ ಬೆಂಬಲಿಸಿದರು.


ಕರ್ಣನೂ ತನ್ನ ಪುತ್ರನೆಂದೂ, ಕರ್ಣ ಅರ್ಜುನರು ಸಹೋದರರೆಂದೂ ಕುಂತಿಗೆ ಮಾತ್ರ ತಿಳಿದಿತ್ತು. ತನ್ನ ಈರ್ವರು ಮಕ್ಕಳು ದ್ವಂದ್ವ ಯುದ್ಧಕ್ಕೆ ಇಳಿದುದನ್ನು ಕಂಡು ಆಕೆ ಮೂರ್ಛೆ ಹೋದಳು. ದಾಸಿಯರು ಉಪಚರಿಸಿ ಆಕೆಯನ್ನು ಎಚ್ಚರಿಸಿದರು. ಚೇತನಗೊಂಡ ಕುಂತಿಯು ತನ್ನ ಮಕ್ಕಳಿಬ್ಬರೂ ಕವಚ- ತೂಣೀರಗಳೊಡನೆ ಯುದ್ಧಕ್ಕೆ ಸಿದ್ಧರಾದುದನ್ನು ಕಂಡು ಮರುಗಿದಳು. ಆದರೆ, ಆ ಯುದ್ಧವನ್ನು ತಡೆಯಲು ಆಕೆಗೆ ಅಸಾಧ್ಯವಾಗಿದ್ದಿತು.


ಈ ನಡುವೆ ಧರ್ಮ ಸೂಕ್ಷ್ಮವನ್ನರಿತಿದ್ದ ಕೃಪರು ಕರ್ಣನನ್ನು ಕೇಳಿದರು, "ಕರ್ಣ! ಆ ಪಾಂಡವನು ಕುರುವಂಶಕ್ಕೆ ಸೇರಿದವನು. ಕುಂತಿಯ ಕಿರಿಯ ಪುತ್ರ. ನಿನ್ನೊಡನೆ ದ್ವಂದ್ವ ಯುದ್ಧಕ್ಕೆ ಸಿದ್ಧನಾಗಿದ್ದಾನೆ. ಆದರೆ, ಯುದ್ಧವು ಪ್ರಾರಂಭವಾಗುವುದಕ್ಕೂ ಮೊದಲು ನೀನಾರು? ಯಾವ ವಂಶಕ್ಕೆ ಸೇರಿದವ? ನಿನ್ನ ತಂದೆ ತಾಯಿಗಳು ಯಾರು? ಇವೆಲ್ಲವನ್ನೂ ವಿವರಿಸಿ ಹೇಳಬೇಕು. ನಂತರವಷ್ಟೇ ಈ ದ್ವಂದ್ವ ಯುದ್ಧಕ್ಕೆ ನೀನು ಯೋಗ್ಯನೋ ಅಲ್ಲವೋ ಎಂಬುದು ನಿರ್ಣಯವಾಗುತ್ತದೆ. ಏಕೆಂದರೆ ರಾಜ ಪುತ್ರರು ಕುಲಾಚಾರ ಹೀನರೊಡನೆ ಯುದ್ಧ ಮಾಡಲಾರರು".

ಕೃಪರ ಮಾತುಗಳನ್ನು ಕೇಳಿದ ಕರ್ಣನ ಮುಖಕಮಲವು ಕಾಂತಿ ಹೀನವಾಯಿತು.

ಕರ್ಣನ ಕಂದಿದ ಮುಖಾರವಿಂದವನ್ನು ನೋಡಿದ ದುರ್ಯೋಧನನು ಕೃಪರಿಗೆ ಹೇಳಿದನು, "ಆಚಾರ್ಯ!

ತ್ರಿವಿಧಾ ಯೋನೀ ರಾಜ್ಞಾಂ ಶಾಸ್ತ್ರ ವಿನಿಶ್ಚಯೇ |

ಸತ್ಕುಲೀನಶ್ಚ ಶೂರಶ್ಚ ಯಶ್ಚ ಸೇನಾಂ ಪ್ರಕರ್ಷತಿ ||

"ಆಚಾರ್ಯರೇ! ಶಾಸ್ತ್ರಗಳ ಆಧಾರದಲ್ಲಿ ಹೇಳುವುದಾದರೆ, ಮೂರು ಮಾರ್ಗಗಳಿಂದ ರಾಜತ್ವವನ್ನು ಪಡೆಯಲು ಸಾಧ್ಯವಿದೆ. ಕುಲವು ಮಾತ್ರವೇ ರಾಜತ್ವದ ಸಾಧನವೆನಿಸಲಾರದು. ಕುಲ ಶೌರ್ಯ ಮತ್ತು ಸೇನೆಯನ್ನು ನಡೆಸುವ ಸಾಮರ್ಥ್ಯ (ಸೇನಾಪತ್ಯ) ಇವು ಮೂರು ರಾಜತ್ವದ ಸಾಧನಗಳಾಗಿರುತ್ತವೆ. ಶೌರ್ಯ ಮತ್ತು ಸೇನೆಯನ್ನು ನಡೆಸುವ ಸಾಮರ್ಥ್ಯ ಇವೆರಡು ಕರ್ಣನಲ್ಲಿರುವಾಗ, ಕುಲವನ್ನು ಪರಿಶೀಲಿಸುವ ಅಗತ್ಯವಿಲ್ಲ. ಒಂದುವೇಳೆ ಅರ್ಜುನನು ರಾಜನಲ್ಲದವನೊಡನೆ ಯುದ್ಧ ಮಾಡಲು ಇಷ್ಟ ಪಡುವುದಿಲ್ಲವಾದರೆ, ಈಗಲೇ ನಾನು ಕರ್ಣನನ್ನು ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡುವೆನು".


ಹೀಗೆಂದ ದುರ್ಯೋಧನನು ಈ ಕುರಿತು ಹಿರಿಯರು ಏನು ಹೇಳಿಯಾರು ಎಂಬುದನ್ನು ನಿರೀಕ್ಷಿಸದೆ, ಕೂಡಲೇ ರಾಜಪುರೋಹಿತರನ್ನು ಕರೆಸಿದನು. ರತ್ನ ಸಿಂಹಾಸನವನ್ನು ತರಿಸಿ, ಮಂಗಳವಾದ್ಯಗಳೊಡನೆ ಕರ್ಣನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದನು. ನೆತ್ತಿಯ ಮೇಲೆ ಶ್ವೇತಛತ್ರ ಹಿಡಿಯಲ್ಪಟ್ಟಿತು. ಚಾಮರ ಬೀಸುವಿಕೆ, ಪುರೋಹಿತರ ಮಂತ್ರ ಘೋಷಗಳ ಜೊತೆ ಅರಳು ಕುಸುಮಾಕ್ಷತೆಗಳನ್ನು ನೆತ್ತಿಯ ಮೇಲೆ ಹಾಕಿ, ಸುಗಂಧೋದಕದಿಂದ ಕರ್ಣನಿಗೆ ಅಭಿಷೇಕ ಮಾಡಿ, ಕಿರೀಟ ತೊಡಿಸಲಾಯಿತು. ಹೀಗೆ 'ಕರ್ಣನಿಗೆ ಜಯವಾಗಲಿ' ಎಂಬ ಘೋಷಣೆಗಳ ನಡುವೆ ಕರ್ಣನು ಅಂಗರಾಜ್ಯಾಧಿಪತಿಯಾಗಿ ಪಟ್ಟಾಭಿಷಕ್ತನಾದನು.

Comments


bottom of page