ಅರ್ಜುನನ ಪ್ರಾವೀಣ್ಯ ಪ್ರದರ್ಶನ (ಮಹಾಭಾರತ ಕಥಾಮಾಲೆ 41)
- Arunkumar Bhat

- 2 days ago
- 2 min read
ಅರ್ಜುನನ ಪ್ರಾವೀಣ್ಯ ಪ್ರದರ್ಶನ (ಮಹಾಭಾರತ ಕಥಾಮಾಲೆ 41)
ಅನಾಹುತವನ್ನು ಅರಿತು, ತಮ್ಮ ಪುತ್ರನನ್ನು ಬಳಿಗೆ ಕರೆದು, ಕೂಡಲೇ ಹೋಗಿ ಭೀಮ-ದುರ್ಯೋಧನರ ಯುದ್ಧವನ್ನು ನಿಲ್ಲಿಸುವಂತೆ ಅಪ್ಪಣೆಯಿತ್ತರು. ಪ್ರಳಯಕಾಲದಲ್ಲಿ ಹುಟ್ಟುವ ಗಾಳಿಯಿಂದ ಅಲ್ಲೋಲ ಕಲ್ಲೋಲವಾಗುವ ಎರಡು ಸಮುದ್ರಗಳಂತೆ ಹೊಯ್ದಾಡುತ್ತಿದ್ದ ಭೀಮ-ದುರ್ಯೋಧನರ ಬಳಿ ತೆರಳಿದ ಅಶ್ವತ್ಥಾಮನು ಅವರಿಬ್ಬರಿಗೂ ಉಚ್ಚ ಸ್ವರದಿಂದ ಆಚಾರ್ಯರ ಅಪ್ಪಣೆಯನ್ನು ತಿಳಿಸಿ, ಪ್ರದರ್ಶನ ನಿಲ್ಲಿಸಿದನು. ಪ್ರೇಕ್ಷಕರ ಪ್ರಶಂಸಾಪೂರ್ವಕ ಕರತಾಡನದೊಂದಿಗೆ ಈರ್ವರನ್ನೂ ಪ್ರದರ್ಶನ ರಂಗದಿಂದ ಹೊರಗೆ ಕರೆತಂದನು.
ಈಗ, ಆಚಾರ್ಯ ದ್ರೋಣರು, ಸಭಿಕರನ್ನು ಕುರಿತು ಇಂದ್ರ ಪುತ್ರನಾದ, ತನ್ನ ಪ್ರಿಯ ಶಿಷ್ಯನಾದ ಪಾರ್ಥನು ಪ್ರದರ್ಶನ ರಂಗಕ್ಕೆ ಬರುವ ಕುರಿತು ಉದ್ಘೋಷಿಸಿದರು. ಪ್ರೇಕ್ಷಕರೆಲ್ಲರೂ ಉತ್ಸುಕತೆಯಿಂದ ನಿರೀಕ್ಷಿಸುತ್ತಿರುವಾಗ, ಸ್ವಸ್ತಿವಾಚನವನ್ನು ಮಾಡಿಸಿಕೊಂಡು, ಅಂಗುಲಿ ರಕ್ಷೆಯನ್ನು ಧರಿಸಿ, ಬಾಣ-ಬತ್ತಳಿಕೆ, ಧನುರ್ಧಾರಿಯಾಗಿ, ಸ್ವರ್ಣ ಮಯವಾದ ಕವಚ ಧಾರಿಯಾಗಿ, ಮಿಂಚಿನೋಪಾದಿಯಲ್ಲಿ ಅರ್ಜುನನು ರಂಗ ಪ್ರವೇಶ ಮಾಡಿದನು.

ಇದನ್ನು ನೋಡಿದ ಪ್ರೇಕ್ಷಕರೆಲ್ಲರೂ ಅರ್ಜುನನ ಕುರಿತಾಗಿ ಜಯಘೋಷ ಮೊಳಗಿಸ ತೊಡಗಿದರು. ಇದನ್ನು ಕೇಳಿದ ಕುಂತಿಯ ಕಂಗಳಿಂದ ಆನಂದ ಬಾಷ್ಪಗಳು ಸುರಿದವು. ಹೆಮ್ಮೆಯಿಂದ ಎದೆಯುಬ್ಬಿ ಸ್ತನ್ಯವು ಹೊರಸೂಸಿತು.
ಈ ಕೋಲಾಹಲವನ್ನು ಕೇಳಿದ ಧೃತರಾಷ್ಟ್ರನು ಅದೇನೆಂದು ವಿದುರನಿಂದ ತಿಳಿದನು. ಆತನೂ ಪಾಂಡವರ ಕುರಿತಾಗಿ ಹೆಮ್ಮೆಯನ್ನು ತಾಳಿದವನಾಗಿ, ಕುಂತಿಯೆಂಬ ಆರಣಿಯಿಂದ ಸಮುದ್ಭೂತರಾದ ಪಾಂಡವರೆಂಬ ಅನುಗ್ರಹೀತವೂ, ರಕ್ಷಿತವೂ ಆಗಿದೆಯೆಂದೇ ಭಾವಿಸಿದನು.
ಇದೆಲ್ಲದರ ನಡುವೆ, ಪಾರ್ಥನು ಧನುರ್ವಿದ್ಯಾ ಪ್ರದರ್ಶನವನ್ನು ಆರಂಭಿಸಿದನು. ಮೊದಲು, ಬಾಣ ಬಿಡುವ ಕೈಚಳಕವನ್ನು ಪ್ರೇಕ್ಷಕರಿಗೆ ತೋರಿದ ನಂತರ ಮಂತ್ರಾಸ್ತ್ರಗಳ ಪ್ರದರ್ಶನವನ್ನು ಪ್ರಾರಂಭಿಸಿದನು.
"ಆಗ್ನೇಯೇನಾಸೃಜದ್ವಹ್ನಿಂ ವಾರುಣೇನಾಸೃಜತ್ಸಯಃ|
ವಾಯುವ್ಯೇನಾಸೃಜದ್ವಾಯುಂ ಪಾರ್ಜನ್ಯೇನಾಸೃಜದ್ಘನಾನ್||
ಭೌಮೇನ ಪ್ರಾವಿಶದ್ಭೂಮಿಂ ಪಾರ್ವತೇನಾಸೃಜದ್ ಗಿರೀನ್|
ಅಂತರ್ಧಾನೇನ ಚಾಸ್ತ್ರೇಣ ಪುನರಂತರ್ಹಿತೋ ಭವತ್||
ಕ್ಷಣಾತ್ಪ್ರಾಂಶುಃ ಕ್ಷಣಾದ್ಧ್ರಸ್ವಃ ಕ್ಷಣಾಚ್ಚ ರಥಧೂರ್ಗತಃ|
ಕ್ಷಣೇನ ರಥ ಮಧ್ಯಸ್ಥಃ ಕ್ಷಣೇನಾವತರನ್ಯಹೀಮ್||"
"ಆಗ್ನೇಯಾಸ್ತ್ರದಿಂದ ಅಗ್ನಿಯನ್ನೂ, ವಾರುಣಾಸ್ತ್ರದಿಂದ ನೀರನ್ನೂ, ವಾಯುವ್ಯಾಸ್ತ್ರದಿಂದ ಗಾಳಿಯನ್ನೂ ಪಾರ್ಜನ್ಯಾಸ್ತ್ರದಿಂದ ಮೋಡಗಳನ್ನೂ ಸೃಷ್ಟಿಸಿದನು. ಭೌಮಾಸ್ತ್ರದಿಂದ ಭೂಮಿಯನ್ನು ಪ್ರವೇಶಿಸಿದನು. ಪಾರ್ವತಾಸ್ತ್ರದಿಂದ ಬೆಟ್ಟಗಳನ್ನು ಸೃಷ್ಟಿಸಿದನು. ಅಂತರ್ಧಾನಾಸ್ತ್ರದಿಂದ ಅದೃಶ್ಯನಾದನು. ಒಮ್ಮೆ ಉದ್ದವಾಗಿಯೂ, ಒಮ್ಮೆ ಕುಳ್ಳಾಗಿಯೂ, ಒಮ್ಮೆ ರಥದಲ್ಲಿ ಸಾರಥಿಯಾಗಿಯೂ, ಇನ್ನೊಮ್ಮೆ ರಥಿಕನಾಗಿ ಬಾಣ ಪ್ರಯೋಗ ಮಾಡುವಂತೆಯೂ ಕಾಣುತ್ತಿದ್ದನು. ಕೆಲವೊಮ್ಮೆ ನೆಲದ ಮೇಲೆಯೂ ಕಾಣಿಸಿಕೊಳ್ಳುತ್ತಿದ್ದನು.
ಲಕ್ಷ್ಯಕ್ಕೆ ಸ್ವಲ್ಪವೂ ಅಪಾಯ ಬಾರದ ರೀತಿಯಲ್ಲಿ ಬೇಧಿಸಿದನು. ಬಹಳ ದೊಡ್ಡ ಭಾರ ವಸ್ತುಗಳನ್ನೂ ಬೇಧಿಸಿದನು. ಸುತ್ತುತ್ತಿರುವ ಲೋಹದ ಪ್ರಾಣಿಯ ಬಾಯಿಯಲ್ಲಿ ಪಂಚ ಬಾಣಗಳನ್ನು ನುಗ್ಗಿಸಿದನು. ಏಕಕಾಲದಲ್ಲಿ ಅನೇಕ ಲಕ್ಷ್ಯಗಳನ್ನು ಬೇಧಿಸಿ, ಭೇಷ್ ಎನಿಸಿಕೊಂಡನು. ಕತ್ತಿ ವರಸೆ, ಗದಾ ಪ್ರಯೋಗಗಳನ್ನೂ ತೋರಿಸಿ, ಪ್ರೇಕ್ಷಕರಿಗೆ ಅಮಿತಾನಂದವನ್ನುಂಟು ಮಾಡಿದನು."
ಪ್ರದರ್ಶನವು ಮುಗಿದು, ಜನರೆಲ್ಲ ಮನೆಗೆ ತೆರಳಲು ಸಜ್ಜಾಗುತ್ತಿರುವಾಗ, ರಂಗ ಮಂಟಪದ ಮಹಾದ್ವಾರದ ಕಡೆಯಿಂದ ಸಿಡಿಲಿನಂತಹ ಸಪ್ಪಳವೊಂದು ಕೇಳಿಬಂತು, ವೀರನೊಬ್ಬ ತನ್ನ ಪರಾಕ್ರಮದ ಸೂಚಕವಾಗಿ ತನ್ನ ಭುಜಗಳನ್ನು ಗಟ್ಟಿಯಾಗಿ ಆಸ್ಫಾಲಿಸಿದ ಶಬ್ದವದಾಗಿತ್ತು.
ಪರ್ವತಗಳು ಸೀಳಿ ಹೋಗುತ್ತಿದೆಯೋ ಎಂಬಂತೆ ಇದ್ದ ಆ ಶಬ್ಧದಿಂದ ಭ್ರಾಂತರಾದ ಜನರೆಲ್ಲ ಅತ್ತ ತಿರುಗಿದರು.
ಐದು ಹಸ್ತ ನಕ್ಷತ್ರ ಸಮೂಹದಿಂದೊಡಗೂಡಿದ ಚಂದ್ರನಂತೆ ಪಾಂಡವರ ಮಧ್ಯದಲ್ಲಿದ್ದ ದ್ರೋಣರೂ, ದಾನವರ ಮೇಲೆ ಯುದ್ಧಕ್ಕೆ ಹೊರಡುವ ಇಂದ್ರನೋಪಾದಿಯಲ್ಲಿ ನೂರು ಮಂದಿ ತಮ್ಮಂದಿರು ಹಾಗೂ ಗುರುಪುತ್ರ ಅಶ್ವತ್ಥಾಮನಿಂದೊಡಗೂಡಿದ ದುರ್ಯೋಧನನೂ ಚಕಿತರಾಗಿ ಸಪ್ಪಳ ಬಂದತ್ತ ತಿರುಗಿದರು.
ಹಾಗೆ ಬಂದ ಮಹಾವೀರ ಬೇರಾರೂ ಅಲ್ಲ. ಕುಂತಿಯ ಹಿರಿಯ ಪುತ್ರ ಕರ್ಣನೇ ಆಗಿದ್ದನು. ತನಗೆ ಸಹಜವಾಗಿಯೇ ಇದ್ದ ಕವಚ-ಕುಂಡಲಗಳಿಂದ ಪ್ರಕಾಶಿಸುತ್ತಾ, ಗಂಭೀರವಾಗಿ ಬರುತ್ತಿದ್ದ ಕರ್ಣನಿಗೆ ಸಭಿಕರು ದಾರಿ ಮಾಡಿಕೊಟ್ಟರು. ಸೂರ್ಯ ಪುತ್ರನಾದ ಕರ್ಣನು ಸೂರ್ಯನಂತೆಯೇ ಕಾಂತಿಯನ್ನು ಹೊರಸೂಸುತ್ತಾ ಸಿಂಹದ ನಡಿಗೆಯಲ್ಲಿ ರಂಗ ಮಂಟಪಕ್ಕೆ ಬಂದು, ಸುತ್ತಲೂ ನೋಡಿ, ಉಚ್ಚಾಸನದಲ್ಲಿ ಕುಳಿತಿದ್ದ ದ್ರೋಣ-ಕೃಪರನ್ನು ನಮಿಸಿ ನಿಂತನು.




Comments