top of page

ಅರ್ಜುನನಿಗೆ ದ್ರೋಣರಿಂದ ಬ್ರಹ್ಮಶಿರ ಮಹಾಸ್ತ್ರದ ಬಹುಮಾನ (ಮಹಾಭಾರತ ಕಥಾಮಾಲೆ 39)

ಅರ್ಜುನನಿಗೆ ದ್ರೋಣರಿಂದ ಬ್ರಹ್ಮಶಿರ ಮಹಾಸ್ತ್ರದ ಬಹುಮಾನ

ನಂತರ ದ್ರೋಣರು ದುರ್ಯೋಧನಾದಿ ಇತರ ರಾಜಕುಮಾರರನ್ನೂ ಕರೆದು, ಅನುಕ್ರಮವಾಗಿ ಯುಧಿಷ್ಠಿರನನ್ನು ಪ್ರಶ್ನಿಸಿದ ರೀತಿಯಲ್ಲೇ ಅವರನ್ನೂ ಪ್ರಶ್ನಿಸಿ, ಎಲ್ಲರಿಂದಲೂ ಯುಧಿಷ್ಠಿರನು ನೀಡಿದ ಉತ್ತರವೇ ಬರಲು, ಬಲು ಬೇಸರ ಹೊಂದಿದರು. ಯಾರಿಗೂ ಲಕ್ಷ್ಯ ಬೇಧನಕ್ಕೆ ಅನುಜ್ಞೆಯನ್ನೇ ಕೊಡದೇ, 'ನೀವ್ಯಾರೂ ಗುರಿಯನ್ನು ಬೇಧಿಸಲಾರಿರಿ ಪಕ್ಕಕ್ಕೆ ಸರಿಯಿರಿ' ಎಂದು ಮೂದಲಿಸಿದರು. ಪಾರ್ಥನು ಮಾತ್ರ ಬಾಕಿ ಉಳಿದಿದ್ದನು.


ದ್ರೋಣರು ಈಗ ಅರ್ಜುನನತ್ತ ನೋಡಿ, ಲಕ್ಷ್ಯ ಬೇಧನಕ್ಕಾಗಿ ಧನುಸ್ಸನ್ನು ಧರಿಸುವಂತೆ ಆಜ್ಞಾಪಿಸಿದರು. ಉಳಿದವರಿಗೆ ಹೇಳಿದಂತೆಯೇ ಲಕ್ಷ್ಯವನ್ನು ಚೆನ್ನಾಗಿ ನೋಡುವಂತೆಯೂ, ತಮ್ಮ ಅಪ್ಪಣೆಯಾಗುತ್ತಿದ್ದಂತೆಯೇ ಬಾಣ ಪ್ರಯೋಗಿಸುವಂತೆಯೂ ಹೇಳಿದರು.

ಗುರುಗಳ ಮಾತಿನಂತೆಯೇ ಅರ್ಜುನನು ಮರದ ಮೇಲಿದ್ದ ಪಕ್ಷಿಯತ್ತ ಗುರಿಯಿಟ್ಟು ಗುರುಗಳ ಆಜ್ಞೆಯ ನಿರೀಕ್ಷೆಯಲ್ಲಿ ನಿಂತನು. ಎಲ್ಲರನ್ನೂ ಪ್ರಶ್ನಿಸಿದಂತೆಯೇ ದ್ರೋಣರು ಅರ್ಜುನನನ್ನು ಪ್ರಶ್ನಿಸಿದರು.


"ಪಶ್ಯಸ್ಯೇನಂ ಸ್ಥಿತಂ ಭಾಸಂ ದ್ರುಮಂ ಮಾಮಪಿ ಚಾರ್ಜುನ"

"ಅರ್ಜುನ! ಪಕ್ಷಿಯನ್ನೂ, ಪಕ್ಷಿಯು ಕುಳಿತಿರುವ ಮರವನ್ನೂ ಮತ್ತು ನನ್ನನ್ನೂ ಕಾಣುತ್ತಿರುವೆಯಾ?"


ಅರ್ಜುನನು ಉತ್ತರಿಸಿದನು "ಇಲ್ಲ ಗುರುದೇವ! ತಮ್ಮನ್ನಾಗಲಿ, ವೃಕ್ಷವನ್ನಾಗಲಿ ಕಾಣುತ್ತಿಲ್ಲ. ತಾವು ಗುರಿಯಿಡಬೇಕೆಂದು ಹೇಳಿದ ಪಕ್ಷಿಯನ್ನು ಮಾತ್ರವೇ ಕಾಣುತ್ತಿರುವೆನು."


ದ್ರೋಣರು ಮನದಲ್ಲೇ ಹರ್ಷಿಸುತ್ತಾ, ಮುಂದಿನ ಪ್ರಶ್ನೆ ಕೇಳಿದರು "ಪಕ್ಷಿಯನ್ನು ಮಾತ್ರವೇ ಕಾಣುತ್ತಿರುವೆಯಾದರೆ, ಪಕ್ಷಿಯು ಹೇಗಿರುವುದೆಂಬುದನ್ನು ವರ್ಣಿಸು"


ಅರ್ಜುನನು, "ಗುರುದೇವ! ನನಗೆ ಪಕ್ಷಿಯ ತಲೆಯು ಮಾತ್ರ ಕಾಣುತ್ತಿದೆಯೇ ಹೊರತು, ಅದರ ಅಂಗಾಂಶಗಳೊಂದೂ ಕಾಣುತ್ತಿಲ್ಲ" ಎಂದು ಉತ್ತರಿಸಿದನು.


ಶಿಷ್ಯನ ಈ ಉತ್ತರದಿಂದ ಪಾರವಿಲ್ಲದ ಆನಂದ ಹೊಂದಿದ ದ್ರೋಣರು, 'ಹೊಡೆ' ಎಂದು ಆಜ್ಞಾಪಿಸಿದರು.


'ಹೊಡೆ' ಎಂಬ ಗುರುಗಳ ಮಾತು ಮುಗಿಯುವುದರೊಳಗಾಗಿ ಕೃತಕ ಪಕ್ಷಿಯ ತಲೆಯು ಕತ್ತರಿಸಲ್ಪಟ್ಟು ನೆಲಕ್ಕೆ ಬಿದ್ದಿತು. ದ್ರೋಣರು ಅರ್ಜುನನನ್ನು ತಬ್ಬಿ ಆನಂದಬಾಷ್ಪಗಳನ್ನು ಸುರಿಸಿದರು.


ಕೆಲ ದಿನಗಳು ಸಂದವು. ಒಮ್ಮೆ ದ್ರೋಣರು ಶಿಷ್ಯವೃಂದದ ಸಮೇತ ಸ್ನಾನಕ್ಕಾಗಿ ಗಂಗಾ ನದಿಗೆ ತೆರಳಿದರು. ದ್ರೋಣರು ಸ್ನಾನಕ್ಕಾಗಿ ನದಿಯಲ್ಲಿ ಇಳಿದೊಡನೆಯೇ ಅಲ್ಲಿಯೇ ಇದ್ದ ಮೊಸಳೆಯೊಂದು ಅವರ ಮೊಣಕಾಲನ್ನು ಬಲವಾಗಿ ಹಿಡಿಯಿತು. ದ್ರೋಣರಿಗೆ ಈ ಮೊಸಳೆಯ ಹಿಡಿತದಿಂದ ಬಿಡಿಸಿಕೊಳ್ಳುವ ಸಾಮರ್ಥ್ಯವಿದ್ದರೂ ಶಿಷ್ಯರನ್ನು ಪರೀಕ್ಷಿಸುವ ಸಲುವಾಗಿ "ಮೊಸಳೆಯು ನನ್ನನ್ನು ನುಂಗುತ್ತಿದೆ. ಕೂಡಲೇ ಇದನ್ನು ಕೊಂದು ನನ್ನನ್ನು ರಕ್ಷಿಸಿರಿ" ಎಂದು ಕೂಗಿಕೊಂಡರು. ಪಾರ್ಥನ ಹೊರತಾಗಿ ಉಳಿದ ಯಾರೂ ಸಹ ಮೊಸಳೆಯಿಂದ ಗುರುಗಳ ರಕ್ಷಣೆಗೆ ಮುಂದಾಗಲಿಲ್ಲ. ಎಲ್ಲರೂ ಗಾಬರಿಗೊಂಡು ನೋಡುತ್ತಾ ನಿಂತರು. ಪಾರ್ಥನು ಮಾತ್ರ, ಗುರುಗಳ ದನಿಯನ್ನು ಕೇಳುತ್ತಲೇ ಧನುಸ್ಸಿಗೆ ಹೆದೆಯೇರಿಸಿ, ಬಾಣಗಳನ್ನು ಹೂಡಿ, ಐದು ಬಾಣಗಳನ್ನು ಪ್ರಯೋಗಿಸಿ ಮೊಸಳೆಯನ್ನು ಪ್ರಹರಿಸಿದನು. ಹೀಗೆ ಮೊಸಳೆಯು ಖಂಡಿಸಲ್ಪಟ್ಟು, ದ್ರೋಣರ ಮೊಣಕಾಲನ್ನು ಬಿಟ್ಟು ಸತ್ತು ಹೋಯಿತು. ಹೀಗೆ ದ್ರೋಣ ಶಿಷ್ಯರಲ್ಲಿ ಅರ್ಜುನನು ಶ್ರೇಷ್ಠನೆನಿಸಿದನು.


ಮೊಸಳೆಯಿಂದ ಬಿಡುಗಡೆ ಹೊಂದಿ ಗಂಗೆಯಿಂದ ಮೇಲೆ ಬಂದ ದ್ರೋಣರು ಅರ್ಜುನನನ್ನು ಕುರಿತು "ಮಹಾಬಾಹುವೇ! ನಿನ್ನ ಕಾರ್ಯದಿಂದ ಸುಪ್ರೀತನಾದ ನಾನು, ನಿನಗೆ ಬಹುಮಾನವಾಗಿ 'ಬ್ರಹ್ಮಶಿರ' ವೆಂಬ ಮಹಾಸ್ತ್ರವನ್ನು ನೀಡುವೆನು. ಅಪ್ರತಿಹತವಾದ ಈ ಅಸ್ತ್ರದ ಪ್ರಯೋಗ ಮತ್ತು ನಿವರ್ತನಗಳನ್ನು ರಹಸ್ಯಪೂರ್ವಕವಾಗಿ ನಿನಗೆ ಉಪದೇಶಿಸುವೆನು" ಎಂದರು.


ಮುಂದುವರಿದು, "ಮೂರು ಲೋಕಗಳಲ್ಲಿಯೂ ಇದಕ್ಕೆ ಸಮನಾದ ಅಸ್ತ್ರವಿಲ್ಲ. ಅಲ್ಪ ಬಲವುಳ್ಳವರ ಮೇಲೆ, ಮಾನವರ ಮೇಲೆ ಇದನ್ನು ಪ್ರಯೋಗಿಸಕೂಡದು. ಹಾಗೇನಾದರೂ ಪ್ರಯೋಗಿಸಿದರೆ, ಇದು ಪ್ರಪಂಚವನ್ನೇ ದಹಿಸಿಬಿಡುವುದು. ಮಾನವನಲ್ಲದ, ಆತು ಪರಾಕ್ರಮಿಯಾದ ಶತ್ರುವೇನಾದರೂ ನಿನಗೆ ಯುದ್ಧದಲ್ಲಿ ಇದಿರಾದರೆ, ಅವನ ಸಂಹಾರಕ್ಕೆ ಈ ಅಸ್ತ್ರವನ್ನು ಉಪಯೋಗಿಸು".


ಅರ್ಜುನನು ಹಾಗೆಯೇ ಆಗಲೆಂದು ದ್ರೋಣರಿಗೆ ಭಾಷೆಯನ್ನಿತ್ತನು. ಎರಡು ಕೈಗಳನ್ನೂ ಜೋಡಿಸಿ, ಸಂಪುಟಮಾಡಿ ಬ್ರಹ್ಮಶಿರವೆಂಬ ಈ ಮಹಾಸ್ತ್ರವನ್ನು ಭಕ್ತಿಯಿಂದ ಸ್ವೀಕರಿಸಿದನು. ಇದನ್ನು ಉಪದೇಶಿಸಿದ ದ್ರೋಣರು, "ಪಾರ್ಥ! ಧನುರ್ವಿದ್ಯೆಯಲ್ಲಿ ನಿನಗೆ ಸಮಾನರು ಈ ಲೋಕದಲ್ಲಿ ಯಾರೂ ಇಲ್ಲ. ನಿನ್ನನ್ನು ಪರಾಜಯಗೊಳಿಸಲು ಯಾರೊಬ್ಬರಿಂದಲೂ ಸಾಧ್ಯವಿಲ್ಲ" ಎಂದು ಆಶೀರ್ವದಿಸಿದರು.


ಕುರು ರಾಜಕುಮಾರರಿಗೆ ಧನುರ್ವಿದ್ಯೆಯ ಉಪದೇಶವು ಪೂರ್ಣವಾಯಿತು. ದ್ರೋಣರು ಕೃಪ, ಸೋಮದತ್ತ, ಬಾಹ್ಲಿಕ, ವಿದುರ, ವ್ಯಾಸ, ಭೀಷ್ಮಾದಿಗಳಿಂದ ಪರಿವೃತನಾಗಿದ್ದ ಧೃತರಾಷ್ಟ್ರನನ್ನು ಸಂಧಿಸಿ ಹೇಳಿದರು, "ಮಹಾರಾಜ! ರಾಜಕುಮಾರರೆಲ್ಲರಿಗೂ ಧನುರ್ವಿದ್ಯಾಭ್ಯಾಸವು ಪೂರ್ಣವಾಗಿದೆ. ನೀನು ಅನುಜ್ಞೆಯನ್ನಿತ್ತರೆ, ಅವರೆಲ್ಲರೂ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ".

Comments


bottom of page