top of page

ಏಕಲವ್ಯನ ಗುರುಭಕ್ತಿ (ಮಹಾಭಾರತ ಕಥಾಮಾಲೆ 37)

ಏಕಲವ್ಯನ ಗುರುಭಕ್ತಿ


ದ್ರೋಣರ ಮಣ್ಣಿನ ಮೂರ್ತಿಯನ್ನೇ ಗುರುಗಳೆಂದು ನಂಬಿ ಭಯ ಭಕ್ತಿಗಳಿಂದ ಆರಾಧಿಸಿ, ಧನುರ್ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದ ಏಕಲವ್ಯನಿಗೆ ಬಾಣಗಳ ವಿಮೋಕ್ಷಣ-ಆದಾನ-ಸಂಧಾನಗಳಲ್ಲಿ ಪರಿಪೂರ್ಣತೆ ಉಂಟಾಯಿತು.


ಒಮ್ಮೆ ಕುರು ರಾಜಕುಮಾರರೆಲ್ಲ ದ್ರೋಣರ ಅಪ್ಪಣೆ ಪಡೆದು ಕಾಡಿಗೆ ಬೇಟೆಗಾಗಿ ತೆರಳಿದರು. ಅವರ ಜೊತೆಯಲ್ಲಿ ಸೇವಕರು ಬೇಟೆಗೆ ಬೇಕಾದ ಉಪಕರಣಗಳ ಜೊತೆಯಲ್ಲಿ ಒಂದು ನಾಯಿಯನ್ನೂ ಕರೆದೊಯ್ದರು. ವನ್ಯ ಮೃಗಗಳ ಬೇಟೆ ತೊಡಗಿತು. ನಾಯಿಯೂ ಜಿಂಕೆಯೇ ಮೊದಲಾದ ಪ್ರಾಣಿಗಳನ್ನು ಹುಡುಕುತ್ತಾ ಅತ್ತಿತ್ತ ಓಡಾಡಿ, ಕಡೆಗೆ ಧನುರ್ವಿದ್ಯೆಯ ಅಭ್ಯಾಸದಲ್ಲಿ ನಿರತನಾಗಿದ್ದ ಏಕಲವ್ಯನಿರುವೆಡೆ ಬಂದಿತು.

ಕಪ್ಪು ಬಣ್ಣದ, ಜಟಾಧಾರಿಯಾಗಿದ್ದ, ಕೃಷ್ಣಾಜಿನವನ್ನು ಉಟ್ಟಿದ್ದ ಏಕಲವ್ಯನನ್ನು ದೂರದಿಂದ ನೋಡಿದ ನಾಯಿಯು ಬೊಗಳಲು ಆರಂಭಿಸಿತು. ಅದನ್ನು ಕೇಳಿದ ಏಕಲವ್ಯನು, ನಾಯಿಯು ಬಾಯಿ ಮುಚ್ಚುವುದರೊಳಗಾಗಿ (ಕ್ಷಣ ಮಾತ್ರದಲ್ಲಿ) ತನ್ನ ಕೈಚಳಕದಿಂದ ಏಳು ಬಾಣಗಳನ್ನು ನಾಯಿಯ ಬಾಯಿಯೊಳಗೆ ಪ್ರಯೋಗಿಸಿ, ಶಬ್ದವಡಗಿಸಿದನು. ಅವನ ಏಳು ಬಾಣಗಳ ಪ್ರಯೋಗ ವೈಖರಿ ಹೇಗಿತ್ತೆಂದರೆ, ಆ ಬಾಣಗಳು ನಾಯಿಯ ಬೊಗಳುವಿಕೆಯನ್ನು ತಡೆದವೇ ಹೊರತು, ನಾಯಿಗೆ ಯಾವ ವಿಧವಾದ ಅಪಾಯವೂ ಉಂಟಾಗಲಿಲ್ಲ. ನಾಯಿಯು ಶರಸಮೇತವಾಗಿಯೇ ಪಾಂಡು ಕುಮಾರರ ಬಳಿ ಓಡಿ ಬಂದಿತು. ಬಾಯಿ ತುಂಬ ಶರಗಳನ್ನು ಹೊಂದಿದ್ದ ನಾಯಿಯನ್ನು ನೋಡಿದ ರಾಜಕುಮಾರರು ವಿಸ್ಮಿತರಾದರು; ನಾಯಿಯನ್ನು ಪರಿಶೀಲಿಸಿದರು. ಶರ ಪ್ರಯೋಗದ ಚಾತುರ್ಯವೂ, ಶಬ್ದವೇಧಿತ್ವವೂ ಅವರಿಗೆ ಅತಿಮಾನುಷವಾಗಿ ಕಂಡಿತು. ತಮಗಾರಿಗೂ ಅಂತಹ ಶರ ಪ್ರಯೋಗ ಚಾತುರ್ಯ ತಿಳಿಯದೇ ಇದ್ದುದರಿಂದ ಲಜ್ಜೆಗೊಂಡು, ಈ ಚಾತುರ್ಯವನ್ನು ಹೊಂದಿದ ಮಹಾ ವೀರರನ್ನು ಪ್ರಶಂಸಿಸಿದರು. ಅಂತಹ ಮಹಾನುಭಾವನನ್ನು ನೋಡುವ ಕುತೂಹಲದಿಂದ ಸುತ್ತೆಲ್ಲ ಶೋಧಿಸಿ, ಅನವರತ ಬಾಣ ಪ್ರಯೋಗ ಮಾಡುತ್ತಿದ್ದ ಏಕಲವ್ಯನೆಡೆಗೆ ಬಂದರು.


ತನ್ನ ಅಧ್ಯಯನದತ್ತಲೇ ಗಮನ ನೆಟ್ಟಿದ್ದ ಏಕಲವ್ಯನನ್ನು ಕೆಲ ಸಮಯದ ನಂತರ ರಾಜಕುಮಾರರು ಕೇಳಿದರು 'ಅಯ್ಯಾ! ನೀನಾರು? ನಿನ್ನ ತಂದೆಯ ಹೆಸರೇನು?'


ಏಕಲವ್ಯನು ಉತ್ತರಿಸಿದನು, "ನಿಷಾದಾಧಿಪತೇರ್ವೀರಾ ಹಿರಣ್ಯಧನುಷಃ ಸುತಮ್| ದ್ರೋಣ ಶಿಷ್ಯಂ ಚ ಮಾಂ ವಿತ್ತ ಧನುರ್ವೇದಕೃತ ಶ್ರಮಮ್||"

"ವೀರರೇ! ನಿಷಾದರಾಜ ಹಿರಣ್ಯ ಧನುಷನ ಮಗ ನಾನು ಏಕಲವ್ಯನೆಂದು ನನ್ನ ಹೆಸರು. ಮಿಗಿಲಾಗಿ, ಧನುರ್ವಿದ್ಯೆಗೆ ಆಚಾರ್ಯರೆನಿಸಿದ ಮಹಾಪುರುಷರಾದ ದ್ರೋಣರ ಶಿಷ್ಯನು ನಾನು. ಅವರ ಪಾದಾರವಿಂದಗಳ ಆಶ್ರಯದಲ್ಲಿ ಧನುರ್ವಿದ್ಯೆಯನ್ನು ಅಭ್ಯಸಿಸುತ್ತಿರುವೆನು" ಎಂದು ಹೇಳಿ, ತನ್ನ ಅಭ್ಯಾಸವನ್ನು ಮುಂದುವರಿಸಿದನು.


ರಾಜಕುಮಾರರೆಲ್ಲ ವಿಸ್ಮಿತರಾಗಿ, ಹಸ್ತಿನಾವತಿಗೆ ಹಿಂದಿರುಗಿದರು. ಏಕಲವ್ಯನ ಶರ ಪ್ರಯೋಗದ ಕೈಚಳಕವನ್ನು ದ್ರೋಣರಿಗೆ ತಿಳಿಸಿದರು. ಅರ್ಜುನನು ಮಾತ್ರ ಆತಂಕಿತನಾಗಿ ಏಕಾಂತದಲ್ಲಿ ಗುರುಗಳನ್ನು ಸಂಧಿಸಿ, ವಿನಯ ಪೂರ್ವಕವಾಗಿ ಹೇಳಿದನು,

"ಗುರುದೇವ! ಹಿಂದೊಮ್ಮೆ ತಾವು ನನ್ನನ್ನು ಗಾಢವಾಗಿ ಆಲಂಗಿಸಿಕೊಂಡು, ನನ್ನನ್ನು ಧನುರ್ವಿದ್ಯೆಯಲ್ಲಿ ಅದ್ವಿತೀಯನನ್ನಾಗಿ ಮಾಡುವೆನೆಂದು ಹೇಳಿದ್ದೀರಿ. ನಿಮ್ಮ ಮಾತು ಸತ್ಯವೇ ಆಗಿದ್ದರೆ, ನಿಷಾದ ಪುತ್ರನೂ ನಿಮ್ಮ ಶಿಷ್ಯನೂ ಆದ ಏಕಲವ್ಯನು ಅಸ್ತ್ರ ವಿದ್ಯೆಯಲ್ಲಿ ನನಗಿಂತಲೂ ವಿಶಿಷ್ಟನೂ, ಲೋಕಕ್ಕೇ ಅದ್ವಿತೀಯನೂ ಹೇಗಾಗುತ್ತಿದ್ದನು?"


ದ್ರೋಣರು ಕ್ಷಣಕಾಲ ಯೋಚಿಸಿ ಕೊನೆಗೆ ಅರ್ಜುನನೊಂದಿಗೆ ನಿಷಾದ ರಾಜಕುಮಾರನಿದ್ದೆಡೆಗೆ ಹೋದರು. ಅಲ್ಲಿ, ಅವರೀರ್ವರೂ ಏಕಲವ್ಯನನ್ನು ಕಂಡರು. ಶರೀರವು ಧೂಳಿನಿಂದ ಆವೃತವಾಗಿತ್ತು. ತಲೆಯು ಜಡೆಗಟ್ಟಿತ್ತು. ಉಟ್ಟ ಬಟ್ಟೆಯು ಚಿಂದಿಯಾಗಿತ್ತು. ಇದಾವುದರ ಪರಿವೆಯೇ ಇಲ್ಲದೆ ಏಕಲವ್ಯನು ಅನವರತ ಶರಪ್ರಯೋಗ ಅಭ್ಯಾಸದಲ್ಲಿ ತೊಡಗಿದ್ದನು. ಬತ್ತಳಿಕೆಯಿಂದ ಆಹಾರವನ್ನು ಸೆಳೆದು, ಧನುಸ್ಸಿಗೆ ಅನುಸಂಧಾನ ಮಾಡಿ ಚಾಪವನ್ನು ಎಳೆದು ಗುರಿಯಿಟ್ಟು ಹೊಡೆಯುವ ಪ್ರಕ್ರಿಯೆಯು ಅವ್ಯಾಹತವಾಗಿ ಸಾಗಿತ್ತು. ಅನವರತ ಪ್ರಯೋಗಿಸಲ್ಪಟ್ಟ ಶರಗಳು ಒಂದನ್ನೊಂದು ಅಂಟಿಕೊಂಡಂತೆ ಸಾಗುತ್ತಿದ್ದವು; ಲಕ್ಷ್ಯವನ್ನು ಬೇಧಿಸುತ್ತಿದ್ದವು. ನೋಡುವ ಇವರೀರ್ವರಿಗೆ ಕೇವಲ 'ಸೊಯ್' ಶಬ್ದದೊಡನೆ ಶರ ಪ್ರವಾಹವು ಮಾತ್ರ ಗೋಚರವಾಗುತ್ತಿತ್ತು. ದ್ರೋಣರು ಈ ಅದ್ಭುತವನ್ನು ಕಂಡು ಬೆರಗಾದರು.


ಆಚಾರ್ಯ ದ್ರೋಣರು ಬಳಿ ಬಂದುದನ್ನು ಕಂಡೊಡನೆಯೇ ಏಕಲವ್ಯನು ಅವರ ಬಳಿ ಹೋಗಿ ಶಿರಬಾಗಿ ನಮಸ್ಕರಿಸಿದನು. ಅವರಿಗೆ ವಿಧಿ ಪೂರ್ವಕವಾಗಿ ಪೂಜೆ ಮಾಡಿ, ತಾನು ಅವರ ಶಿಷ್ಯನೆಂದು ಅರಿಕೆ ಮಾಡಿಕೊಂಡು ಅಂಜಲಿ ಬದ್ಧನಾಗಿ ಅವರ ಮುಂದೆ ನಿಂತುಕೊಂಡನು.

ದ್ರೋಣರು ಹೇಳಿದರು,

"ಯದಿ ಶಿಷ್ಯೋऽಸಿ ಮೇ ವೀರ ವೇತನಂ ದೀಯತಾಂ ಮಮ"

"ವೀರ ಏಕಲವ್ಯ! ನೀನು ನನಗೆ ಶಿಷ್ಯನೇ ಆಗಿದ್ದರೆ, ನನಗೆ ಗುರುದಕ್ಷಿಣೆಯನ್ನು ಕೊಡು".

Comments


bottom of page