ಭೀಷ್ಮ- ದ್ರೋಣರ ಮಾತುಕತೆ (ಮಹಾಭಾರತ ಕಥಾಮಾಲೆ 34)
- Arunkumar Bhat

- Apr 22
- 2 min read
ಭೀಷ್ಮ- ದ್ರೋಣರ ಮಾತುಕತೆ
ದ್ರೋಣರ ಅಸ್ತ್ರ ವಿದ್ಯಾ ಚಮತ್ಕಾರದಿಂದ ಬಹುವಾಗಿ ಪ್ರಭಾವಿತರಾದ ಕುರುಕುಲದ ರಾಜಕುಮಾರರು ದ್ರೋಣರಿಗೆ ಅಭಿವಾದನ ಮಾಡಿ, ಈ ಅಪ್ರತಿಮ ಕೌಶಲವನ್ನು ಹೊಂದಿದ ಅವರ ಕುಲಗೋತ್ರಗಳನ್ನು ಅರಿಯಲು ಉತ್ಸುಕರಾದರು. ದ್ರೋಣರು ಹೇಳಿದ ಯಾವ ಕಾರ್ಯವನ್ನಾದರೂ ಮಾಡಲು ಸಿದ್ಧರಾದರು. ಈ ಬ್ರಾಹ್ಮಣೋತ್ತಮನ ಕುರಿತಾಗಿ ವಿನಯ ಪೂರ್ವಕವಾಗಿ ಕೇಳಿದರು.
ಉತ್ತರವಾಗಿ ದ್ರೋಣರು ಹೇಳಿದರು,
"ಆಚಕ್ಷಧ್ವಂ ಚ ಭೀಷ್ಮಾಯ ರೂಪೇಣ ಚ ಗುಣೈಶ್ಚ ಮಾಮ್|
ಸ ಏವ ಸುಮಹಾತೇಜಾಃ ಸಾಂಪ್ರತಂ ಪ್ರತಿಪತ್ಸ್ಯತೇ||"
"ನೀವು ಈಗಲೇ ಹೋಗಿ ನನ್ನ ರೂಪ ಗುಣಗಳನ್ನು ಭೀಷ್ಮರಿಗೆ ವಿಷದೀಕರಿಸಿರಿ. ಆ ಮಹಾಭಾಗನು ನಾನಾರೆಂಬುದನ್ನು ಕೂಡಲೇ ತಿಳಿಯುವನು."
ರಾಜ ಪುತ್ರರು ದ್ರೋಣರ ಮಾತನ್ನು ಮನ್ನಿಸಿ, ಅವರಿಗೆ ನಮಸ್ಕರಿಸಿ, ಪಿತಾಮಹನಾದ ಭೀಷ್ಮನಲ್ಲಿಗೆ ತೆರಳಿದರು. ಆಟದ ಮೈದಾನದಲ್ಲಿ ನಡೆದ ಘಟನೆಯನ್ನು ವಿಷದವಾಗಿ ಹೇಳಿದರು.

ಈ ವೃತ್ತಾಂತವನ್ನು ಆಲಿಸಿದ ಭೀಷ್ಮನು ಈ ಅದ್ಭುತ ಅಸ್ತ್ರವಿದ್ಯಾ ಚಮತ್ಕೃತಿಯನ್ನು ಹೊಂದಿದವರು ದ್ರೋಣರು ಮಾತ್ರ ಬಂದನು ನಿಶ್ಚಯಿಸಿದನು. ರಾಜ ಕುಮಾರರಿಗೆ ಯೋಗ್ಯರಾದ ಗುರುಗಳು ಸಿಕ್ಕಿದರೆಂದು ಮನದಲ್ಲಿಯೇ ಹಿಗ್ಗಿದನು. ತಾನಾಗಿಯೇ ಕೃಪರ ಮನೆಗೆ ತೆರಳಿ, ಸಕಲ ಗೌರವಗಳೊಡನೆ ದ್ರೋಣರನ್ನು ಅರಮನೆಗೆ ಕರೆತಂದು ಉಪಚರಿಸಿದನು. ಪರಸ್ಪರ ಕುಶಲ ಪ್ರಶ್ನೆಗಳಾದವು. ಭೀಷ್ಮರು ದ್ರೋಣರಲ್ಲಿ ಕೇಳಿದರು, "ಬ್ರಾಹ್ಮಣೋತ್ತಮರೇ! ನೀವು ಹಸ್ತಿನಾಪುರಕ್ಕೆ ಬಂದ ಕಾರಣವೇನು?".
ಭೀಷ್ಮರ ಮಾತಿಗೆ ಉತ್ತರವಾಗಿ ದ್ರೋಣರು ತಮ್ಮ ಆತ್ಮಕಥನವನ್ನೇ ಹೇಳಿದರು. ತಾವು ಅಗ್ನಿವೇಶರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಆದ ದ್ರುಪದನಲ್ಲಿನ ಸ್ನೇಹ, ತನ್ನ ಸಹಪಾಠಿಯಾದ ಈ ಪಾಂಚಾಲ ರಾಜಕುಮಾರನ ಮಾತುಗಳು, ನಂತರ ದ್ರುಪದನು ಪಾಂಚಾಲದ ದೊರೆಯಾದದ್ದು, ಇತ್ತ ತಾನು (ದ್ರೋಣರು) ಪುತ್ರಕಾಮನಾಗಿ, ಕೃಪಿಯನ್ನು ವಿವಾಹವಾಗಿ, ತೇಜಸ್ವಿಯಾದ 'ಅಶ್ವತ್ಥಾಮ' ನೆಂಬ ಪುತ್ರನನ್ನು ಪಡೆದದ್ದು, ಇವೆಲ್ಲವನ್ನೂ ವಿವರಿಸಿದರು. ಇಷ್ಟೆಲ್ಲಾ ಆದರೂ, ತನ್ನ ಐಶ್ವರ್ಯ ಹೀನತೆಯನ್ನೂ ವಿವರಿಸಿದರು.
"ಪುತ್ರ ಅಶ್ವತ್ಥಾಮನು ಧನವಂತರಾದ ಕೆಲ ಬಾಲಕರು ಹಾಲು ಕುಡಿಯುತ್ತಿರುವುದನ್ನು ಕಂಡು ತನಗೂ ಹಾಲು ಬೇಕೆಂದು ಹಠ ಮಾಡತೊಡಗಿದನು. ಆದರೆ ನಾನು ಆ ದೇಶದಲ್ಲಿ ಅನೇಕ ಬಾರಿ ಸುತ್ತಾಡಿದರೂ ಯೋಗ್ಯ ದಾನಿಯಾಗಲೀ, ಶುಭಲಕ್ಷಣಗಳನ್ನು ಹೊಂದಿದ ಹಾಲು ಕರೆಯುವ ಹಸುವಾಗಲಿ ಎಲ್ಲಿಯೂ ಸಿಕ್ಕಲಿಲ್ಲ. ವಿಫಲನಾಗಿ ನಾನು ಆಶ್ರಮಕ್ಕೆ ಮರಳಿದೆನು."
ದ್ರೋಣರು ಮುಂದುವರಿಸುತ್ತಾ ಹೇಳಿದರು, "ಆಶ್ರಮಕ್ಕೆ ಹಿಂದಿರುಗಿದ ವೇಳೆ ಅಲ್ಲಿ ಅಶ್ವತ್ಥಾಮನಿರಲಿಲ್ಲ ಪಕ್ಕದ ಆಶ್ರಮದಲ್ಲಿದ್ದ ಬಾಲಕರೊಡನೆ ಆಟವಾಡುತ್ತಿದ್ದ ಆತನನ್ನು ಕರೆತರಲು ಹೋದೆನು. ಮಕ್ಕಳರೆಲ್ಲರೂ ಕೇಕೆ ಹಾಕಿ ನಗುತ್ತಿದ್ದರು. ವಿಷಯವೇನೆಂದು ತಿಳಿಯುವ ಕುತೂಹಲದಿಂದ ಪಕ್ಕದಲ್ಲಿದ್ದ ಪೊದೆಯ ಮರೆಯಲ್ಲಿ ನಿಂತು ಆಲಿಸಿದೆ, 'ಎಷ್ಟು ಬೇಕಾದರೂ ಕುಡಿ' ಎಂದು ಹೇಳುತ್ತಾ ಬಾಲಕನೊಬ್ಬನು ಅಶ್ವತ್ಥಾಮನ ಕೈಲಿದ್ದ ಪಾತ್ರೆಗೆ ಅಕ್ಕಿಯ ಹಿಟ್ಟನ್ನು ಹಾಕಿ ಕದರಿದ ಬಿಳುಪಾದ ನೀರನ್ನು ಸುರಿದನು. ಅದನ್ನು ಹಾಲೆಂದು ತಿಳಿದು, ಸಂಭ್ರಮಿಸಿ ಕುಡಿದ ಅಶ್ವತ್ಥಾಮನು, 'ಇಂದು ಹಾಲು ಕುಡಿದೆನು' 'ನನ್ನ ತಂದೆಯಲ್ಲಿ ಈ ವಿಷಯವನ್ನು ಹೇಳುವೆನು' ಎಂದು ಕುಣಿದಾಡಲು ಆರಂಭಿಸಿದನು. ಹೀಗೆ ಜೊತೆಗಾರರ ಅಪಹಾಸ್ಯಕ್ಕೆ ವಸ್ತುವಾದ ಮಗನನ್ನು ನೋಡಿ, ಮನ ನೊಂದಿತು."
"ದ್ರೋಣಂ ಧಿಗಸ್ತ್ವಧನಿನಂ ಯೋ ಧನಂ ನಾಥಿಗಚ್ಛತಿ"
"ಐಶ್ವರ್ಯವನ್ನು ಹೊಂದಿರದ ಧನಹೀನನಾದ ದ್ರೋಣನಿಗೆ ಧಿಕ್ಕಾರವಿರಲಿ" ಎಂದು ನನ್ನನ್ನೇ ನಾನು ಹಳಿದುಕೊಂಡೆನು.
ಅಲ್ಲಿದ್ದ ಬಾಲಕರು ನನ್ನ ಪುತ್ರನನ್ನು ಮಾತ್ರವಲ್ಲ, ನನ್ನನ್ನೂ ಪರಿಹಾಸ ಮಾಡಿ ನಗುತ್ತಿದ್ದರು. ಇದರಿಂದ ಮನಸ್ಸು ಅತ್ಯಂತ ನೊಂದಿತು. ಪೊದೆಯ ಮರೆಯಿಂದ ಹೊರಬಂದು, ಅಶ್ವತ್ಥಾಮನ ಕೈ ಹಿಡಿದು ಆಶ್ರಮದತ್ತ ಖಿನ್ನ ವದನನಾಗಿ ನಡೆದುಬಿಟ್ಟೆನು.
ಧನಾರ್ಜನೆ ಮಾಡಬೇಕೆಂಬುದು ನಿಜ. ಹೇಗೆ ಮಾಡಬೇಕು? ಯಾವ ರಾಜನಲ್ಲಿಯಾದರೂ ಅಡಿಯಾಳಾಗಿದ್ದು ಆತನ ರಾಜ್ಯದಲ್ಲಿ ಧನುರ್ವಿದ್ಯೆಯನ್ನು ಕಲಿಸಿ, ಹಣ ಸಂಪಾದಿಸಬಹುದು. ಆದರೆ, "ಪರೋಪಸೇವಾಂ ಪಾಪಿಷ್ಠಾಂ ನ ಕುರ್ಯಾಂ ಧನೇಪ್ಸಯಾ"
"ಹಣಕ್ಕಾಗಿ ಪಾಪಭೂಯಿಷ್ಠವಾದ ಪರೋಪ ಸೇವೆಯನ್ನು ಎಂದಿಗೂ ಮಾಡಲಾರೆನು" ಎಂದು ನಿಶ್ಚಯಿಸಿದೆನು. ಆದರೆ, ಬೇರಾವ ಮಾರ್ಗವಿದೆ? ದ್ರುಪದನ ಹಿಂಡಿನ ಮಾತುಗಳನ್ನು ನೆನಪಿಸಿಕೊಂಡೆನು. ನನ್ನ ಮಿತ್ರನಾಗಿದ್ದ ಆತನ ಚಿತ್ರಗಳು ಕಣ್ಮುಂದೆ ಸುಳಿದವು. ಒಡನೆಯೇ ಪತ್ನಿ ಪುತ್ರರ ಸಮೇತವಾಗಿ ಪಾಂಚಾಲದತ್ತ ಪಯಣ ಬೆಳೆಸಿದೆನು. ಮಾರ್ಗ ಮಧ್ಯದಲ್ಲೇ ಪಾಂಚಾಲ ದೇಶಕ್ಕೆ ದ್ರುಪದನು ರಾಜನಾಗಿರುವ ಸುವಾರ್ತೆಯು ಕಿವಿಗೆ ಬಿದ್ದಿತು. ಇದನ್ನು ನನ್ನ ಅದೃಷ್ಠವೆಂದೇ ಭಾವಿಸಿದೆನು. ಹತ್ತಾರು ಯೋಜನಗಳನ್ನು ಕ್ರಮಿಸಿದರೂ ನನಗೆ ಆಯಾಸವಾಗಲಿಲ್ಲ. ಅಧಿಕವಾದ ಆನಂದದಿಂದ ಅರಮನೆಯನ್ನು ಸೇರಿ, ದ್ರುಪದನ ಮಹಾಸಭೆಯಲ್ಲಿ ನನ್ನ ಮಿತ್ರನನ್ನು ಸಂದರ್ಶಿಸಿ, ಮೈತ್ರಿ ಭಾವದಿಂದ ನಾನು ಆತನನ್ನು ಮಾತನಾಡಿಸಿದೆ. ಆದರೆ ಆತ ನನ್ನನ್ನು ತಿರಸ್ಕರಿಸಿ, ಅವಮಾನಿಸಿದನು. ಕೇವಲ ಒಂದು ರಾತ್ರಿ ತಂಗಲು ಜಾಗವನ್ನೂ, ಒಂದು ಹೊತ್ತಿನ ಊಟವನ್ನೂ ಕೊಡುತ್ತೇನೆಂದು ಪರಿಹಾಸಪೂರ್ವಕವಾಗಿ ಹೇಳಿದನು. ಆ ಮಾತನ್ನು ಕೇಳಿ, ಅರೆಕ್ಷಣವೂ ಅಲ್ಲಿ ನಿಲ್ಲದೇ, ಈ ಅವಮಾನಕ್ಕೆ ತಕ್ಕ ಶಾಸ್ತಿ ಮಾಡುವ ಮನೋ ಸಂಕಲ್ಪದೊಂದಿಗೆ ಅಲ್ಲಿಂದ ಹೊರಟು, ಹಸ್ತಿನೆಯನ್ನು ಸೇರಿದೆನು" ಎಂದು ದ್ರೋಣರು ವಿವರಿಸಿದರು.




Comments