top of page

ದ್ರೋಣರ ಧನುರ್ವಿದ್ಯಾ ಚಮತ್ಕಾರ (ಮಹಾಭಾರತ ಕಥಾಮಾಲೆ 33)

Apr 8
2 min read

ದ್ರೋಣರ ಧನುರ್ವಿದ್ಯಾ ಚಮತ್ಕಾರ

ಬಾಲ್ಯದ ಮೈತ್ರಿಯನ್ನು ಮರೆತ ದ್ರುಪದನು ದ್ರೋಣರನ್ನು ತಿರಸ್ಕರಿಸಿದ್ದರಿಂದ ಅಪಮಾನಿತರಾದ ದ್ರೋಣರು ಹಸ್ತಿನಾಪುರವನ್ನು ತಲುಪಿ, ಅಲ್ಲಿ ತಮ್ಮ ಭಾವ ಮೈದುನರಾದ ಕೃಪರ ಮನೆಯಲ್ಲಿ ತಮ್ಮ ಪತ್ನಿ ಪುತ್ರನೊಡನೆ ವಾಸಿಸತೊಡಗಿದರು. ಅಲ್ಲಿ ಅನೇಕ ದಿನಗಳ ಕಾಲ ತಾವು ಯಾರೆಂಬುದನ್ನು ಲೋಕಕ್ಕೆ ತಿಳಿಯಗೊಡದೆ ಅಜ್ಞಾತರಾಗಿಯೇ ಕಾಲ ಕಳೆದರು. ದ್ರೋಣ ಪುತ್ರನಾದ ಅಶ್ವತ್ಥಾಮನು ಕೃಪರಿಲ್ಲದ ವೇಳೆಯಲ್ಲಿ ರಾಜಕುಮಾರರಿಗೆ ಧನುರ್ವಿದ್ಯೆಯನ್ನು ಕಲಿಸುತ್ತಿದ್ದನು. ಆದರೆ, ಅಶ್ವತ್ಥಾಮನು ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ದ್ರೋಣರು ತಮ್ಮ ಪರಿಚಯವನ್ನು ತಮ್ಮ ಯೋಗ್ಯತೆಯ ಪ್ರದರ್ಶನದ ಮೂಲಕವೇ ಮಾಡಿಕೊಡಬೇಕೆಂದು ನಿಶ್ಚಯಿಸಿದ್ದರು. ಆ ಕಾಲವೂ ಶೀಘ್ರದಲ್ಲಿಯೇ ಆಗಮಿಸಿತು.


ಒಮ್ಮೆ ರಾಜಕುಮಾರರೆಲ್ಲ ಸೇರಿ ಪಟ್ಟಣದ ಹೊರಬಾಹೆಯಲ್ಲಿದ್ದ ಮೈದಾನದಲ್ಲಿ ಚಿಣ್ಣಿಯನ್ನು ಬಾವಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಾವಿಯು ಶಿಥಿಲವೂ ಆಳವೂ ಆಗಿದ್ದರಿಂದಾಗಿ ಯಾರಿಗೂ ಆ ಬಾವಿಯೊಳಗೆ ಇಳಿಯುವುದು ಅಸಾಧ್ಯವಾಯಿತು.

ಆ ವೇಳೆಗೆ, ಕಪ್ಪು ಬಣ್ಣದ ಕೃಶ ಶರೀರಿಯೂ ಅಗ್ನಿಹೋತ್ರಿಯೂ, ಕಾರ್ಯಾರ್ಥಿಯೂ ಆದ ದ್ರೋಣರು ತನ್ನ ನಿತ್ಯ ನೈಮಿತ್ತಿಕ ಕರ್ಮಗಳನ್ನು ಮುಗಿಸಿ, ರಾಜ ಕುಮಾರರೆಡೆಗೆ ಬಂದರು.


ಚಿಣ್ಣಿ ಹೊರತೆಗೆಯುವ ಮಾರ್ಗ ಕಾಣದೆ ನಿರುತ್ಸಾಹಿಗಳಾಗಿದ್ದ ರಾಜಕುಮಾರರನ್ನು ಮಾತನಾಡಿಸಿ, ಅವರ ಆಕಾಂಕ್ಷೆಯನ್ನು ಅರಿತು, ಮಂದಹಾಸ ಬೀರುತ್ತಾ ಹೇಳಿದರು, "ಓಹ್! ನಿಮ್ಮ ಕ್ಷಾತ್ರ ಬಲಕ್ಕೆ ಧಿಕ್ಕಾರವಿರಲಿ! ಭರತ ವಂಶದಲ್ಲಿ ಜನಿಸಿದ ನಿಮಗೆ ಬಾವಿಯಲ್ಲಿ ಬಿದ್ದ ಚಿಣ್ಣಿಯನ್ನೂ ಬಾಣ ಪ್ರಯೋಗದಿಂದ ಮೇಲೆತ್ತುವ ಸಾಮರ್ಥ್ಯವಿಲ್ಲವೇ? ಇದು ನಾಚಿಕೆ ಪಡಬೇಕಾದ ಅಂಶ".

ಮುಂದುವರಿದರು, "ವೀಟಾಂ ಚಾ ಮುದ್ರಿಕಾಂ ಚೈವ ಹ್ಯಹಮೇತದಪಿ ದ್ವಯಮ್|

ಉದ್ಧರೇಯಮಷೀಕಾಭಿರ್ಭೋಜನಂ ಮೇ ಪ್ರದೀಯತಾಮ್||"

"ಬಾವಿಯೊಳಗೆ ಬಿದ್ದಿರುವ ಚಿಣ್ಣಿಯನ್ನು ದರ್ಭೆಯಿಂದಲೇ ಹೊರತೆಗೆಯುವೆನು. ಚಿಣ್ಣಿ ಮಾತ್ರವಲ್ಲ, ಅದಕ್ಕಿಂತಲೂ ಚಿಕ್ಕದಾದ ಈ ಅಂಗುಲೀಯಕ (ಉಂಗುರ) ವನ್ನು ನಿಮ್ಮೆದುರೇ ಬಾವಿಯಲ್ಲಿ ಹಾಕಿ, ಮೇಲೆ ತೆಗೆಯುವೆನು. ಪ್ರತಿಯಾಗಿ, ನೀವು ನನಗೆ ಭೋಜನವನ್ನು ಮಾಡಿಸಿರಿ (ನನ್ನ ಜೀವಿಕೆಗೆ ವ್ಯವಸ್ಥೆ ಮಾಡಿರಿ)" ಹೀಗೆ ಹೇಳಿ, ತಮ್ಮ ಚಿರಳಲ್ಲಿದ್ದ ಅಂಗುಲೀಯಕವನ್ನೂ ಬಾವಿಯೊಳಗೆ ಹಾಕಿಬಿಟ್ಟರು.


ಒಡನೆಯೇ ಯುಧಿಷ್ಠಿರನು ಮುಂದೆ ಬಂದು, "ಬ್ರಾಹ್ಮಣೋತ್ತಮರೆ! ನಿಮ್ಮ ಮಾತು ನಿಜವಾದರೆ, ಕೇವಲ ಕೆಲ ದಿನಗಳ ಭೋಜನವಲ್ಲ, ಆಜೀವ ಪರ್ಯಂತ ನಿಮಗೆ ಬೇಕಾದುದೆಲ್ಲವನ್ನೂ ಒದಗಿಸಿಕೊಡುವೆವು" ಎಂದನು.


ಈ ಮಾತುಗಳಿಗೆ ನಸುನಕ್ಕ ದ್ರೋಣರು ತಮ್ಮಲ್ಲಿದ್ದ ಒಂದು ಹಿಡಿ ದರ್ಭೆಯನ್ನು ಹೊರತೆಗೆದು, ಅದರಲ್ಲಿನ ಒಂದು ದರ್ಭೆಯನ್ನು ಮಂತ್ರ ಪುರಸ್ಸರವಾಗಿ ಮಹಾಸ್ತ್ರವಾಗಿ ಪರಿವರ್ತಿಸಿದರು. ಧನುವಿಗೆ ಜೋಡಿಸಿ, ಬಾವಿಯಲ್ಲಿ ಬಿದ್ದಿದ್ದ ಚಿಣ್ಣಿಗೆ ಗುರಿಯಿಟ್ಟು ಪ್ರಯೋಗಿಸಿದರು. ಈ ಕುಶಾಸ್ತ್ರವು 'ಸೊಂಯ್' ಎಂಬ ಶಬ್ದದೊಂದಿಗೆ ಸಾಗಿ, ಚಿಣ್ಣಿಗೆ ಚುಚ್ಚಿಕೊಂಡಿತು. ಎರಡನೆಯ ದರ್ಭೆಯನ್ನು ಮಂತ್ರ ಪೂರ್ವಕವಾಗಿ ಕುಶಾಸ್ತ್ರವನ್ನಾಗಿಸಿ ಪ್ರಯೋಗಿಸಲು ಅದು ಮೊದಲ ಕುಶಾಸ್ತ್ರದ ಹಿಂಬದಿಯಲ್ಲಿ ಅಂಟಿಕೊಂಡಿತು. ರಾಜಕುಮಾರರೆಲ್ಲ ಬೆರಗು ಕಂಗಳಿಂದ ನೋಡುತ್ತಿರಲು ತೃತೀಯ, ಚತುರ್ಥ, ಪಂಚಮ...... ಹೀಗೆ ಕುಶಾಸ್ತ್ರಗಳನ್ನು ದ್ರೋಣರು ಒಂದರ ಹಿಂದೊಂದು ಚುಚ್ಚಿಕೊಳ್ಳುವಂತೆ ಪ್ರಯೋಗಿಸುತ್ತಾ ಹೋದರು. ಕಡೆಯ ಕುಶಾಸ್ತ್ರವು ಬಾವಿಯ ಮೇಲ್ಭಾಗದಲ್ಲೇ ತನ್ನ ಹಿಂದಿನ ದರ್ಭಾಸ್ತ್ರದೊಡನೆ ಸೇರಿಕೊಂಡು ನಿಂತಿತು. ಈಗ ಬಾವಿಯಿಂದ ಬಿಂದಿಗೆಯನ್ನು ಎಳೆಯುವ ರೀತಿಯಲ್ಲಿ ಈ ಕುಶಾಸ್ತ್ರಗಳ ಸರಪಳಿಯಿಂದ ಚಿಣ್ಣಿಯನ್ನು ಮೇಲೆಳೆದು ದ್ರೋಣರು ರಾಜಪುತ್ರರಿಗೆ ಕೊಟ್ಟರು.


ಈ ಎಂದೂ, ಎಲ್ಲೂ ಕಂಡು ಕೇಳರಿಯದ ಧನುರ್ವಿದ್ಯಾ ಕೌತುಕವನ್ನು ನೋಡುತ್ತಿದ್ದ ರಾಜಪುತ್ರರು ಕನಸಲ್ಲವೆಂಬ ವಿಷಯವನ್ನು ತಿಳಿಯಲು ಕಣ್ಣುಜ್ಜಿಕೊಂಡರು. ಒಂದೆರಡು ಕ್ಷಣಗಳ ನಂತರ ದ್ರೋಣರ ಉಂಗುರದ ವಿಷಯವನ್ನು ನೆನಪಿಸಿಕೊಂಡು, "ಬ್ರಾಹ್ಮಣೋತ್ತಮರೇ! ನಿಮ್ಮ ಉಂಗುರವನ್ನೂ ಬಾವಿಯಿಂದ ಹೊರ ತೆಗೆಯಿರಿ" ಎಂದರು.


ಉಂಗುರವನ್ನು ಹೊರ ತೆಗೆಯಲು ದ್ರೋಣರು ಕುಶಾಸ್ತ್ರ ಪ್ರಯೋಗ ಮಾಡಲಿಲ್ಲ. ಬದಲಾಗಿ, ಧನುಸ್ಸಿಗೆ ಶರವನ್ನು ಸಂಯೋಜಿಸಿ ಪ್ರಯೋಗಿಸಿದರು. 'ಸೊಂಯ್' ಶಬ್ದದೊಂದಿಗೆ ಶರವು ಸಾಗಿದ್ದನ್ನು ಮಾತ್ರ ರಾಜಕುಮಾರರು ಗ್ರಹಿಸಿದರು. ಮುಂದಿನ ಕ್ಷಣದಲ್ಲಿ ಬಾವಿಯಲ್ಲಿ ಬಿದ್ದಿದ್ದ ಉಂಗುರ ದ್ರೋಣರ ಕೈಯಲ್ಲಿತ್ತು. ದ್ರೋಣರು ಆ ಉಂಗುರವನ್ನು ತಮ್ಮ ಸುತ್ತಲೂ ಭ್ರಾಂತರಂತೆ ನಿಂತಿದ್ದ ರಾಜಕುಮಾರರ ಕೈಗೆ ನೋಡಲು ಕೊಟ್ಟರು.


ರಾಜಕುಮಾರರಿಗೆ ಅದು ಅತ್ಯದ್ಭುತ ಸಾಧನೆಯ ಅಸ್ತ್ರಪ್ರಯೋಗವೆನ್ನಿಸಿತು. ಲಕ್ಷ್ಯಕ್ಕೆ ಗುರಿಯಿಟ್ಟು ಹೊಡೆಯಬಹುದು; ಲಕ್ಷವನ್ನೇ ಬಾಣ ಪ್ರಯೋಗದಿಂದ ಹತ್ತಿರಕ್ಕೆ ಸೆಳೆಯುವುದು ಸಾಮಾನ್ಯವಲ್ಲ.


ಇಲ್ಲಿ, ಯಾವ ಲೋಹವನ್ನು ಹೇಗೆ ಉಪಯೋಗಿಸಬೇಕೆಂಬ ವೈಜ್ಞಾನಿಕತೆಗೆ ಆತ್ಮಶಕ್ತಿಯೂ ಸೇರಿದಾಗ ಮಾತ್ರ ಈ ಸಾಧನೆ ಸಾಧ್ಯವಾಗುತ್ತದೆ. ಮಾನವನೋರ್ವ ತನ್ನ ಮಂತ್ರ ಶಕ್ತಿಯಿಂದ ಅರ್ಜಿಸಿದ ಮಹಾಶಕ್ತಿಯಿಂದ ಕುಶವನ್ನೇ ಬ್ರಹ್ಮಾಸ್ತ್ರವಾಗಿಸುವುದು ಕೇವಲ ಆತ್ಮ ಬಲದಿಂದ ಮಾತ್ರ ಸಾಧ್ಯ.

Comments


bottom of page