top of page

ಕೃಪ ಮತ್ತು ದ್ರೋಣರ ವೃತ್ತಾಂತ (ಮಹಾಭಾರತ ಕಥಾಮಾಲೆ 30)

ಕೃಪ ಮತ್ತು ದ್ರೋಣರ ವೃತ್ತಾಂತ

ಶಂತನು ಚಕ್ರವರ್ತಿಯು ತನ್ನ ಸೈನಿಕರೊಡಗೂಡಿ ಬೇಟೆಯಾಡಲು ಬಂದಿದ್ದಾಗ ಅವನ ಸೈನಿಕನೊಬ್ಬನು ಪಾಲಕರಿಲ್ಲದೇ ಅಳುತ್ತಿದ್ದ ಈ ಮಕ್ಕಳನ್ನು ಕಂಡನು. ಮಕ್ಕಳ ಸಮೀಪವೇ ಇದ್ದ ಧನುರ್ಬಾಣಗಳನ್ನೂ, ಕೃಷ್ಣಾಜಿನವನ್ನೂ ಕಂಡು ಈ ಮಕ್ಕಳು ಧನುರ್ವಿದ್ಯೆಯನ್ನು ಬಲ್ಲ ಬ್ರಾಹ್ಮಣನೋರ್ವನ ಮಕ್ಕಳಾಗಿರಬಹುದೆಂದು ಊಹಿಸಿ, ಅಲ್ಲಿದ್ದ ಧನುರ್ಭಾಣಗಳನ್ನು ಮಕ್ಕಳನ್ನೂ ಎತ್ತಿ ತಂದು ಶಂತನುವಿಗೆ ಒಪ್ಪಿಸಿದನು. ಆ ಮಕ್ಕಳನ್ನು ಕೃಪಾ ದೃಷ್ಟಿಯಿಂದ ನೋಡಿದ ಶಂತನು, ಅವರನ್ನು ತನ್ನ ಅರಮನೆಗೆ ಕರೆ ತಂದು ಜಾತಕರ್ಮ-ನಾಮಕರಣಾದಿ ಸಂಸ್ಕಾರಗಳನ್ನು ಮಾಡಿದನು. ತನ್ನ ಕೃಪೆಯಿಂದ ಈ ಮಕ್ಕಳು ಸಂವರ್ಧಿತರಾಗುತ್ತಾರೆಂದು ಭಾವಿಸಿದ ಶಂತನುವು ಮಕ್ಕಳಿಗೆ 'ಕೃಪ' - ಕೃಪೀ' ಎಂಬುದಾಗಿ ಹೆಸರಿಟ್ಟನು.



ಅಪ್ಸರೆಯ ಭಯದಿಂದ ಓಡಿಹೋಗಿ, ಬೇರೊಂದು ಆಶ್ರಮದಲ್ಲಿ ಧನುರ್ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದ ಶರದ್ವಂತನು ಒಮ್ಮೆ ಯೋಗ ದೃಷ್ಟಿಯಿಂದ ತನ್ನ ಮಕ್ಕಳು ಶಂತನು ಮಹಾರಾಜನ ಆಶ್ರಯದಲ್ಲಿ ಬೆಳೆಯುತ್ತಿರುವ ಕುರಿತಾಗಿ ತಿಳಿದನು. ರಹಸ್ಯದಲ್ಲಿ ತನ್ನ ಮಗನ ಬಳಿ ಬಂದು, ಆತನ ಗೋತ್ರ-ಪ್ರವರಾದಿಗಳನ್ನು ತಿಳಿಸಿದ್ದಲ್ಲದೇ, ಧನುರ್ವೇದದ ನಾಲ್ಕು ವಿಧಾನಗಳನ್ನೂ, ನಾನಾ ವಿಧಾನದ ಶಸ್ತ್ರ ರಹಸ್ಯವನ್ನೂ ಮಗನಿಗೆ ಉಪದೇಶಿಸಿ, ತನ್ನ ಆಶ್ರಮಕ್ಕೆ ಹಿಂದಿರುಗಿದನು.


ಈ ಧನುರ್ವಿದ್ಯೆಯಲ್ಲಿ, ಮುಕ್ತ, ಅಮುಕ್ತ, ಮುಕ್ತಾಮುಕ್ತ ಮತ್ತು ಮಂತ್ರ ಮುಕ್ತವೆಂಬ ನಾಲ್ಕು ವಿಧಾನಗಳಿವೆ. ಮುಕ್ತವೆಂದರೆ, ಬಾಣ ಪ್ರಯೋಗ. ಅಮುಕ್ತವೆಂದರೆ, ಖಡ್ಗ ಪ್ರಯೋಗ. ಮುಕ್ತಾಮುಕ್ತವೆಂದರೆ ಉಪಸಂಹಾರ ಮಾಡಲು ಶಕ್ಯವಾಗುವ ಅಸ್ತ್ರ ಪ್ರಯೋಗ, ಮಂತ್ರ ಮುಕ್ತವೆಂದರೆ ಉಪಸಂಹಾರ ಮಾಡಲು ಶಕ್ಯವಾಗದಿರುವ ಮಂತ್ರ ಪೂರ್ವಕವಾದ ಅಸ್ತ್ರ ಪ್ರಯೋಗ.


ತಂದೆಯಿಂದ ಉಪದೇಶ ಪಡೆದ ಕೃಪರು ಅಲ್ಪ ಕಾಲದಲ್ಲಿಯೇ ಧನುರ್ವಿದ್ಯೆಯಲ್ಲಿ ಪರಮಾಚಾರ್ಯರಾದರು. ನಂತರದ ದಿನಗಳಲ್ಲಿ ಧೃತರಾಷ್ಟ್ರನ ಮಕ್ಕಳೂ, ಪಾಂಡು ಪುತ್ರರೂ, ಯಾದವರೂ, ವೃಷ್ಣಿವಂಶದ ರಾಜಕುಮಾರರೂ ಸೇರಿದಂತೆ ಅನೇಕ ರಾಜಪುತ್ರರು ಕೃಪರಿಂದ ಧನುರ್ವಿದ್ಯೆಯನ್ನು ಕಲಿತರು.


ಇನ್ನೂ ಹೆಚ್ಚಿನ ವಿದ್ಯೆಯ ಅಗತ್ಯತೆಯನ್ನು ಮನಗಂಡ ಭೀಷ್ಮನು ಪೃಥ್ವಿಯಲ್ಲಿಯೇ ಅತ್ಯಧಿಕ ಪ್ರಾವೀಣ್ಯತೆಯನ್ನು ಹೊಂದಿದ ಧನುರ್ವಿದ್ಯಾ ಗುರುವನ್ನು ಹಸ್ತಿನೆಗೆ ಕರೆತರಲು ಬಯಸಿದನು. ಶಸ್ತ್ರ- ಶಾಸ್ತ್ರಗಳಲ್ಲಿ ಅಪ್ರತಿಮರೆನಿಸಿದ್ದ ದ್ರೋಣರನ್ನು ಕರೆತಂದು ಕುರು ರಾಜಕುಮಾರರಿಗೆ ಗುರುವಾಗುವಂತೆ ಪ್ರಾರ್ಥಿಸಿದನು. ಭೀಷ್ಮರು ತಮಗಿತ್ತ ಸಮ್ಮಾನದಿಂದ ಸುಪ್ರೀತರಾದ ದ್ರೋಣರು ಭೀಷ್ಮರ ಅಪೇಕ್ಷೆಯಂತೆ ಕುರು ರಾಜ ಪುತ್ರರನ್ನು ತಮ್ಮ ಶಿಷ್ಯಂದಿರಾಗಿ ಸ್ವೀಕರಿಸಿದರು. ಕೆಲ ದಿನಗಳಲ್ಲಿಯೇ ರಾಜಕುಮಾರರನ್ನು ಧನುರ್ವಿದ್ಯೆಯಲ್ಲಿ ನಿಷ್ಣಾತರಾಗಿ ಮಾಡಿದರು.


ದ್ರೋಣರ ಜನ್ಮ ವೃತ್ತಾಂತ

ಭರದ್ವಾಜನೆಂಬ ಮಹರ್ಷಿಯು ವ್ರತ ನಿಯಮಾದಿಗಳಲ್ಲಿ ತಲ್ಲೀನನಾಗಿ ಗಂಗಾ ತೀರದ ಕುಟೀರವೊಂದರಲ್ಲಿ ವಾಸಿಸುತ್ತಿದ್ದನು. ಒಮ್ಮೆ ಆತನು ಅಗ್ನಿಷ್ಟೋಮವೆಂಬ ಮಹಾಯಾಗವನ್ನು ಮಾಡಲು ನಿಶ್ಚಯಿಸಿ, ಅನೇಕ ಮಹರ್ಷಿಗಳಿಂದ ಕೂಡಿದವನಾಗಿ ಸ್ನಾನ ಮಾಡಲು ಗಂಗಾ ನದಿಗೆ ತೆರಳಿದನು. ಆ ವೇಳೆಗೆ ಸರಿಯಾಗಿ ರೂಪ ಯೌವನ ಸಂಪನ್ನೆಯಾದ 'ಘೃತಾಚೀ' ಎಂಬ ಅಪ್ಸರೆಯು ನದೀ ಸ್ನಾನ ಮಾಡಿ ಮೇಲೆದ್ದು ಬರುತ್ತಿದ್ದಳು. ಒದ್ದೆಯಾಗಿ ಅಸ್ತವ್ಯಸ್ತವಾಗಿದ್ದ ವಸ್ತ್ರವನ್ನು ಬಿಚ್ಚಿ, ಬೇಟೆ ವಸ್ತ್ರವನ್ನು ಅವಳು ಧರಿಸುವಾಗ ಅಡಿ ಜಾರಿ ಬಿದ್ದು, ಅವಳು ವಿವಸ್ತ್ರವಾದಳು. ಈ ಸ್ಥಿತಿಯಲ್ಲಿದ್ದ ವರಾಂಗನೆಯನ್ನು ನೋಡಿದ ತಕ್ಷಣ ಭರದ್ವಾಜನ ಮನಸ್ಸು ಚಂಚಲವಾಗಿ, ಆತನ ದಿವ್ಯ ತೇಜಸ್ಸು ಸ್ಖಲಿತವಾಯಿತು. ಸರ್ವದಾ ತಪೋ ನಿಯಮಗಳಲ್ಲೇ ಆಸಕ್ತನಾಗಿದ್ದ ಈ ಮಹಾನುಭಾವನ ಸ್ಖಲಿತವಾದ ಅಗ್ನಿ ರೂಪವಾದ ತೇಜಸ್ಸನ್ನು ಯಥೋಚಿತವಾಗಿ ಸಂಸ್ಕರಿಸಿ, ಒಂದು ದ್ರೋಣದಲ್ಲಿ (ಮರದ ಪಾತ್ರೆಯಲ್ಲಿ) ಇಡಲಾಯಿತು. ಕೆಲ ದಿನಗಳಲ್ಲಿಯೇ ಆ ದ್ರೋಣರಿಂದ ತೇಜಃಪುಂಜವಾದ ಶಿಶುವು ಆವಿರ್ಭೂತವಾಯಿತು. ದ್ರೋಣದಲ್ಲಿ ಜನಿಸಿದ ಶಿಶುವಿಗೆ ದ್ರೋಣನೆಂದೇ ನಾಮಕರಣವಾಯಿತು.


ದ್ರೋಣನು ಭರದ್ವಾಜನ ಆಶ್ರಮದಲ್ಲಿ ಶುಕ್ಲ ಪಕ್ಷದ ಚಂದ್ರಮನಂತೆ ಬೆಳೆದನು. ವೇದ ವೇದಾಂಗ ಪಾರಂಗತನಾದನು. ಧನುರ್ವಿದ್ಯೆಯಲ್ಲಿಯೂ ಪಾರಂಗತನೆನಿಸಿದ್ದ ಭಾರದ್ವಾಜನು ಆ ಮೊದಲೇ ತನ್ನ ಶಿಷ್ಯನಾಗಿದ್ದ ಅಗ್ನಿ ಜನ್ಮನಾದ ಅಗ್ನಿವೇಶನೆಂಬ ಮಹರ್ಷಿಗೆ ಧನುರ್ವಿದ್ಯೆಯನ್ನು ಕಲ್ಪಿಸಿದನಲ್ಲದೆ ಆಗ್ನೇಯಾಸ್ತ್ರದ ರಹಸ್ಯವನ್ನು ಉಪದೇಶಿಸಿದ್ದನು. ಭರದ್ವಾಜನ ನಿರ್ದೇಶನದಂತೆ ಅಗ್ನಿವೇಶನು ದ್ರೋಣನಿಗೆ ಬಿಲ್ವಿದ್ಯೆಯನ್ನು ಕಲಿಸಿದ್ದನಲ್ಲದೆ, ಆಗ್ನೇಯಾಸ್ತ್ರವನ್ನೂ, ಇನ್ನೂ ಅನೇಕ ಶಸ್ತ್ರಾಸ್ತ್ರಗಳ ರಹಸ್ಯಗಳನ್ನೂ ಉಪದೇಶಿಸಿ, ಪಾರಂಗತನನ್ನಾಗಿ ಮಾಡಿದನು.


ಭರದ್ವಾಜನಿಗೆ ಪೃಷತನೆಂಬ ರಾಜನೊಬ್ಬನು ಆಪ್ತಮಿತ್ರನಾಗಿದ್ದನು. ಪೃಷತನಿಗೆ ದ್ರುಪದನೆಂಬ ಮಗನಿದ್ದನು. ಪೃಷತನು ದ್ರುಪದನನ್ನು ಭಾರದ್ವಾಜರ ಆಶ್ರಮಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದ್ದನು. ಅಲ್ಲಿ ದ್ರೋಣ-ದ್ರುಪದರ ನಡುವೆ ಮೈತ್ರಿ ಬೆಳೆಯಿತು. ಒಬ್ಬರನ್ನು ಮತ್ತೊಬ್ಬರು ಆಗಲದಿರುವಷ್ಟು ಆಳವಾದ ಸ್ನೇಹವು ಬೆಳೆಯಿತು. ತಮ್ಮ ಮುಂದಿನ ಭವಿಷ್ಯದ ಕುರಿತಾಗಿ ಈ ಈರ್ವರು ಸ್ನೇಹಿತರು ಆಳವಾಗಿ ಚರ್ಚಿಸುತ್ತಿದ್ದರು.


ಪೃಷತನು ದಿವಂಗತನಾದ ನಂತರ, ಪಾಂಚಾಲ ದೇಶಕ್ಕೆ ದ್ರುಪದನು ದೊರೆಯಾದನು. ಇತ್ತ ಭರದ್ವಾಜನೂ ಪಾರ್ಥಿವ ಶರೀರವನ್ನು ತೊರೆದನು. ದ್ರೋಣನು ತಂದೆಯ ಆಶ್ರಮದಲ್ಲಿಯೇ ಇದ್ದುಕೊಂಡು ತಪೋನಿರತನಾಗಿದ್ದನು. ತಂದೆಯು ಗತಿಸುವಾಗ ಅವನಿತ್ತ ನಿರ್ದೇಶನದಂತೆ ಪುತ್ರಕಾಮನಾಗಿ ಗೌತಮ ಪುತ್ರಿಯಾದ ಕೃಪಿಯನ್ನು ವಿವಾಹ ಮಾಡಿಕೊಂಡನು.

Comments


bottom of page