top of page

ಭೀಮನ ಪುನರಾಗಮನ (ಮಹಾಭಾರತ ಕಥಾಮಾಲೆ 29)

ಭೀಮನ ಪುನರಾಗಮನ

ವಾಯು ಸುತನು ಒಡನೆಯೇ ಮೇಲೆದ್ದು ವೇಗವಾಗಿ ಹಸ್ತಿನಾಪುರದತ್ತ ಧಾವಿಸಿದನು. ದಾರಿಯಲ್ಲಿ ಜನರು ಬೆರಗುಗಣ್ಣಿನಿಂದ ಭೀಮನನ್ನು ನೋಡುತ್ತಿದ್ದರು. 'ತಾಯಿಯನ್ನು ಯಾವಾಗ ಕಂಡೇನು, ಸಹೋದರರನ್ನು ಎಷ್ಟು ಬೇಗ ಮಾತನಾಡಿಸಿಯೇನು' ಎಂಬ ಯೋಚನೆಯಲ್ಲಿ ಭೀಮನು ಭರದಿಂದ ಅಂತಃಪುರದತ್ತ ಹೆಜ್ಜೆ ಹಾಕಿದನು.


ವೃಕೋದರನು ಹಸ್ತಿನಾಪುರವನ್ನು ತಲುಪಿ, ನೇರ ತಾಯಿಯ ಅಂತಃಪುರವನ್ನು ಪ್ರವೇಶಿಸಿ, 'ಅಮ್ಮಾ' ಎಂಬ ಉದ್ಗಾರದೊಂದಿಗೆ ಕುಂತಿಯ ಪಾದಾಭಿವಂದನೆ ಮಾಡಿದನು. ಒಂದು ಕ್ಷಣ ತನ್ನ ಕಣ್ಣುಗಳನ್ನೇ ನಂಬದಾದ ಕುಂತಿಯು ಮುಂದಿನ ಕ್ಷಣವೇ ವಾಸ್ತವವನ್ನು ಅರಿತು, 'ಭೀಮಾ' ಎಂಬ ಉದ್ಗಾರದೊಂದಿಗೆ ಪ್ರಿಯ ಸುತನನ್ನು ಬಾಚಿ ತಬ್ಬಿಕೊಂಡಳು. ಅಲ್ಲಿದ್ದ ಪಾಂಡವರೆಲ್ಲರ ಕಂಗಳಿಂದ ಆನಂದಾಶ್ರುಗಳು ಸುರಿದವು. ಅಣ್ಣನ ಕಡೆ ತಿರುಗಿದ ಭೀಮನು ಅಣ್ಣನ ಪಾದಾಭಿವಂದನೆ ಮಾಡಿದನು. ಯುಧಿಷ್ಠಿರನು ವೃಕೋದರನ ನೆತ್ತಿಯನ್ನು ಆಘ್ರಾಣಿಸುತ್ತಾ, ತಲೆಯನ್ನು ಸವರುತ್ತಾ ಸಂತೋಷ ಹೊಂದಿದನು. ಅರ್ಜುನ-ನಕುಲ-ಸಹದೇವರು ಸಹ ಭೀಮನ ಆಗಮನವನ್ನು ಸಂಭ್ರಮಿಸುತ್ತಾ ಭೀಮನ ಬಳಿ ಬಂದು, ಆತನನ್ನು ಅಭಿವಾದಿಸಿದರು. ಎಲ್ಲರೂ ಆನಂದ ಭರಿತರಾಗಿ ಭೀಮನನ್ನು ನಡುವೆ ಕೂರಿಸಿಕೊಂಡು, ನಡೆದ ವೃತ್ತಾಂತಗಳನ್ನೆಲ್ಲ ಕೇಳಿದರು. ನಡೆದ ಎಲ್ಲಾ ಘಟನೆಗಳನ್ನು ವೃಕೋದರನು ವಿವರಿಸಿದನು. ಅವೆಲ್ಲವನ್ನೂ ಕೇಳಿದ ಯುಧಿಷ್ಠಿರನು ಭೀಮನಿಗೆ, "ಭೀಮ! ನೀನು ಈ ವಿಷಯವನ್ನು ಮತ್ತೆ ಯಾರಲ್ಲಿಯೂ ಹೇಳದೆ ಗೋಪ್ಯವಾಗಿಯೇ ಇಡು. ಇಂದಿನಿಂದ ನಾವೆಲ್ಲರೂ ಪರಸ್ಪರ ರಕ್ಷಣೆಯಲ್ಲಿ ನಿರತರಾಗೋಣ" ಎಂದನು. ಅಂದಿನಿಂದ ಎಲ್ಲರೂ ಬಹಳ ಎಚ್ಚರದಿಂದ ಇರತೊಡಗಿದರು.



ದುರ್ಯೋಧನನು ಮಾತ್ರ ತನ್ನ ದುಷ್ಟ ತನವನ್ನು ಬಿಡಲಿಲ್ಲ. ಆತನು ಭೀಮಸೇನನ ಪ್ರಿಯ ಸಾರಥಿಯನ್ನು ಕೊಂದನು. ವಿದುರನ ಸಲಹೆಯಂತೆ ಆಗಲು ಪಾಂಡವರು ಮೌನವನ್ನೇ ತಾಳಿದರು. ಭೀಮನು ತನ್ನ ದೌಷ್ಟ್ಯವನ್ನು ಮೀರಿ ಬದುಕಿ ಬಂದುದರಿಂದ ದುರ್ಯೋಧನನು ಇನ್ನಷ್ಟು ಕ್ರೋಧಾವಿಷ್ಟನಾದನು. ತನ್ನ ಯೋಜನೆ ವಿಫಲವಾದರೂ ಮನುಷ್ಯ ಸಂಕಲ್ಪಕ್ಕಿಂತ ದೈವ ಸಂಕಲ್ಪವೇ ಮಿಗಿಲಾದುದು ಎಂಬುದನ್ನು ಅರಿಯದೇ ಹೋದನು. ದುರಭಿಮಾನಿಯಾದ ಆತನು ಭೀಮನ ಹತ್ಯೆಗಾಗಿ ದುಷ್ಟ ಯೋಜನೆಗಳನ್ನು ಕೈಗೊಳ್ಳುತ್ತಲೇ ಸಾಗಿದನು. ಅನೇಕ ದಿನಗಳ ನಂತರ ಭೀಮನ ಆಹಾರದಲ್ಲಿ ಮತ್ತೊಮ್ಮೆ ಬಹಳ ತೀಕ್ಷ್ಣವಾದ ಕಾಲಕೂಟ ವಿಷವನ್ನು ಬೆರೆಸಿದನು. ಧೃತರಾಷ್ಟ್ರನ ವೈಶ್ಯ ಸ್ತ್ರೀಯ ಪುತ್ರನಾದ ಯುಯುತ್ಸುವಿನಿಂದ ಪಾಂಡವರಿಗೆ ಈ ವಿಷಯವು ಮೊದಲೇ ತಿಳಿದಿದ್ದರೂ ಭೀಮನು ನಿರ್ಭೀತಿಯಿಂದ ಆ ವಿಷಮಿಶ್ರಿತ ಆಹಾರವನ್ನು ತಿಂದು ಜೀರ್ಣಿಸಿಕೊಂಡನು. ಈ ವಿಷದಿಂದ ಭೀಮನ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ದುರ್ಯೋಧನನು ಶಕುನಿ, ದುಶ್ಯಾಸನ, ಕರ್ಣರ ಜೊತೆ ಸೇರಿ ಪಾಂಡವರ ವಿನಾಶಕ್ಕಾಗಿ ನಾನಾ ಯೋಜನೆಗಳನ್ನು ಸಿದ್ಧಗೊಳಿಸುತ್ತಲೇ ಇದ್ದನು. ಪಾಂಡವರ ಎಚ್ಚರಿಕೆಯಿಂದಾಗಿ ಅವೆಲ್ಲವೂ ವಿಫಲವಾಗುತ್ತಲೇ ಹೋಯಿತು. ಪ್ರತಿ ಸಲವೂ ಪಾಂಡವರು ವಿದುರನ ಸಲಹೆಯಂತೆ ತಮ್ಮ ಕೋಪವನ್ನು ಅಡಗಿಸಿಕೊಂಡರು.

ಧೃತರಾಷ್ಟ್ರನಿಗೂ ತನ್ನ ಮಕ್ಕಳು ದುಷ್ಕರ್ಮಗಳಲ್ಲೇ ನಿರತರಾಗಿರುವರೆಂಬ ವಿಷಯವು ತಿಳಿಯಿತು. ಇದರಿಂದ ನೊಂದ ಆತನು, ತನ್ನ ಮಕ್ಕಳನ್ನು ಸ್ವೇಚ್ಛೆಯಿಂದ ಇರಲು ಬಿಡಬಾರದೆಂದು ನಿಶ್ಚಯಿಸಿ, ತನ್ನ ಮಕ್ಕಳನ್ನೂ ಪಾಂಡವರನ್ನೂ ಒಟ್ಟಾಗಿ ಗೌತಮರ ಬಳಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದನು. ಶರಸ್ತಂಬದ ಮಧ್ಯದಲ್ಲಿ ಜನಿಸಿದ ಗೌತಮರು ಶಸ್ತ್ರ ಶಾಸ್ತ್ರಗಳಲ್ಲಿ ಪರಿಣಿತರಾಗಿದ್ದರು. ಅವರನ್ನು 'ಕೃಪರು' ಎಂದೂ ಕರೆಯುತ್ತಿದ್ದರು. ಹೀಗೆ ಕೃಪಾಚಾರ್ಯರ ಸನ್ನಿಧಿಯಲ್ಲಿ ಕೌರವ ಪಾಂಡವರ ವಿದ್ಯಾಭ್ಯಾಸವು ಪ್ರಾರಂಭವಾಯಿತು.


ಕೃಪಾಚಾರ್ಯರ ವೃತ್ತಾಂತ:

ಮಹರ್ಷಿಗಳಾದ ಗೌತಮರಿಗೆ ಶರದ್ವಂತನೆಂಬ ಪುತ್ರನಿದ್ದನು. ಹುಟ್ಟುವಾಗಲೇ ಧನುರ್ಬಾಣಗಳ ಸಮೇತನಾಗಿ ಹುಟ್ಟಿದ್ದರಿಂದ 'ಶರದ್ವಂತ' ಎಂಬ ಹೆಸರು ಉಂಟಾಯಿತು. ಶರದ್ವಂತನು ಜನ್ಮತಃ ಬ್ರಾಹ್ಮಣನಾದರೂ ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿರಲಿಲ್ಲ. ಆತನು ಯಾವಾಗಲೂ ಧನುರ್ವಿದ್ಯೆಯಲ್ಲಿಯೇ ಆಸಕ್ತಿಯನ್ನು ಹೊಂದಿದ್ದನು. ಆತನು ಬ್ರಹ್ಮಚರ್ಯವನ್ನು ಪಾಲಿಸುತ್ತಾ ಕಠೋರವಾದ ತಪಸ್ಸನ್ನು ಆಚರಿಸುತ್ತಾ ಅಮೋಘವಾದ ಅಸಂಖ್ಯಾತ ಶಸ್ತ್ರಾಸ್ತ್ರಗಳನ್ನು ಸಂಪಾದಿಸಿದನು. ಗೌತಮ ಗೋತ್ರದಲ್ಲಿ ಜನಿಸಿದ್ದರಿಂದ ಶರದ್ವಂತನನ್ನು ಗೌತಮನೆಂದೂ ಕರೆಯುತ್ತಿದ್ದರು. ಕೃಪರೂ (ಗೌತಮ ಗೋತ್ರದಲ್ಲಿ ಜನಿಸಿದ್ದರಿಂದ ಅವರನ್ನೂ ಗೌತಮರೆಂದು ಕರೆದರು.)


ಶರದ್ವಂತನ ಧನುರ್ವೇದ ಪಾಂಡಿತ್ಯ ಹಾಗೂ ಅವನು ಆಚರಿಸುತ್ತಿದ್ದ ತಪಸ್ಸು ಇವುಗಳಿಂದ ಇಂದ್ರನು ಆತಂಕಿತನಾದನು. 'ಜಾನಪದೀ' ಎಂಬ ದೇವಕನ್ಯೆಯನ್ನು ಕರೆದು, ಶರದ್ವಂತನ ತಪಸ್ಸನ್ನು ಭಂಗಗೊಳಿಸುವ ಕಾರ್ಯವನ್ನು ಆಕೆಗೆ ವಹಿಸಿದನು.

ಜಾನಪದಿಯು ರಮಣೀಯವಾಗಿದ್ದ ಶರದ್ವಂತನ ಆಶ್ರಮಕ್ಕೆ ಹೋಗಿ, ತನ್ನ ಹಾನ ಭಾವ ವಿಲಾಸಗಳಿಂದ ಧನುರ್ಬಾಣಧರನಾಗಿದ್ದ ಶರದ್ವಂತನನ್ನು ಮೋಹಗೊಳಿಸಿದಳು. ಮೋಹ ಪರವಶನಾದ ಶರದ್ವಂತನು ನಖ ಶಿಖಾಂತ ಕಂಪಿಸಿದನು. ಆತನ ಕೈಗಳಿಂದ ಧನುರ್ಬಾಣಗಳೂ ಜಾರಿದವು.


ಜಾನಪದಿಯ ಮೋಹದ ಬಲೆಯಲ್ಲಿ ಕ್ಷಣಮಾತ್ರ ಸಿಲುಕಿದ ಶರದ್ವಂತನು ಮುಂದಿನ ಕ್ಷಣದಲ್ಲೇ ತನ್ನ ಮನಸ್ಸನ್ನು ನಿಯಂತ್ರಿಸಿಕೊಂಡನು. ಆದರೆ, ಅಷ್ಟರಲ್ಲಾಗಲೇ ಆತನ ರೇತಸ್ಸು ಅಧೋಮುಖವಾಗಿ, ಕೆಳಗಿದ್ದ ಶರಸ್ತಂಬದ ಮೇಲೆ ಬಿದ್ದುಹೋಯಿತು. ಕೂಡಲೇ ಶರದ್ವಂತನು ಭಯದಿಂದ ಅಲ್ಲಿಂದ ಓಡಿ ಹೋದನು. ಶರಸ್ತಂಬದ ಮೇಲೆ ಬಿದ್ದಿದ್ದ ಮಹರ್ಷಿಯ ರೇತಸ್ಸು ಎರಡು ಭಾಗಗಳಾಗಿ ಹೆಣ್ಣು ಮತ್ತು ಗಂಡು ಮಕ್ಕಳ ಜನನಕ್ಕೆ ಕಾರಣವಾಯಿತು.

Comments


bottom of page