ದ್ರುಪದನಿಂದ ದ್ರೋಣರ ತಿರಸ್ಕಾರ (ಮಹಾಭಾರತ ಕಥಾಮಾಲೆ 32)
- Arunkumar Bhat

- Apr 1
- 2 min read
ದ್ರುಪದನಿಂದ ದ್ರೋಣರ ತಿರಸ್ಕಾರ (ಮಹಾಭಾರತ ಕಥಾಮಾಲೆ 32)

ಪರಶುರಾಮರಿಂದ ಅನುಗ್ರಹೀತರಾದ ದ್ರೋಣರು ತನ್ನ ಬಾಲ್ಯದ ಮಿತ್ರನಾದ ದ್ರುಪದನ ನಗರಿಗೆ ಆಗಮಿಸಿ, ಆತನ ಸಮೀಪಕ್ಕೆ ತೆರಳಿ, "ಮಹಾರಾಜ! ನಿನ್ನ ಸಖನಾದ ದ್ರೋಣ ನಿನ್ನ ಬಳಿಗೆ ಬಂದಿದ್ದೇನೆ" ಎಂದು ಪ್ರೀತ್ಯಾದರಗಳಿಂದ ಹೇಳಿದರು. ಆದರೆ, ಐಶ್ವರ್ಯ-ಅಧಿಕಾರ ಮದಗಳಿಂದ ದರ್ಪಿತನಾಗಿದ್ದ ದ್ರುಪದನು ಈ ದಟ್ಟ ದರಿದ್ರನಾಗಿದ್ದ ಬಾಲ್ಯದ ಸ್ನೇಹಿತನಾಗಿದ್ದ ಬ್ರಾಹ್ಮಣನನ್ನು ಮಿತ್ರನೆಂದು ಸ್ವೀಕರಿಸುವ ಮನಃ ಸ್ಥಿತಿಯಲ್ಲಿ ಇರಲೇ ಇಲ್ಲ. ತನ್ನ ಸಹಪಾಠಿಯನ್ನೂ, ಆತನೊಂದಿಗೆ ಕಳೆದ ಸುಂದರ ಕ್ಷಣಗಳ ಸವಿ ನೆನಪನ್ನೂ ದ್ರುಪದ ಮರೆತಿರಲಿಲ್ಲ. ಸಿಂಹಾಸನಾರೂಢನಾಗಿದ್ದ ದ್ರುಪದನು ಈ ಬಡ ಬ್ರಾಹ್ಮಣ ದ್ರೋಣನ 'ಮಿತ್ರ' ಎಂಬ ಸಂಭೋಧನೆಯಿಂದ ಕೆರಳಿ ಕೆಂಡವಾದನು. ಕಣ್ಣುಗಳು ಕಿಡಿ ಸೂಸಿದವು.
ದರ್ಪದಿಂದ ಹೇಳಿದನು, "ಅಕೃತೇಯಂ ತವ ಪ್ರಜ್ಞಾ ಬ್ರಹ್ಮನ್ನಾತಿಸಮಞ್ಜಸಾ |
ಯನ್ಮಾಂ ಬ್ರವೀಷಿ ಪ್ರಸಭಂ ಸುಖಾ ತೇऽಹಮಿತಿ ದ್ವಿಜ ||" "ಎಲೈ ಬ್ರಾಹ್ಮಣ! ಯಾವ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ವಿವೇಚನೆ ಇಲ್ಲದ ನಿನ್ನ ಬುದ್ಧಿಯು ಸಂಸ್ಕಾರಶೂನ್ಯವಾಗಿರುವಂತೆ ಕಾಣುತ್ತಿದೆ. ನನ್ನನ್ನು ಪದೇ ಪದೇ 'ಮಿತ್ರ' ಎಂಬುದಾಗಿ ಕರೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ" ಎಂದನು.
ಮುಂದುವರಿಯುತ್ತಾ, "ನಹಿ ರಾಜ್ಞಾಮುದೀರ್ಣಾನಾಮೇವಮ್ಭೂತೈರ್ನರೈಃ ಕ್ವಚಿತ್|
ಸಖ್ಯಂ ಭವತಿ ಮನ್ದಾತ್ಮನ್ಯ್ರಿಯೂ ಹೀನೈರ್ಧನಚ್ಯುತೈಃ||" "ಮಂದ ಬುದ್ಧಿಯವನೇ! ಅದೃಷ್ಟಹೀನನಾದ ಮತ್ತು ದಟ್ಟ ದರಿದ್ರರಾದ ನಿನ್ನಂತಹವರೊಡನೆ ಸುಪ್ರಸಿದ್ಧರಾದ ಮಹಾರಾಜರು ಖಂಡಿತವಾಗಿಯೂ ಸ್ನೇಹ ಮಾಡುವುದಿಲ್ಲ. ಬಾಲ್ಯದಲ್ಲಿ ಕಾಲಕರ್ಮ ಸಂಯೋಗದಿಂದ ನನಗೂ ನಿನಗೂ ಸ್ನೇಹವಿದ್ದಿರಬಹುದು, ಆ ಸ್ನೇಹವೇ ಇಂದಿಗೂ ಉಳಿದಿರುವುದೆಂದು ಭಾವಿಸಿದೆಯಾ?"
"ಸವೆದು ಹೋಗುತ್ತಿರುವ ಕಾಲದೊಂದಿಗೆ ಮಾನವರ ನಡುವಿನ ಸೌಹಾರ್ದವೂ ಸವೆದು ಹೋಗುತ್ತದೆ. ಹಿಂದೆ ನನಗೂ ನಿನಗೂ ಸ್ನೇಹವಿದ್ದದ್ದು ನಿಜವಾದರೂ ಅದು ತಾತ್ಕಾಲಿಕ ಮಾತ್ರ. ವಿದ್ಯಾಭ್ಯಾಸದ ಕಾರಣ ಒಟ್ಟಿಗಿದ್ದ ನಮ್ಮಿಬ್ಬರ ನಡುವೆ ಮಿತೃತ್ವ ಇತ್ತು. ಆ ಸಮಯದಲ್ಲಿ ನಮ್ಮೀರ್ವರ ಅಂತಸ್ತು ಒಂದೇ ಆಗಿತ್ತು. ಈಗ ನನಗೂ ನಿನಗೂ ಅಪಾರ ಅಂತರವಿದೆ. ಈಗ ನಾನು ಹೇಗೆ ತಾನೇ ನಿನ್ನ ಮಿತ್ರನಾದೆನು?"
ದ್ರುಪದನ ದರ್ಪಪೂರಿತ ಮಾತುಗಳು ಮುಂದುವರಿದವು,
"ನ ಸಖ್ಯಮಜರಂ ಲೋಕೇ ಹೃದಿ ತಿಷ್ಠತಿ ಕಸ್ಯಚಿತ್|
ಕಾಲೋ ಹ್ಯೇನಂ ವಿಹರತಿ ಕ್ರೋಧೋ ವೈನಂ ಹರತ್ಯುತ||"
"ಲೋಕದಲ್ಲಿ ಮಿತೃತ್ವವು ಅವಿನಾಶಿಯಾಗಿ ಯಾರ ಹೃದಯದಲ್ಲಿಯೂ ಉಳಿಯುವುದಿಲ್ಲ. ಬಹುಕಾಲದವರೆಗೆ ಪರಸ್ಪರ ಸಂಬಂಧವಿಲ್ಲದಿರುವುದು ಹಾಗೂ ಸ್ನೇಹಿತರಲ್ಲಿ ಒಬ್ಬನು ಇನ್ನೊಬ್ಬನ ಮೇಲೆ ಯಾವ ಕಾರಣದಿಂದಲಾದರೂ ಕೋಪಗೊಳ್ಳುವುದು ಈ ಎರಡು ಕಾರಣಗಳು ಮಿತೃತ್ವವನ್ನು ನಾಶಗೊಳಿಸುತ್ತದೆ."
"ಎಲೈ ಬಡ ಬ್ರಾಹ್ಮಣ! ಯಾವುದೋ ಕಾಲದ ಹಳೆಯ ಸ್ನೇಹವನ್ನು ನೆನೆಯಲು ಹೋಗಬೇಡ. ಹಿಂದೆಂದೋ ನಮ್ಮೀರ್ವರ ನಡುವೆ ಇದಾದ ಪ್ರಯೋಜನ ನಿಮಿತ್ತವಾದ ಸ್ನೇಹ ಮಾತ್ರ."
"ನ ದರಿದ್ರೋ ವಸುಮತೋ ನಾವಿದ್ವಾನ್ ವಿದುಷಃ ಸಖಾ|
ನ ಶೂರಸ್ಯ ಸಖಾ ಕ್ಲೀಬಃ ಸಖಿ ಪೂರ್ವಂ ಕಿಮಿಷ್ಯತೇ||"
"ದರಿದ್ರನಾದವನು ಐಶ್ವರ್ಯನಾದವನಿಗೆ ಮಿತ್ರನಾಗಲಾರ. ವಿದ್ವಾಂಸನೂ-ಅವಿದ್ಯಾವಂತನೂ ಮಿತ್ರರಾಗಲು ಅಸಾಧ್ಯ. ನಪುಂಸಕನೂ-ಶೂರನೂ ಗೆಳೆತನ ಹೊಂದಲಾರರು. ಹೀಗಿರುವಾಗ ಹಳೆಯ ಮೈತ್ರಿಯನ್ನು ಕಟ್ಟಿಕೊಂಡೇನು ಮಾಡುವೆ?"
"ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಮ್|
ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ವ ವಿ ಪುಷ್ವಯೋಃ||"
"ಸಮಾನ ಐಶ್ವರ್ಯ, ವಿದ್ಯೆ ಇರುವವರಲ್ಲಿ ಮಾತ್ರ ವಿವಾಹ ಸಂಬಂಧ, ಮೈತ್ರಿ ಬಂಧ ಏರ್ಪಡುವುದು. ಸಿರಿವಂತನ ಮತ್ತು ದರಿದ್ರನ ಮಧ್ಯೆ ಮೈತ್ರಿಯಾಗಲಿ, ವಿವಾಹ ಸಂಬಂಧವಾಗಲಿ ಅಸಾಧ್ಯ".
"ನಾ ಶ್ರೋತ್ರಿಯಃ ಶ್ರೋತ್ರಿಯಸ್ಯ ನಾರಥೀ ರಥಿನಃ ಸಖಾ|
ನಾ ರಾಜಾ ಪಾರ್ಥಿವಸ್ಯಾಪಿ ಸಖಿಪೂರ್ವಂ ಕಿಮಿಷ್ಯತೇ||"
"ಶ್ರೋತ್ರಿಯನಿಗೆ ಶ್ರೋತ್ರಿಯನಲ್ಲದವನು ಮಿತ್ರನಾಗಲಾರನು. ಮಹಾರಥಿಗೆ ಪದಾತಿಯು ಮಿತ್ರನಾಗಲಾರನು ರಾಜನಾದವನಿಗೆ ಪ್ರಜೆಯು ಸ್ನೇಹಿತನಾಗಲಾರನು. ಹೀಗಿರುತ್ತಾ, ನೀನು ನನ್ನೊಡನೆ ಮೈತ್ರಿಯನ್ನು ಮುಂದುವರಿಸುವ ಚಾಪಲ್ಯವನ್ನೇಕೆ ಹೊಂದಿರುವೆ?"
ಹೀಗೆ ಪುಂಖಾನುಪುಂಖವಾಗಿ ಸೊಕ್ಕಿನ ಮಾತುಗಳನ್ನು ಹೇಳುತ್ತಾ, ಭರದ್ವಾಜ ಪುತ್ರ (ಭಾರದ್ವಾಜ - ದ್ರೋಣ) ರನ್ನು ಭರ್ತ್ಸನೆಗೈದನು.
ಈ ಮಾತುಗಳು ಅಭಿಮಾನ ಧನರೂ, ಪ್ರತಾಪಶಾಲಿಗಳೂ ಆದ ದ್ರೋಣರನ್ನು ರೋಷಾವಿಷ್ಟರನ್ನಾಗಿ ಮಾಡಿದವು. ಮುಹೂರ್ತ ಕಾಲ ಮುಂದೇನೂ ಮಾಡಬೇಕೆಂದು ಚಿಂತಿಸಿದರು. ಪ್ರಾಂಚಾಲಾಧೀಶನಿಗೆ ಬುದ್ಧಿ ಕಲಿಸಬೇಕೆಂದು ದ್ರೋಣರು ನಿಶ್ಚಯಿಸಿಬಿಟ್ಟರು. ಹೇಗೆಂಬುದನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಕುರು ಮುಖ್ಯರ ರಾಜಧಾನಿಯಾದ ಹಸ್ತಿನಾಪುರದತ್ತ ಪ್ರಯಾಣ ಬೆಳೆಸಿದರು.




Comments