top of page

ದ್ರೋಣರಿಗೆ ಪರಶುರಾಮರ ಅನುಗ್ರಹ (ಮಹಾಭಾರತ ಕಥಾಮಾಲೆ 31)

ದ್ರೋಣರಿಗೆ ಪರಶುರಾಮರ ಅನುಗ್ರಹ

ಕೃಪಾಚಾರ್ಯರ ಸಹೋದರಿಯಾದ ಕೃಪಿಯು ದ್ರೋಣನಿಗೆ ಅನುಕೂಲಕರಳಾಗಿ ಒದಗಿಸಿದಳು. ಸಾಧ್ವಿಯಾದ ಇವಳು ಅಗ್ನಿಹೋತ್ರ ಕಾಲದಲ್ಲಿಯೂ, ಧರ್ಮಾನುಷ್ಠಾನದಲ್ಲಿಯೂ, ಸಂಯಮದಿಂದಿರಬೇಕಾಗಿದ್ದ ಕಾಲಗಳಲ್ಲೂ ಯಥೋಚಿತವಾಗಿ ಪತಿಗೆ ಸಹಕಾರ ನೀಡುತ್ತಿದ್ದಳು. ವೃತ ನಿಯಮಗಳ ಆಚರಣೆಯಲ್ಲೂ ತಲ್ಲೀನಳಾಗಿರುತ್ತಿದ್ದಳು. ಕೆಲವು ಕಾಲದ ನಂತರ ತೇಜಃಪುಂಜನಾದ ಪುತ್ರನನ್ನು ಪಡೆದಳು. ಈ ಮಗುವು ಜನಿಸಿದೊಡನೆಯೇ ದೇವಾಶ್ವವಾದ ಉಚ್ಚೈಃ ಶ್ರವಸ್ಸಿನಂತೆ ಧ್ವನಿ ಮಾಡಿತು. ಆ ಸಮಯದಲ್ಲಿ ಆಶರೀರ ವಾಣಿಯು ಮೊಳಗಿತು

"ಜನಿಸಿದೊಡನೆಯೇ ಈ ಮಗುವಿನ ಧ್ವನಿಯು ಕುದುರೆಯ ಕೆನೆತದಂತೆ ದಿಗಂತಗಳಲ್ಲಿ ಮೊಳಗಿದ್ದರಿಂದ ಇವನು 'ಅಶ್ವತ್ಥಾಮ' ನೆಂಬ ಹೆಸರಿನಿಂದ ಪ್ರಸಿದ್ಧನಾಗುವನು".


ಅಶ್ವತ್ಥಾಮನು ಬೆಳೆಯುತ್ತಿದ್ದಂತೆ ಅವನ ತೇಜಸ್ಸನ್ನೂ, ವಿದ್ಯೆಯಲ್ಲಿ ಅವನಿಗಿದ್ದ ಆಸಕ್ತಿಯನ್ನೂ ಗಮನಿಸಿದ ದ್ರೋಣನು ಸಂತುಷ್ಟನಾದನು. ದ್ರೋಣನ ಜೀವನವು ಅನೇಕ ಕಾಲದವರೆಗೆ ಭಾರದ್ವಾಜರ ಆಶ್ರಮದಲ್ಲಿ ಶಾಂತವಾಗಿ ಮುನ್ನಡೆಯಿತು. ದ್ರೋಣನು ಧನುರ್ವಿದ್ಯೆಯ ಅಧ್ಯಯನ ಅಧ್ಯಾಪನದಲ್ಲಿಯೇ ಬಹುಕಾಲ ಕಳೆಯುತ್ತಿದ್ದನು.


ಹೀಗಿರಲೊಮ್ಮೆ ಶತ್ರುಧ್ವಂಸಕನೂ, ಸರ್ವಜ್ಞನೂ, ಸಕಲ ಶಾಸ್ತ್ರ ಪಾರಂಗತನೂ ಧನುರ್ವಿದ್ಯಾ ವಿಶಾರದನೂ ಆದ ಜಮದಗ್ನಿಯ ಪುತ್ರನಾದ ಭಗವಾನ್ ಪರಶುರಾಮ ತನ್ನ ಸಕಲೈಶ್ವರ್ಯಗಳನ್ನೂ ಸಮುದ್ರಾಂತವಾದ ಭೂಮಿಯನ್ನೂ ಬ್ರಾಹ್ಮಣರಿಗೆ ದಾನ ಮಾಡಿಬಿಡುವನೆಂಬ ವಾರ್ತೆಯು ಹರಡಿತು.


ಭಗವಾನ್ ಪರಶುರಾಮನ ಈ ಹೇಳಿಕೆಯನ್ನು ಕೇಳಿ ಕಶ್ಯಪನು ಪರಶುರಾಮನಲ್ಲಿಗೆ ಹೋಗುವಾ ಮಹಾದಾನವನ್ನು ಸ್ವೀಕರಿಸಿದನು. ತನ್ನ ತಪೋನಿಷ್ಠೆಯಿಂದಾಗಿ ಈ ದಾನವನ್ನು ಪ್ರತಿಗ್ರಹಿಸುವ ಶಕ್ತಿಯಿದ್ದ ದ್ರೋಣನೂ ಪರಶುರಾಮನಲ್ಲಿಗೆ ತೆರಳಲು ನಿಶ್ಚಯಿಸಿದನು. ದ್ರೋಣನು ಪರಶುರಾಮನು ದಾನ ಮಾಡಬಹುದಾದ ಐಶ್ವರ್ಯದ ಜೊತೆಯಲ್ಲಿ ಪರಶುರಾಮನಲ್ಲಿದ್ದ ಧನುರ್ವಿದ್ಯೆಯನ್ನೂ, ದಿವ್ಯಾಸ್ತ್ರಗಳನ್ನೂ ಪಡೆಯಬಯಸಿದನು. ನೀತಿ ಶಾಸ್ತ್ರದಲ್ಲಿಯೂ ಪ್ರವೀಣರಾಗಿದ್ದ ಪರಶುರಾಮರಿಂದ ಈ ಶಾಸ್ತ್ರವನ್ನೂ ತಿಳಿದುಕೊಳ್ಳುವ ಅಭಿಲಾಷೆ ಹೊಂದಿದ್ದನು.

ಹೀಗೆ ದ್ರೋಣನು ತನ್ನ ಶಿಷ್ಯಂದಿರೊಡನೆ ಪರಶುರಾಮರಿದ್ದ ಮಹೇಂದ್ರಾಚಲಕ್ಕೆ ತೆರಳಿದನು. ಅಲ್ಲಿ ಮಹಾ ತಪಸ್ವಿಯೂ, ಶಮ-ದಮಾದಿ ಗುಣೋಪೇತನಾದ ಪರಶುರಾಮರನ್ನು ಸಂದರ್ಶಿಸಿದನು. 'ಆಂಗೀರಸ ಗೋತ್ರೋತ್ಪನ್ನಃ ದ್ರೋಣೋಹಮಭಿವಾದಯೇ' ಎಂದು ಭಾರ್ಗವನ ಚರಣಕಮಲಗಳನ್ನು ಸ್ಪರ್ಶಿಸಿದನು. ಸಕಲವನ್ನೂ ದಾನ ಮಾಡಿ, ಕಮಂಡಲು ಕೃಷ್ಣಾಜಿನಗಳನ್ನು ಹಿಡಿದು ಅರಣ್ಯಕ್ಕೆ ತೆರಳಲು ಸಿದ್ಧನಾಗಿದ್ದ ಭೃಗು ಕುಲ ತಿಲಕನನ್ನು ಕುರಿತು ದ್ರೋಣನು ಹೇಳಿದನು, " ಭಗವನ್! ನಾನು ಭಾರದ್ವಾಜನ ಪುತ್ರನಾದ ದ್ರೋಣನು ಧನಾಕಾಂಕ್ಷಿಯಾದ ನಾನು, ನೀನು ಕೊಡಲಿರುವ ದಾನವನ್ನು ಪ್ರತಿಗ್ರಹಿಸುವ ಅಭಿಲಾಷೆಯಿಂದ ನಿನ್ನಲ್ಲಿಗೆ ಬಂದಿರುವೆನು".

ದುಷ್ಟ ಕ್ಷತ್ರಿಯ ಮರ್ದನನಾದ ಭಾರ್ಗವನು ದ್ರೋಣನಿಗೆ ಹೇಳಿದನು, "ದ್ವಿಜ ಶ್ರೇಷ್ಠನೇ! ನಿನಗೆ ಸ್ವಾಗತವಿದೆ. ನಿನ್ನ ಇಚ್ಛೆಯ ಏನಿದೆ ಎಂಬುದನ್ನು ತಿಳಿಸು".

ದ್ರೋಣನು ಉತ್ತರಿಸಿದನು "ಅಹಂ ಧನಮನಂತಂ ಹಿ ಪ್ರಾರ್ಥಯೇ ವಿಫುಲ ವೃತ", "ಮಹಾ ವ್ರತಗಳನ್ನು ಪಾಲನೆ ಮಾಡುವ ಮಹರ್ಷಿಯೇ! ನಾನು ನಿನ್ನಲ್ಲಿನ ವಿಫುಲವಾದ ಧನವನ್ನು ಪ್ರಾರ್ಥಿಸುವೆನು".

ಪರಶುರಾಮರು ಮಾರ್ನುಡಿದರು."ದ್ರೋಣ! ಕಾಲವು ಮಿಂಚಿ ಹೋಯಿತು. ನನ್ನಲ್ಲಿದ್ದ ಅಪಾರ ಸ್ವರ್ಣ-ವಜ್ರ-ವೈಡೂರ್ಯಗಳನ್ನು ನಾನು ಬ್ರಾಹ್ಮಣರಿಗೆ ದಾನ ಮಾಡಿಬಿಟ್ಟೆ. ಅಂತಯೇ ನಗರಗಳೂ, ಅಗ್ರಹಾರ ಗ್ರಾಮಗಳಿಂದಲೂ ಯುಕ್ತವಾದ ಸಮುದ್ರಾಂತವಾದ ಭೂಮಿಯನ್ನೇ ಕಶ್ಯಪನಿಗೆ ದಾನ ಮಾಡಿಬಿಟ್ಟೆ. ಆದರೆ 'ದೇಹಿ' ಎಂದು ಬಂದಿರುವ ನಿನಗೆ 'ನಾಸ್ತಿ' ಎಂದು ಹೇಳುವುದಿಲ್ಲ. ನನ್ನಲ್ಲಿ ಇನ್ನು ಎರಡು ವಸ್ತುಗಳು ಅಯಾಚಿತವಾಗಿ ಉಳಿದಿದೆ. ನೀನು ನನ್ನಲ್ಲಿನ ಶಸ್ತ್ರಾಸ್ತ್ರಗಳನ್ನು ಬೇಕಾದರೂ ಪಡೆಯಬಹುದು ಅಥವಾ ಈ ಶರೀರವನ್ನೇ ಪ್ರತಿಗ್ರಹಿಸಬಹುದು. ನಿನಗೆ ಎರಡರಲ್ಲಿ ಯಾವುದು ಬೇಕು?"



ಭಾರ್ಗವನ ಉದಾರತೆಯನ್ನು ಮನದಲ್ಲೇ ಕೊಂಡಾಡುತ್ತಾ ದ್ರೋಣನು ಹೇಳಿದನು,

"ಅಸ್ತ್ರಾಣಿ ಮೇ ಸಮಗ್ರಾಣಿ ಸಸಂಹಾರಾಣಿ ಭಾರ್ಗವ|

ಸಪ್ರಯೋಗ ರಹಸ್ಯಾನಿ ದಾತುಮರ್ಹಸ್ಯಶೇಷತಃ ||"

"ಪೂಜ್ಯನೇ! ರಹಸ್ಯಯುಕ್ತವಾದ, ಪ್ರಯೋಗ ಮತ್ತು ಸಂಹಾರ ವಿಧಿ ಸಹಿತವಾದ ಸಮಗ್ರವಾದ ಮಹಾಸ್ತ್ರಗಳನ್ನೂ ಮತ್ತು ನಿನ್ನಲ್ಲಿರುವ ಅನೇಕ ವಿಧವಾದ ಶಸ್ತ್ರಗಳನ್ನೂ ಸಂಪೂರ್ಣವಾಗಿ ಅನುಗ್ರಹಿಸುವ ಕೃಪೆ ಮಾಡು"


ಭಾರ್ಗವ ರಾಮನು ಅಲ್ಲಿಯೇ ಕುಳಿತು ಆಚಮನ ಮಾಡಿ, ಸಂಕಲ್ಪಪೂರ್ವಕವಾಗಿ ತನ್ನಲ್ಲಿದ್ದ ಸಮಸ್ತ ಶಸ್ತ್ರಾಸ್ತ್ರಗಳ ರಹಸ್ಯವನ್ನೂ, ಪ್ರಯೋಗ ಉಪಸಂಹಾರಗಳ ವಿಧಗಳನ್ನೂ ಮಹಾಸ್ತ್ರಗಳನ್ನು ಪ್ರಯೋಗಿಸುವಾಗ ಅನುಸರಿಸಬೇಕಾದ ನಿಯಮಗಳನ್ನೂ ದ್ರೋಣನಿಗೆ ಉಪದೇಶಿಸಿ ಧಾರೆಯೆರೆದು ಕೊಟ್ಟನು. ಅರ್ಥಾತ್ ಸಮಗ್ರವಾದ ಧನುರ್ವೇದವನ್ನೇ ದಾನವಾಗಿ ಕೊಟ್ಟನು. ಶಸ್ತ್ರಾಸ್ತ್ರಗಳ ಅಧಿದೇವತೆಗಳೆಲ್ಲ ದ್ರೋಣನನ್ನು ಸೇರಿದರು.


ಹೀಗೆ ಕೃತಾರ್ಥನೂ ಕೃತಾಸ್ತ್ರನೂ ಆದ ದ್ರೋಣನು ತನ್ನ ಪ್ರಿಯ ಮಿತ್ರನಾದ ದ್ರುಪದನ ಪಟ್ಟಣಕ್ಕೆ ಪಯಣಿಸಿದನು.

Comments


bottom of page