ದ್ರೋಣರಲ್ಲಿ ರಾಜಕುಮಾರರ ವಿದ್ಯಾಭ್ಯಾಸ (ಮಹಾಭಾರತ ಕಥಾಮಾಲೆ 35)
- Arunkumar Bhat

- 1 day ago
- 2 min read
ದ್ರೋಣರಲ್ಲಿ ರಾಜಕುಮಾರರ ವಿದ್ಯಾಭ್ಯಾಸ
ದ್ರೋಣರು ಮುಂದುವರಿಯುತ್ತಾ ಹೇಳಿದರು, "ದ್ರುಪದನಿಂದ ಅಪಮಾನಿತನಾಗಿ, ಕುಶಲರಾದ ವಿದ್ಯಾರ್ಥಿಗಳನ್ನು ಅರಸುತ್ತಾ ಈ ಹಸ್ತಿನೆಗೆ ನಾನು ಬಂದೆನು. ರಾಜಕುಮಾರರಿಗೆ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿಸಲು ನೀನು ಧನುರ್ವಿದ್ಯಾ ಪ್ರವೀಣರನ್ನು ಹುಡುಕುತ್ತಿರುವೆಯೆಂಬ ವಿಷಯವನ್ನೂ ತಿಳಿದೆನು. ಈಗ ನಾನೇನು ಮಾಡಬೇಕು ಎಂಬುದನ್ನು ಒಡನೆಯೇ ಹೇಳಿರಿ" ಎಂದು ಭೀಷ್ಮರ ಮುಂದೆ ಎಲ್ಲಾ ವಿಷಯಗಳನ್ನು ತೆರೆದಿಟ್ಟರು.
ಭೀಷ್ಮರು ಎಲ್ಲ ವಿಷಯಗಳನ್ನೂ ಸಹಾನುಭೂತಿಯಿಂದ ಆಲಿಸಿದರು. ತನ್ನ ಮೊಮ್ಮಕ್ಕಳಿಗೆ ಸುಯೋಗ್ಯರಾದ ಗುರುಗಳು ದೊರೆತರೆಂದು ಮನದಲ್ಲೇ ಹರ್ಷಿಸಿದರು. ದ್ರೋಣರನ್ನು ಸಂತೈಸುತ್ತಾ, "ಆಚಾರ್ಯ ದ್ರೋಣರೇ! ಇನ್ನು ಮುಂದೆ ಕುರು ರಾಜಕುಮಾರರು ನಿಮ್ಮ ಅಧೀನರಾಗಿರುವರು. ಧನುರ್ವೇದವನ್ನು ರಾಜಪುತ್ರರಿಗೆ ನೀವು ಬೋಧಿಸಬೇಕು. ಈ ಹಸ್ತಿನೆಯಲ್ಲಿ ನಿಮ್ಮನ್ನು ಸಕಲರೂ ಪೂಜಿಸುವರು ಗೌರವಿಸುವರು. ನಿಮ್ಮ ಹೃದಯದ ಇಚ್ಛೆಯೂ ಇಲ್ಲಿ ಪೂರೈಸುವುದು. ನಿಮ್ಮಂತಹ ಗುರುಗಳು ನಮಗೆ ಸಿಕ್ಕಿರುವುದು ನಮ್ಮ ಪುಣ್ಯ. ನಿಮ್ಮನ್ನು ಗುರುವಾಗಿ ಪಡೆದ ಕುರು ರಾಜ್ಯವು ಧನ್ಯವೇ ಸರಿ. ನೀವು ನಮ್ಮ ಮೇಲಿಟ್ಟ ಅಭಿಮಾನಕ್ಕೆ ನಾವು ಚಿರಋಣಿಗಳು" ಎಂದು ನುಡಿದರು.
ಭೀಷ್ಮರ ಸತ್ಕಾರದಿಂದ ಸಂತುಷ್ಟರಾದ ದ್ರೋಣರು ಸ್ವಲ್ಪಕಾಲ ಅರಮನೆಯಲ್ಲಿಯೇ ವಿಶ್ರಾಂತಿಯನ್ನು ಪಡೆದರು. ನಂತರ, ಸಕಲ ವ್ಯವಸ್ಥೆಗಳಿಂದ ತುಂಬಿದ್ದ ಸೌಧವೊಂದನ್ನು ದ್ರೋಣರಿಗೆ ಕೊಡಲಾಯಿತು. ಆಚಾರ್ಯ ಭೀಷ್ಮರು ರಾಜಕುಮಾರರಿಂದ ಕೂಡಿದವರಾಗಿ ಒಂದು ಶುಭ ಮುಹೂರ್ತದಲ್ಲಿ ದ್ರೋಣರಲ್ಲಿಗೆ ಒಂದು, "ಇವರೆಲ್ಲರನ್ನೂ ಶಿಷ್ಯರನ್ನಾಗಿ ಪರಿಗ್ರಹಿಸಬೇಕು" ಎಂದು ವಿನಯಪೂರ್ವಕವಾಗಿ ಕೇಳಿಕೊಂಡರು. ಗುರು ದಕ್ಷಿಣಾ ರೂಪವಾಗಿ ದ್ರೋಣರಿಗೆ ಯಥೇಚ್ಛವಾದ ದ್ರವ್ಯವೂ ಕೊಡಲ್ಪಟ್ಟಿತು. ದ್ರೋಣರು ಸುಪ್ರೀತರಾಗಿ 'ತಥಾಸ್ತು' ಎಂದು ಹೇಳಿ, ಕುರು ರಾಜಕುಮಾರರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.

ಶುಭ ಮುಹೂರ್ತದಲ್ಲಿ ಪಾಠ ಪ್ರವಚನಗಳು ಪ್ರಾರಂಭವಾದವು.
ಹೀಗಿರಲು, ಒಮ್ಮೆ ತನಗೆ ಅಭಿವಾದನ ಮಾಡಿ ಕುಳಿತಿದ್ದ ಶಿಷ್ಯರನ್ನು ಕುರಿತು ದ್ರೋಣರು ಗಂಭೀರ ಮುಖ ಮುದ್ರೆಯಿಂದ ಹೇಳಿದರು, "ಕಾರ್ಯಂ ಮೇ ಕಾಂಕ್ಷಿತಂ ಕಿಂಚಿದ್ಧೃದಿ ಸಂಪರಿವರ್ತತೇ|
ಕೃತಸ್ತ್ರೈಸ್ತತ್ಪ್ರದೇಯಂ ಮೇ ತದೇತದ್ವದತಾನಘಾಃ||"
"ರಾಜಕುಮಾರರೇ! ನನ್ನ ಮನದಲ್ಲಿ ಒಂದು ಪ್ರಬಲ ಆಕಾಂಕ್ಷೆ ಇದೆ. ಅದನ್ನು ಪೂರ್ಣಮಾಡಲು ಧನುರ್ವಿದ್ಯೆಯನ್ನು ನನ್ನಿಂದ ಕಲಿತು ನೈಪುಣ್ಯವನ್ನು ಪಡೆಯುವ ನಿಮ್ಮಿಂದ ಮಾತ್ರವೇ ಸಾಧ್ಯ. ಆದ್ದರಿಂದ ಧನುರ್ವಿದ್ಯೆಯಲ್ಲಿ ನೈಪುಣ್ಯವು ಬಂದೊಡನೆಯೇ ನನ್ನ ಮನಸ್ಸಿನ ಆಕಾಂಕ್ಷೆಯನ್ನು ನೆರವೇರಿಸಿಕೊಡುವೆನೆಂದು ನೀವೀಗಲೆ ಮಾತು ಕೊಡಬೇಕು".
ದ್ರೋಣರ ಮಾತು ಕೇಳಿ ಕೌರವ ರಾಜಕುಮಾರರೆಲ್ಲರೂ ಮೌನ ತಾಳಿದರು.
ಘನೀಕರಿಸಿದ ಮೌನದ ನಡುವೆ ಅರ್ಜುನನು ಮಾತ್ರವೇ ಮೇಲೆದ್ದು, ಆಚಾರ್ಯರಿಗೆ ನಮಸ್ಕರಿಸಿ, "ಆಚಾರ್ಯರೇ! ನಿಮ್ಮ ಮಂದ ಇಚ್ಛೆಯು ಅದೆಷ್ಟೇ ಕಷ್ಟಕರವಾದುದಾದರೂ ನಾನು ಅದನ್ನು ಪೂರ್ಣ ಮಾಡುವೆನು. ಇದು ನನ್ನ ಪ್ರತಿಜ್ಞೆ ಮತ್ತು ಪ್ರಮಾಣ" ಎಂದು ಉಚ್ಚ ಸ್ವರದಲ್ಲಿ ಉದ್ಘೋಷಿಸಿದನು.
ಮಹದಾನಂದವನ್ನು ತಾಳಿದ ದ್ರೋಣರು ಅರ್ಜುನನನ್ನು ಬಾಚಿ ತಬ್ಬಿ, ನೆತ್ತಿಯನ್ನು ಆಘ್ರಾಣಿಸಿ, ತಮ್ಮ ಆನಂದ ಬಾಷ್ಪಗಳಿಂದ ಆತನ ನೆತ್ತಿಯನ್ನು ಅಭಿಷೇಚಿಸಿದರು. ಆದರೆ, ತಮ್ಮ ಮನದ ಇಚ್ಛೆ ಏನೆಂಬುದನ್ನು ಹೇಳಲಿಲ್ಲ. ಅರ್ಜುನನು ಕೇಳಲೂ ಇಲ್ಲ. ದ್ರೋಣರು ಕೌರವ ಪಾಂಡವರಿಗೆ ಅನೇಕ ರೀತಿಯ ದಿವ್ಯಾಸ್ತ್ರಗಳನ್ನೂ, ಮಾನವಾಸ್ತ್ರಗಳನ್ನೂ ಉಪದೇಶಿಸಿದರು. ದ್ರೋಣರ ಕೀರ್ತಿಯು ಎಲ್ಲ ಕಡೆಗೂ ವ್ಯಾಪಿಸಿತು. ಇತರ ದೇಶಗಳ ರಾಜಪುತ್ರರೂ ಧನುರ್ವಿದ್ಯೆವಾಗಿ ದ್ರೋಣರ ಬಳಿ ಆಗಮಿಸಿದರು. ಅಂಧಕರೂ ವೃಷ್ಣಿಗಳೂ ದ್ರೋಣರ ಬಳಿಗೆ ಆಗಮಿಸಿದರು. ರಾಧೇಯನೂ ಬಂದನು. ಕರ್ಣನು ಬಂದ ನಂತರ ಕುರು ರಾಜಕುಮಾರರಲ್ಲಿ ಪರಸ್ಪರ ದ್ವೇಷ-ಅಸೂಯೆಗಳು ಅಧಿಕವಾದವು. ಕರ್ಣನು ಬರುವವರೆಗೆ ಅರ್ಜುನನು ಮಾತ್ರ ಶ್ರೇಷ್ಠನಾಗಿದ್ದನು. ಈಗ ಕರ್ಣನೊಬ್ಬನು ಮಾತ್ರ ಅರ್ಜುನನೊಡನೆ ಶಸ್ತ್ರವಿದ್ಯೆಯಲ್ಲಿ ಸ್ಪರ್ಧಿಸುತ್ತಿದ್ದನು. ಕರ್ಣನು ದುರ್ಯೋಧನನೊಡನೆ ಸೇರಿಕೊಂಡು ಸಮಯ ಸಿಕ್ಕಾಗಲೆಲ್ಲ ಪಾಂಡವರನ್ನು ಅಪಮಾನಗೊಳಿಸುತ್ತಿದ್ದನು. ಅದರಿಂದ ದುರ್ಯೋಧನನು ಆನಂದಿತನಾಗುತ್ತಿದ್ದನು. ಅರ್ಜುನನು ಯಾವಾಗಲೂ ಗುರುಸೇವೆಯಲ್ಲಿ ನಿರತನಾಗಿದ್ದು, ಗುರೂಪದೇಶವನ್ನು ಸಂಪೂರ್ಣವಾಗಿ ಗ್ರಹಿಸಿ, ಅಭ್ಯಸಿಸಿ, ಜೊತೆಯವರನ್ನೆಲ್ಲ ಮೀರಿಸುತ್ತಿದ್ದನು. ಎಲ್ಲರಿಗೂ ದ್ರೋಣರು ಒಂದೇ ಸಮನಾಗಿ ವಿದ್ಯೆಯನ್ನು ಉಪದೇಶಿಸುತ್ತಿದ್ದರೂ ಅರ್ಜುನನ ಬಾಣಪ್ರಯೋಗ ಕೈಚಳಕವೂ, ಲಕ್ಷ್ಯ ಬೇಧನ ನೈಪುಣ್ಯವೂ ಮತ್ತಾರಿಗೂ ಇರಲಿಲ್ಲ. ಇಂದ್ರ ಪುತ್ರನಿಗೆ ಸಮನಾದವರು ತನ್ನ ಶಿಷ್ಯ ಗಣದಲ್ಲೇ ಬೇರೊಬ್ಬನಿಲ್ಲವೆಂದು ದ್ರೋಣರು ನಿಶ್ಚಯಿಸಿದ್ದರು.




Comments