top of page

ಪಾರ್ಥನ ಧನುರ್ವಿದ್ಯಾ ಉತ್ಕರ್ಷ (ಮಹಾಭಾರತ ಕಥಾಮಾಲೆ 36)

ಪಾರ್ಥನ ಧನುರ್ವಿದ್ಯಾ ಉತ್ಕರ್ಷ

ದ್ರೋಣರು ಹಸ್ತಿನಾಪುರ ಪಟ್ಟಣದಲ್ಲಿಯೇ ಇದ್ದುದರಿಂದ ಅವರ ಶಿಷ್ಯರು ಗುರುಗಳಿಗೆ ಸೌದೆ, ಸಮಿತ್ತು, ಭಿಕ್ಷಾನ್ನ, ಮುಂತಾದವುಗಳನ್ನು ತರಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ ಪ್ರತಿಯೊಬ್ಬ ಶಿಷ್ಯನೂ ನದಿಯಿಂದ ಒಂದೊಂದು ಕಮಂಡಲುವಿನಲ್ಲಿ ನೀರನ್ನು ತರಬೇಕೆಂದು ದ್ರೋಣರು ಆಜ್ಞೆ ವಿಧಿಸಿದ್ದರು. ಅಶ್ವತ್ಥಾಮನೂ ಸೇರಿದಂತೆ ಶಿಷ್ಯರೆಲ್ಲ ನದಿಗೆ ನೀರು ತರಲು ಒಟ್ಟಿಗೆ ಹೋಗುತ್ತಿದ್ದರು. ಆದರೆ,ಇತರರ ಕಮಂಡಲಗಳು ತುಂಬುವುದರೊಳಗಾಗಿಯೇ ಅಶ್ವತ್ಥಾಮನು ಜಲಪಾತ್ರೆಯನ್ನು ತುಂಬಿಸಿಕೊಂಡು, ಗುರುಗಳ ಸಮ್ಮುಖದಲ್ಲಿರುತ್ತಿದ್ದನು. ಅರ್ಜುನನ ಹೊರತಾಗಿ ಬೇರಾವ ರಾಜಕುಮಾರರು ಈ ಸಂಗತಿಯನ್ನು ಗಮನಿಸಲಿಲ್ಲ. ಗುರುಗಳು ಅಶ್ವತ್ಥಾಮನಿಗೆ ಅಗಲವಾದ ಬಾಯಿ ಇರುವ ಪಾತ್ರೆಯನ್ನು,ಉಳಿದವರಿಗೆ ಕಿರಿದಾದ ಬಾಯಿ ಇರುವ ಪಾತ್ರೆಯನ್ನು ಕೊಟ್ಟಿದ್ದೇ ಈ ಜಲ ಪುರಾಣದ ಅಂತರಕ್ಕೆ ಕಾರಣವಾಗಿದ್ದಿತು.ಈ ಎರೆಡೇ ಕ್ಷಣಗಳ ಕಾಲಾಂತರದಲ್ಲಿ ದ್ರೋಣರು ಮಗನಿಗೆ ಅನೇಕ ಶಸ್ತ್ರಾಸ್ತ್ರಗಳ ರಹಸ್ಯವನ್ನು ಬೋಧಿಸುತ್ತಿದ್ದರು.


ಇದನ್ನರಿತ ಅರ್ಜುನನು ಮತ್ಸರ ಪಡಲಿಲ್ಲ. ಬದಲಾಗಿ,ತಾನು ಸಹ ಅಶ್ವತ್ಥಾಮನೊಡನೆಯೇ ಹೋಗಬೇಕೆಂದು ನಿಶ್ಚಯಿಸಿದನು. ಇದಕ್ಕಾಗಿ, ಬೇಗ ನೀರು ತುಂಬಿಸಬೇಕಿತ್ತು , ಅರ್ಜುನನು ಇದಕ್ಕೆ ಉಪಾಯವೊಂದನ್ನು ಕಂಡುಕೊಂಡನು. ಮರುದಿನ ಎಲ್ಲರೊಡನೆಯೇ ನೀರು ತರಲು ಹೊರಟ ಅರ್ಜುನನು ಹಿಂದೆಯೇ ಉಳಿದನು. ಕಮಂಡಲುವನ್ನು ಕೆಳಗಿಟ್ಟು ವರುಣ ಮಂತ್ರವನ್ನು ಪುನಶ್ಚರಣೆ ಮಾಡಿ, ಅಸ್ತ್ರ ಪ್ರಯೋಗ ಮಾಡಿದನು. ತಕ್ಷಣ ಕಮಂಡಲವು ತುಂಬಿತು. ಅಶ್ವತ್ಥಾಮನೊಡನೆ ಅರ್ಜುನನೂ ತುಂಬಿದ ಕಮಂಡಲುವಿನೊಡನೆ ಗುರುಗಳಲ್ಲಿಗೆ ಬಂದನು. ಈ ಕಾರಣದಿಂದ ಪುತ್ರನಿಗೆ ಪ್ರತ್ಯೇಕವಾಗಿ ಧನುರ್ವಿದ್ಯೆಯನ್ನು ಹೇಳಿಕೊಡಲು ಅಸಾಧ್ಯವಾದುದರಿಂದ ಅಶ್ವತ್ಥಾಮನಿಗಿಂತಲೂ ಧನುರ್ವಿದ್ಯೆಯ ಉತ್ಕರ್ಷದಲ್ಲಿ ಅರ್ಜುನನು ಪ್ರತ್ಯೇಕವಾಗಿ ಉಳಿಯಲಿಲ್ಲ. ಅವನಿಗೆ ಸರಿಸಮಾನವಾಗಿಯೇ ಮುಂದುವರಿದನು. ಅಸ್ತ್ರ ವಿದ್ಯಾ ಶ್ರೇಷ್ಠನಾದ ಪಾರ್ಥನು ವಿನಯಗುಣ ಸಂಪನ್ನನೂ ಆಗಿದ್ದು, ಗುರು ಸೇವೆಯನ್ನೂ ಪ್ರೀತಿಯಿಂದ ಮಾಡುತ್ತಿದ್ದನು. ಅರ್ಜುನನ ಈ ಗುಣಗಳು ದ್ರೋಣರಿಗೆ ಅರ್ಜುನನ ಈ ಗುಣಗಳು ದ್ರೋಣರಿಗೆ ಅರ್ಜುನನು ಅತ್ಯಂತ ಪ್ರಿಯ ಶಿಷ್ಯನಾಗುವಂತೆ ಮಾಡಿದವು. ತಮ್ಮ ಪುತ್ರನಿಗೆ ಉಪದೇಶಿಸುತ್ತಿದ್ದ ಎಲ್ಲ ಮಹಾಶಾಸ್ತ್ರಗಳನ್ನೂ ಅರ್ಜುನನಿಗೂ ಉಪದೇಶಿಸತೊಡಗಿದರು.


ಹೀಗಿರಲೊಮ್ಮೆ,ರಾತ್ರಿಯ ಊಟ ಮಾಡುವಾಗ ಗಾಳಿ ಬೀಸಿ ದೀಪವಾರಿ ಹೋಯಿತು. ಆದರೂ, ಎಲ್ಲರೂ, ಅರ್ಜುನನೂ ಸಹ ನಿತ್ಯದಂತೆಯೇ ಊಟ ಮಾಡಿ ಮೇಲೆದ್ದರು. ಅರ್ಜುನನು ಅಂದು ದೀಪವಾರಿಹೋದದ್ದನ್ನೇ ಕ್ಷಣಕಾಲ ಯೋಚಿಸಿದನು. ಆ ಕತ್ತಲಿನಲ್ಲಿಯೂ ಕೈಯ ತುತ್ತು ಬಾಯಿಗೇ ಸರಿಯಾಗಿ ಹೋಯಿತು. ಇದು ಕೇವಲ ಅಭ್ಯಾಸಬಲವೆನ್ನೆಸಿತು. ಧನುರ್ವಿದ್ಯಾಭ್ಯಾಸವನ್ನೂ ಹೀಗೆಯೇ ಅಭ್ಯಾಸ ಬಲದಿಂದ ರಾತ್ರಿಯೂ ಮಾಡಬಾರದೇಕೆ ಎಂದು ಅರ್ಜುನನು ಯೋಚಿಸಿದನು.



ಹೀಗೆ, ರಾತ್ರಿಯಲ್ಲಿಯೂ ಅರ್ಜುನನ ಧನುರ್ವಿಧ್ಯಾಭ್ಯಾಸವು ಪ್ರಾರಂಭವಾಯಿತು. ಕಾಲರಾತ್ರಿಯಲ್ಲಿಯೂ ಗುರಿಯನ್ನು ಬೇಧಿಸುವಲ್ಲಿ ನಿಸ್ಸೀಮನಾದನು. ಈ ಪ್ರಯತ್ನಗಳಿಂದ ಆನಂದ ಹೊಂದಿದ ದ್ರೋಣರು,ಅರ್ಜುನನನ್ನು ಬಾಚಿ ತಬ್ಬಿಕೊಂಡು ಹೇಳಿದರು.

"ಪ್ರಯತಿಷ್ಯೇ ತಥಾ ಕರ್ತುಂ ಯಥಾ ನಾನ್ಯೋ ಧನುರ್ಧರಃ|

ತ್ವತ್ಸಮೋ ಭವಿತಾ ಲೋಕೇ ಸತ್ಯಮೇತಧ್ಬ್ರವೀಮಿ ತೇ||"

"ಮಗು! ನಿನ್ನನ್ನು ನಾನು ಈ ಲೋಕದಲ್ಲಿಯೇ ಧನುರ್ವಿದ್ಯೆಯಲ್ಲಿ ಅದ್ವಿತೀಯನನ್ನಾಗಿ ಮಾಡಲು ಪ್ರಯತ್ನಿಸುವೆನು. ಇದು ಸತ್ಯ"

ಅಂದಿನಿಂದ ಆರಂಭಿಸಿ ದ್ರೋಣರು ಪಾರ್ಥನನ್ನು ಗಜ - ರಥಾಶ್ವ ಸಮರಗಳಲ್ಲಿಯೂ, ಭೂ ಯುದ್ಧದಲ್ಲಿಯೂ ಪ್ರವೀಣನನ್ನಾಗಿ ಮಾಡಿದರು. ಏಕ ಕಾಲದಲ್ಲಿ ಸಹಸ್ರಾರು ಯೋಧರು ಆಕ್ರಮಣ ಮಾಡಿದರೂ ನಿಗ್ರಹಿಸುವ ಬಾಣಪ್ರಯೋಗ ಕೌಶಲ್ಯವನ್ನು ಬೋಧಿಸಿದರು. ಉಳಿದವರನ್ನು ಅವರವರ ಆಸಕ್ತಿಗನುಗುಣವಾಗಿ ಗದೆ , ಭರ್ಜಿ, ಈಟಿ ಮೊದಲಾದವುಗಳಿಂದ ಮಾಡುವ ದಂದ್ವ ಯುದ್ಧಗಳಲ್ಲಿ ಪರಿಣತರನ್ನಾಗಿ ಮಾಡಿದರು.


ಏಕಲವ್ಯ

ದ್ರೋಣ ಶಿಷ್ಯರ ಧನುರ್ವಿಧ್ಯಾ ಕೌಶಲವು ಹೆಚ್ಚುತ್ತಿದ್ದಂತೆ ದೇಶದ ನಾನಾ ಭಾಗಗಳಿಂದ ರಾಜಕುಮಾರರು ದ್ರೋಣರನ್ನು ಗುರುವಾಗಿ ಸ್ವೀಕರಿಸುವ ಹಂಬಲದಿಂದ ಪ್ರತಿದಿನವೂ ಹಸ್ತಿನಾಪುರಕ್ಕೆ ಬರುತ್ತಿದ್ದರು.ನಿಷಾದ ರಾಜನಾದ ಹಿರಣ್ಯ ಧನುಷನ ಮಗನಾದ 'ಏಕಲವ್ಯ' ಎಂಬಾತನು ಹೀಗೆ ದ್ರೋಣರ ಬಳಿ ಬಂದನು. ಆದರೆ ಅವನು ನಿಷಾದನ ಕುಮಾರ ಈ ಪಾಠಶಾಲೆಯು ಕ್ಷತ್ರಿಯ ರಾಜಕುಮಾರರಿಗೆ ಮಾತ್ರ ನಿಯತವಾಗಿದ್ದೀತು. ಆದ್ದರಿಂದ ದ್ರೋಣರು ಏಕಲವ್ಯನನ್ನು ಶಿಷ್ಯನಾಗಿ ಪರಿಗ್ರಹಿಸಲು ಬಯಸಲಿಲ್ಲ. ಹೀಗಾಗಿ ಏಕಲವ್ಯನು, ನಿರೂಪಾಯನಾಗಿ, ನಿರಾಶೆಯಿಂದ ದ್ರೋಣರ ಪಾದರವಿಂದಗಳಲ್ಲಿ ನಮಿಸಿ, ಕಾಡಿಗೆ ಹೊರಟುಹೋದನು.


ಅಲ್ಲಿ ಅವನು ಧನುರ್ವಿದ್ಯೆಯನ್ನು ಕಲಿಯುವ ಹಂಬಲದಿಂದ,ಮಣ್ಣಿನಲ್ಲಿಯೇ ದ್ರೋಣರ ವಿಗ್ರಹವನ್ನು ಮಾಡಿದನು.ಅದನ್ನು ಉನ್ನತಾಸನದಲ್ಲಿ ಪ್ರತಿಷ್ಠಾಪಿಸಿದನು. ಕಾಡಿನಲ್ಲಿ ಸಿಕ್ಕುವ ಪುಷ್ಪಗಳಿಂದ ಗುರುವಿಗೆ ಅರ್ಚನೆ ಮಾಡಿ,ಹಣ್ಣುಗಳನ್ನು ನಿವೇದನೆ ಮಾಡಿ, ಭಕ್ತಿಯಿಂದ ದ್ರೋಣರ ಮೂರ್ತಿಗೆ ನಮಿಸಿ, ದ್ರೋಣರನ್ನೇ ಗುರುವೆಂದು ಅಂಗೀಕರಿಸಿ, ಧನುರ್ವಿದ್ಯಾ ಭ್ಯಾಸವನ್ನು ಪ್ರಾರಂಭಿಸಿದನು.

Comments


bottom of page