ಏಕಲವ್ಯನ ಗುರುಭಕ್ತಿ - ರಾಜಕುಮಾರರ ಪರೀಕ್ಷೆ (ಮಹಾಭಾರತ ಕಥಾಮಾಲೆ 38)
- Arunkumar Bhat

- 10 hours ago
- 2 min read
ಏಕಲವ್ಯನ ಗುರುಭಕ್ತಿ

ದ್ರೋಣರು ಏಕಲವ್ಯನಲ್ಲಿ ಗುರುದಕ್ಷಿಣೆಯ ಅಪೇಕ್ಷೆಯನ್ನು ವ್ಯಕ್ತ ಪಡಿಸಿದ್ದರಿಂದ ಹರ್ಷಿತನಾದ ಏಕಲವ್ಯನು ನುಡಿದನು, "ಕಿಂ ಪ್ರಯಚ್ಛಾಮಿ ಭಗವನ್ನಾಜ್ಞಾಪಯತು ಮಾಂ ಗುರುಃ| ನಾ ಹಿ ಕಿಂಚಿದೆದೇಯಂ ಮೇ ಗುರವೇ ಬ್ರಹ್ಮವಿತ್ತಮ||"
"ಬ್ರಹ್ಮವಿದರೇ! ಏನು ಕೊಡಲಿ? ಅಪ್ಪಣೆಯಾಗಲಿ! ಗುರುವಾದ ತಮಗೆ ಕೊಡಬಾರದ್ದು ಯಾವುದೂ ಇಲ್ಲ".
"ಹಾಗಾದರೆ ನಿನ್ನ ಬಲಗೈನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೊಡು"
ಏಕಲವ್ಯನು ಅತಿದಾರುಣವಾದ ದ್ರೋಣರ ಈ ಮಾತುಗಳನ್ನು ಕೇಳಿಯೂ ಧೃತಿಗೆಡಲಿಲ್ಲ. ಸತ್ಯ ನಿಷ್ಠನಾದ ಅವನು ತನ್ನ ಎಂದಿನ ಉದಾರವಾದ ಮನದಿಂದ, ನಗು ಮುಖದಿಂದ ಕೂಡಿದವನಾಗಿ, ಸೊಂಟದಲ್ಲಿದ್ದ ಕತ್ತಿಯಿಂದ ಹೆಬ್ಬೆರಳನ್ನು ಕತ್ತರಿಸಿ, ಗುರುಗಳ ಕೈಯಲ್ಲಿಟ್ಟನು. ಈ ಪ್ರಸಂಗದಿಂದ ಏಕಲವ್ಯನು ಆಚಂದ್ರಾರ್ಕವಾಗಿ ಎಲ್ಲರ ಮನದಲ್ಲಿಯೂ ತನ್ನ ಗುರು ಭಕ್ತಿಗಾಗಿ ಅಚ್ಚಳಿಯದೇ ಉಳಿದನು. ಶಾಶ್ವತ ಕೀರ್ತಿಯನ್ನು ಸಂಪಾದಿಸಿದನು. ದ್ರೋಣರ ಶಿಷ್ಯನಾಗಿಯೂ ಶಾಶ್ವತವಾಗಿ ಸ್ಥಾಪಿತನಾದನು.
ಮುಂದೆ ಏಕಲವ್ಯನು ಹೆಬ್ಬೆರಳು ಇಲ್ಲದೆಯೂ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿದನು. ಆದರೆ, ಹಿಂದಿದ್ದ ಕೈಚಳಕವೂ, ಪ್ರಾವಿಣ್ಯತೆಯೂ ಉಳಿಯಲಿಲ್ಲ. ತನ್ನನ್ನು ಮೀರಿಸುವವರು ಇರಬಹುದೆಂಬ ಆತಂಕದಿಂದ ಅರ್ಜುನನೂ ಹೊರಬಂದು, ಸುಪ್ರೀತನಾದನು. ಪ್ರಪಂಚದಲ್ಲಿ ಅರ್ಜುನನನ್ನು ಮೀರಿಸುವವರು ಬೇರಾರೂ ಇಲ್ಲವೆಂಬ ದ್ರೋಣರ ಮಾತೂ ನಿಜವಾಗಿ ಪರಿಣಮಿಸಿತು.
ರಾಜಕುಮಾರರ ಪರೀಕ್ಷೆ
ಭೀಮ-ದುರ್ಯೋಧನರು ಗದಾಯುದ್ಧದಲ್ಲಿ ಪ್ರವೀಣರಾದರು. ಅವರಿಬ್ಬರ ನಡುವೆ ಪರಸ್ಪರ ಮಾತ್ಸರ್ಯವೂ ಬೆಳೆಯಿತು. ಅಶ್ವತ್ಥಾಮನು ಅಸ್ತ್ರವಿದ್ಯಾ ನಿಪುಣನಾಗಿ ಬೆಳೆದನು. ನಕುಲ ಸಹದೇವರು ಖಡ್ಗವಿದ್ಯೆಯಲ್ಲಿ ಪರಿಣಿತರಾದರು. ಯುಧಿಷ್ಠಿರನು ರಥಿಗಳಲ್ಲಿ ಶ್ರೇಷ್ಠನೆನಿಸಿದನು. ಪ್ರಪಂಚದಲ್ಲಿ ಅವನು ರಥಗಳ ಸಮೂಹದ ಒಡೆಯರಿಗೂ ಒಡೆಯನೆಂಬ ಕೀರ್ತಿಯನ್ನು ಸಂಪಾದಿಸಿದನು.
"ಬುದ್ಧಿ ಯೋಗ ಬಲೋತ್ಸಾಹೈಃ ಸರ್ವಾಸ್ತೇಷು ಚ ನಿಷ್ಠಿತಃ||
ಅಸ್ತ್ರೇ ಗುರ್ವನುರಾಗೇ ಚ ವಿಶಿಷ್ಟೋऽಭವದರ್ಜುನಃ||"
ಬುದ್ಧಿ, ಏಕಾಗ್ರತೆ, ಬಲ, ಉತ್ಸಾಹ, ಅಸ್ತ್ರಗಳ ಅಭ್ಯಾಸ, ಗುರುಗಳ ಅನುರಾಗ ಸಂಪಾದನೆಗಳಲ್ಲಿ ಅರ್ಜುನನು ಎಲ್ಲರಿಗೂ ಮಿಗಿಲಾಗಿದ್ದನು. ಸಮಸ್ತ ಅಸ್ತ್ರ ವಿದ್ಯೆಗಳಲ್ಲೂ ಪ್ರವೀಣನಾಗಿದ್ದನು. ದ್ರೋಣರು ಎಲ್ಲ ಶಿಷ್ಯಂದಿರಿಗೂ ಸಮಾನವಾಗಿ ಅಭ್ಯಾಸ ಮಾಡಿಸುತ್ತಿದ್ದರೂ ಸಹ, ಅರ್ಜುನನು ತನ್ನ ನಿರಂತರವಾದ ಅಸ್ತ್ರ ಶಸ್ತ್ರಗಳ ಅಭ್ಯಾಸದಿಂದ ಅತಿರಥನೆನಿಸಿದನು. (ಅರವತ್ತು ಸಾವಿರ ಶತ್ರುಗಳನ್ನು ಏಕಕಾಲದಲ್ಲಿ ಎದುರಿಸಿ ಹೋರಾಡುವ ಸಾಮರ್ಥ್ಯ ಹೊಂದಿರುವವನನ್ನು 'ಅತಿರಥ' ಎಂದು ಕರೆಯುವರು) ದ್ರೋಣರ ಶಿಷ್ಯಕೋಟಿಯಲ್ಲಿ ಅರ್ಜುನನು ಮಾತ್ರ ಅತಿರಥನೆನಿಸಿದನು. ಅವನ ಗುರುಭಕ್ತಿ, ಕಲಿಕೆಯಲ್ಲಿನ ಆಸಕ್ತಿಯೇ ಇದಕ್ಕೆ ಕಾರಣವೆನಿಸಿತು. ಪಾರ್ಥನ ಕೀರ್ತಿಯು ಎಲ್ಲೆಡೆ ಪಸರಿಸಿತು.
ದೇಹಬಲದಲ್ಲಿ ಭೀಮನು ಅಧಿಕನೆನಿಸಿದನು. ಹೀಗೆ ಭೀಮಾರ್ಜುನರ ಬೆಳವಣಿಗೆಯನ್ನು ನೋಡಿ, ದುರ್ಯೋಧನಾದಿಗಳು ಮಾತ್ಸರ್ಯವನ್ನು ತಾಳಿದವರಾದರು.
ದ್ರೋಣರು ಸಮಸ್ತ ಅಸ್ತ್ರ ವಿದ್ಯೆಗಳಲ್ಲೂ ಸುಶಿಕ್ಷಿತರಾಗಿದ್ದ ಎಲ್ಲ ರಾಜಕುಮಾರರನ್ನೂ ಒಂದೆಡೆ ಸೇರಿಸಿ ಅವರ ಅಸ್ತ್ರ ಪ್ರಹಾರ ಕೌಶಲವನ್ನು ಪರೀಕ್ಷಿಸಲು ಬಯಸಿದನು. ಶಿಲ್ಪಿಗಳಿಂದ ತಯಾರಿಸಿದ್ದ ಭಾಸ ಪಕ್ಷಿಯೊಂದನ್ನು ಮರದ ಮೇಲಿರಿಸಿ, ಅದನ್ನು ತೋರಿಸುತ್ತಾ ಹೇಳಿದರು, "ರಾಜಕುಮಾರರೇ! ಅದೋ ಆ ವೃಕ್ಷದ ಮೇಲೆ ಲಕ್ಷ್ಯ ರೂಪದಲ್ಲಿರುವ ಭಾಸ ಪಕ್ಷಿಯನ್ನು ಪ್ರಹರಿಸಬೇಕಾಗಿದೆ. ನಾನು ಈಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕರೆದು, ಪಕ್ಷಿಗೆ ಗುರಿ ಇಟ್ಟು ಹೊಡೆಯುವಂತೆ ಹೇಳಿದೊಡನೆ, ನೀವು ಬಾಣ ಪ್ರಯೋಗ ಮಾಡಿ ಆ ಪಕ್ಷಿಯ ತಲೆಯನ್ನು ಕತ್ತರಿಸಬೇಕು" ಎಂದರು.
ಅನೇಕ ವರ್ಷಗಳ ಕಾಲ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿದ ರಾಜಕುಮಾರರಿಗೆ ದ್ರೋಣರ ಈ ಪರೀಕ್ಷೆಯು ಬಹು ಸುಲಭವೆನಿಸಿತು. ಎಲ್ಲರೂ ತಮ್ಮ ಸರದಿಯನ್ನು ನಿರೀಕ್ಷಿಸುತ್ತಿರುವಾಗ ದ್ರೋಣರು ಹಿರಿಯವನಾದ ಯುಧಿಷ್ಠಿರನನ್ನು ಕರೆದು, ಭಾಸ ಪಕ್ಷಿಯ ಕತ್ತು ಕತ್ತರಿಸಲು ಬಾಣ ತೊಡುವಂತೆ ತಿಳಿಸಿದರು.
ಯುಧಿಷ್ಠಿರನು ಬಿಲ್ಲಿಗೆ ಹೆದೆಯೇರಿಸಿ, ಬಾಣವನ್ನು ಸಂಯೋಜಿಸಿ ಪಕ್ಷಿಯ ಕಡೆಗೆ ಗುರಿಯಿರಿಸಿದನು.
ದ್ರೋಣರು ಕೇಳಿದರು, "ಯುಧಿಷ್ಠಿರ! ಮರದ ಮೇಲಿನ ಪಕ್ಷಿಯು ಕಾಣಿಸುತ್ತಿದೆಯೇ?"
"ಹೌದು ಗುರುದೇವ! ಮರದ ಮೇಲಿನ ಪಕ್ಷಿಗೆ ಗುರಿಯಿಟ್ಟಿದ್ದೇನೆ" ಯುಧಿಷ್ಠಿರ ಹೇಳಿದನು.
"ಮತ್ತೇನು ಕಾಣಿಸುತ್ತಿದೆ? ನನ್ನನ್ನೂ ನೋಡುತ್ತಿರುವೆಯಾ?" ದ್ರೋಣರು ಕೇಳಿದರು.
"ತಮ್ಮನ್ನೂ ನೋಡುತ್ತಿದ್ದೇನೆ ಗುರುದೇವ"
"ನಿನ್ನ ತಮ್ಮಂದಿರೂ ಕಾಣುತ್ತಿರುವರೇ?"
"ಇಲ್ಲಿಯೇ ನಿಂತಿರುವ ಅವರನ್ನೂ ಕಾಣುತ್ತಿದ್ದೇನೆ ಗುರುದೇವ"
ಯುಧಿಷ್ಠಿರನ ಪರೀಕ್ಷೆಯು ಮುಗಿಯಿತು. ಯುಧಿಷ್ಠಿರನ ಉತ್ತರದಿಂದ ಬಹಳ ಬೇಸತ್ತ ದ್ರೋಣರು ಅವನಿಗೆ ಹೊಡೆಯಲು ಆದೇಶವನ್ನೇ ನೀಡಲಿಲ್ಲ. "ಪಕ್ಕಕ್ಕೆ ನಿಲ್ಲು ಯುಧಿಷ್ಠಿರ! ನಿನ್ನಿಂದ ಪಕ್ಷಿಯನ್ನು ಹೊಡೆಯಲು ಸಾಧ್ಯವಾಗಲಾರದು" ಎಂದರು.




Comments