ರಾಜಕುಮಾರರ ಅಸ್ತ್ರವಿದ್ಯಾ ಪ್ರದರ್ಶನ (ಮಹಾಭಾರತ ಕಥಾಮಾಲೆ 40)
- Arunkumar Bhat

- 3 days ago
- 2 min read
ರಾಜಕುಮಾರರ ಅಸ್ತ್ರವಿದ್ಯಾ ಪ್ರದರ್ಶನ
ಧೃತರಾಷ್ಟ್ರನು ಹರ್ಷಿತನಾಗಿ, ದ್ರೋಣರ ಈ ವಿಚಾರಕ್ಕೆ ಸಮ್ಮತಿಯನ್ನಿತ್ತನು. ದ್ರೋಣರನ್ನು ಶ್ಲಾಘಿಸುತ್ತಾ, ರಾಜಕುಮಾರರ ಪಾಂಡಿತ್ಯ ಪ್ರದರ್ಶನವು ಯಾವ ಸ್ಥಳದಲ್ಲಿ, ಯಾವ ಕಾಲದಲ್ಲಿ, ಯಾವ ರೀತಿಯಲ್ಲಿ ಆಗಬೇಕೆಂಬುದನ್ನು ದ್ರೋಣರೇ ತೀರ್ಮಾನಿಸಬೇಕೆಂದೂ ವಿನಂತಿಸಿದನು. ಮಕ್ಕಳ ಪಾಂಡಿತ್ಯ ಪ್ರದರ್ಶನದ ವೀಕ್ಷಣೆಗಾಗಿ ತನಗೂ ಕಣ್ಣುಗಳಿರಬೇಕಿತ್ತೆಂದು ಅಂದುಕೊಂಡನು. ವಿದುರನನ್ನು ಕುರಿತು ದ್ರೋಣರ ಅಪೇಕ್ಷೆಯಂತೆ ಸಕಲ ಸಿದ್ಧತೆಯನ್ನು ಮಾಡಿಕೊಡುವಂತೆ ಆಜ್ಞಾಪಿಸಿದನು.
ಈ ಆಜ್ಞೆಯನ್ನು ಶಿರಸಾವಹಿಸಿದ ವಿದುರನು ರಾಜಭಟರೊಡನೆ ದ್ರೋಣರ ಮಾರ್ಗದರ್ಶನದಲ್ಲಿ ಕಾರ್ಯೋನ್ಮುಖನಾದನು. ಸಮತಟ್ಟಾದ ಪ್ರದೇಶವೊಂದನ್ನು ಗುರುತಿಸಿ, ತಮಗೆ ಬೇಕಾದಷ್ಟು ಪ್ರದೇಶವನ್ನು ಅಳೆಯಿಸಿ, ಚೊಕ್ಕಟಗೊಳಿಸಿದರು. ಗಿಡ ಮರ ಬಳ್ಳಿಗಳಿಲ್ಲದ ಈ ಪ್ರದೇಶದ ಉತ್ತರ ದಿಕ್ಕಿನಲ್ಲಿ ಪ್ರವಾಹವು ಹರಿಯುತ್ತಿತ್ತು. ಶುಭ ಮುಹೂರ್ತದಲ್ಲಿ ವೀರರ ಡಿಂಡೀರವಗಳೊಡನೆ ದೇವತೆಗಳಿಗೆ ಬಳಿ ನೀಡುವ ಮೂಲಕ ಈ ಭೂಮಿಯನ್ನು ಪರಿಶುದ್ಧಗೊಳಿಸಲಾಯಿತು. ಪುಣ್ಯಾಹ ಕರ್ಮವಾದ ನಂತರ ರಾಜಶಿಲ್ಪಿಗಳು ಶಾಸ್ತ್ರ ವಿಹಿತವಾದ ರೀತಿಯಲ್ಲಿ ಸುಂದರವಾದ ರಂಗ ಮಂಟಪವನ್ನು ನಿರ್ಮಿಸಿದರು. ಈ ಮಂಟಪದ ಒಂದು ಭಾಗದಲ್ಲಿ ಸಕಲಾಯುಧಗಳನ್ನೂ ಇಡಲಾಗಿತ್ತು. ಸ್ತ್ರೀಯರ ಸಲುವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು.
ಪ್ರದರ್ಶನದ ದಿನವೂ ಬಂದಿತು. ಧೃತರಾಷ್ಟ್ರನು ಕೃಪ-ಭೀಷ್ಮಾದಿ ಹಿರಿಯರಿಂದೊಡಗೂಡಿ ಸ್ವರ್ಣ ನವರತ್ನಗಳಿಂದ ಅಲಂಕೃತವಾಗಿದ್ದ ಈ ಮಂಟಪಕ್ಕೆ ಆಗಮಿಸಿದನು. ಗಾಂಧಾರಿಯೂ ಕುಂತಿ, ಸಖಿಯರೊಡಗೂಡಿ ಆಗಮಿಸಿದಳು. ದೇವ ಸ್ತ್ರೀಯರು ಮೇರು ಪರ್ವತವನ್ನು ಏರುವಂತೆ, ಎಲ್ಲರೂ ರತ್ನಮಯವಾದ ಮಂಚಗಳನ್ನು ಹತ್ತಿ ಕುಳಿತರು. ಪ್ರಜೆಗಳಿಂದ ಆ ಪ್ರದೇಶವು ತುಂಬಿ ತುಳುಕಿತು. ರಾಜ ಭಟರ ಭೇರಿ, ಢಕ್ಕೆ-ಮೃದಂಗಗಳ ಧ್ವನಿಯಿಂದಲೂ, ಸೇರಿದ್ದ ಜನಸ್ತೋಮದ ಮಾತಿನ ಶಬ್ದದಿಂದಲೂ ಆ ಸನ್ನಿವೇಶವು ಭೋರ್ಗರೆವ ಸಮುದ್ರವನ್ನು ಹೋಲುತ್ತಿತ್ತು.
ಕೊನೆಯಲ್ಲಿ ದ್ರೋಣರು ಶ್ವೇತ ವಸನಧಾರಿಯಾಗಿ, ಶುಭ್ರ ಯಜ್ಞೋಪವೀತವುಳ್ಳವರೂ, ಶ್ವೇತ ಮಾಲೆಯಿಂದ ಅಲಂಕೃತರೂ, ಗಂಧಾನುಲೇಪಿತರೂ ಆಗಿ, ಪುತ್ರ ಸಮೇತರಾಗಿ ರಂಗ ಮಂಟಪವನ್ನು ಪ್ರವೇಶಿಸಿದರು. ಬೆಳ್ಳನೆಯ ಕೇಶ ಶಶ್ರುಗಳನ್ನು ಹೊಂದಿದ ದ್ರೋಣರು ಚಂದ್ರನು ಅಂಗಾರಕ ಸಮೇತನಾಗಿ ನಿರ್ಮಲಾಕಾಶವನ್ನು ಪ್ರವೇಶಿಸುವಂತೆ ಅಶ್ವತ್ಥಾಮನೊಡನೆ ರಂಗ ಮಂಟಪವನ್ನು ಪ್ರವೇಶಿಸಿದರು.
ಒಡನೆಯೇ ಬ್ರಾಹ್ಮಣರು ಸ್ವಸ್ತಿವಾಚನ ಪಠಿಸಿ, ಪುಣ್ಯಾಹ ಕರ್ಮ ನೆರವೇರಿಸಿದರು. ಮಂಗಳ ವಾದ್ಯಗಳು ಮೊಳಗಿದವು. ರಾಜ ಭಟರು ಪ್ರದರ್ಶನಕ್ಕೆ ಬೇಕಾದ ಕತ್ತಿ, ಗುರಾಣಿ, ಗದೆ, ಧನುಸ್ಸು, ಬಾಣ ಮುಂತಾದವುಗಳನ್ನು ತಂದಿರಿಸಿದರು. ಎಲ್ಲರೂ ಪ್ರದರ್ಶನ ವೀಕ್ಷಣೆಗಾಗಿ ಕಾತರರಾಗಿ ಕುಳಿತರು.
ಯುಧಿಷ್ಠಿರನೇ ಮೊದಲಾದ ಸಕಲರಾಜಕುಮಾರರೂ ಅಂಗುಲಿ ತ್ರಾಣಗಳನ್ನೂ, ಬತ್ತಳಿಕೆಗಳನ್ನೂ ಧರಿಸಿ, ಸೊಂಟಕ್ಕೆ ಬಿಗಿಯಾದ ವಸ್ತ್ರಗಳನ್ನು ಕಟ್ಟಿಕೊಂಡು, ದಿವ್ಯಾಯುಧ ಪ್ರಾಣಿಗಳಾಗಿ ರಂಗ ಪ್ರವೇಶ ಮಾಡಿ, ತಮ್ಮ ತಮ್ಮ ಕೌಶಲಗಳನ್ನು ತೋರಲು ಮೊದಲಿಟ್ಟರು. ಲಕ್ಷ್ಯಕ್ಕೆ ಗುರಿಯಿಟ್ಟು ಪ್ರಯೋಗಿಸುತ್ತಿದ್ದ ಬಾಣಗಳು ತಮ್ಮ ಮೇಲೆ ಈ ಬಾಣಗಳು ಬಿದ್ದಾವು ಎಂದು ಹೆದರುವಂತೆ ಆಗುತ್ತಿತ್ತು. ರಾಜಕುಮಾರರು ಅಶ್ವಾರೋಹಿಗಳಾಗಿ ಚಿತ್ರ ವಿಚಿತ್ರವಾಗಿ ನಡೆಸುತ್ತಾ ಗುರಿಯನ್ನು ಬೇಧಿಸುತ್ತಿದ್ದರು. ಅವೆಲ್ಲವನ್ನೂ ನೋಡುತ್ತಾ ಪ್ರೇಕ್ಷಕರು ಜಯಘೋಷವನ್ನು ಕೂಗುತ್ತಿದ್ದರು. ತಾವು ಗಂಧರ್ವಲೋಕದಲ್ಲಿರುವೆವೋ ಎಂಬಂತೆ ಪ್ರೇಕ್ಷಕರಿಗೆ ಭಾಸವಾಗುತ್ತಿತ್ತು.
ಬಾಣ ಪ್ರಯೋಗ, ಅಶ್ವಾರೋಹಣ, ಗಜಾರೋಹಣ, ಬಾಹು ಯುದ್ಧ, ಕತ್ತಿ-ಗುರಾಣಿಗಳ ಪ್ರಯೋಗಗಳ ಪ್ರದರ್ಶನ ಗದೆ ಈಟಿಗಳ ಪ್ರಯೋಗಗಳು, ಒಂದೇ ವೇಳೆಯಲ್ಲಿ ನಾಲ್ವರೊಡನೆ ಕಾದಾಡುವುದು ಹೀಗೆ ಅನೇಕ ರೀತಿಯ ಯುದ್ಧ ವಿದ್ಯೆಗಳ ಪ್ರದರ್ಶನಗಳನ್ನು ರಾಜಕುಮಾರರು ನೀಡಿದರು.
ಇವುಗಳ ನಂತರ ದ್ವಂದ್ವ ಯುದ್ಧ ಪ್ರದರ್ಶನವು ಆರಂಭವಾಯಿತು. ಭೀಮ-ದುರ್ಯೋಧನರು ತಮ್ಮ ತಮ್ಮ ಗದೆಗಳನ್ನು ಹೆಗಲಿಗೇರಿಸಿಕೊಂಡು, ಶಿಖರಗಳುಳ್ಳ ಎರಡು ಪರ್ವತಗಳು ಎದುರು ಬದುರಾಗಿ ಬಂದು ನಿಲ್ಲುವಂತೆ ಮೈದಾನದ ಮಧ್ಯೆ ಬಂದು ನಿಂತರು. ಎರಡು ಮದಿಸಿದ ಗಜಗಳು ಸೆಣಸಾಟಕ್ಕಾಗಿ ನಿಂತಂತೆ ಕಾಣುತ್ತಿತ್ತು.

ಕೇವಲ ಪ್ರದರ್ಶನದ ಇಚ್ಛೆಯನ್ನು ಮಾತ್ರವೇ ಹೊಂದಿರದ ಅವರಿಬ್ಬರು, ಪರಸ್ಪರರನ್ನು ಮಣಿಸುವ ಉತ್ಸಾಹದೊಂದಿಗೆ ಗರ್ಜಿಸುತ್ತಾ ಗದಾಯುದ್ಧವನ್ನು ಪ್ರಾರಂಭಿಸಿದರು. ವರಸೆ ವರಸೆಯಾಗಿ ಎಡಕ್ಕೂ, ಬಲಕ್ಕೂ, ಮಂಡಲಾಕಾರವಾಗಿಯೂ ಸುತ್ತುತ್ತಾ, ಪರಸ್ಪರರನ್ನು ಘಾತಿಸುತ್ತಿದ್ದರು. ಅವರ ಭ್ರಮಣ ರೀತಿಯನ್ನೂ, ಕೈಚಳಕವನ್ನೂ, ಸಾಮರ್ಥ್ಯವನ್ನೂ ವಿದುರನು ಧೃತರಾಷ್ಟ್ರನಿಗೂ, ಕುಂತಿಯು ಗಾಂಧಾರಿಗೂ ವಿವರಿಸುತ್ತಿದ್ದಳು.
ಶಾಸ್ತ್ರೋಕ್ತ ರೀತಿಯಲ್ಲಿ ವಾಮ ಭ್ರಮಣ, ದಕ್ಷಿಣ ಭ್ರಮಣ, ಚಕ್ರ ಭ್ರಮಣ, ಊರ್ಧ್ವ ಭ್ರಮಣ ಮುಂತಾದ ಕ್ರಿಯೆಗಳೆಲ್ಲವೂ ಮುಗಿದು, ಭೀಮ ದುರ್ಯೋಧನರ ಗದಾಯುದ್ಧ ಪ್ರದರ್ಶನವು ಬಿರುಸಾಗಿ ಮುಂದುವರಿಯುತ್ತಿತ್ತು. ಪ್ರೇಕ್ಷಕರಲ್ಲಿ ಕೆಲವರು ಭೀಮನ ಪರವಾಗಿಯೂ, ಕೆಲವರು ದುರ್ಯೋಧನನ ಪರವಾಗಿಯೂ ಜಯ ಘೋಷಗಳನ್ನು ಕೂಗಲಾರಂಭಿಸಿದರು. ಪ್ರದರ್ಶನದಲ್ಲಿ ಸೋಲು ಗೆಲುವುಗಳು ಪ್ರಸಕ್ತಿಯೇ ಇಲ್ಲವಾದರೂ ಪ್ರೇಕ್ಷಕರ ನಡುವೆ ಕೆಲವರು ಭೀಮ ಗೆದ್ದನೆಂದೂ, ಕೆಲವರು ದುರ್ಯೋಧನ ಗೆದ್ದನೆಂದೂ ವಾಗ್ವಾದದಲ್ಲಿ ತೊಡಗಿದರು. ಇದು ಮುಂದುವರಿದರೆ, ಪ್ರೇಕ್ಷಕರಲ್ಲಿ ಘರ್ಷಣೆಗೆ ಪ್ರಾರಂಭವಾಗುವಂತಿತ್ತು. ಇದರಿಂದ ಉತ್ತೇಜಿತರಾಗಬಹುದಾದ ಭೀಮ-ದುರ್ಯೋಧನರ ನಡುವೆ ನಿಜವಾದ ಸಮರವೇ ಪ್ರಾರಂಭವಾಗುವ ಸಂಭವವಿತ್ತು.




Comments