top of page

ಕರ್ಣನ ಪರ ದುರ್ಯೋಧನನ ವಾದ (ಮಹಾಭಾರತ ಕಥಾಮಾಲೆ 43)

ಕರ್ಣನ ಪರ ದುರ್ಯೋಧನನ ವಾದ (ಮಹಾಭಾರತ ಕಥಾಮಾಲೆ 43)


ಕೃಪರ ಪ್ರಶ್ನೆಗಳಿಗೆ ನಿರುತ್ತರನಾಗಿ, ವಿಷಣ್ಣನಾಗಿ ನಿಂತಿದ್ದ ಕರ್ಣನಿಗೆ, ತನ್ನನ್ನು ಕ್ಷಣ ಮಾತ್ರದಲ್ಲಿ ರಾಜನನ್ನಾಗಿ ಮಾಡಿದ ದುರ್ಯೋಧನನ ವಿಷಯವಾಗಿ ಅಪಾರ ಅಭಿಮಾನ ತುಂಬಿ ಬಂತು. ಕರ್ಣನ ಕಂಗಳು ಕೃತಜ್ಞತಾಪೂರ್ವಕವಾದ ಆನಂದ ಬಾಷ್ಪಗಳನ್ನು ಸುರಿಸಿದವು.


"ಕೌರವೇಶ್ವರ! ನನ್ನನ್ನು ಅಂಗ ರಾಜ್ಯಾಧಿಪತಿಯಾಗಿ ಮಾಡಿದ್ದೀಯ. ನನ್ನ ಜೀವನದಲ್ಲಿಯೇ ಚಿರಸ್ಮರಣೀಯವಾದ ಈ ಉಪಕಾರಕ್ಕೆ ಪ್ರತಿಯಾಗಿ, ನೀನು ಏನು ಹೇಳಿದರೂ ಅದನ್ನು ಮಾಡಿಕೊಡಲು ಬದ್ಧನಿದ್ದೇನೆ ರಾಜೇಂದ್ರ!" ಎಂದನು.


ಕರ್ಣನ ಕೈಗಳನ್ನು ಹಿಡಿದುಕೊಂಡ ದುರ್ಯೋಧನನು "ನನಗೆ ಬೇರಾವ ಪ್ರತ್ಯುಪಕಾರವೂ ಬೇಡ ಕರ್ಣ! ನಿನ್ನೊಡನೆ ಅಚಲವಾದ, ಪವಿತ್ರವಾದ ಸಖ್ಯವಿರಬೇಕೆಂಬುದೇ ನನ್ನ ಹಂಬಲ" ಎಂದನು.


ಸಿಂಹಾಸನದಿಂದಿಳಿದ ಕರ್ಣನು, ದುರ್ಯೋಧನನೊಡನೆಯ ಮೈತ್ರಿಯ ದ್ಯೋತಕವಾಗಿ ಆತನನ್ನು ಗಾಢವಾಗಿ ಆಲಂಗಿಸಿದನು. ಇಬ್ಬರೂ ಅವರ್ಣನೀಯ ಆನಂದವನ್ನು ತಾಳಿದರು. ಪ್ರೇಕ್ಷಕರು ಈ ಈರ್ವರ ಕುರಿತೂ ಜಯಘೋಷಗಳನ್ನು ಮೊಳಗಿಸುತ್ತಿರುವಾಗಲೇ, ಬೆವರನ್ನು ಸುರಿಸುತ್ತಾ, ಊರುಗೋಲನ್ನು ಹಿಡಿದುಕೊಂಡು, 'ಮಗನೇ' ಎಂಬ ಅಕ್ಕರೆಯ ದನಿಯೊಡನೆ ಅಧಿರಥನು ರಂಗ ಮಂಟಪವನ್ನು ಪ್ರವೇಶಿಸಿದನು.

ಒಡನೆಯೇ ಕರ್ಣನು ಪಿತೃ ಪ್ರೇಮದಿಂದ ಪ್ರೇರಿತನಾಗಿ ಅಧಿರಥನ ಬಳಿ ತೆರಳಿ, ಅಭಿಷೇಕದಿಂದ ತೋಯ್ದಿದ್ದ ತನ್ನ ತಲೆಯನ್ನು ಆತನ ಪಾದಗಳ ಮೇಲೆ ಚಾಚಿದನು. ಮಂತ್ರೋದಕದಿಂದ ಪೂತವಾದ ತಲೆ ತನ್ನ ಕಾಲುಗಳಿಗೆ ಸ್ಪರ್ಶವಾಗಗೊಡದೆ, ಅಂಗ ವಸ್ತ್ರದಿಂದ ಪಾದಗಳನ್ನು ಮುಚ್ಚಿಕೊಂಡ ಅಧಿರಥನು ಕರ್ಣನನ್ನು ಮೇಲೆತ್ತಿ ತಬ್ಬಿಕೊಂಡು ತನ್ನ ಆನಂದಾಶ್ರುಗಳಿಂದ ಕರ್ಣನ ತಲೆಯನ್ನು ಮತ್ತಷ್ಟು ತೋಯಿಸಿದನು.


ಇದನ್ನು ನೋಡಿದ ಭೀಮಸೇನನು ಕರ್ಣನು ಅಧಿರಥನ ಮಗನೆಂದೇ ನಿಶ್ಚಯಿಸಿ, ಅಟ್ಟಹಾಸ ಮಾಡುತ್ತಾ ಹೇಳಿದನು, "ಸಾರಥಿಯ ಮಗನಾದ ಓ ಕರ್ಣನೇ! ಕ್ಷತ್ರಿಯ ಕುಲವತಂಸಕನಾದ ಅರ್ಜುನನ ಶರಗಳಿಗೆ ಎದುರಾಗಲು ನೀನು ಅಯೋಗ್ಯನು. ಅವನೆದುರು ನಿಂತು ಸೆಣಿಸಿ, ಪ್ರಾಣ ಬಿಡುವ ಯೋಗ್ಯತೆಯೂ ನಿನಗಿಲ್ಲ. ನಿನ್ನ ಕುಲಕಸುಬಾದ ಚಾಟಿಯನ್ನು ಹಿಡಿಯುವುದೇ ನಿನಗೆ ಒಳ್ಳೆಯದಲ್ಲವೇ? ಯಜ್ಞದಲ್ಲಿ ಅಗ್ನಿಯ ಸಮೀಪದಲ್ಲಿರುವ ಪುರೋಡಾಶವನ್ನು ತಿನ್ನಲು ನಾಯಿಯು ಹೇಗೆ ಯೋಗ್ಯವಲ್ಲವೋ ಹಾಗೆಯೇ ಅಂಗರಾಜ್ಯಾಧಿಪತಿಯಾಗಲು ನೀನು ಯೋಗ್ಯನಲ್ಲ".


ಶೂಲದ ಇರಿತದಂತಿದ್ದ ಭೀಮನ ನುಡಿಗಳಿಂದ ಕೋಪವನ್ನು ತಾಳಿದ ಕರ್ಣನು ಭೀಮನೆಡೆಗೆ ದುರ ದುರನೆ ನೋಡಿದನು. ಆದರೆ, ಏನು ಮಾಡಲಾರದ ಅಸಹಾಯಕತೆಯಿಂದ ನಿಟ್ಟುಸಿರು ಬಿಡುತ್ತಾ, ತನ್ನ ಆರಾಧ್ಯ ದೇವನೂ, ನಿಜ ಪಿತೃವೂ ಆದ ಸೂರ್ಯದೇವನನ್ನು ದೈನ್ಯದಿಂದ ದಿಟ್ಟಿಸಿದನು.


ಆದರೆ ಇದನ್ನು ಕೇಳಿದ ಕರ್ಣಸಖನು ಸುಮ್ಮನಿರಲಾರದೆ ತನ್ನ ಅನುಜರ ನಡುವಿನಿಂದ ಹೊರಬಂದು, ಕೋಪದಿಂದ ಕರ್ಕಶವಾದ ಧ್ವನಿಯಿಂದ ಭೀಮಸೇನನನ್ನು ಉದ್ದೇಶಿಸಿದನು, "ವೃಕೋದರ! ಇಂತಹ ತುಚ್ಛವಾದ ಮಾತುಗಳು ನಿನಗೆ ಯೋಗ್ಯವಾದುದಲ್ಲ.

'ಕ್ಷತ್ರಿಯಾಣಾಂ ಬಲಂ ಜ್ಯೇಷ್ಠಂ ಯೋದ್ಧವ್ಯಂ ಕ್ಷತ್ರಬಂಧುನಾ|

ಶೂರಾಣಾಂ ಚ ನದೀನಾಂ ಚ ದುರ್ವಿದಾಃ ಪ್ರಭವಾಃ ಕಿಲ||'

ಕ್ಷತ್ರಿಯರಿಗೆ ಬಲವೇ ಪ್ರಧಾನವಾಗಿರುವುದು. ಕ್ಷತ್ರಿಯನು ತನ್ನ ಎದುರಾಳಿಯು ಕ್ಷತ್ರಬಂಧು (ಕ್ಷತ್ರಿಯಾಧಮ) ವೇ ಆಗಿದ್ದರೂ ಅವನು ಬಲಿಷ್ಠನಾಗಿದ್ದರೆ, ಬಲದಲ್ಲಿ ತನಗೆ ಸಮಾನನಾಗಿದ್ದರೆ ಅವನೊಡನೆ ಯುದ್ಧ ಮಾಡಬೇಕು. ಮಹಾನದಿಗಳ ಮೂಲಗಳು ಹೇಗೆ ರಹಸ್ಯವಾಗಿವೆಯೋ ಹಾಗೆಯೇ ವೀರರ ಕುಲ ಗೋತ್ರಗಳೂ ಗುಪ್ತವಾಗಿಯೇ ಇರುವವು.

'ಸಲಿಲಾದುತ್ಥಿತೋ ವಹ್ನಿರ್ಯೇನ ವ್ಯಾಪ್ತಂ ಚರಾಚರಮ್|

ದಧೀಚಸ್ಯಾಸ್ಥಿತೋ ವಜ್ರಮ್ ಕೃತಂ ದಾನವಸೂದನಮ್||'

ಪ್ರಪಂಚ ವ್ಯಾಪ್ತಿಯಾದ ಅಗ್ನಿಯು ನೀರಿನಿಂದ ಹುಟ್ಟಿದುದು. ದಾನವ ಸಂಹಾರಿಯಾದ ಮಹಾ ತೇಜಸ್ಸಿನಿಂದ ಕೂಡಿದ ಇಂದ್ರನ ವಜ್ರಾಯುಧವು ಮಾನವನಾದ ದಧೀಚಿಯ ಮೂಳೆಯಿಂದ ಮಾಡಲ್ಪಟ್ಟಿದೆ. ವಿಶ್ವಾಮಿತ್ರರು ಕ್ಷತ್ರಿಯರಾಗಿ ಜನಿಸಿದರೂ ಬ್ರಾಹ್ಮಣರೆನಿಸಿದರು. ನಮ್ಮ ಆಚಾರ್ಯರಾದ ದ್ರೋಣರು ಕಲಶದಿಂದ ಜನಿಸಿದರು. ಕೃಪರು ಹುಲ್ಲಿನ ಗುತ್ತಿಯಿಂದ ಜನಿಸಿದರು. ಎಲ್ಲಕ್ಕೂ ಮಿಗಿಲಾಗಿ ಪಾಂಡವರಾದ ನಿಮ್ಮ ಜನ್ಮವೃತ್ತಾಂತವೂ ಎಲ್ಲರಿಗೂ ತಿಳಿದಿದೆ. ಆದ್ದರಿಂದ ಯೋಗ್ಯತಾ ಸಂಪನ್ನರ ಮತ್ತು ವೀರರ ಕುಲ ಗೋತ್ರಗಳು ಪರಿಗಣನೀಯವಲ್ಲ. ಮಹಾ ಪರಾಕ್ರಮಿಯಾದ ಷಣ್ಮುಖನ ಶೌರ್ಯವೇ ಪ್ರಧಾನ ಹೊರತು ಆತನ ಜನ್ಮ ರಹಸ್ಯವಲ್ಲ."


ದುರ್ಯೋಧನನು ಮುಂದುವರಿದನು, "ಗುಣ ಸ್ವಭಾವಗಳನ್ನೇ ಪರಿಶೀಲಿಸುವುದಾದರೆ, ಕರ್ಣನು ಸೂತಪುತ್ರನಲ್ಲ. ಹೆಣ್ಣು ಜಿಂಕೆಯೊಂದು ಮರಿ ಹುಲಿಯನ್ನು ಹಡೆಯಲು ಸಾಧ್ಯವೇ? ಸೂರ್ಯ ಸಮತೇಜದಿಂದಲೂ, ಸಕಲ ಸಲ್ಲಕ್ಷಣಗಳಿಂದಲೂ, ಕವಚ ಕುಂಡಲಗಳಿಂದಲೂ ಕೂಡಿರುವ ಈ ಮಹಾಪುರುಷನ ತಾಯಿ ಒಬ್ಬ ಸಾಮಾನ್ಯ ಮಹಿಳೆಯಾಗಿರಲು ಸಾಧ್ಯವೇ? ಈತನು ಮಹಾವಂಶೋತ್ಪನನ್ನೇ ಆಗಿದ್ದಾನೆ. ಕರ್ಣನ ಭುಜಬಲ ಪರಾಕ್ರಮದಿಂದಲೂ ನನ್ನ ಮಿತ್ರತ್ವದಿಂದಲೂ ಇವನು ಅಂಗರಾಜ್ಯಕ್ಕೆ ಮಾತ್ರವಲ್ಲ ಸಕಲ ಭುವನಗಳಿಗೂ ಸಾರ್ವಭೌಮನಾಗಲು ಸಮರ್ಥನಿದ್ದಾನೆ. ನಾನು ಮಾಡಿರುವ ಕಾರ್ಯವು ಯಾರಿಗಾದರೂ ಅಸಹನೀಯವಾಗಿದ್ದರೆ, ಅಂತವನು ಕೂಡಲೇ ರಥವನ್ನು ಹತ್ತಿ, ಧನುಸ್ಸನ್ನು ಪಿಡಿಯಲಿ ಎಂದು ಗರ್ಜಿಸಿದನು.


ಅನೇಕರು ದುರ್ಯೋಧನನ ಮಾತುಗಳನ್ನು ಒಪ್ಪಿ ದುರ್ಯೋಧನ - ಕರ್ಣರಿಗೆ ಜಯಘೋಷಗಳನ್ನು ಕೂಗಿದರು.

ಆ ವೇಳೆಗೆ ಸರಿಯಾಗಿ, ಸೂರ್ಯನು ಅಸ್ತಂಗತನಾದನು.

Comments


bottom of page