top of page

ದ್ರೋಣ ಶಿಷ್ಯರು ದ್ರುಪದನ ಮೇಲೆ ಯುದ್ಧಕ್ಕೆ ತೆರಳಿದುದು (ಮಹಾಭಾರತ ಕಥಾಮಾಲೆ 44)

ದ್ರೋಣ ಶಿಷ್ಯರು ದ್ರುಪದನ ಮೇಲೆ ಯುದ್ಧಕ್ಕೆ ತೆರಳಿದುದು

ದುರ್ಯೋಧನನು ಕರ್ಣನ ಜೊತೆಗೂಡಿ ರಂಗ ಮಂಟಪದಿಂದ ಹೊರ ಹೊರಟನು. ಪಾಂಡವರೂ ದ್ರೋಣ-ಕೃಪ-ಭೀಷ್ಮರೊಡಗೂಡಿ ತಮ್ಮ ನಿವಾಸಗಳಿಗೆ ತೆರಳಿದರು.


ಕೆಲವರು ಪ್ರೇಕ್ಷಕರು ಅರ್ಜುನನನ್ನೂ ಕೆಲವರು ಕರ್ಣನನ್ನೂ ಇನ್ನೂ ಕೆಲವರು ಇಬ್ಬರನ್ನೂ ಹೊಗಳುತ್ತಾ ತಮ್ಮ ಮನೆಗಳಿಗೆ ತೆರಳಿದರು.


ಕುಂತಿಯು ಮಾತ್ರ ಕರ್ಣನ ದಿವ್ಯ ಲಕ್ಷಣಗಳನ್ನು ಕಾಣುತ್ತಲೇ ತನ್ನ ಮೊದಲನೆಯ ಮಗ ಈತನೆಂದು ತಕ್ಷಣವೇ ಗುರುತಿಸಿಬಿಟ್ಟಳು. ತನ್ನ ಪುತ್ರನಿಗೆ ಅಂಗರಾಜ್ಯಾಭಿಷೇಕವಾದುದಕ್ಕಾಗಿ ಅಪಾರವಾಗಿ ಹರ್ಷಿಸಿದಳು. ಆದರೆ ಈ ವಿಷಯವನ್ನು ಯಾರಲ್ಲಿಯೂ ಹೇಳಲಿಲ್ಲ.


ಇತ್ತ ದುರ್ಯೋಧನನು ಕರ್ಣನೊಡನೆ ಬೆಳೆಸಿದ ಸಖ್ಯದ ಕಾರಣದಿಂದ ಅರ್ಜುನನ ಕುರಿತಾಗಿನ ಭೀತಿಯನ್ನು ತೊರೆದನು.


ವಿದ್ಯೆಯು ಸಾಂಗವಾಗಿ ಮುಗಿದ ನಂತರ ಗುರುಗಳು ಕೇಳಿದ ಗುರುದಕ್ಷಿಣೆಯನ್ನು ಒಪ್ಪಿಸುವ ಸಂಪ್ರದಾಯವಿತ್ತು. ಅಂತೆಯೇ, ಯಾವ ಗುರುದಕ್ಷಣೆಯನ್ನು ಪಡೆಯಬೇಕೆಂಬುದನ್ನು ಮೊದಲೇ ನಿಶ್ಚಯಿಸಿಕೊಂಡಿದ್ದ ದ್ರೋಣರು ಒಂದು ದಿನ ರಾಜಕುಮಾರರನ್ನೆಲ್ಲ ಬಳಿ ಕೂರಿಸಿಕೊಂಡು, ಅವರ ವಿದ್ಯಾಭ್ಯಾಸ ಪೂರ್ಣವಾದುದನ್ನೂ, ತಮಗೆ ಪ್ರಿಯವಾದ ಗುರುದಕ್ಷಿಣೆಯನ್ನು ಒಪ್ಪಿಸಬೇಕಾದ ರಾಜಕುಮಾರರ ಹೊಣೆಗಾರಿಕೆಯನ್ನೂ ನೆನಪಿಸಿದರು. ಶಿಷ್ಯರೆಲ್ಲರೂ ಗುರುಗಳು ಯಾವ ಗುರುದಕ್ಷಿಣೆಯನ್ನು ಕೇಳಿಯಾರೆಂದು ಕುತೂಹಲದಿಂದ ನೋಡುತ್ತಿರಲು, "ನೀವೆಲ್ಲರೂ ಸೇರಿ ಪಾಂಚಾಲ ದೇಶಕ್ಕೆ ಹೋಗಿ ದ್ರುಪದನನ್ನು ಯುದ್ಧದಲ್ಲಿ ಸೆರೆ ಹಿಡಿದು ತಂದು ನನಗೊಪ್ಪಿಸಬೇಕು. ಅದೇ ನನಗೆ ಕೊಡಬೇಕಾದ ನನಗತಿ ಪ್ರಿಯವಾದ ಗುರುದಕ್ಷಿಣೆ"


ರಾಜಕುಮಾರರೆಲ್ಲ 'ಹಾಗೆಯೇ ಆಗಲಿ' ಎಂದು ಒಕ್ಕೊರಲಿನಿಂದ ಹೇಳಿ, ಮೇಲಾಟಕ್ಕೆ ಬಿದ್ದವರಂತೆ ತಂತಮ್ಮ ರಥವನ್ನು ಹತ್ತಿ, ದ್ರೋಣರೊಡನೆ ಪಾಂಚಾಲ ದೇಶಕ್ಕೆ ಧಾವಿಸಿದರು. ದುರ್ಯೋಧನನು ತನ್ನ ತಮ್ಮಂದಿರ ಜೊತೆ ಕರ್ಣನನ್ನೂ ಕೂಡಿಕೊಂಡು ಠೀವಿಯಿಂದ ಹೊರಟನು. ಪಾಂಚಾಲವನ್ನು ಪ್ರವೇಶಿಸಿ ರಾಜಧಾನಿಯನ್ನು ಮುತ್ತಿದನು.


ಈ ಕೋಲಾಹಲವನ್ನು ಗಮನಿಸಿ, ಏನಾಗುತ್ತಿದೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಿದ ದ್ರುಪದನು ತನ್ನ ಅನುಜರಿಂದೊಡಗೂಡಿ, ದಿವ್ಯ ರಥವನ್ನು ಏರಿ ದುರ್ಯೋಧನಾದಿಗಳ ಮೇಲೆ ಶರವರ್ಷವನ್ನು ಕರೆಯಲು ಆರಂಭಿಸಿದನು.


ದುರ್ಯೋಧನಾದಿಗಳ ಹಾಗೂ ಪಾಂಡವರ ಬಲಾಬಲಗಳ ತಾರತಮ್ಯವನ್ನು ಇಂದು ಪ್ರದರ್ಶಿಸಬೇಕೆಂದು ಹಾಗೂ ದುರ್ಯೋಧನಾದಿಗಳ ದರ್ಪವನ್ನು ಮುರಿಯುವ ಉದ್ದೇಶದಿಂದ ಅರ್ಜುನನು ಮೊದಲೇ ತನ್ನ ಸಹೋದರರೊಡಗೂಡಿ ಸಮಾಲೋಚಿಸಿ, ಆಚಾರ್ಯ ದ್ರೋಣರಿಗೆ ಹೇಳಿದನು "ಗುರುದೇವ! ಇವರು ತಮ್ಮ ಪರಾಕ್ರಮಗಳನ್ನು ತೋರಿಸಿದ ನಂತರವೇ ನಾವು ನಮ್ಮ ಪರಾಕ್ರಮ ತೋರುತ್ತೇವೆ. ರಣರಂಗದಲ್ಲಿ ಈ ದುರ್ಯೋಧನ ಕರ್ಣರಿಗೆ ದ್ರುಪದನನ್ನು ಬಂಧಿಸಲು ಸಾಧ್ಯವಾಗದು ಎಂಬುದು ನನ್ನ ಅಭಿಪ್ರಾಯವಾಗಿದೆ" ಹೀಗೆ ಹೇಳಿ ಸ್ವಲ್ಪ ದೂರದಲ್ಲಿ ತನ್ನ ಸಹೋದರರೊಡನೆ ಯುದ್ಧ ಸನ್ನದ್ಧನಾಗಿ ನಿಂತಿದ್ದನು.


ಅತ್ತ, ದ್ರುಪದನ ಹೊಡೆತಕ್ಕೆ ಕೌರವರು ತತ್ತರಿಸಿದರು. ಒಂದೇ ರಥದಲ್ಲಿ ಕುಳಿತು ನಾಲ್ಕು ದಿಕ್ಕುಗಳಲ್ಲಿಯೂ ಬಹುವೇಗವಾಗಿ ಸಂಚರಿಸುತ್ತಾ ಶರವರ್ಷಗರೆಯುತ್ತಿರುವುದನ್ನು ಕಂಡು ತಮ್ಮೆದುರು ನೂರಾರು ದ್ರುಪದರು ಯುದ್ಧ ಮಾಡುತ್ತಿರುವರೋ ಎಂಬ ಭ್ರಾಂತಿಗೊಳಗಾದರು.



ಪಾಂಚಾಲ ಯೋಧರ ಸಿಂಹನಾದದ ನಡುವೆ ದುರ್ಯೋಧನಾದಿಗಳೂ ಕ್ರೋಧದಿಂದ ಬಾಣಗಳ ಮಳೆಗರೆದರು. ಇದನ್ನು ಕಂಡ ಮಹಾ ವಿಕ್ರಮಿಯಾದ ಪಾರ್ಷತನು ತನ್ನ ಶರೀರದ ಮೇಲಾದ ಬಾಣಕ್ಷತಗಳನ್ನೂ ಲೆಕ್ಕಿಸದೇ ಕೌರವರ ಮೇಲೆ ಮುಗಿಬಿದ್ದನು. ಅಗ್ನಿ ಚಕ್ರದೋಪಾದಿಯಲ್ಲಿ ರಣರಂಗದಲ್ಲಿ ಸಂಚರಿಸುತ್ತಾ, ಕೌರವರನ್ನು ಬಾಣಗಳಿಂದ ಘಾಸಿಗೊಳಿಸಿದನು. ಆ ವೇಳೆಗೆ ಪಾಂಚಾಲ ಸೈನಿಕರು ಮಾತ್ರವಲ್ಲದೇ ಪಾಂಚಾಲದ ಪ್ರಜೆಗಳೆಲ್ಲರೂ ಒನಕೆ, ದೊಣ್ಣೆ, ಕಲ್ಲು ಮುಂತಾದವುಗಳೊಂದಿಗೆ ರಣರಂಗಕ್ಕೆ ಒಂದು ಕೌರವರ ಮೇಲೆ ಎಸೆಯಲಾರಂಭಿಸಿದರು. ಕೌರವರು ಈ ಅವ್ಯಾಹತವಾದ ಆಘಾತಗಳನ್ನು ತಾಳಲಾರದೆ, ಹಾಹಾಕಾರಗೈಯುತ್ತಾ ಪಾಂಡವರ ಸಮೀಪ ಓಡಿದರು.


ರಣರಂಗದಿಂದ ಪಲಾಯನಗೈಯುತ್ತಿದ್ದ ಕೌರವರ ಆರ್ತನಾದಗಳನ್ನು ಕೇಳಿದ ಅರ್ಜುನನು ಗುರುಗಳಾದ ದ್ರೋಣಾಚಾರ್ಯರಿಗೆ ವಂದಿಸಿ, ಅಣ್ಣ ಯುಧಿಷ್ಠಿರನನ್ನು ಅಲ್ಲಿಯೇ ನಿಲ್ಲುವಂತೆ ಹೇಳಿ, ನಕುಲ ಸಹದೇವರನ್ನು ತನ್ನ ರಥದ ರಕ್ಷಕರನ್ನಾಗಿ ಮಾಡಿಕೊಂಡು, ಗದಾಪಾಣಿಯಾದ ಭೀಮನನ್ನು ಮುಂದುಮಾಡಿಕೊಂಡು ರಣರಂಗಕ್ಕೆ ಹೊರಟನು. ರಥ ಚಕ್ರಧ್ವನಿಯು ನಾಲ್ದೆಸೆಗೂ ಮೊಳಗುತ್ತಿರುವಂತೆಯೇ ರಣರಂಗವನ್ನು ತಲುಪಿದನು.


ಮೊಸಳೆಯು ಸಮುದ್ರದಲ್ಲಿ ನುಗ್ಗುವಂತೆ ಭೀಮಸೇನನು ಪಾಂಚಾಲ ಸೇನಾ ಸಾಗರವನ್ನು ಪ್ರವೇಶಿಸಿದನು. ನೇರವಾಗಿ ಗಜಾರೋಹಿ ಸೈನ್ಯದ ಮೇಲೆ ನುಗ್ಗಿ, ಮದಗಜಗಳನ್ನು ಅಪ್ಪಳಿಸಲಾರಂಭಿಸಿದನು. ಮತ್ತೊಂದು ಕಡೆಯಲ್ಲಿ ಪಾರ್ಥನು ತನ್ನ ತೀಕ್ಷ್ಮ ಬಾಣಗಳಿಂದ ಪಾಂಚಾಲ ಸೈನ್ಯವನ್ನು ಧ್ವಂಸ ಮಾಡಲು ಆರಂಭಿಸಿದನು.


ಭೀಮನ ಗದಾಪ್ರಹಾರಕ್ಕೆ ಸಿಲುಕಿ ಸಹಸ್ರ ಸಂಖ್ಯೆಯ ಗಜಗಳು ಪ್ರಾಣ ಕಳೆದುಕೊಂಡವು. ಭೀಮನ ಗಡಾದಂಡದ ಭೀತಿಯಿಂದಾಗಿ, ಗಜ-ಅಶ್ವ-ರಥ ಪದಾತಿ ಸೈನ್ಯಗಳೆಲ್ಲ ಭೀತಿಯಿಂದ ಓಡಲಾರಂಭಿಸಿದವು.


ಅರ್ಜುನನು ತನ್ನ ರಥವನ್ನು ದ್ರುಪದನ ರಥದ ಬಳಿ ಓಡಿಸಿ, ಬಾಣಗಳ ಸತತ ಪ್ರಯೋಗದಿಂದ ದ್ರುಪದನನ್ನು ಮುಚ್ಚಿಬಿಟ್ಟನು. ರಕ್ಷಣೆಗಾಗಿ ಬಂದ ಸೇನಾ ಸಮೂಹವನ್ನು ನಿರ್ನಾಮ ಮಾಡಿಬಿಟ್ಟನು.


ಪಾಂಚಾಲರು ಸಹ ಸಿಂಹನಾದ ಗೈಯುತ್ತಾ ಬಾಣಗಳ ಮಳೆಗರೆಯುತ್ತಾ ಪಾರ್ಥನನ್ನು ಆಕ್ರಮಿಸಿದರು. ಎರಡೂ ಪಕ್ಷಗಳೂ ತಂತಮ್ಮ ಬಾಣಗಳ ಪ್ರಯೋಗದಿಂದ ಆಕಾಶವನ್ನೇ ಮುಚ್ಚಿಬಿಟ್ಟರು.

Comments


bottom of page