top of page

ಪಾಂಡವರನ್ನು ವಾರಣಾವತಕ್ಕೆ ಕಳಿಸುವ ಹುನ್ನಾರ (ಮಹಾಭಾರತ ಕಥಾಮಾಲೆ 50)

20 hours ago
2 min read

ಪಾಂಡವರನ್ನು ವಾರಣಾವತಕ್ಕೆ ಕಳಿಸುವ ಹುನ್ನಾರ (ಮಹಾಭಾರತ ಕಥಾಮಾಲೆ 50)

ಪಾಂಡವರನ್ನು ವಾರಣಾವತಕ್ಕೆ ಕಳಿಸುವ ಹುನ್ನಾರ (ಮಹಾಭಾರತ ಕಥಾಮಾಲೆ 50)

ಯುವರಾಜನಾಗಿದ್ದ ಯುಧಿಷ್ಠಿರನು ಸದಾ ಪ್ರಜೆಗಳ ಕುಂದು ಕೊರತೆಗಳ ನಿವಾರಣೆಯಲ್ಲಿಯೇ ತೊಡಗಿಸಿಕೊಂಡು ಪ್ರಜಾ ಪ್ರೀತಿಗೆ ಪಾತ್ರನಾಗಿದ್ದನು. ಸಕಲ ಸದ್ಗುಣಗಳಿಂದ ಸಂಪನ್ನರಾಗಿದ್ದ ಪಾಂಡವರನ್ನು ನೋಡುತ್ತಿದ್ದ ಪೌರರು ಅವರನ್ನು ಪ್ರಶಂಸಿಸುತ್ತಿದ್ದರು. ' ಹುಟ್ಟು ಕುರುಡನಾದ ಧೃತರಾಷ್ಟ್ರನು ನನಗೆ ರಾಜನಾಗಿ ಮುಂದುವರಿಯಲು ಅರ್ಹನಲ್ಲ. ಆತನ ಅಂಗವಕಲ್ಯದಿಂದಲೇ ಆತನು ರಾಜ್ಯ ಪದವಿಗೆ ನಿರಾಕರಿಸಲ್ಪಟ್ಟವನು. ನಮ್ಮ ರಾಜನಾಗಿದ್ದ ಪಾಂಡುವು ಸತ್ತು ಹೋದ ಬಳಿಕ ಧೃತರಾಷ್ಟ್ರನು ತಾತ್ಕಾಲಿಕವಾಗಿ ರಾಜನಾಗಿರುವನು. ಈಗ, ಪಾಂಡವ ಜ್ಯೇಷ್ಠನಾದ ಯುವರಾಜನೂ ಆಗಿರುವ ಯುಧಿಷ್ಠಿರನು ಕುರು ಚಕ್ರಾಧಿಪತ್ಯಕ್ಕೆ ಸರ್ವ ರೀತಿಯಲ್ಲೂ ಯೋಗ್ಯನಾಗಿದ್ದಾನೆ. ನಾವೆಲ್ಲಾ ಸೇರಿ ಯುಧಿಷ್ಠಿರನನ್ನು ರಾಜ ಸಿಂಹಾಸನಕ್ಕೆ ಏರಿಸೋಣ. ಇದರಿಂದ ಸಕಲರಿಗೂ ಹಿತವಾಗುತ್ತದೆ.' ಎಂದು ಹಸ್ತಿನೆಯ ಪೌರರು ಮಾತನಾಡತೊಡಗಿದರು. ಈ ಮಾತುಗಳು ಮೊದ ಮೊದಲು ದುರ್ಯೋಧನನಿಗೆ ಬೇರೆಯವರಿಂದ ಕೇಳಿ ತಿಳಿದವು. ನಂತರ ದುರ್ಯೋಧನನ ಎದುರೇ ಈ ಮಾತುಗಳನ್ನು ಜನರು ಆಡತೊಡಗಿದರು. ಮೊದಲೇ ಪಾಂಡವರ ಕುರಿತಾಗಿ ಅಸೂಯಾ ಪರನಾಗಿದ್ದ ದುರ್ಯೋಧನನು ಈ ಮಾತುಗಳನ್ನು ಕೇಳಿ ಮತ್ಸರದಿಂದ ಕುದಿದು ಹೋದನು. ಯುಧಿಷ್ಠಿರನಿಗೆ ಪಟ್ಟ ಕಟ್ಟುವ ವಿಚಾರದಲ್ಲಿ ಭೀಷ್ಮ ವಿದುರರು ಯಾವ ನಿರ್ಧಾರಕ್ಕೂ ಆಗಿನ್ನೂ ಬಂದಿರಲಿಲ್ಲವಾದರೂ ಪೌರರ ಮಾತುಗಳನ್ನು ದುರ್ಯೋಧನನು ಸಹಿಸಿಕೊಳ್ಳಲಿಲ್ಲ. ತನ್ನ ಹೃದಯವನ್ನು ದಹಿಸುತ್ತಿದ್ದ ಅಸೂಯಾಗ್ನಿಯನ್ನು ಹೊತ್ತ ದುರ್ಯೋಧನನು ತಂದೆಯಾದ ಧೃತರಾಷ್ಟ್ರನ ಬಳಿಗೆ ಹೋದನು.

ತನ್ನ ತಂದೆಯ ಏಕಾಕಿಯಾಗಿದ್ದಾಗ ಆತನನ್ನು ಕಂಡು ಹೀಗೆ ಹೇಳಿದನು,

"ತಂದೆಯೇ! ಇತ್ತೀಚಿಗೆ ನಮ್ಮ ಪ್ರಜೆಗಳು ನಿನ್ನನ್ನೂ ಭೀಷ್ಮನನ್ನೂ ಅನಾದರಣೆ ಮಾಡಿ, ಯುಧಿಷ್ಠಿರನನ್ನೇ ರಾಜನನ್ನಾಗಿ ಮಾಡಿಕೊಳ್ಳಲು ಅಪೇಕ್ಷಿಸುತ್ತಿದ್ದಾರೆ. ರಾಜ್ಯ ಭಾರವನ್ನು ವಹಿಸಿಕೊಳ್ಳಲು ಇಚ್ಛಿಸದ ಭೀಷ್ಮನು ಇದನ್ನು ಅನುಮೋದಿಸಲೂಬಹುದು. ಆದರೆ, ಪ್ರಜೆಗಳ ಈ ಸನ್ನಾಹವು ನನಗೆ ಬಹಳ ಪೀಡೆಯನ್ನುಂಟು ಮಾಡುವಂಥದ್ದಾಗಿದೆ. ಹಿರಿಯನಾದ ನೀನು ಈ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಬೇಕಾಗಿದ್ದಿತು. ಆದರೆ ಅಂಗವಿಕಲತೆಯಿಂದಾಗಿ ಅದಾಗಲಿಲ್ಲ. ಪಾಂಡುವು ಸಿಂಹಾಸನಾರೋಹಣ ಮಾಡಿದನು. ಪಾಂಡುವಿನ ಮಗನೇ ಆತನ ಉತ್ತರಾಧಿಕಾರಿಯಾದರೆ, ಪಾಂಡು ವಂಶೀಯರಿಗೆ ಮಾತ್ರ ಈ ಸಿಂಹಾಸನವು ಸಿಕ್ಕುವುದೇ ಹೊರತು ಧಾರ್ತರಾಷ್ಟ್ರರಿಗೆ ಈ ಸಿಂಹಾಸನವು ಖಂಡಿತವಾಗಿಯೂ ಸಿಕ್ಕುವುದಿಲ್ಲ. ಇಂದು ಯುಧಿಷ್ಠಿರ, ನಾಳೆ ಆತನ ಮಗ, ಅನಂತರ ಅವನ ಮಗ ಹೀಗೆ ಮುಂದುವರಿಯುತ್ತದೆ. ನಾವೂ ನಮ್ಮ ಮಕ್ಕಳೂ ರಾಜ ವಂಶದಿಂದಲೇ ಚ್ಯುತರಾಗುತ್ತೇವೆ. ಈ ಲೋಕದಲ್ಲಿ ನಾವು ನಗಣ್ಯರಾಗುತ್ತೇವೆ. ನನ್ನನ್ನು ರಾಜಕುಮಾರರೆಂದು ಯಾರೂ ಪರಿಗಣಿಸುವುದಿಲ್ಲ. ಗೌರವವನ್ನು ಕಳೆದುಕೊಂಡು ಕೇವಲ ಆಹಾರಕ್ಕಾಗಿ ಇತರರನ್ನು ಅವಲಂಬಿಸುವುದು ನರಕವಾಸವೇ ಸರಿ. ಈ ದುರ್ವಿಧಿಯು ನಮಗೆ ಬಾರದಂತೆ ನೀನು ಯಾವುದಾದರೊಂದು ನೀತಿಯನ್ನು ಅನುಸರಿಸು, ಒಂದು ವೇಳೆ ನೀನೇ ಈ ರಾಜ್ಯಾಡಳಿತವನ್ನು ವಹಿಸಿ, ಚಕ್ರವರ್ತಿಯಾಗಿದ್ದರೆ ನಿನ್ನ ಮಕ್ಕಳಾದ ನಾವೇ ಈ ರಾಜ್ಯವನ್ನು ಪಡೆಯುತ್ತಿದ್ದೆವು. ಪ್ರಜೆಗಳ ವಿರೋಧವನ್ನೂ ಲೆಕ್ಕಿಸಬೇಕಾಗಿರಲಿಲ್ಲ" ಎಂದನು.

ಜ್ಞಾನನೇತ್ರನಾದ ಧೃತರಾಷ್ಟ್ರನು ಮಗನ ಮಾತುಗಳನ್ನೆಲ್ಲ ಕೇಳಿದನು. ಕಣಿಕನು ಹೇಳಿದ ರಾಜನೀತಿಯು ಕಿವಿಗಳಲ್ಲಿ ಪ್ರತಿಧ್ವನಿಸಹತ್ತಿತು. ತತ್ಕಾಲದಲ್ಲಿ ಏನೊಂದನ್ನೂ ನಿಶ್ಚಯಿಸಲಾರದೆ ತೊಳಲಹತ್ತಿದನು. ದುರ್ಯೋಧನನು ಕರ್ಣ, ಶಕುನಿ, ದುಃಶ್ಯಾಸನರೊಡನೆ ಸಮಾಲೋಚಿಸಿ, ಏನು ಹೇಳಬೇಕೆಂಬುದನ್ನು ಈಗಾಗಲೇ ನಿಶ್ಚಯಿಸಿದ್ದನು, "ತಂದೆಯೇ! ಯಾವುದಾದರೊಂದು ಕಾರಣವನ್ನು ಮುಂದೆ ಮಾಡಿ, ಈ ಕೂಡಲೇ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಬಿಡು. ಅವರು ಅಲ್ಲಿಗೆ ಹೋಗಿಬಿಟ್ಟರೆ, ಮುಂದೆ ಅವರಿಂದ ನಮಗಾವ ಭಯವೂ ಇರುವುದಿಲ್ಲ" ಎಂದು ಹೇಳಿದನು.

ಧೃತರಾಷ್ಟ್ರನು ಮುಹೂರ್ತಕಾಲ ಯೋಚಿಸಿ, ನಿಟ್ಟುಸಿರು ಬಿಟ್ಟು, ಮಗನನ್ನುದ್ದೇಶಿಸಿ ಹೇಳಿದನು, "ಮಗು! ನನ್ನ ತಮ್ಮನಾದ ಪಾಂಡುವು ನನ್ನ ವಿಷಯದಲ್ಲಿ ಅನುಪಮವಾದ ಪ್ರೀತಿ ಆದರಗಳನ್ನು ಹೊಂದಿದ್ದ ಧರ್ಮಾತ್ಮನಾಗಿದ್ದನು. ಈಗ ಅವನ ಮಗನೂ ಸಕಲ ಗುಣಪೂರ್ಣನಾಗಿರುವನು. ಪ್ರಜಾ ಪ್ರೀತಿಗೆ ಪಾತ್ರನಾಗಿರುವನು. ಯುಧಿಷ್ಠಿರನ ಗುಣಾತಿಶಯಗಳ ಕಾರಣ ಅನೇಜ ರಾಜರು ಆತನ ಮಿತ್ರರಾಗಿದ್ದಾರೆ. ಈಗ ನಾವು ಬಲಾತ್ಕಾರದಿಂದ ಪಾಂಡವರನ್ನು ದೇಶಭ್ರಷ್ಟರನ್ನಾಗಿ ಮಾಡಲು ಸಾಧ್ಯವೇ?

ಅಮಾತ್ಯ, ಸೇನಾಪತಿಯೇ ಮೊದಲಾದ ಅಧಿಕಾರಿಗಳೂ, ಅವರ ಪರಿವಾರದವರೂ, ಸೈನಿಕರೂ ಪಾಂಡುವಿನಿಂದ ಸ್ವಂತ ಮಕ್ಕಳಂತೆ ಪರಿಪಾಲಿಸಲ್ಪಟ್ಟವರು. ಪಾಂಡುವಿನ ಮೇಲಿದ್ದ ಪ್ರೇಮವೇ ಈಗ ಪ್ರಜೆಗಳಿಗೆ ಯುಧಿಷ್ಠಿರನ ಮೇಲೆಯೂ ಇದೆ. ಹೀಗಿರುವಾಗ ನಾವು ಪಾಂಡವರಿಗೆ ತೊಂದರೆ ಮಾಡಲು ಯತ್ನಿಸಿದರೆ, ಅವರೆಲ್ಲರೂ ಸುಮ್ಮನಿರುವರೇ? ನಮ್ಮನ್ನೇ ನಾಶ ಮಾಡಬಹುದೆಂಬ ಭಯ ನನಗೆ!" ಎಂದನು.


"ತಂದೆಯೇ! ಈ ಎಲ್ಲ ಅಂಶಗಳನ್ನೂ ನಾನೂ ಗಮನಿಸಿಯೇ ಇದ್ದೇನೆ. ನಮ್ಮ ಭೃತ್ಯ ವರ್ಗದವರೂ, ಅಧಿಕಾರಿಗಳೂ, ಅಮಾತ್ಯರಿಗೂ ಯಥೇಚ್ಛವಾಗಿ ದ್ರವ್ಯವನ್ನು. ಕೊಟ್ಟು ಗೌರವಿಸುತ್ತಲೇ ಬಂದಿದ್ದೇನೆ. ಅದರಿಂದಲೇ ನಾನು ಈಗಾಗಲೇ ಅಧಿಕಾರಿ ವರ್ಗವನ್ನು ನಮ್ಮತ್ತ ಸೆಳೆದುಕೊಂಡಿದ್ದೇನೆ. ನಾವು ಅಗಣಿತ ದ್ರವ್ಯವನ್ನು ಕೊಡುವುದರಿಂದ ಪ್ರಜೆಗಳಿಗೂ ನಾವು ಅತ್ಯಂತ ಸಮರ್ಥರೆಂಬ ಭಾವನೆಯೂ ನಿಧಾನವಾಗಿ ಬರಬಹುದು. ಆದುದರಿಂದ, ನೀನು ಯುಕ್ತಿ ಯುಕ್ತವಾದ ವ್ಯಾಜವೊಂದನ್ನು ಮುಂದು ಮಾಡಿ, ಪಾಂಡವರನ್ನು ಕೂಡಲೇ ವಾರಣಾವತಕ್ಕೆ ಕಳುಹಿಸಿಬಿಡು. ಸಾಮ್ರಾಜ್ಯವು ನಮ್ಮ ಕೈವಶವಾದ ನಂತರ ಹಸ್ತಿನೆಗೆ ಹಿಂದಿರುಗಲಿ" ಎಂದು ದುರ್ಯೋಧನನು ಹೇಳಿದನು.

Comments


bottom of page