top of page

ಕಣಿಕನ ನೀತಿ 2 (ಮಹಾಭಾರತ ಕಥಾಮಾಲೆ 49)

19 hours ago
2 min read

ಕಣಿಕನ ನೀತಿ 2 (ಮಹಾಭಾರತ ಕಥಾಮಾಲೆ 49)

ಕಣಿಕನ ನೀತಿ 2 (ಮಹಾಭಾರತ ಕಥಾಮಾಲೆ 49)

ಕಣಿಕನು ಶತ್ರು ವಿನಾಶವನ್ನು ಯಾವ ರೀತಿ ಸಾಧಿಸಬೇಕೆಂಬುದನ್ನು ವಿವರಿಸುತ್ತಾ, ಅದಕ್ಕೆ ಪೂರಕವಾದ ದೃಷ್ಟಾಂತವೊಂದನ್ನು ಹೇಳತೊಡಗಿದನು,

ಸ್ವಾರ್ಥಿಯೂ, ನೀತಿ ಶಾಸ್ತ್ರಗಳನ್ನು ತಿಳಿದು ಪಂಡಿತನೆಂದೂ ಖ್ಯಾತನಾಗಿದ್ದ ನರಿಯೊಂದು ಹುಲಿ, ಇಲಿ, ತೋಳ, ಮುಂಗುಸಿ ಇವುಗಳೊಡನೆ ಸ್ನೇಹವನ್ನು ಸಾಧಿಸಿ, ಕೂಟವೊಂದನ್ನು ಕಟ್ಟಿಕೊಂಡು ಅರಣ್ಯದಲ್ಲಿ ಅಲೆಯತೊಡಗಿತು. ಒಮ್ಮೆ ಇವುಗಳ ಕಣ್ಣಿಗೆ ಸುಪುಷ್ಟವಾದ ಜಿಂಕೆಯೊಂದು ಕಂಡಿತು. ಅದನ್ನು ಹಿಡಿದು ತಿನ್ನಬೇಕೆಂಬ ಚಪಲದಿಂದ ಈ ಮಿತ್ರವೃಂದ ಬೆನ್ನಟ್ಟಿತು. ಆದರೆ ಓಟದಲ್ಲಿ ನಿಪುಣವಾದ ಜಿಂಕೆಯು ಸಿಗದೆ ಹೋಯಿತು.

ಮಿತ್ರವೃಂದವು ಅಲ್ಲಿಯೇ ಕುಳಿತು ಸಮಾಲೋಚನೆ ನಡೆಸಿದವು. ಬುದ್ಧಿವಂತನಾದ ನರಿಯು ಹೇಳಿತು, "ವ್ಯಾಘ್ರರಾಜ! ನೀನೆಷ್ಟೇ ಪ್ರಯತ್ನಿಸಿದರೂ ನಿನಗಿಂತ ವೇಗವಾಗಿ ಓಡಬಲ್ಲ ಈ ಜಿಂಕೆಯನ್ನು ನೀನು ಹಿಡಿಯಲಾರೆ. ಅದನ್ನು ಹಿಡಿಯುವ ಉಪಾಯವನ್ನು ನಾನು ಸೂಚಿಸುತ್ತೇನೆ. ಅದನ್ನು ನೀವು ಕಾರ್ಯಗತ ಮಾಡಬೇಕು. ಜಿಂಕೆಯು ಮಲಗಿರುವಾಗ ಇಲಿಯು ಅದರ ಕಾಲನ್ನು ಕಚ್ಚಲಿ ಆಗ ಜಿಂಕೆಯ ಓಟದ ವೇಗ ಕಡಿಮೆಯಾಗುತ್ತದೆ. ಆಗ ವ್ಯಾಘ್ರರಾಜನಾದ ನೀನು ಜಿಂಕೆಯನ್ನು ಸುಲಭವಾಗಿ ಕೊಲ್ಲಬಹುದು. ನಾವೆಲ್ಲ ಆ ಜಿಂಕೆಯ ಮಾಂಸ ಭಕ್ಷಣ ಮಾಡಬಹುದು".

ಎಲ್ಲವೂ ಒಪ್ಪಿದವು ಯೋಜನೆಯಂತೆ ಜಿಂಕೆಯು ನಿದ್ರಿಸುವಾಗ ಮೆಲ್ಲನೆ ಅದರ ಬಳಿ ತೆರಳಿದ ಇಲಿಯು ಅದರ ಕಾಲನ್ನು ಕಡಿದು ಘಾಸಿ ಮಾಡಿತು. ಆಗ, ನೋವಿನಿಂದ ಕುಂಟುತ್ತಾ ಸಾಗುತ್ತಿದ್ದ ಜಿಂಕೆಯ ಮೇಲೆರಗಿದ ಹುಲಿಯು ಅದನ್ನು ಕೊಂದಿತು. ಆಗ ನರಿಯೂ ಸೇರಿದಂತೆ ಎಲ್ಲಾ ಪ್ರಾಣಿಗಳು ಅಲ್ಲಿ ಸೇರಿ ಸಂತೋಷವನ್ನು ಹಂಚಿಕೊಂಡವು. ನರಿಯು ಹೇಳಿತು, "ಗೆಳೆಯರೇ! ಇಂದು ನಮಗೆ ಒಳ್ಳೆಯ ಆಹಾರ ಸಿಕ್ಕಿದೆ. ನಾನು ಇಲ್ಲಿಯೇ ಇದ್ದು, ಇದನ್ನು ರಕ್ಷಿಸುವೆನು. ನೀವೆಲ್ಲರೂ ಕೂಡಲೇ ನದಿಗೆ ತೆರಳಿ, ಸ್ನಾನಾದಿಗಳನ್ನು ಮುಗಿಸಿ ಬನ್ನಿ".

ಎಲ್ಲಾ ಪ್ರಾಣಿಗಳೂ ಸ್ನಾನಕ್ಕಾಗಿ ನದಿಯೆಡೆಗೆ ಧಾವಿಸಿದವು. ನರಿಯು ಅಲ್ಲಿಯೇ ಕುಳಿತು, ಈ ಎಲ್ಲಾ ಮಾಂಸವನ್ನೂ ತಾನೊಬ್ಬನೇ ಹೇಗೆ ತಿನ್ನಬಹುದೆಂದು ಯೋಚಿಸಿತು.

ಎಲ್ಲಕ್ಕೂ ಮೊದಲು ಹುಲಿಯು ಆಗಮಿಸಿತು. ಯೋಚನೆಯಲ್ಲಿ ಮುಳುಗಿದ್ದ ನರಿಯನ್ನು ಕಂಡು, ಪ್ರಶ್ನಿಸಿತು "ಜಂಬುಕ! ಮಹಾಪ್ರಾಜ್ಞನೂ, ಚತುರನೂ ಆದ ನೀನು ಹೀಗೇಕೆ ಚಿಂತಿಸುತ್ತಿರುವೆ? ಸತ್ತ ಜಿಂಕೆಯ ಮಾಂಸ ಭಕ್ಷಣೆ ಮಾಡಿ, ಇಂದು ಸುಖದಿಂದ ಕಾಲ ಕಳೆಯಬಹುದಲ್ಲ! ಹೀಗಿರುವಾಗ, ನಿನ್ನ ದುಃಖಕ್ಕೇನು ಕಾರಣ?"

"ಹೇಳಿಬಿಡಲೇ!"

"ನಿಶ್ಚಯವಾಗಿ!"

"ಚಂಡ ವ್ಯಾಘ್ರನೇ! ನೀನು ಒತ್ತಾಯಿಸುತ್ತಿರುವುದರಿಂದ ಹೇಳುತ್ತೇನೆ. ಆ ಸಣ್ಣ ಇಲಿಯು ನಿನ್ನನ್ನು ಮೂದಲಿಸಿತು. 'ವ್ಯಾಘ್ರರಾಜನ ಶಕ್ತಿಗೆ ಧಿಕ್ಕಾರವಿರಲಿ' 'ಇಂದು ನನ್ನ ಪರಾಕ್ರಮದಿಂದ ಕೊಂದ ಜಿಂಕೆಯ ಮಾಂಸ ತಿಂದು, ಹುಲಿಯು ಹಸಿವನ್ನು ತೀರಿಸಿಕೊಳ್ಳಲಿ' ಎಂದು ಇಲಿಯು ದರ್ಪದಿಂದ ಹೇಳಿತು. ಅದರ ಮಿತ್ರನಿಂದೆಯ ಮಾತು ಕೇಳಿ ನೊಂದ ನಾನು ಈ ಜಿಂಕೆಯನ್ನು ತಿನ್ನಲೇ ಕೂಡದು ಎಂದು ನಿರ್ಧರಿಸಿದ್ದೇನೆ ಹುಲಿರಾಯ" ಎಂದು ನರಿಯು ಮಾರುತ್ತರಿಸಿತು.


ಅವಮಾನಿತವಾದ ಹುಲಿಯು ಗರ್ಜಿಸಿತು "ಆಹಾ! ಇಲಿಯು ಹಾಗೆಂದಿತೇ? ನನಗೆ ಜ್ಞಾನೋದಯವಾಯಿತು. ಇನ್ನು ಮುಂದೆ ನಾನು ಯಾರ ಸಹಾಯವನ್ನೂ ಪಡೆಯದೇ ಬೇಟೆಯಾಡುವೆನು. ಆ ಇಲಿಯ ಸಹಾಯದಿಂದ ಪಡೆದ ಈ ಮಾಂಸವು ನನಗೆ ನಿಂದ್ಯವೇ ಆಗಿದೆ. ನಾನು ಇದನ್ನು ಮುಟ್ಟಲಾರೆ" ಎಂದು ಅಲ್ಲಿಂದ ಹೊರಟೇ ಹೋಯಿತು.

ಇತ್ತ ಕಡೆ ಇಲಿಯು ಬಂದಿತು. ನರಿಯು, ಇಲಿಯಲ್ಲಿ ಹೇಳಿತು, "ಇಲಿರಾಯ! ಸತ್ತು ಬಿದ್ದ ಜಿಂಕೆಯಲ್ಲಿ ವ್ಯಾಪಿಸಿಬಿಟ್ಟಿದೆಯೆಂದೂ, ಆದುದರಿಂದ ತಿನ್ನಲು ಸಾಧ್ಯವಿಲ್ಲವೆಂದೂ, ನಾನೇನಾದರೂ (ನರಿ) ಅನುಮತಿ ನೀಡಿದರೆ ಇಲಿಯನ್ನೇ ತಿನ್ನುವುದಾಗಿಯೂ ಹೇಳಿತು"

ನರಿಯ ಮಾತುಗಳನ್ನು ಕೇಳಿ ಭೀತನಾದ ಇಲಿ ಓಡಿ ಹೋಗಿ ಬಿಲ ಸೇರಿತು.

ನಂತರ ಬಂದ ತೋಳವನ್ನುದ್ದೇಶಿಸಿ ನರಿಯು, "ವೃಕರಾಜ! ಹುಲಿಯು ನಿನ್ನ ಮೇಲೆ ಕೋಪಗೊಂಡಿದೆ. ಅದು ಈ ಮಾಂಸವನ್ನು ನೀನು ಎಂಜಲು ಮಾಡಿರುವೆ ಎಂದು ಭಾವಿಸಿದೆ. ನಿನ್ನನ್ನು ಕೊಲ್ಲುವುದಕ್ಕೆ ಉದ್ದೇಶಿಸಿದೆ. ನೀನು ತಕ್ಷಣ ಇಲ್ಲಿಂದ ಓಡಿ ಹೋಗುವುದು ಉತ್ತಮ. ಇನ್ನು ನಿನ್ನಿಷ್ಟ ಬಂದಂತೆ ಮಾಡು" ಎಂದಿತು. ಭಯಗೊಂಡ ತೋಳವು ಬಾಲ ಮುದುರಿಕೊಂಡು ಅಲ್ಲಿಂದ ಪಲಾಯನ ಮಾಡಿತು.

ನಂತರ ಬಂದ ಮುಂಗುಸಿಯನ್ನು ಕಂಡು ಆರ್ಭಟಿಸಿದ ನರಿಯು, "ಎಲವೋ, ನನ್ನ ಭುಜವಲ ಪರಾಕ್ರಮದಿಂದ ಹುಲಿ, ಇಲಿ, ತೋಳಗಳನ್ನು ಓಡಿಸಿದ್ದೇನೆ. ಈಗ ನಿನ್ನನ್ನೂ ಬಡಿದು ಓಡಿಸುತ್ತೇನೆ" ಎಂದು ಅಬ್ಬರಿಸಿತು. ಹೆದರಿದ ಮುಂಗುಸಿಯು ಓಡಿಹೋಯಿತು. ಬಳಿಕ ನದಿಯೊಂದೇ ಎಲ್ಲಾ ಮಾಂಸವನ್ನೂ ತಿಂದು ಆನಂದಿಸಿತು. ಕಣಿಕನು ಈ ಕಥೆಯನ್ನು ಧೃತರಾಷ್ಟ್ರನಿಗೆ ಹೇಳಿದನು.

ಕಣಿಕನು ಮುಂದುವರಿದು, "ಧೃತರಾಷ್ಟ್ರ! ನೀನು ಪಾಂಡವರ ವಿಷಯದಲ್ಲಿಯೂ ಈಗ ನಾನು ಸೂಚಿಸಿದ ರಾಜನೀತಿಯಂತಲೇ ವ್ಯವಹರಿಸುವುದು ಉಚಿತವಾಗಿದೆ. ಅಲ್ಲದಿದ್ದರೆ ಮುಂದೆ ಸಂಕಟವು ಎದುರಾಗುತ್ತದೆ. ಈಗ ನೀನು ಸಕಲ ಸಂಪತ್ತಿನಿಂದ ಕೂಡಿ, ಸುಖವಾಗಿರುವೆಯೆಂದು ಮೈಮರೆಯದಿರು. ನಿನ್ನ ಮಕ್ಕಳಿಗಿಂದಲೂ ಪರಾಕ್ರಮಶಾಲಿಗಳಾಗಿರುವ ಪಾಂಡವರಿಂದ ನಿನ್ನನ್ನು ರಕ್ಷಣೆ ಮಾಡಿಕೊ ಪಾಂಡವರನ್ನು ಹೇಗಾದರೂ ನಿವಾರಿಸಿಕೊಳ್ಳುವ ರೀತಿಯಲ್ಲಿ, ನಿನ್ನ ನೀತಿಯನ್ನು ರೂಪಿಸಿಕೊ?

ಎಂದು ಹೇಳಿ,ತನ್ನ ಮನೆಗೆ ಹೊರಟು ಹೋದನು. ಇತ್ತ ಧೃತರಾಷ್ಟ್ರನು ಕೆಲ ಕಾಲ ವ್ಯಾಕುಲಾಚಿತ್ತನಾಗಿ ಕುಳಿತುಬಿಟ್ಟನು.

Comments


bottom of page