top of page

ವಿದುರ ಯುಧಿಷ್ಠಿರರ ಸಂಭಾಷಣೆ(ಮಹಾಭಾರತ ಕಥಾಮಾಲೆ 52)

5 hours ago
2 min read
ವಿದುರ ಯುಧಿಷ್ಠಿರರ ಸಂಭಾಷಣೆ(ಮಹಾಭಾರತ ಕಥಾಮಾಲೆ 51)

ದುರಾತ್ಮನಾದ ಪುರೋಚನನು ದುರ್ಯೋಧನನ ಮಾತುಗಳಿಗೆ ಸಮ್ಮತಿಸಿದನು. ಹೇಸರಗತ್ತೆಗಳನ್ನು ಹೂಡಿದ್ದ ರಥಗಳಲ್ಲಿ ಕುಳಿತು ವಾರಣಾವತಕ್ಕೆ ಬಹುಶೀಘ್ರವಾಗಿ ಪ್ರಯಾಣ ಮಾಡಿದನು. ದುರ್ಯೋಧನನ ಸಲಹೆಯಂತೆ ಅರಗಿನ ಅರಮನೆಯನ್ನು ಸಜ್ಜುಗೊಳಿಸತೊಡಗಿದನು.


ಇತ್ತ ಪಾಂಡವರು ವಾರಣಾವತಕ್ಕೆ ಹೊರಟು ನಿಂತರು. ಸುತ್ತಲೂ ನೆರೆದಿದ್ದ ಹಿರಿಯರ ಪಾದಗಳಿಗೆ ನಮಸ್ಕರಿಸಿದರು. ಉತ್ತಮಾಶ್ವಗಳಿಂದ ಸಜ್ಜಾದ ರಥವನ್ನೇರಿ ಹೋರಾಟ ಪಾಂಡು ಪುತ್ರರನ್ನು ದುಃಖಿತರಾದ ಪ್ರಜಾಸ್ತೋಮವು ಸ್ವಲ್ಪ ದೂರದ ವರೆಗೆ ಹಿಂಬಾಲಿಸಿತು. ತಮ್ಮನ್ನು ಬಿಟ್ಟು ಹೋಗುತ್ತಿರುವ ಪಾಂಡವರನ್ನು ಕಂಡು ದುಃಖಿತರಾದ ಕೆಲ ಪ್ರಜೆಗಳು ಧೃತರಾಷ್ಟ್ರನನ್ನು ಬಹಿರಂಗವಾಗಿಯೇ ನಿಂದಿಸಿದರು. ಪಾಂಡವರ ಸದ್ಗುಣಗಳನ್ನು ಕೊಂಡಾಡಿದರು. ಹೀಗೆ ತಮ್ಮನ್ನೇ ಹಿಂಬಾಲಿಸಿ ಬರುತ್ತಿದ್ದ ಪ್ರಜೆಗಳನ್ನು ಯುಧಿಷ್ಠಿರನು ಸಮಾಧಾನ ಪಡಿಸಿದನು. ಎಲ್ಲರನ್ನೂ ತಮ್ಮ ತಮ್ಮ ಮನೆಗಳಿಗೆ ತೆರಳಲು ವಿನಂತಿಸಿದನು. ಯುಧಿಷ್ಠಿರನ ಮಾತುಗಳಿಗೆ ಮಣಿದ ಪ್ರಜೆಗಳು ಪಾಂಡವರ ರಥವನ್ನು ಪ್ರದಕ್ಷಿಣೆ ಮಾಡಿ, ಮನಃಪೂರ್ವಕವಾಗಿ ಪಾಂಡವರನ್ನು ಆಶೀರ್ವದಿಸಿ ಮನೆಗೆ ತೆರಳಿದರು.

ಕಡೆಗುಳಿದವನು ವಿದುರ ಮಾತ್ರ. ಆತನು ಪಾಂಡವರ ಜೊತೆ ಹೊರಡಲು ಸಿದ್ಧನಾಗಿರಲಿಲ್ಲ ಬದಲಿಗೆ, ಯುಧಿಷ್ಠಿರನಿಗೆ ಕೆಲ ಹಿತೋಕ್ತಿಗಳನ್ನು ಹೇಳಿ ಹೋಗಬೇಕೆಂಬ ಆಸೆಯಿಂದ ಅಲ್ಲಿಯೇ ಉಳಿದನು. ತಾನು ಹೇಳುವುದು ಬೇರಾರಿಗೂ ತಿಳಿಯಕೂಡದು ಎಂಬ ಅಭಿಲಾಷೆಯನ್ನೂ ಆತ ಹೊಂದಿದ್ದನು.

"ಪ್ರಾಜ್ಞಃ ಪ್ರಾಜ್ಞ ಪ್ರಲಾಪಜ್ಞಃ ಪ್ರಲಾಪಜ್ಞಮಿದಂ ವಚಃ|

ಪ್ರಾಜ್ಞಂ ಪ್ರಾಜ್ಞಃ ಪ್ರಲಾಪಜ್ಞಃ ಪ್ರಲಾಪಜ್ಞಂ ವಚೋಬ್ರವೀತ್||

ಪ್ರಾಜ್ಞನೂ ಮತ್ತು ಪ್ರಾಜ್ಞರಾಡುವ ಮಾತಿನ ಗೂಡಾರ್ಥವನ್ನು ಗ್ರಹಿಸಬಲ್ಲವನೂ ಆದ ವಿದುರನು ಪ್ರಾಜ್ಞನಾದ ಮತ್ತು ಪ್ರಾಜ್ಞ ಪ್ರಲಾಪವನ್ನು ತಿಳಿದಿದ್ದ ಯುಧಿಷ್ಠಿರನನ್ನು ಕುರಿತು ಹೇಳಿದನು.


(ಇಲ್ಲಿ ಪ್ರಾಜ್ಞ ಪ್ರಲಾಪವೆಂದರೆ, ವಿದ್ವಾಂಸರ ಮಾತೆಂದು ಸ್ವಾಭಾವಿಕವಾದ ಅರ್ಥವಾದರೂ ವ್ಯಾಖ್ಯಾನಕಾರರು ಪ್ರ ಪ್ರಕರ್ಷೇಣ ಅಜ್ಞಃ ಪ್ರಾಜ್ಞಃ ಎಂಬ ವಿಭಾಗ ಮಾಡಿ, ಪ್ರಾಜ್ಞರೆಂದರೆ ಬಹಳ ಅಜ್ಞಾನಿಗಳೆಂದು ಅರ್ಥ ಮಾಡಿದ್ದಾರೆ. ಇಲ್ಲಿ ಅಜ್ಞಾನಿಗಳೆಂದರೆ ವೇದಾರ್ಥವನ್ನರಿಯದವರು, ಮ್ಲೇಚ್ಛರು. ಅವರಾಡುವ ಭಾಷೆಯು ವಿದುರನಿಗೂ, ಯುಧಿಷ್ಠಿರನಿಗೂ ತಿಳಿದಿತ್ತು. ಆದ್ದರಿಂದ ಅವರೀರ್ವರ ಸಂಭಾಷಣೆ ಬೇರಾರಿಗೂ ತಿಳಿಯದೇ ಗುಟ್ಟಾಗಿ ಇತ್ತು)

"ಯೋ ಜಾನಾತಿ ಪರಪ್ರಜ್ಞಾಂ ನೀತಿ ಶಾಸ್ತ್ರಾನುಸಾರಿಣೀಮ್|

ವಿಜ್ಞಾಯೇಹ ತಥಾ ಕುರ್ಯಾದಾಪದಂ ನಿಸ್ತರೇದ್ಯಥಾ||"

"ಯುಧಿಷ್ಠಿರ! ಶತ್ರುಗಳಾದವರ ಮನಸ್ಸಿನಲ್ಲಿ ನೀತಿ ಶಾಸ್ತ್ರಾನುಸಾರವಾದ ಯಾವ ವಿಚಾರಗಳು ಉದ್ಭೂತವಾಗುತ್ತವೆ? ಅವರು ಅವೆಲ್ಲವನ್ನೂ ಯಾವ ಮಾರ್ಗದಿಂದ ಕಾರ್ಯರೂಪಕ್ಕೆ ತರುತ್ತಾರೆ? ಶತ್ರುವು ಯಾವ ರೀತಿ ಬಲೆ ಬೀಸುತ್ತಾನೆ? ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಂಡು, ನಮಗೆ ಒದಗಬಹುದಾದ ಆಪತ್ತಿನಿಂದ ಪಾರಾಗಲು ಯಾವ ರೀತಿ ಕಾರ್ಯ ಮಾಡಬೇಕೆಂಬುದನ್ನು ನಿರ್ಣಯಿಸಬೇಕು" ಎಂದನು.

(ಕಣಿಕನು ಹೇಳಿದ ರಾಜನೀತಿಯು ಧೃತರಾಷ್ಟ್ರನಿಗೆ ತಿಳಿದಿರುವಂತೆ, ಯುಧಿಷ್ಠಿರನಿಗೂ ತಿಳಿದಿದೆ. ಒಬ್ಬನು ತನ್ನ ಶತ್ರುಗಳನ್ನು ಧ್ವಂಸ ಮಾಡಲು ಮುಂದಾದರೆ, ಇನ್ನೊಬ್ಬನು ತನ್ನನ್ನು ತಾನು ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಹೇಗೆಂದು ತರ್ಕಿಸುತ್ತಾನೆ. ಹೀಗೆ ಒಂದೇ ರಾಜನೀತಿಯನ್ನು ಆಕ್ರಮಣಕ್ಕೂ, ಆತ್ಮ ರಕ್ಷಣೆಗೂ ಬಳಸಬಹುದು. ಗ್ರಾಮ ರಕ್ಷಕರಿಗೆ ಕಳ್ಳರನ್ನು ಹಿಡಿಯಬೇಕಾದರೆ ಕಳ್ಳತನವೂ ಗೊತ್ತಿರಬೇಕು. ಇವುಗಳೆಲ್ಲವನ್ನೂ ತಿಳಿದ ಯುಧಿಷ್ಠಿರನು 'ಈಗ ಧೃತರಾಷ್ಟ್ರನು ತಮ್ಮನ್ನು ವಾರಣಾವತಕ್ಕೆ ಕಳಿಸಿದ್ದು ರಾಜತಂತ್ರವೋ ಅಥವಾ ಸಹಜವೋ' ಎಂಬುದನ್ನು ಮಾತ್ರ ತಿಳಿಯಬೇಕಿದೆ. ಒಂದು ವೇಳೆ ಧೃತರಾಷ್ಟ್ರನು ಪಾಂಡವರನ್ನು ಕಳಿಸಿದ್ದು ರಾಜತಂತ್ರವೇ ಹೌದಾದರೆ, ಮುಂದೆ ಅದಕ್ಕೆ ಬೇಕಾದ ನಿವಾರಣೋಪಾಯವನ್ನೂ ಕಂಡುಕೊಳ್ಳುವ ಸಾಮರ್ಥ್ಯ ಯುಧಿಷ್ಠಿರನಿಗಿದೆ. ಈ ಹಿನ್ನೆಲೆಯಲ್ಲಿಯೇ ವಿದುರನು ನೀತಿ ಶಾಸ್ತ್ರನುಸಾರವಾಗಿ ಶತ್ರುಗಳು ಏನು ಯೋಚಿಸುತ್ತಾರೆಂಬುದನ್ನು ಯಾವನು ತಿಳಿಯುತ್ತಾನೋ ಅವನು ಅಪಾಯದಿಂದ ಪಾರಾಗುತ್ತಾನೆ ಅರ್ಥಾತ್ ಧೃತರಾಷ್ಟ್ರನು ಶತ್ರು ನಿರ್ಮೂಲನೆಗಾಗಿ ನೀತಿ ಶಾಸ್ತ್ರವನ್ನು ಅವಲಂಬಿಸಿ ಕಾರ್ಯ ಮಾಡುತ್ತಿದ್ದಾನೆ ಎಂಬ ಸೂಚನೆಯನ್ನು ಯುಧಿಷ್ಠಿರನಿಗೆ ಕೊಡುತ್ತಾನೆ.)

ವಿದುರನು ಮುಂದುವರಿದನು,

"ಅಲೋಹಂ ನಿಶಿತಂ ಶಸ್ತ್ರಂ ಶರೀರ ಪರಿಕರ್ತನಂ|

ಯೋ ವೇತ್ತಿ ನ ತು ತಂ ಫ್ನಂತಿ ಪ್ರತಿಘಾತವಿದಂ ದ್ವಿಷಃ||"

"ಕೊಲ್ಲಲು ಲೋಹ ಶಸ್ತ್ರವು ಮಾತ್ರವೇ ಅಲ್ಲದೇ ಅಲೋಹದ ನಿಶಿತವಾದ ಶಸ್ತ್ರವೂ ಇದೆ. ಅದೂ ಸಹ ಮನುಷ್ಯನ ಶರೀರವನ್ನು ಭಗ್ನಗೊಳಿಸುತ್ತದೆ. ಈ ಅಲೋಹ ಶಸ್ತ್ರಗಳು ಯಾವುದೆಂದು ಅರಿತರೆ, ಸುಲಭವಾಗಿ ಪಾರಾಗಬಹುದು. ಅಗ್ನಿ ಮತ್ತು ವಿಷಗಳೇ ಆ ಶಸ್ತ್ರಗಳು".

ವ್ಯಾಖ್ಯಾನಕಾರರ ಅಭಿಪ್ರಾಯದಂತೆ, ಈ ಶ್ಲೋಕವು ಅರಗಿನ ಮನೆಯ ಕುರಿತಾಗಿರುವುದರಿಂದ, ಇದರಲ್ಲಿ ಮ್ಲೇಚ್ಛ ಭಾಷೆಯ ಪದಗಳು ಇವೆ ಎನ್ನುತ್ತಾರೆ. ಇದರಲ್ಲಿನ ಪದಗಳನ್ನು ಹೀಗೆ ವಿಭಾಗ ಮಾಡಬೇಕು.

"ಅಲೋಹಂ-ನಿಶಿ-ತಂ-ಶಸ್ತ್ರಂ-ಶರೀರಪರಿ-ಕರ್ತನಮ್"

ಅಲೋಹಂ ಎಂಬುದು ಮ್ಲೇಚ್ಛ ಭಾಷೆಯ ಪದ ಎಂಬುದು ವ್ಯಾಖ್ಯಾನಕಾರರ ಅಭಿಪ್ರಾಯ. ಅಲ ಎಂದರೆ ಅಗ್ನಿ, ಅನಲ ಶಬ್ದದಲ್ಲಿನ ನಕಾರ ಲೋಪವಾಗಿದೆ. ಸಂಸ್ಕೃತದಲ್ಲಿ 'ಗೃಹ' ಪರ್ಯಾಯದಲ್ಲಿ 'ಸಸ್ತ್ರ' ಎಂಬ ಪದವಿದೆ. ಮ್ಲೇಚ್ಛ ಭಾಷೆಯಲ್ಲಿ ಈ 'ಸ' ಕಾರವು 'ಶ ' ಕಾರವಾಗಿದೆ. ಅಂದರೆ, ' ಶಸ್ತ್ರಂ ' ಎಂಬ ಪದಕ್ಕೆ ' ಮನೆ ' ಎಂದು ಅರ್ಥವಾಗುತ್ತದೆ.

Comments


bottom of page