top of page

ವಿದುರ

ವಿದುರ


ನಾನು ವ್ಯಾಸರ ಪುತ್ರನಾದರೂ ದಾಸಿಪುತ್ರ ಅನ್ನಿಸಿಕೊಂಡಿದ್ದೇ ಹೆಚ್ಚು.. ಕೌರವನ ಜೊತೆಯಲ್ಲಿದ್ದೂ ಪಾಂಡವರ ಪರ ವಹಿಸಿದ್ದೇ ಹೆಚ್ಚು.. ಇಷ್ಟಾದ ಮೇಲೆ ತಿಳಿದಿರಬೇಕು ನಾನಾರು ಎಂಬುದು. ನಿಮ್ಮ ಊಹೆ ಸರಿ. ನಾನು ಕೃಷ್ಣಭಕ್ತ ವಿದುರ.



ಹುಟ್ಟಿದ್ದು ದಾಸಿಯ ಪುತ್ರನಾಗಿ. ಆದರೆ ನನಗೆ ಹಸ್ತಿನಾವತಿಯ ಆಸ್ಥಾನದಲ್ಲಿ ಅಪಾರ ಗೌರವ ಇತ್ತು. ನನ್ನ ಜ್ಞಾನಕ್ಕೆ, ಗುಣಕ್ಕೆ ಆಸ್ಥಾನದಲ್ಲಿ ಬೆಲೆಯಿತ್ತು. ಎಂದಿಗೂ ಜಾತಿಯ ಹೆಸರು ಹೇಳಿ ನಿಂದಿಸಿದ್ದಿಲ್ಲ.. ದಾಸಿಯ ಪುತ್ರನೆಂದು ಹಂಗಿಸಿದ್ದಿಲ್ಲ. ಪಾಂಡು, ದೃತರಾಷ್ಟ್ರರು ನನ್ನ ಸಹೋದರರು ಎಂಬ ಗೌರವ, ಪ್ರೀತಿ ನನ್ನಲ್ಲಿ ಯಾವಾಗಲೂ ಇತ್ತು. ಆದರೆ ಎಂದಿಗೂ ಅವರ ಸಹೋದರ‌ ನಾನೆಂಬ ಗರ್ವ ತೋರಲಿಲ್ಲ. ಪಾಂಡುವಿನ ನಂತರ ದೃತರಾಷ್ಟ್ರ ಪಟ್ಟವೇರಿದಾಗ ಅವನಿಗೆ ಕಣ್ಣಾಗಿ ಉಳಿದೆ. ಮಂತ್ರಿಯ ಜಾಗವೆಂಬುದು ಅತೀ ಜವಬ್ದಾರಿಯುತವಾದದ್ದು, ರಾಜನಿಗೆ ರಕ್ಷಣೆಯಾಗಿ ಇರುವುದರ ಜೊತೆಗೆ, ರಾಜನಿಂದ ಏನೂ ತಪ್ಪಾಗದಂತೆ ನೋಡಿಕೊಳ್ಳುವ ಹೊಣೆಯೂ ಮಂತ್ರಿಗೆ ಇದೆ ಎಂಬ ತತ್ವ ನನ್ನದು. ಆ ಕಾರಣದಿಂದಲೇ ಹಸ್ತಿನಾಪುರಕ್ಕೆ ಶಕುನಿಯ ಆಗಮನವಾಗಿ, ನನ್ನನ್ನು ಅತಿಯಾಗಿ ಅವಮಾನಿಸುವವರೆಗೂ ನೆಮ್ಮದಿಯಾಗೇ ಇದ್ದೆ. ಅದಾದ ಮೇಲೆ ಅವಮಾನಗಳು ಪ್ರಾರಂಭವಾಯ್ತು. ಅಧರ್ಮದ ರಾಜ್ಯದಲ್ಲಿ ಧರ್ಮದಿಂದ ಇರುವವನೇ ಪಾಪಿಯಾಗಿರುತ್ತಾನೆ. ದೃತರಾಷ್ಟ್ರನ ಸಹಚರನಾಗಿ ಈಗ ಶಕುನಿ ಯಾವಾಗಲೂ ಇರುತ್ತಾನೆ. ನಾನು ಹೇಳಿದ ಒಳಿತುಗಳು ಅವನಿಗೆ ಕೇಳುತ್ತಲೇ ಇಲ್ಲ. ಮಕ್ಕಳು ಜನಿಸಿದ ಮೇಲಂತೂ ಅದೆಷ್ಟು ಬುದ್ದಿ ಹೇಳಿದ್ದೆ. ಹಿರಿಯವನಾದ ದುರ್ಯೋಧನ ಹುಟ್ಟಿದ ಘಳಿಗೆಯಲ್ಲಿಯೇ ಇವನು ಕುಲನಾಶಕ ಎಂಬಂತೆ ನಿಸರ್ಗ ಪ್ರತಿಕ್ರಿಯಿಸಿತ್ತು. ಆಗಲೇ ದೃತರಾಷ್ಟ್ರನಿಗೆ ಎಚ್ಚರಿಸಿದ್ದೆ.. ಪುತ್ರಮಮಕಾರದಲ್ಲಿ ಅಂತರಂಗದಿಂದಲೂ ಅಂಧನಾಗಿರುವ ಅವನಿಗೆಲ್ಲಿ ಅರ್ಥವಾಗಬೇಕು?


ಪಾಪದ ಪಾಂಡು ಮಕ್ಕಳನ್ನು ನೋಡಿದರೆ ಈ ಕೌರವರಿಗೆ ದ್ವೇಷಕ್ಕೆ ಬೆಳೆಯಲು ಶುರುವಾಯಿತು. ಆ ಭೀಮನನ್ನೇ ಕೊಲ್ಲಲು ಮುಂದಾದಾಗ ನಾನು ಚುರುಕಾದೆ. ಪಾಂಡವರ ರಕ್ಷಣೆಯೂ ನನ್ನದೇ ಹೊಣೆ ಎಂದುಕೊಂಡೆ. ಇವರಲ್ಲಿದ್ದ ಅಹಂಕಾರ ಅವರಲ್ಲಿಲ್ಲ. ಬೆಳೆಯುತ್ತಾ ಧ್ವೇಷವೂ ಬೆಳೆಯತೊಡಗಿತ್ತು. ಕರ್ಣ ದುರ್ಯೋಧನರು ಅದೆಷ್ಟು ಅವಮಾನಿಸಿದರೂ ಅರಮನೆಯ ಬಿಟ್ಟು ಹೊರ ನಡೆಯಲೇ ಇಲ್ಲ. ನನಗೆ ಮಂತ್ರಿ ಪದವಿ ಅನಿವಾರ್ಯ ಎಂದಲ್ಲ. ಇವರ ಪಾಂಡವರ ವಿರೋಧದ ಸಂಚು ನನಗೆ ತಿಳಿಯಲಿ ಎಂದು. ಹಾಗಾಗಿಯೇ ಅರಗಿನಮನೆಯ ವಿಷಯ ತಿಳಿದಿದ್ದು. ಅಬ್ಬಾ..! ಎಂತಹ ಸಂಚು ಅದು..!! ಯಾರಿಗೂ ತಿಳಿಯದಂತೆ ಅತ್ತಿಗೆ ಕುಂತಿ ಸಹಿತವಾಗಿ ದಹಿಸಿ ಹೋಗುತ್ತಿದ್ದರಲ್ಲಾ..! ಅಂತೂ ಪ್ರಾಣಾಪಾಯದಿಂದ ಪಾರಾಗಿ ಬಂದಿರುವುದು ಪುಣ್ಯವೇ ಹೌದು. ಇವರ ಪಾಪದ ಹೆಜ್ಜೆಗಳು ಅದೆಷ್ಟು ಗಟ್ಟಿಯಾಗಿತ್ತೆಂದರೆ ಹಿಂದೆ ಬರುವವರಿಗೂ ಅದರ ಹೆಜ್ಜೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದರಲ್ಲಿಯೂ ಆ ಸಂದರ್ಭ. ಜೂಜು ಇಡೀ ಕುಲವನ್ನೇ ನಾಶ ಮಾಡುತ್ತದೆ. ಜೂಜಿನಾಟದ ಮೋಜು ಬೇಡವೆಂದು ಅದೆಷ್ಟು ಬಾರಿ ಹೇಳಿದೆ. ಆ ಶಕುನಿಯ ಕುತಂತ್ರದಿಂದಲೇ ಆಟಕ್ಕೆ ಕುಳಿತಿದ್ದು. ಅಲ್ಲಿ ಮೋಸವಾಗುತ್ತಿದೆ ಎಂಬ ಅರಿವು ಬಂದೊಡನೆಯೇ ದೃತರಾಷ್ಟ್ರನಲ್ಲಿ ಹೋಗಿ ಅರುಹಿದೆ. ಆದರೆ ಅವನೆಲ್ಲಿ ಕೇಳುವ ಸ್ಥಿತಿಯಲ್ಲಿದ್ದ? "ಈಗ ತನ್ನ ಕೈ ಮೀರಿದೆ." ಎಂದಂದು ಕೈಝಾಡಿಸಿ ಬಿಟ್ಟ..! ಆದರೆ ನನಗೇನೋ ಅಪಾಯ ಕಾದಿದೆ ಎಂಬ ಮುನ್ಸೂಚನೆ ಆಗುತ್ತಲೇ ಇತ್ತು. ದ್ರೌಪದಿಯನ್ನು ಪಣಕ್ಕಿಟ್ಟಾಗಲೂ ಇದು ತಪ್ಪೆಂದು ಕೂಗಾಡಿದೆ. ಆದರೆ ಆ ದುರ್ಯೋಧನ ನಾನು ಹಿರಿಯವನೆಂದು ತಿಳಿದೂ ಅವಮಾನಿಸಿದ. ದ್ರೌಪದಿಯನ್ನು ಕರೆತರಲು ಆಜ್ಞೆ ಮಾಡಿದಾಗ ನಾನು ಸುಮ್ಮನೇ ನಿಂತೆ. ಅದಕ್ಕಾಗಿ ದುಶ್ಶಾಸನನೇ ಹೋದ. ಅವರ ಆ ಅಧರ್ಮದ , ಅಮಾನವೀಯತೆಯ ಕಾರ್ಯಕ್ಕಂತೂ ಅದೆಷ್ಟು ವಿರೋಧಿಸಿದ್ದೆ. ಯಾರೂ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ನನಗಂತೂ ಖಚಿತವಾಗಿತ್ತು. ಇವರ ವಿನಾಶ ಪ್ರಾರಂಭ ಎಂಬುದು. ದೃತರಾಷ್ಟ್ರನಿಗೆ ಅದನ್ನೇ ಹೇಳಿದೆ. ಪಾಂಡವರು ವನವಾಸಕ್ಕೆ ಹೊರಟಾಗ ಮನದಲಿ ನೋವು ಮಡುಗಟ್ಟಿದ್ದರೂ ಅವರಿಗೆ ಧೈರ್ಯ ಹೇಳಿದೆ. ಪಾಪಾ.. ಮಕ್ಕಳು.. ಏನು ಮಾಡಿಯಾರು? ತಾಯಿ ಕುಂತಿ ವೃದ್ಧೆ. ಅದಕ್ಕಾಗಿ ಅವಳನ್ನು ನನ್ನ ಮನೆಯಲ್ಲಿಯೇ ಇರಿಸಿಕೊಂಡು ಸತ್ಕರಿಸಿದೆ. ಮಂತ್ರಿಯಾದ ನನಗೆ ಎಷ್ಟು ಬೇಕಾದರೂ ಧನಕನಕಾದಿಗಳು ಸಿಗುತ್ತಿದ್ದವು.ಆದರೆ ನಾನು ಅದ್ಯಾವುದಕ್ಕೂ ಆಕರ್ಷಿತನಾಗಲಿಲ್ಲ. ಸರಳ ಬದುಕು ನನ್ನದು. ನೋಡುವವರು ಬಡವ ಎನ್ನಲಿ ನನಗೆ ಬೇಸರವಿಲ್ಲ. ಪಾಂಡವರು ಅತ್ತ ಹೋದಾಗಲೂ ನಾನು ಕೌರವರ ಅರಮನೆಯಲೇ ಇದ್ದೆ. ಸೇವೆ ಎಂಬ ಹೆಸರಲ್ಲಿ ಪಾಂಡವರ ವಿರುದ್ಧದ ಸಂಚನ್ನು ಕಂಡುಕೊಳ್ಳಲು ಅವಮಾನವ ಸಹಿಸಿ ಉಳಿದಿದ್ದೆ. ನನ್ನ ಆರಾಧ್ಯ ದೈವನಾದ ಶ್ರೀ ಕೃಷ್ಣನೇ ಸಂಧಾನಕ್ಕೆ ಬಂದಾಗಂತೂ ನನಗೆ ಈ ಕೌರವರ ಅಂತ್ಯ ಸನ್ನಿಹಿತವಾಯಿತೆಂದು ತಿಳಿದು ಬಿಟ್ಟಿತು. ನನ್ನ ದೇವನಿಗೆ ಅಲ್ಲಿ ಅವಮಾನವಾಗಿಬಿಡುತ್ತದೆಯೇನೋ ಎಂಬ ಭಯದಲ್ಲಿ ಅದೆಷ್ಉ ಬಾರಿ ಸಂಧಾನಕ್ಕೆ ಹೋಗಬೇಡಿರೆಂದು ಬೇಡಿಕೊಂಡರೂ ವಾಸುದೇವ ಹೋಗಿಯೇ ಬಿಟ್ಟರು. ಯುದ್ಧದ ಸಂದರ್ಭದಲ್ಲಂತೂ ಜೊತೆಯಲಿದ್ದರೆ ಧರ್ಮದ ವಿರುದ್ಧ ಯುದ್ಧಕ್ಕಿಳಿಯ ಬೇಕಾದೀತೆಂದು ತೀರ್ಥಯಾತ್ರೆಗೆ ನಡೆದು ಬಿಟ್ಟಿದ್ದೆ. ತಿರುಗಿ ಬರುವ ವೇಳೆಗೆ ಪಾಙಡವರ ರಾಜ್ಯಭಾರ ಆರಂಭವಾಗಿತ್ತು. ಚಿಕ್ಕಪ್ಪ ಎಂದು ಸ್ವಾಗತಿಸಿದ ಪರಿಯಂತೂ ಅದ್ಭುತ.


ಇನ್ನೇನಿದೆ.. ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದಾಗ, ದೃತರಾಷ್ಟ್ರ, ಗಾಂಧಾರಿ, ಕುಂತಿಯವರೊಡನೆ ನಾನೂ ಹೊರಟೆ. ಆಗಲೇ ಆಧ್ಯಾತ್ಮದ ಬಗ್ಗೆ ಅಪಾರವಾದ ಸೆಳೆತ ಶುರುವಾಗಿತ್ತು. ಇದ್ದ ಲೌಕಿಕತೆಯ ಬಗ್ಗೆ ಎಲ್ಲಿಲ್ಲದ ವೈರಾಗ್ಯ ಬಂದಿತ್ತು. ತಪಸ್ಸಿಗೆ ಕೂತರೆ ನಿದ್ರಾಹಾರದ ಕಡೆಯೂ ಲಕ್ಷ್ಯವಿರಲಿಲ್ಲ. ದೇಹವೆಲ್ಲ ಶಿಥಿಲಗೊಂಡಿತ್ತು. ನನಗದರ ಪರಿವೆಯೇ ಇಲ್ಲ. ಆಗಲೇ ನನ್ನ ಕೊನೆಯ ಘಳಿಗೆ ಬಂದಿತ್ತು.. ಆ ಕ್ಷಣದಲ್ಲಿಯೇ ಧರ್ಮರಾಜ ನನ್ನ ಅರಸಿ ಬಂದಿದ್ದ. ಅದೇ ವೇಳೆಗೇ ನಾನೂ ಪ್ರಾಣ ತ್ಯಜಿಸಿದ್ದೆ. ಯಮನ ಅಂಶದವನಾದ ನಾನು ಯಮನ ಬಳಿಗೆ ನಡೆದಿದ್ದೆ. ಅಧರ್ಮಿಯರ ನಡುವೆ ಧರ್ಮಿಷ್ಠನಾಗಿ ಬದುಕಿದೆ ಎಂಬ ತೃಪ್ತಿ ನನಗಿದೆ. ಹಾಳಾಗುವವರ ಜೊತೆಯಲಿದ್ದೂ ಹಾಳಾಗದೇ ಇರಬಹುದೆಂಬುದಕ್ಕೆ ನನ್ನ ಜೀವನವೇ ಸಾಕ್ಷಿ.

bottom of page