ಶಕುನಿ
- Bhavya Haleyuru
- 23 minutes ago
- 3 min read
ಶಕುನಿ

ಗಾಂಧಾರ ದೇಶದ ರಾಜಕುಮಾರ ನಾನು. ನನಗೆ ನನ್ನ ರಾಜ್ಯ, ತಂದೆ, ಅಲ್ಲಿಯ ಕರ್ತವ್ಯ ಇದೆಲ್ಲಕ್ಕಿಂತಲೂ ಮುಖ್ಯವಾಗಿದ್ದು ನನ್ನ ಸಹೋದರಿ. ಅವಳೆಂದರೆ ಅಪಾರವಾದ ಪ್ರೇಮ ನನಗೆ. ಒಳ್ಳೆಯ ಗುಣ, ಸೌಂದರ್ಯ ಎಲ್ಲವನ್ನೂ ಹೊಂದಿರುವ ಆಕೆಗೆ, ವೀರನೊಬ್ಬನನ್ನು ತಂದು ವಿವಾಹ ಮಾಡಬೇಕೆಂಬ ಆಸೆ ನನ್ನದು. ಆದರೆ ನನ್ನ ತಂದೆ, ಆ ಭೀಷ್ಮನಿಗೆ ಭಯ ಪಟ್ಟರು. ಹಸ್ತಿನಾವತಿಯ ಮಹಾ ಪರಾಕ್ರಮಿ ಆತ. ಅಷ್ಟೇ ಕುತಂತ್ರಿ. ರಾಜಕೀಯದ ಈ ಗುದ್ದಾಟದಲ್ಲಿಯೇ ತಂದೆಯವರು ಅಸಾಹಯಕರಾದರು. ತನ್ನ ಮುದ್ದಾದ ಮಗಳನ್ನು ಆ ಕುರುಡ ರಾಜನಿಗೆ ಕೊಡಲು ಒಪ್ಪಿಬಿಟ್ಟರು. ಪಾಪ ನನ್ನ ಸಹೋದರಿ. ತಂದೆಯ ಮಾತಿಗೆ ಒಪ್ಪಲೇಬೇಕಾಯ್ತು. ಆ ಕುರುಡನನ್ನು ವಿವಾಹವಾಗಬೇಕಾಯ್ತು. ಅಷ್ಟೇ ಆಗಿದ್ದರೆ ಸ್ವಲ್ಪವಾದರೂ ಮೌನಿಯಾಗುತ್ತಿದ್ದೆನೇನೋ.. ಆದರೆ ನನ್ನ ಸಹೋದರಿ ಗಾಂಧಾರಿ.. ಕಣ್ಣಿಗೆ ಬಟ್ಟೆಯನ್ನೂ ಕಟ್ಟಿಬಿಟ್ಟಳು. ಅವಳ ಗಂಡ ಕುರುಡ ಎಂದು ಇವಳೂ ಸ್ವಯಂಕೃತ ಕುರುಡಿಯಾಗಿಬಿಟ್ಟಳು. ಅಷ್ಟಾದರೂ ನನ್ನ ತಂದೆ , 'ಜೀವವಾದರೂ ಹೋಗಲೀ ಆ ಕುರುಡನಿಗೆ ಮಗಳನ್ನು ಕೊಡುವುದಿಲ್ಲ' ಎಂದು ಹೇಳಬಹುದಿತ್ತು. ಊಹು!! ಹೇಳಲೇ ಇಲ್ಲ. ವಿವಾಹವೂ ನಡೆದು ಹೋಯ್ತು. ನನ್ನ ಪ್ರೀತಿಯ ತಂಗಿ ಹೊರಟೇಬಿಟ್ಟಳು. ನನಗೆ ಆಗ ತಡೆಯಲಾಗಲಿಲ್ಲ. ಏನಾದರಾಗಲಿ, ಇಲ್ಲಿ ಇದ್ದು ಮಾಡುವುದಾದರೂ ಏನಿದೆ? ಜೂಜಾಡುವುದು..!! ಅದನ್ನು ಅಲ್ಲಿಯೂ ಹೋಗಿ ಮಾಡಬಹುದಲ್ಲ.. ಎಂದನ್ನಿಸಿ ತಂಗಿಯ ಬೆಂಗಾವಲಾಗಿ ಅವಳ ಜೊತೆಯಲ್ಲಿ ನಡೆದೇಬಿಟ್ಟೆ.
ಬಾವ ಕುರುಡ, ತಂಗಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ.. ಮುಂದೆ ಅವರ ಬದುಕು? ಯಾಕೋ ಆ ಭೀಷ್ಮನ ಮೇಲೆ ನಂಬಿಕೆಯೇ ಇಲ್ಲ. ಅವನು ಉತ್ತಮ ವ್ಯಕ್ತಿಯಾಗಿದ್ದರೆ ಇಷ್ಟು ಚೆಂದನೆಯ ಗಾಂಧಾರಿಯನ್ನು, ಸೌಂದರ್ಯವನ್ನು ನೋಡಲೂ ಆಗದ ಆ ಕುರುಡನಿಗೆ ವಿವಾಹ ಮಾಡಿಕೊಡುತ್ತಿದ್ದನಾ? ಒಂದೊಮ್ಮೆ ಹೆಣ್ಣು ಅವರ ಮನೆಯ ಮಗಳೇ ಆಗಿದ್ದರೆ, ಅವನು ಇಂತಹ ಕುರುಡ ರಾಜನಿಗೆ ಕೊಟ್ಟು ವಿವಾಹ ಮಾಡುತ್ತಿದ್ದನಾ? ತನ್ನ ವೀರತ್ವದ ಪ್ರಭಾವದಿಂದ ಹೀಗೆ ಒಂದು ಹೆಣ್ಣಿನ ಬದುಕನ್ನು ಕತ್ತಲೆಯಲ್ಲಿ ನೂಕುವುದಾ? ಹೀಗೆಲ್ಲಾ ಯೋಚಿಸಿದಂತೆ ಅವನ ಮೇಲೆ ಕೋಪ ಏರುತ್ತದೆ. ಅದಕ್ಕಾಗಿಯೇ ಆ ಭೀಷ್ಮ ಹಸ್ತಿನಾವತಿಯ, ಕುರುವಂಶದ ಕಾವಲಾಗಿ ಇರುತ್ತೇನೆ ಎಂದಿದ್ದಾನಂತೆ.. ಅವನಿಗೆ, ಅವನ ಅಟ್ಟಹಾಸಕ್ಕೆ ಅಂತ್ಯ ಹಾಡಲೇಬೇಕು.. ಅದಕ್ಕಾಗಿ ಕಾವಲಾಗಿದ್ದ ಅವನ ಇಡೀ ವಂಶವನ್ನೇ ನಿರ್ವಂಶ ಮಾಡಬೇಕು. ನನ್ನ ಸಹೋದರಿಗೆ ಅನ್ಯಾಯವೆಸಗಿದ ಮನೆತನ ಅವರದ್ದು. ಅವಳ ಬದುಕು ಹೇಗೆ ಕತ್ತಲಲ್ಲಿ ನೂಕಿದರೋ, ಹಾಗೆಯೇ ಇವರ ಇಡೀ ವಂಶ ಕತ್ತಲಲ್ಲಿ ಕಳೆಯುವಂತಾಗಬೇಕು. ಕೋಪದಲ್ಲಿ ಇಷ್ಟನ್ನೂ ನಿರ್ಧರಿಸಿದ್ದೇ! ಅವಳ ಹಿಂದೆ ಹೊರಟೆ. ಅವಳ ಬೆಂಗಾವಲಾಗಿ, ಅವಳ ಬದುಕಿಗೆ ಕಣ್ಣಾಗಿ..
ಯಾರು ಏನಾದರೂ ಅಂದುಕೊಳ್ಳಲಿ.. ನನಗೆ ನನ್ನ ಸಹೋದರಿಯ ಸಂಸಾರವಷ್ಟೇ ಮುಖ್ಯ. ಮುಂದೆ ಬರುವ ಭವಿಷ್ಯದ ಜನರು 'ಶಕುನಿಯನ್ನು ಸೆರೆ ಹಿಡಿದು ತಂದರು' ಎಂದೆಲ್ಲಾ ದಂತ ಕತೆಗಳನ್ನೂ ಕಟ್ಟಬಹುದು. 'ಬಂಧಿಸಿಟ್ಟಿದ್ದರು, ಆಹಾರವನ್ನೂ ಸರಿ ಕೊಡುತ್ತಿರಲಿಲ್ಲ, ಹಾಗಾಗಿಯೇ ಸೇಡು ಬೆಳೆದಿತ್ತು' ಎಂದೆಲ್ಲಾ ಬಣ್ಣಗಳ ಕತೆ ಹೇಳಬಹುದು. ಆದರೆ ಒಡಹುಟ್ಟಿದ ಸಹೋದರಿಗೆ ಸಹಾಯಕನಾಗಿ ಬರುವುದು ಮಹತ್ಕಾರ್ಯವೇ ಅಲ್ಲವಾ? ಅದೇಕೆ ಜನ ಸಹೋದರತ್ವದ ಪ್ರೇಮವನ್ನ ಅರಿಯುವುದಿಲ್ಲ? ಹಸ್ತಿನಾವತಿಗೆ ಬಂದೆ. ಅದ್ಭುತವಾದ ನಗರ. ಅಲ್ಲಿ ನನ್ನ ಸಹೋದರಿಯ ಹೊರತಾಗಿ ಮತ್ತಾರ ಪರಿಚಯವೂ ನನಗಿಲ್ಲ. ಪಾಪ ಅವಳಿಗೂ ಹಾಗೆಯೇ. ಅಲ್ಲಿಯ ಜನರು ಪ್ರೇಮದಿಂದಲೇ ಸ್ವಾಗತಿಸಿದರು, ಸಂಭ್ರಮವೋ ಸಂಭ್ರಮ. ಆಗಬೇಕಾದ್ದೇ. ಒಬ್ಬ ಕುರುಡನಿಗೆ ವಿವಾಹವಾಗಿದೆ ಎಂದರೆ ಸಂಭ್ರಮ ಇಲ್ಲದೇ ಇರುತ್ತದೆಯೇ? ಪ್ರತಿಯೊಬ್ಬರೂ ಅವನ ಕಡೆಯವರೇ ಆಗಿರುವಾಗ ಸಹಜ ಸಂಭ್ರಮ. ಈ ಸಂಭ್ರಮದ ನಡುವೆಯೇ ಕಂಡ ಅವನು - ಪಾಂಡು.
ಈ ಕುರುಡ ದೃತರಾಷ್ಟ್ರನ ತಮ್ಮ. ರಾಜ..! ತಮ್ಮನಾದ ಅವನಿಗೇಕೆ ಪಟ್ಟ? ಕುರುಡನಾದ ಮಾತ್ರಕ್ಕೆ ಪಟ್ಟಕ್ಕೆ ಅರ್ಹನಲ್ಲವಾ? ಆಗಿಂದಲೇ ತಿಳಿಯಿತು. ಇಲ್ಲಿ ಬಾವ ದೃತರಾಷ್ಟ್ರನಿಗೆ ಅನ್ಯಾಯವಾಗುತ್ತಿದೆ ಎಂದು. ಇನ್ನು ನಾನು ಬಂದಿದ್ದೇನೆ. ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲೇ ಬೇಕು. ಮನದಲ್ಲಿಯೇ ನಿರ್ಧರಿಸಿದ್ದೆ. ಪಾಂಡುವಿಗೆ ಎರಡೆರಡು ವಿವಾಹ..! ಆ ಕುಂತಿ.. ಮತ್ತೆ ಮಾದ್ರಿ.. ಇಂತಹ ವೈವಾಹಿಕ ಜೀವನವನ್ನು ಅನುಭವಿಸಲಾಗದ ಪಾಪಿಷ್ಠ. ಅದ್ಯಾವುದೋ ಶಾಪವಂತೆ.. ಮನನೊಂದು ಕಾಡಿಗೆ ಹೋಗಿಬಿಟ್ಟ. ಯಾವುದೇ ತಕರಾರಿಲ್ಲದೇ ಬಾವನಿಗೆ ಪಟ್ಟವಾಯ್ತು. ಆ ಪಾಂಡುವಿಗೆ ಮಕ್ಕಳಾಗುತ್ತಿದ್ದಂತೆ ಗಾಂಧಾರಿಗೆ ಬೇಸರ. ಸ್ತ್ರೀ ಸಹಜ. ಇವಳೂ ಗರ್ಭವತಿಯಾಗಿದ್ದರೂ ಯಾಕೋ ಪ್ರಸವವಾಗುತ್ತಿಲ್ಲ. ಅಂತೂ ಆ ಮುನಿಯ ಕಾರ್ಯದಿಂದ ಮಗುವೂ ಆಯ್ತು.. ಮಗುವಲ್ಲ... ಮಕ್ಕಳು.. 101ಮಕ್ಕಳು..! ಆ ಪಾಂಡವರ ಮಕ್ಕಳನ್ನು ಹತ್ತಿಕ್ಕಲೆಂದೇ ಹುಟ್ಟಿದ್ದಾರೆ. ನನಗೋ ಆ ಮಕ್ಕಳೆಂದರೆ ಪ್ರೇಮ. ಅದರಲ್ಲೂ ಹಿರಿಯವನಾದ ದುರ್ಯೋಧನನೆಂದರೆ ಅಪಾರ ಪ್ರೇಮ. ಅವನ ಒಳಿತಿಗಾಗಿಯೇ ಪಣತೊಟ್ಟಿದ್ದೆ. ಬಾವ ದೃತರಾಷ್ಟ್ರನಂತೂ ಆ ಬಡ ವಿದುರನ ಮಾತಿಗೀಗ ಸೊಪ್ಪುಹಾಕುತ್ತಿಲ್ಲ. ನನ್ನ ಮಾತೆಂದರೆ ಪೂರ್ಣ ವಿಶ್ವಾಸ. ಆ ಹುಚ್ಚು ಭೀಷ್ಮನಿಗೆ ಭಯ ಪಡುವುದೊಂದು ಬಿಟ್ಟರೆ ಮತ್ತೆಲ್ಲಾ ದೃತರಾಷ್ಟ್ರ ಒಳ್ಳೆಯವನೇ. ಆ ಸಹೋದರಿಯ ಮಕ್ಕಳೆಲ್ಲಾ ' ಮಾಮಾಶ್ರೀ' ಅಂದಾಗೆಲ್ಲಾ ಅದೆಷ್ಟು ಸಂಭ್ರಮ ನನಗೆ. ಮಗ ಊಲೂಕನ ಮೇಲೂ ಇಷ್ಟೊಂದು ಪ್ರೇಮವಿಲ್ಲ. ಆ ಎಲ್ಲಾ ಮಕ್ಕಳಿಗೂ ಜೂಜನ್ನು ಹೇಳಿಕೊಟ್ಟಿದ್ದೆ. ಆ ಪಾಂಡವರು ತಂದೆಯನ್ನು ಕಳೆದುಕೊಂಡು ಅರಮನೆಗೆ ಬಂದಾಗ, ಅವರನ್ನು ಪುನಃ ಓಡಿಸುವ ಪ್ರಯತ್ನ ಮಾಡಿದೆ, ಆ ದಡಿಯ ಭೀಮನಿಗೆ ವಿಷವನ್ನು ಕೊಟ್ಟು ಕೊಲ್ಲುವ ಪ್ರಯತ್ನವನ್ನೂ ಮಾಡಿದೆ. ಇದೆಲ್ಲವೂ ನನ್ನ ಸೋದರಳಿಯರ ಮೇಲಿನ ಪ್ರೇಮವೇ ಹೊರತು ಮತ್ತಾವ ಸ್ವಾರ್ಥವೂ ಇರಲಿಲ್ಲ. ಆ ದ್ರೌಪದಿಯನ್ನು ವಿವಾಹವಾಗಿ ಬಂದಾಗಲೂ ನನ್ನಲ್ಲಿ ತಾತ್ಸಾರವೇ ಇತ್ತು. ದೊಡ್ಡ ಮೂರ್ಖರು ಆ ಪಾಂಡವರು. ಒಬ್ಬಳನ್ನೇ ಐದು ಮಂದಿ ವಿವಾಹವಾದರು. ಏನಾದರೂ ಸಾಯಲಿ. ರಾಜ್ಯ ಮಾತ್ರ ನನ್ನ ಸೋದರಳಿಯರಿಗೇ ಬೇಕು. ಅಷ್ಟೇ ಅಲ್ಲ, ಅವರೇ ಕಟ್ಟಿಕೊಂಡ ರಾಜ್ಯವೂ ನನ್ನ ಅಳಿಯಂದರಿಗೇ ಬೇಕು. ಅವರೊಂದಿಗೆ ಯುದ್ಧ ಮಾಡಿ ಗೆಲ್ಲಲು ಸ್ವಲ್ಪ ಕಷ್ಟವಾದೀತು. ಯಾಕೆಂದರೆ ಜೊತೆಗೆ ಆ ಕಪಟಿ ಕೃಷ್ಣನಿದ್ದಾನೆ. ಅದಕ್ಕಾಗಿಯೇ ಜೂಜಿನ ಮೊರೆ ಹೋಗಿದ್ದು. ಜೂಜಿನಲ್ಲಿ ಪಂಡಿತ ನಾನು.

ಚಿಕ್ಕವನಿಂದ ಅದನ್ನೊಂದನ್ನ ಬಿಟ್ಟರೆ ಮತ್ತೇನನ್ನೂ ಕಲಿಯದ ನನಗೆ ಜೂಜು ಸರಿಯಾಗಿ ಒಲಿದಿತ್ತು. ಹೀಗಿದ್ದಾಗ ನಾನು ಅಂದುಕೊಂಡಂತೆ ದಾಳ ಬೀಳದಿರುತ್ತದೆಯೇ? ಅಂತೂ ಆ ಪಾಂಡವರನ್ನು ಸೋಲಿಸಿ,ಅವಮಾನಿಸಿ, ಓಡಿಸಿಯೂ ಆಯಿತು. ಇದರಲ್ಲಿ ತಪ್ಪೇನಿದೆ? ನಮ್ಮ ರಕ್ಷಣೆ ನಾವು ಮಾಡಿಕೊಳ್ಳುವುದು ತಪ್ಪಾ? ವನವಾಸದಲ್ಲಿ ಇರಬಹುದು , ಅಜ್ಞಾತವಾಸದಲ್ಲಿ ಇರಬಹುದು. ಎಲ್ಲಾ ಕಡೆ ಅವರ ವಿರುದ್ಧ ಪಿತೂರಿ ಮಾಡಿ ಕೊಲ್ಲುವ ಪ್ರಯತ್ನವನ್ನೇ ಮಾಡಿಸಿದೆ. ಅರಗಿನಮನೆಯಲ್ಲೂ ತಪ್ಪಿಸಿಕೊಂಡುಬಿಟ್ಟರು. ಛೇ. ನನ್ನ ಅಳಿಯಂದರಿಗೆ ಅನ್ಯಾಯವಾಗಬಾರದು. ಹಿರಿಯ ಮಗನ , ಹಿರಿಮಗನೇ ಅಲ್ಲವೇ ರಾಜ್ಯ ಆಳುವುದು? ಅದ್ಯಾವ ಲೆಕ್ಕದಲ್ಲಿ ಈ ಭೀಷ್ಮ, ಕೃಷ್ಣ ಎಲ್ಲರೂ ಪಾಂಡವರಿಗೆ ಅನ್ಯಾಯವಾಗುತ್ತದೆ ಎಂದನ್ನುತ್ತಾರೆ?? ಬುದ್ದಿಗೇಡಿ ಜನ. ಅಂತೂ ಎಲ್ಲವನ್ನೂ ದಾಟಿ ಆ ಪಾಂಡವರು ಬಂದೇ ಬಿಟ್ಟರು. ಪಾಪಿ ಚಿರಾಯು ಅನ್ನುವುದು ಇವರನ್ನು ನೋಡಿಯೇ ಇರಬಹುದು. ಏನಾದರಾಗಲಿ ಯುದ್ಧವೇ ನಡೆಯಲಿ ಎಂದು ನಿರ್ಧರಿಸಿಯೇ ಬಿಟ್ಟೆವು. ದುರ್ಯೋಧನನ ಸೇನೆಗೆ ಸಮಾನವಾಗಿರಲಿ, ಅರ್ಧದಷ್ಟೂ ಆ ಪಾಂಡವರಲ್ಲಿ ಇಲ್ಲ. ಘಟಾನುಗಟಿಯರೆಲ್ಲಾ ನಮ್ಮೊಡನಿದ್ದಾರೆ. ಭಯವೇಕೆ? ಯುದ್ಧ ಸಾರಿದ್ದೇ. ಸಂಧಾನಕ್ಕೆ ಬಂದ ಆ ದನಕಾಯುವವನನ್ನೂ ಅವಮಾನಿಸಿ ಬಿಟ್ಟೆ. ತಪ್ಪೇನು? ಯಾವಾಗಲೂ ಪಾಂಡವರ ಪರವಾಗಿ ನಿಲ್ಲುವ ಅವನಿಗೆ ನನ್ನ ಅಳಿಯಂದರ ಕಡೆ ಇರುವ ನ್ಯಾಯ ಕಾಣುವುದೇ ಇಲ್ಲವಾ?
ಮಹಾನ್ ಯುದ್ಧ. ನಾನೂ, ಮಗನೂ ಯುದ್ಧಕ್ಕೆ ಇಳಿದೆವು. ಹದಿನೇಳನೆಯ ದಿನ.. ಇನ್ನೇನು ಈ ಯುದ್ಧವೇ ಸಾಕೆಂದು ತಪ್ಪಿಸಿಕೊಂಡು ಹೋಗಬೇಕು.. ಆಗ.. ಆಗ ಆ ನಕುಲನ ಬಲ್ಲೆಗೆ ನಮ್ಮ ಬಲಿಯಾಗಿತ್ತು..
ಇಲ್ಲಿ ಎಲ್ಲಿದೆ ನನ್ನ ಸ್ವಾರ್ಥ? ಒಬ್ಬ ಅದರ್ಶ ಮಾಮಾಶ್ರೀ ನಾನು. ನನ್ನ ಸೋದರಳಿಯರ ಪರವಾಗಿಯೇ ನಿಂತಿದ್ದೆ. ನನ್ನ ಮಗನಿಗಾಗಿಯೂ ಏನೂ ಕೇಳಲಿಲ್ಲ. ಇಂತಹ ಈ ಶಕುನಿಯ ಮೇಲೆ ಕಪಟಿ ಎಂದು ಹೇಗೆ ತಪ್ಪು ಹೋರಿಸುತ್ತೀರಿ?




Comments