ಅಂಬೆ
- Bhavya Haleyuru
- 1 day ago
- 4 min read
ನಾನು ಅಂಬೆ..

ಎಲ್ಲ ಹೆಣ್ಣಿನಂತಲ್ಲ.. ಕನಸು, ಆಸೆ , ನಿರೀಕ್ಷೆ, ಸ್ವಾಭಿಮಾನ ಎಲ್ಲವೂ ಸ್ವಲ್ಪ ಹೆಚ್ಚೇ. ಕಾಶಿರಾಜನ ಮಗಳು, ರಾಜಕುಮಾರಿ, ಎರಡು ತಂಗಿಯರಿಗೆ ಅಕ್ಕ. ಇವೆಲ್ಲವೂ ನನ್ನ ಮನದಲ್ಲಿ ಮನೆ ಮಾಡಿತ್ತು. ಸೌಂದರ್ಯ, ಅಧಿಕಾರ ಮತ್ತು ಶ್ರೀಮಂತಿಕೆ ಎಲ್ಲವೂ ಇರುವ ನನಗೆ ಯೌವನದ ಮನಸ್ಸು ಅರಳುವ ಸಮಯದಲ್ಲಿ ಕಂಡವನೇ ಆತ.. ಸಾಲ್ವ..! ನನ್ನ ಸಾಲ್ವ.. ಮನಸಲ್ಲಿ ಪ್ರೇಮದ ಹೂವು ಅರಳಿಸಿದವನು. ಉಂಗುರವನ್ನು ತೊಡಿಸಿ ವಿವಾಹದ ನಂಬಿಕೆಯ ಮೂಡಿಸಿದವನು. ಪ್ರೇಮ ಲೋಕದ ಬಣ್ಣವನ್ನು ಪರಿಚಯಿಸಿದವನೇ ಅವನು. ಮುಂದಿನ ಜೀವನವನ್ನೆಲ್ಲ ಅವನೊಂದಿಗೇ ಎಂದು ಕನಸು ಕಂಡಿದ್ದೆ. ತಂದೆಗೂ ತಿಳಿಯದಿರುವ ಈ ಪ್ರೇಮ ನಮ್ಮೊಳಗೇ ಅಗಾಧವಾಗಿತ್ತು. ತಂಗಿಯರ ಬಳಿಗೆ ನನ್ನ ಸಾಲ್ವನ ಬಗೆಗೆ ಹೇಳಿದಷ್ಟೂ ಸಾಲದು ನನಗೆ. ಇದೇ ಪ್ರೇಮದ ಗುಂಗಿನಲ್ಲಿರುವ ನನಗೆ ಸಾಲ್ವನ ಹೊರತಾಗಿ ಮತ್ತೇನೂ ಕಾಣುತ್ತಲೇ ಇರಲಿಲ್ಲ.
ಅಂದು... ತಂದೆ "ಸ್ವಯಂವರ" ವನ್ನು ಏರ್ಪಡಿಸಿದಾಗ ನನಗೋ ಎಲ್ಲಿಲ್ಲದ ಸಂಭ್ರಮ. ತಂಗಿಯರಿಗೇನೋ ಭಯ.. ಯಾರು ಬರುತ್ತಾರೋ, ನಮ್ಮನ್ನು ಯಾರು ವಿವಾಹವಾಗುತ್ತಾರೋ ಎಂಬ ಕುತೂಹಲದ ಭಯದಲ್ಲಿದ್ದರು. ನನಗಂತೂ ಎಲ್ಲಿಲ್ಲದ ಖುಶಿ.. ನನ್ನನ್ನು ನನ್ನ ಸಾಲ್ವನ ಹೊರತಾಗಿ ಇನ್ನಾರು ವಿವಾಹವಾಗಲು ಸಾಧ್ಯ? ಅತೀ ಪರಾಕ್ರಮಿ, ಶೂರ ಅವನೆದುರು ನಿಲ್ಲುವ ಧೈರ್ಯವಾದರೂ ಯಾರಿಗಿದೆ? ಸ್ವಯಂವರದಲ್ಲೂ ಗೆಲ್ಲುವವನು ಅವನೇ ಎಂಬುದು ನನ್ನ ಮನಸ್ಸು ಪಕ್ಕಾ ಮಾಡಿಬಿಟ್ಟಿತ್ತು. ಇನ್ಯಾಕೆ ಭಯ?? ನನ್ನ ಸಾಲ್ವನ ಪತ್ನಿಯಾಗುವ ಕ್ಷಣ ಇನ್ನೇನು ಸನಿಹವಾಗುತ್ತಿದೆ ಎಂಬ ಸಡಗರದಲ್ಲಿ ನಾನಿದ್ದೆ. ಅದೆಷ್ಟೊಂದು ರಾಜಕುಮಾರರು ಅಂದು ಆಗಮಿಸಿದ್ದರು..! ಇಷ್ಟೆಲ್ಲ ರಾಜಕುಮಾರರಿಗೆ ನಮ್ಮನ್ನು ಮದುವೆ ಆಗುವ ಆಸೆಯಾ?? ನಾವು ಅಷ್ಟೆಲ್ಲಾ ಸಂದರ್ಯವತಿಯರಾ?? ಎಂಬ ಹಮ್ಮು ನನಗೆ... ಆದರೆ ಸಾಲ್ವನೆದುರು ಇವರಾರು ಸರಿ ಅನ್ನಿಸಲೇ ಇಲ್ಲ.. ಇನ್ನೇನು ಎಲ್ಲರೂ ಸೋಲುತ್ತಾರೆ.. ಸಾಲ್ವನೊಂದಿಗೆ ವಿವಾಹವಾಗುತ್ತದೆ ಅನ್ನುವ ವೇಳೆಗೇ ಅದೆಲ್ಲಿಂದಲೋ ಬಂದ ಆ ಭೀಷ್ಮ..!
ಹಸ್ತಿನಾವತಿಯ ರಾಜಕುಮಾರ. ಮಹಾನ್ ಪರಾಕ್ರಮಿ ಎಂಬುದನ್ನು ಕೇಳಿದ್ದೆ.. ಅವನು ಆಗಮಿಸುತ್ತಿದ್ದಂತೆಯೇ ಅಲ್ಲಿದ್ದ ರಾಜಕುಮಾರರಲ್ಲಿ ಸೋಲಿನ ಮುಖಭಾವ ಬಂದುಬಿಟ್ಟಿತ್ತು.. ಸುಂದರನೇ.. ಅವನ ನಡೆ ನುಡಿಯಲ್ಲಿನ ಗಂಭೀರತೆ ಅವನ ಮುಖದಲ್ಲಿ ಇನ್ನಷ್ಟು ಸೌಂದರ್ಯ ವನ್ನು ಹೆಚ್ವಿಸಿತ್ತು. ಮನದಲ್ಲಿ ಸಾಲ್ವನಿರುವಾಗ ಭೀಷ್ಮನನ್ನು ವರಿಸುವುದಾದರೂ ಹೇಗೆ?? ಆದರೆ... ಭೀಷ್ಮ ಗೆದ್ದೇ ಬಿಟ್ಟ.. ಎಲ್ಲರನ್ನೂ ಸೋಲಿಸಿ ನನ್ನ ತಂದೆ ಏರ್ಪಡಿಸಿದ್ದ "ವೀರಪಣ" ದಲ್ಲಿ ಭೀಷ್ಮ ಗೆದ್ದೇ ಬಿಟ್ಟ. ಎಲ್ಲೆಲ್ಲಿಯೂ ಹರ್ಷೋದ್ಘಾರ.. ಎಲ್ಲರೂ ಸಂಭ್ರಮದಲ್ಲಿದ್ದಾರೆ.. ಆದರೆ ನಾನು.? ಧರೆಗಿಳಿದು ಬಿಟ್ಟೆ.. ನನ್ನ ಸಾಲ್ವ?? ಅದೆಲ್ಲೋ ಪರಾಭವದ ನೋವಿನಲ್ಲಿ ಕುಳಿತಿರುವಾಗಲೇ ನಾನು, ಭೀಷ್ಮ ಗೆದ್ದ ರಾಜಕುಮಾರಿಯಾಗಿ ಅವನ ರಥವನ್ನೇರಿದ್ದೆ.. ಮನದಲ್ಲಿ ನೋವಿತ್ತು.. ಅದರೂ ಭೀಷ್ಮನ ಸೌಂದರ್ಯ, ವೀರತ್ವ ಮನಸೆಳೆಯುತ್ತಿತ್ತು. ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ರೋಧಿಸುವ ಮನಸ್ಸಿಗೆ ಸಾಂತ್ವಾನ ಹೇಳುತ್ತಲೇ ಇದ್ದೆ.. ಸಾಲ್ವನಿದ್ದ ಹೃದಯದಲ್ಲಿ ಭೀಷ್ಮನನ್ನು ಕೂರಿಸುವ ಹರಸಾಹಸ ಮಾಡುತ್ತಿದ್ದೆ.. ಇನ್ನೇನು ಹಸ್ತಿನಾಪುರದ ದ್ವಾರದಲ್ಲಿ ರಥ ನಿಲ್ಲಬೇಕು.. ಆ ವೇಳೆಗೆ ಮನಸ್ಸೂ ಭೀಷ್ಮನನ್ನು ಪತಿಯಾಗಿಸಿಕೊಳ್ಳಲು ಒಪ್ಪಿಕೊಂಡಿತ್ತು. ನಮ್ಮ ಅರಮನೆಗಿಂತಲೂ ಅದ್ಭುತವಾದ ಅರಮನೆ. ಸ್ವಾಗತಕ್ಕೆ ನಿಂತಿದ್ದು ರಾಜಮಾತೆ ಸತ್ಯವತಿ. ಭೀಷ್ಮನ ರೂಪವನ್ನು ಕಣ್ತುಂಬಿಕೊಳ್ಳುತ್ತಿದ್ದೆ.. ಮುಂದೆ ಅವನ ಪಟ್ಟದರಸಿ ನಾನು ಎಂಬ ಕನಸು ಕಾಣುತ್ತಿದ್ದೆ.. ಮನಸ್ಸು ಮತ್ತೆ ಪ್ರಫುಲ್ಲವಾಗಿತ್ತು.
ಆದರೆ ಅಲ್ಲಿ ಸಿಕ್ಕ ಸ್ವಾಗತವಾದರೂ ಎಂತಹದ್ದು?? ನಮ್ಮನ್ನು ಗೆದ್ದುಬಂದ ಭೀಷ್ಮ ಬ್ರಹ್ಮಚಾರಿಯಂತೆ.. ಅವನು ವಿವಾಹವಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನಂತೆ.. ಆ ಸತ್ಯವತಿ ಮತ್ತು ಭೀಷ್ಮರ ಮಾತು ಕೇಳುತ್ತಿದ್ದಂತೆಯೇ ಮನಸ್ಸು ಘಾಸಗೊಳ್ಳುತ್ತಿದೆ. ನಮ್ಮನ್ನು ಗೆದ್ದಿದ್ದು ಈತ.. ಆದರೆ ವಿವಾಹವಾಗುವುದು ಸತ್ಯವತಿಯ ಮಕ್ಕಳಾಗಿದ್ದ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯರು. ತಂಗಿಯರಾದ ಅಂಬಿಕೆ ಅಂಬಾಲಿಕೆಯರು ಒಪ್ಪಿಗೆ ಸೂಚಿಸಿ ವಿವಾಹವಾಗಲು ಸಜ್ಜಾಗಿ ಬಿಟ್ಟರು. ನನ್ನ ಪ್ರಕಾರ ಅವರಿಬ್ಬರಿಗೆ ಸ್ವಲ್ಪವೂ ಸ್ವಾಭಿಮಾನವಿಲ್ಲ, ಆಗ ತಂದೆ ಹೇಳಿದಂತೆಯೇ ಕೇಳಿಕೊಂಡಿರುತ್ತಿದ್ದರು.. ಈಗ ಈ ಗೆದ್ದವನು ಹೇಳಿದಂತೆಯೇ ಕೇಳಿಕೊಂಡಿದ್ದಾರೆ. ಸ್ವಲ್ಪವೂ ಸ್ವಂತಿಕೆ ಇಲ್ಲ. ಈ ಸತ್ಯವತಿ ಮತ್ತು ಭೀಷ್ಮ ಹೇಳುತ್ತಾರೆಂದು ನಾನೇಕೆ ವಿವಾಹವಾಗಲಿ? ವೀರನಾದ ಭೀಷ್ಮ ನಮ್ಮನ್ನು ಗೆದ್ದಿದ್ದಾನೆ. ನನ್ನ ತಂದೆ ಹೇಳಿದ್ದೂ ಕೂಡ ಇದನ್ನೇ ಅಲ್ಲವೇ? ಸ್ವಯಂ ವರದಲ್ಲಿ ಯಾವ ರಾಜಕುಮಾರ ವೀರನಾಗುತ್ತಾನೋ ಅವರಿಗೇ ತನ್ನ ಮಕ್ಕಳನ್ನು ಕೊಡುತ್ತೇನೆಂದು? ಇಲ್ಲಿ ಕೊಡುವುದೆಂದರೆ ವಿವಾಹವೇ ತಾನೆ? ವಿವಾಹಕ್ಕೇ ಅಲ್ಲವೇ ಸ್ವಯಂ ವರ ಏರ್ಪಡಿಸಿದ್ದು? ಆ ಸ್ವಯಂ ವರಕ್ಕೆ ಬಂದು ವೀರತನ ಪ್ರದರ್ಶನ ಮಾಡಿ ನಮ್ಮನ್ನು ಗೆದ್ದವನೇ ನಮಗೆ ಪತಿಯಲ್ಲವೇ? ಹಾಗಿದ್ದಾಗ ಅವನು ಮತ್ತಾರಿಗೋ ನಮ್ಮನ್ನು ವಿವಾಹ ಮಾಡಿ ಬಿಡುತ್ತಾನೆಂದರೆ ಅದು ಹೇಗೆ ಒಪ್ಪಿಕೊಳ್ಳುವುದಕ್ಕಾಗುತ್ತದೆ? ಅದೂ ಸ್ವಯಂವರಕ್ಕೆ ಬಾರದ ಆ ದುರ್ಬಲರನ್ನು ಪತಿ ಎಂದು ನಾನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅದಕ್ಕಾಗಿಯೇ ಧೈರ್ಯವಾಗಿ ಹಠ ಹಿಡಿದಿದ್ದೆ. ಗೆದ್ದವನಾದ ಭೀಷ್ಮನೇ ನನ್ನನ್ನು ವಿವಾಹವಾಗಬೇಕೆಂದು. ಅದೆಷ್ಟೋ ರೀತಿಯಲ್ಲಿ ಭೀಷ್ಮನೂ ಸಮಜಾಯಿಸಿದ. ತಾನು ಆಜನ್ಮ ಬ್ರಹ್ಮಚಾರಿ ಎಂದೂ, ವಿವಾಹವಾಗಲು ಸಾಧ್ಯವಾಗುವುದಿಲ್ಲವೆಂದೂ ಹೇಳಿದ. ಹೌದು, ಎಲ್ಲವೂ ಸತ್ಯವೇ ಹೌದು. ಆದರೆ ವಿವಾಹದ ಇಚ್ಚೆ ಇಲ್ಲದವನು ಸ್ವಯಂ ವರಕ್ಕೆ ಏಕೆ ಬರಬೇಕಿತ್ತು? ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮನ್ನೇಕೆ ಕರೆದೊಯ್ಯಬೇಕಿತ್ತು? ಸಾಲ್ವನ ಪ್ರೇಮಿಸಿದ ನನ್ನನ್ನು ಸಾಲ್ವನಿಂದ ದೂರ ಮಾಡಿ ಭೀಷ್ಮನತ್ತ ಮನ ಒಲಿಯುವಂತೆ ಏಕೆ ಮಾಡಬೇಕಿತ್ತು? ಬೇರೆಯವರೊಂದಿಗೆ ವಿವಾಹ ಮಾಡುತ್ತಾನಾದರೆ ಕಾಶಿಯ ಆಸ್ಥಾನದಲ್ಲಿಯೇ ಹೇಳಬೇಕಿತ್ತಲ್ಲವೇ? ಅದೆನೂ ಮಾಡದೇ ಈಗ.. ಈ ಹಸ್ತಿನಾವತಿಗೆ ಕರೆದುತಂದು ಹೀಗೆ ಅವಮಾನಿಸುವುದೇ?
ತೀರಾ ನೊಂದೇ ಕೇಳಿದ್ದು.. ಸಾಲ್ವನ ಹೆಸರೆತ್ತಿದೊಡನೆಯೇ ಆತ ಸಾಲ್ವನ ಬಳಿ ನನ್ನ ಕಳಿಸುವುದಕ್ಕೆ ಒಪ್ಪಿಗೆ ಸೂಚಿಸಿದ. ಪೂರ್ಣವಾಗಿ ಶೂನ್ಯವಾಗಿದ್ದ ನನಗೀಗ ಮತ್ತೆ ಚೈತನ್ಯ ಮೂಡಿತ್ತು. ರಥವನ್ನೇರಿ ಹೊರಟೆ.. ನನ್ನ ಸಾಲ್ವನತ್ತ. ನಾನು ಪ್ರೇಮಿಸಿದ ಸಾಲ್ವನತ್ತ.. ಸ್ವಯಂವರಕ್ಕೆ ಬಂದು ನಾನು ದೊರೆಯದೇ ಅದೆಷ್ಟು ಬೇಸರಗೊಂಡಿದ್ದಾನೋ ಏನೋ, ನನ್ನ ಕಳೆದುಕೊಂಡೆನೆಂದು ನೊಂದು ಬೆಂದಿರಬಹುದು.. ನನ್ನ ಕಂಡೊಡನೆ ಸಂತಸಗೊಳ್ಳುತ್ತಾನೆ.. ಮತ್ತೆ ಹೊಸ ಬದಕು ಶುರುವಾಗುತ್ತದೆ. ಆಗಿದ್ದೆಲ್ಲವೂ ಕಹಿ ಕನಸೆಂದು ಮರೆತು ಬಿಡಬೇಕು.. ಒಂದೇ ಎರಡೇ ಸಾವಿರಾರು ಕನಸುಗಳನ್ನು ಎದೆಯಲ್ಲಿ ಹೊತ್ತು ಸಾಲ್ವನೆಡೆಗೆ ಹೋದೆ.. ಆದರೆ ಅಲ್ಲಿ ಆದದ್ದಾದರೂ ಏನು? ಮತ್ತೆ ಆಘಾತ.. ಸ್ವಯಂ ವರದಲ್ಲಿ ಸೋತ ಅವನೀಗ ಘಾಸಿಗೊಂಡಿದ್ದಾನೆ. ಭೀಷ್ಮ ಗೆದ್ದಿದ್ದಾನೆ.. ಹಾಗಾಗಿ ನಾನೀಗ ಅವನಿಗೆ ಪರಸ್ತ್ರೀಯಾಗಿ ಕಾಣುತ್ತಿದ್ದೇನೆ. ಗೆಲ್ಲಲಾಗದ ತಾನು ಹೆಣ್ಣಾಗಿದ್ದೇನೆ ಎಂಬ ಕಲ್ಪನೆ ಅವನದು. ಅದೆಷ್ಟೋ ಬೇಡಿದೆ, ಕಾಡಿದೆ, ಯಾವುದಕ್ಕೂ ಬಗ್ಗಲಿಲ್ಲ. ನನ್ನ ಸಾಲ್ವ ನನ್ನ ಪ್ರೇಮವನ್ನೇ ತಿರಸ್ಕರಿಸಿ ಬಿಟ್ಟ. ಅಷ್ಟೊಂದು ಪ್ರೀತಿಯನ್ನು ನೀಡುತ್ತಿದ್ದ ಆತ ತಿರಸ್ಕರಿಸಿಬಿಟ್ಟ..

ಎಲ್ಲವೂ ಆ ಭೀಷ್ಮನಿಂದಾಗಿ. ಅಂದು ಸ್ವಯಂ ವರಕ್ಕೆ ಅವನು ಬರದಿದ್ದರೆ, ಬಂದರೂ ಗೆದ್ದ ಮೇಲೆ ತಾನು ವಿವಾಹವಾಗುವುದಿಲ್ಲ ಎಂದು ಹೇಳಿ ಸಾಲ್ವನಿಗೆ ನನ್ನ ವಿವಾಹ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ, ಕೊನೆಯಪಕ್ಷ ಗೆದ್ದ ಅವನಾದರೂ ನನ್ನ ವಿವಾಹವಾಗಿದ್ದರೆ ನನ್ನ ಯೌವನ ನಷ್ಟವಾಗುತ್ತಿರಲಿಲ್ಲ. ಆದರೆ ಈಗ? ಅತ್ತ ಭೀಷ್ಮನೂ ಒಪ್ಪಿಕೊಂಡಿಲ್ಲ ಇತ್ತ ಸಾಲ್ವನೂ ತಿರಸ್ಕರಿಸಿ ಬಿಟ್ಟ. ನನಗೆ ದಾರಿ ಯಾವುದು? ಬದುಕು ಹೇಗೆ ಬಂದಿದೆಯೋ ಹಾಗೆಯೇ ಸ್ವೀಕರಿಸುವ ದುರ್ಬಲೆ ನಾನಲ್ಲ. ಬದುಕು ನನ್ನಿಷ್ಟದಂತೆಯೇ ಆಗಬೇಕು. ಸಾಲ್ವ ಹೇಳಿದ್ದು ಸರಿ. ನನ್ನ ಗೆದ್ದವನು ಭೀಷ್ಮ. ಅವನೇ ನನ್ನ ವಿವಾಹವಾಗಬೇಕು. ಅವನಾಗಿ ಆಗಿಲ್ಲವೆಂದರೆ ಒತ್ತಡ ತಂದಾದರೂ ವಿವಾಹ ಮಾಡಿಕೊಳ್ಳಲೇ ಬೇಕು. ನನಗೆ ಮೋಸವಾಗಬಾರದು. ನನಗೆ ನ್ಯಾಯ ಸಿಗಲು ನಾನೊಬ್ಬಳೇ ಹೋರಾಟಕ್ಕಿಳಿದಿದ್ದೇನೆ. ಆ ಭೀಷ್ಮನ ವೀರತ್ವವನ್ನು ನೋಡಿ ಯಾರೂ ನನ್ನ ಪರವಾಗಿ ನಿಲ್ಲುತ್ತಿಲ್ಲ. ಅವನಿಗೆ ಹೇಳುವುದಾದರೂ ಯಾರು? ಅವನ ತಂದೆ ತಾಯಿಯಂತೂ ಆ ಕೆಲಸ ಮಾಡಲಾರರು. ಅವರಿಗಾಗಿಯೇ ಅಲ್ಲವೇ ಅವನು ಬ್ರಹ್ಮಚಾರಿಯಾಗಿದ್ದು? ಹಾಗಾಗಿ ಅವರಿಂದ ಸಹಾಯ ಸಿಗುವುದಿಲ್ಲ. ಇನ್ನು ಗುರು.. ಹಾ.. ಭೀಷ್ಮನ ಗುರುವಾದ ಪರಶುರಾಮರ ಬಳಿಯಲ್ಲಿಯೇ ಹೋಗುತ್ತೇನೆ. ಮನಸ್ಸು ನಿರ್ಧರಿಸಿದ್ದೇ ತಡ ಹೊರಟೇ ಬಿಟ್ಟೆ. ಅವರು ಎಲ್ಲಿದ್ದಾರೆ? ಅಸ್ಪಷ್ಟ ಕಲ್ಪನೆ ಇದೆ. ಕಾಡು ಮೇಡು.. ಬೆಟ್ಟ ಗುಡ್ಡಗಳನ್ನೆಲ್ಲ ದಾಟಿ ಹೊರಟೆ. ಭೀಷ್ಮ ನನ್ನ ವಿವಾಹವಾಗಬೇಕು. ಎಂಬ ಒಂದೇ ಗುರಿ. ಅದಕ್ಕಾಗಿಯೇ ಅದೆಷ್ಟೇ ಕಷ್ಟವಾದರೂ ಸರಿ. ಗುರಿ ತಲುಪಲೇ ಬೇಕು. ಎಂಬ ಹಠವಿತ್ತು. ಅಂತೂ ಪರಶುರಾಮರ ದರ್ಶನವಾಯ್ತು. ನನ್ನ ಕಣ್ಣೀರಕತೆ ಅವರಿಗೆ ಅರಿವಾಯ್ತು. ಅವರು ನನ್ನ ಪರವಾಗಿ ನಿಂತಿದ್ದು ನನ್ನ ಸೌಭಾಗ್ಯವೇ ಹೌದು. ಅವರೇ ಖುದ್ದಾಗಿ ಭೀಷ್ಮನನ್ನು ಭೇಟಿಯಾಗಿ ವಿವಾಹವಾಗುವಂತೆ ಆಜ್ಞೆ ಮಾಡಿದರೂ ಭೀಷ್ಮ ಒಪ್ಪಲಿಲ್ಲ. ಆಗಲೇ ಪ್ರಾರಂಭವಾಗಿದ್ದು ಗುರು ಶಿಷ್ಯರ ಯುದ್ಧ. ಅಲ್ಲಿಯೂ ನನಗೇ ಸೋಲು. ಪರಶುರಾಮರ ಸೋಲೆಂದರೆ ನನ್ನ ಸೋಲಲ್ಲವೇ? ಅವರೂ ಕೈಬಿಟ್ಟರು..
ಮುಂದೆ ನನ್ನ ಗತಿ? ಯಾರ್ಯಾರದೋ ಜೊತೆ ವಿವಾಹವಾಗಿ ಇಚ್ಚೆ ಇಲ್ಲದೇ ಜೊತೆಯಾಗಿ ಬಾಳುವುದು ನನಗಿಷ್ಟವಿಲ್ಲ. ನನ್ನ ಸುಂದರ ಯೌವನವನ್ನು ಹೀಗೆ ಕಾಡಿನಲ್ಲಿ ಅನಾಥವಾಗುವಂತೆ ಮಾಡಿದ್ದು ಆ ಭೀಷ್ಮ. ನನ್ನ ಬದುಕು ಕತ್ತಲಲ್ಲಿ ಮುಳುಗುವಂತೆ ಮಾಡಿದ್ದು ಆ ಭೀಷ್ಮ. ನನ್ನ ಪ್ರೇಮ ಕೊನೆಯುಸಿರೆಳೆವಂತೆ ಮಾಡಿದ್ದು ಇದೇ ಭೀಷ್ಮ. ನನ್ನ ಜೀವನ ಭಸ್ಮವಾಗಿದ್ದು ಇದೇ ಭೀಷ್ಮನಿಂದ. ಹೆಣ್ಣಾದ ನನಗೆ ಏನೂ ಮಾಡಲಾಗುತ್ತಿಲ್ಲ. ವೀರನಾದ ಅವನನ್ನು ಸಾಯಿಸಲಾಗುತ್ತಿಲ್ಲ.. ಏನು ಮಾಡಲಿ.. ಹೀಗೆ ಬದುಕಲು ಸಾಧ್ಯವೇ ಇಲ್ಲ.. ನೇರವಾಗಿ ಭೀಷ್ಮನಲ್ಲಿ ನಡೆದೆ. ಕೋಪದ ಅಗ್ನಿ ಎದೆ ಸುಡುತ್ತಿತ್ತು.. ಉರಿವ ಕಣ್ಣಲ್ಲಿ ಅವನನ್ನು ನೋಡುತ್ತಿರುವ ನನಗೆ ಮತ್ತಷ್ಟು ಧ್ವೇಷ ಹೆಚ್ಚಾಯ್ತು. ಅದಕ್ಕಾಗಿಯೇ ಅವನೆದು ಬೆಂಕಿಗೆ ಜಿಗಿದೇ ಬಿಟ್ಟೆ..! ಮುಂದಿನ ಜನ್ಮ ಇವನ ಮರಣವಾಗಿಯೇ ಬರುತ್ತೇನೆಂದು ಶಪಥ ಮಾಡಿದೆ. ಅವನ ಇಡೀ ವಂಶಕ್ಕೇ ಶಾಪವಿತ್ತೆ.. ಧ್ವೇಷ, ಕೋಪ, ದುಃಖ ನಿರಾಸೆಯಲ್ಲಿಯೇ ಪ್ರಾಣ ಬಿಟ್ಟೆ. ನಾನು ಅಂಬೆ.. ಅರಳಬೇಕಾದ ಯೌವನವನ್ನು ಕೋಪಾಗ್ನಿಯಲ್ಲಿ ಸುಟ್ಟು ಭಸ್ಮ ಮಾಡಿದ ಅಂಬೆ.. ಮರುಜನ್ಮದಲಿ ಭೀಷ್ಮನ ಸಾವಾಗಿಯೇ ಬಂದ ಅಂಬೆ ನಾನು.




Comments