ನಾನು ದ್ರೌಪದಿ
- Bhavya Haleyuru
- 1 day ago
- 3 min read
ನಾನು... ದ್ರೌಪದಿ..

ದ್ರುಪದ ರಾಜನ ಸೇಡಿನ ಯಜ್ಞದಲ್ಲಿ ಹುಟ್ಟಿದವಳು. ಅಣ್ಣ ದೃಷ್ಟದ್ಯುಮ್ನನ ಜನನಕ್ಕೇನೋ ಧ್ವೇಷದ ಕಾರಣವಿತ್ತು. ಆದರೆ ನನ್ನ ಜನನಕ್ಕೆ?? ಅಣ್ಣನ ಹಿಂದೆಯೇ ಹುಟ್ಟಿಬಂದೆ. ಎಲ್ಲೆಲ್ಲಿಯೂ ಮಂತ್ರಘೋಷಗಳ ಮಧ್ಯದಲ್ಲಿಯೇ ಜನಿಸಿದ ನನಗೆ ಅಪ್ಪನ ನಿರ್ಲಕ್ಷ್ಯದ ನಿಟ್ಟುಸಿರು ಕಾಣಲಿಲ್ಲ. ಸಹಜ ತಾನೇ..? ಪುತ್ರ ಸಂತಾನದ ಸಂಭ್ರಮ, ಪುತ್ರಿಯ ಜನನದ ಸಮಯದಲ್ಲಿ ಇರುವುದಿಲ್ಲ. ದ್ರೋಣಾಚಾರ್ಯರ ಸಂಹಾರಕ್ಕಾಗಿಯೇ ಅಣ್ಣ ಜನನವಾದ.. ಆದರೆ ನನಗೆ ಯಾರ ಸಂಹಾರದ ಉದ್ದೇಶವೂ ಇರಲಿಲ್ಲ. ಆದರೂ ಉರಿವ ಯಜ್ಞದಗ್ನಿಯಲ್ಲಿ ಜನಿಸಿದ ನನಗೆ ಉರಿವ ಬದುಕೇ ಸಿಕ್ಕಿತ್ತು. ಮೊದಲೇ ತಿಳಿದಿದ್ದರೆ ಮತ್ತದೇ ಅಗ್ನಿಗೆ ಮರಳಿ ನಡೆದು ಬಿಡುತ್ತಿದ್ದೆ. ಒಂದೇ ಒಂದು ಬಾರಿ ಉರಿದು ಬೂದಿಯಾಗಿಬಿಡುತ್ತಿದ್ದೆ. ಆದರೆ ನಾನು ಹಾಗೆ ಮಾಡಲೇ ಇಲ್ಲ.. ಅದಕ್ಕಾಗಿಯೇ ನನ್ನ ಜೀವನದ ಪ್ರತೀ ಕ್ಷಣವೂ ಉರಿಯುವಂತಾಯ್ತು.
ಕೃಷ್ಣೆ..ನನ್ನ ಹೆಸರು. ಕಪ್ಪು ನನ್ನ ಮೈಬಣ್ಣ.. ಆದರೂ ನಾನು ಲೋಕೈಕ ಸುಂದರಿ.. ಸೌಂದರ್ಯಕ್ಕೆ ಬಣ್ಣದ ಹಂಗೆಲ್ಲಿ? ಸ್ನೇಹಿತ ವಾಸುದೇವನೂ ಕಪ್ಪಲ್ಲವೇ? ಅವನೂ ಸುಂದರನೇ.. ಶ್ವೇತ ವರ್ಣವೇ ಸೌಂದರ್ಯಕ್ಕೆ ಕಾರಣ ಎಂಬ ಮೌಢ್ಯರಿಗೆ ಏನನ್ನಬೇಕು ಹೇಳಿ. ಅದೆಲ್ಲ ಬಿಡಿ, ಮತ್ತೆ ವಿಷಯಕ್ಕೆ ಬರುತ್ತೇನೆ. ಯೌವನಾವಸ್ತೆಯಲ್ಲಿಯೇ ಹುಟ್ಟಿದ ನನಗೆ ಬಾಲ್ಯಬದುಕಿನ ಸಿಹಿ ಸಿಗಲೇ ಇಲ್ಲ. ಹಾಗೇನಾದರೂ ಬಾಲ್ಯದ ನೆನಪುಗಳಿದ್ದದ್ದರೆ, ನನ್ನ ಅದೆಷ್ಟೋ ಕಷ್ಟದ ದಿನಗಳಲ್ಲಿ ಒಂದರೆಘಳಿಗೆಯ ಸಂತಸವಾದರೂ ಸಿಗುತ್ತಿತ್ತೇನೋ.. ನೇರವಾಗಿ ಯೌವನದಲ್ಲಿಯೇ ಹೆಜ್ಜೆ ಇಟ್ಟ ನನಗೆ ಎಲ್ಲವೂ ಹೊಸತು. ಅಕ್ಕ ಶಿಖಂಡಿ ಅದೆಷ್ಟೋ ವಿಷಯವನ್ನು ತಿಳಿಸಿಕೊಟ್ಟಿದ್ದೂ ಇದೆ. ಅಪ್ಪನ ಮಮತೆಯೂ ಬದುಕಿನ ಪಾಠವ ಹೇಳಿತ್ತು. ಬಾಲ್ಯದಲ್ಲಾಗಿದ್ದರೆ ಆಟೋಟಗಳ ಬಗ್ಗೆ, ಪಾಠಗಳ ಬಗ್ಗೆ ಲಕ್ಷ್ಯವಿರುತ್ತಿತ್ತು. ಆದರೆ ಯೌವನದಲ್ಲಿ? ಆಟವೆಲ್ಲಿ? ಪಾಠವೆಲ್ಲಿ? ನೇರವಾಗಿ ವಿವಾಹವೇ..
ಎಲ್ಲರೂ ಸೌಂದರ್ಯಕ್ಕೆ ಮಾರುಹೋಗುವವರೇ . ಅಪ್ಪನಿಗೆ ಮಹಾನ್ ಬಿಲ್ವಿದ್ಯಾಗಾರನನ್ನು ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲ. ಸಹಜ. ಅಪ್ಪ ದ್ರುಪದ ಮಹಾರಾಜ ಸ್ವತಃ ಪರಾಕ್ರಮಿ. ಹಾಗಿರುವಾಗ ಇನ್ನೂ ಪರಾಕ್ರಮನಾದ ಅಳಿಯನನ್ನು ಪಡೆಯುವ ಹಂಬಲ ಸಹಜವೇ ಹೌದು. ಅದಕ್ಕಾಗಿಯೇ ನನ್ನ ಸ್ವಯಂವರಕ್ಕೆ ಏರ್ಪಡಿಸಿದ್ದು 'ಮತ್ಸ್ಯ ಯಂತ್ರ'. ಆಗಲೇ ನನಗೆ ಅನಿಸಿತ್ತು 'ಮೇಲೆ ತಿರುಗುತ್ತಿರುವ ಮತ್ಸ್ಯದ ಪ್ರತಿಬಿಂಬವನ್ನು ಕೆಳಗಿನ ನೀರಿನಲ್ಲಿ ನೋಡಿ ಗುರಿ ಇಡುವ ಮಹಾನ್ ಬಿಲ್ವಿದ್ಯಾಗಾರ ಇರುವನೋ?? ಒಂದೊಮ್ಮೆ ಯಾರೂ ಸಿಗದಿದ್ದರೆ ನನ್ನ ವಿವಾಹದ ಗತಿಯೇನು? ನಾನು ಹಾಗೆಯೇ ಇರಬೇಕಾಗುತ್ತದೆಯಾ?? ' ಎಷ್ಟೆಲ್ಲ ಯೋಚಿಸುತ್ತಿದ್ದೆ ನಾನು..! ಯಾರಿದ್ದಾರೆ ಅಂತಹ ಧನುರ್ಧಾರಿ? ಅಪ್ಪನ ತಲೆಯಲ್ಲಾದರೂ ಯಾರಿದ್ದಾರೆ? ಲೋಕ ಪರಿಚಯವಿರದ ನನಗೆ ತಿಳಿಯುವುದಾದರೂ ಹೇಗೆ? ಅಂತೂ ಆ ಒಂದು ದಿನ ಬಂದಿತ್ತು.. ಅಪ್ಪ ಎಪ್ಪತ್ತು ದಿನಗಳ ಮೊದಲೇ ಎಲ್ಲಾ ರಾಜ್ಯಕ್ಕೂ ಸಂದೇಶ ತಲುಪಿಸಿದ್ದರು.. ಆ ರಾಜರುಗಳಿಗೆಲ್ಲಾ ಅದೆಷ್ಟು ಉತ್ಸಾಹವಿತ್ತೆಂದರೆ.. ಎಲ್ಲಾ ರಾಜರೂ ಹದಿನೈದು ದಿನಕ್ಕೇ ಬಂದು ತಲುಪಿದ್ದರು.. ಅದಕ್ಕಾಗಿಯೇ ನನ್ನ ಸ್ವಯಂವರ ಮುಂಚಿತವಾಗಿಯೇ ಆಯಿತು..
ಅಂದು.. ಆ ಸ್ವಯಂವರದ ದಿನ.. ಅದೆಷ್ಟು ಜನ ರಾಜಮಹಾರಾಜರು..!! ಅವರಲ್ಲಿ ಯಾರೂ ಮನಸಿಗೆ ಬಂದಿರಲಿಲ್ಲ ನನಗೆ... ಯಾಕೋ ಈ ಸ್ವಯಂವರವೇ ಇಷ್ಟವಾಗುತ್ತಿಲ್ಲ.. ಯಾರು ಆ ಮತ್ಸ್ಯ ಯಂತ್ರವನ್ನು ಭೇದಿಸುತ್ತಾರೋ ಅವರು ನನ್ನ ಪತಿ..!! ಶೂರನಾದರಷ್ಟೇ ಸಾಕೇ? ನನ್ನ ಮನಸ್ಸಿಗೂ ಪ್ರಿಯವಾಗಬಾರದೇ?? ಅವನಿಗೆ ನಾನು ಇಷ್ಟವಾಗಿದ್ದಕ್ಕೇ ಅವನಿಲ್ಲಿಗೆ ಬಂದಿದ್ದು.. ಆದರೆ ನನಗೂ ಆತ ಹಿತವೆನಿಸಬೇಕಲ್ಲಾ? ಯಾಕೋ ತಂದೆಯವರ ಬಳಿ ಹೋಗಿ ಬೇಡವೆಂದು ಬಿಡಲೇ? ಎಂದೂ ಅನ್ನಿಸುತ್ತದೆ.. ಆದರೆ ನನ್ನ ಮಾತನ್ನು ಕೇಳಿಯಾರೇ?? ಮೌನವಾಗಿ ಎಲ್ಲವನ್ನೂ ವೀಕ್ಷಿಸುತ್ತಿದ್ದೆ... ಆಗ.. ಕಂಡವನೇ ಆತ.. ನೋಡಿದೊಡನೆಯೇ ಮನ ಸೆಳೆದು ಬಿಟ್ಟ.. ಎಷ್ಟು ಆಕರ್ಷಣೆಯಿದೆ ಆ ಕಂಗಳಲ್ಲಿ..! ಅವನೇ ಈ ಸ್ವಯಂವರಕ್ಕೆ ಬಂದು ಗೆಲಬಾರದೇ?? ಎಂದು ಮನಸ್ಸು ಯೋಚಿಸುತ್ತಿರುವಾಗಲೇ ಬುದ್ದಿ ಸಿಡುಕಿ ಹೇಳಿತ್ತು.. ಅವನು ಬ್ರಾಹ್ಮಣ..! ಕಾವಿಯನ್ನು ಧರಿಸಿರುವ ಆತ ಮತ್ಸ್ಯ ಯಂತ್ರವನ್ನು ಬೇಧಿಸಿಯಾನೇ?? ಮತ್ತದೇ ನೋವು. ಛೇ... ಯಾಕಾದರೂ ಈ ಸ್ವಯಂವರ ಏರ್ಪಡಿಸಿದರೋ... ಸುಮ್ಮನೇ ಇಷ್ಟವಾದವರಿಗೆ ಮಾಲೆ ಹಾಕಿಬಿಡು ಎಂದರೆ ಮುಗಿದಿತ್ತು.. ಅಂತೂ ನನ್ನ ಈ ತಳಮಳದ ನಡುವೆಯೇ ಶುರುವಾಯ್ತು ಸ್ವಯಂವರದ ಸ್ಪರ್ಧೆ... ಎಲ್ಲರೂ ಒಬ್ಬರಾದ ಮೇಲೆ ಒಬ್ಬರು ಬಂದು ಪ್ರಯತ್ನಿಸುತ್ತಲೇ ಇದ್ದಾರೆ.. ಹಾಗೆ ಬರುತ್ತಿರುವವರನ್ನು ಯಾವುದೇ ಕುತೂಹಲವಿಲ್ಲದೇ, ಉತ್ಸಾಹವಿಲ್ಲದೇ ನೋಡುತ್ತಿದ್ದೇನೆ ನಾನು.. ಎಲ್ಲಾ ರಾಜ ಮಹಾರಾಜರೂ ಪ್ರಯತ್ನ ಮಾಡಿ ಸೋತು ಮೌನವಾದರು.. ಆ ಕ್ಷಣಕ್ಕೆ ನನಗೆ ಭಯವಾಯ್ತು.. ' ಈ ತಂದೆಯವರ ಕಾರಣದಿಂದ ನನಗೆ ವಿವಾಹ ಭಾಗ್ಯವೇ ಇಲ್ಲವಾಯ್ತೇ?' ಎಂದನ್ನಿಸಿತು.
ಆಗ ಆ ಸಭೆಯಲ್ಲೊಂದು ಚಲನವಾಯ್ತು... ಅಗೋ ಆ ಬ್ರಾಹ್ಮಣ ಕುಮಾರ.. ಎದ್ದು ಬರುತ್ತಿದ್ದಾನೆ.. ಇವರಾರಿಂದಲೂ ಆಗದ್ದು ಇವನಿಂದ ಆದೀತೇ?? ಆದರೂ ಅವನು ಬರುವ ಆತ್ಮವಿಶ್ವಾಸದ ನಡಿಗೆಯಲಿ ಏನೋ ವಿಶೇಷವಿದೆ ಅನ್ನಿಸಿತು.. ಬಿಲ್ಲನ್ನು ಹಿಡಿಯುವ ಶೈಲಿಯಲ್ಲೇ ಇವನಿಗೆ ಧನಸ್ಸು ಹೊಸದಲ್ಲ ಎಂಬುದು ಖಾತ್ರಿಯಾಗಿತ್ತು.. ನೋಡ ನೋಡುತ್ತಿದ್ದಂತೆಯೇ ಆ ಮತ್ಸ್ಯದ ಕಣ್ಣಿಗೇ ಬಾಣ ಬಿಟ್ಟ..! ಎಂತಹ ಬಿಲ್ವಿದ್ಯಾ ಪ್ರಾವಿಣ್ಯತೆ..! ಇಡೀ ಸಭೆ ಭಲೆ ಭಲೆ ಎಂದಿತ್ತು. ಎಲ್ಲೆಡೆ ಜೈಕಾರ. ಅಲ್ಲಿಯವರೆಗೂ ಆತನು ಯಾರೆಂದೇ ಅರಿಯದವರು ಈಗ ಅಲ್ಲಲ್ಲಿ ಕೇಳುತ್ತಿದೆ ಅವನ ಹೆಸರು... ಅರ್ಜುನ..!! ಮಧ್ಯ ಪಾಂಡವ..!! ತಂದೆ ದ್ರುಪದ ಮಹಾರಾಜನಿಗೆ ಸಂಭ್ರಮವೋ ಸಂಭ್ರಮ. ಖ್ಯಾತ ಬಿಲ್ವಿದ್ಯಾಗಾರ, ಮಹಾನ್ ಶೂರನಾದ ಅರ್ಜುನ ತನ್ನ ಅಳಿಯನೆಂಬ ಹೆಮ್ಮೆ ಅವನಿಗೆ.. ಹಸ್ತಿನಾವತಿಯ ರಾಜಕುಮಾರ ಹೀಗೆ ಬ್ರಾಹ್ಮಣ ವೇಷ ಧರಿಸಿ ಬರುವುದಕ್ಕೆ ಸಕಾರಣವೇನೋ ಕೊಟ್ಟ. ನನಗದರ ಅನಿವಾರ್ಯತೆ ಇರಲಿಲ್ಲ.. ಅವನ ಅಂದಕ್ಕೆ ನಾನಾಗಲೇ ಮನಸೋತಿದ್ದೆ.. ಎಲ್ಲಾ ಸಂಪ್ರದಾಯಗಳು ಮುಗಿದು ಅವನೊಡನೆ ಹೊರಟೆ.. ಮನದಲ್ಲಿ ಸಾವಿರ ಕೋಗಿಲೆಗಳ ಗಾನ.. ಅತೀ ಸುಂದರ, ವೀರ ಈತ ನನ್ನ ಪತಿ ಎಂಬ ಮಧುರ ಝೇಂಕಾರ ಮನದೊಳಗೆ.. ಹಾಗೆ ಸಂಭ್ರಮದಲ್ಲಿ ಹೋಗಿ ನಿಂತಿದ್ದು ರಾಜಮಹಲಿನ ಎದುರಲ್ಲ.. ಒಂದು ಸಣ್ಣ ಕುಟೀರದ ಎದುರು.. ನನಗೆ ಬೇಸರವಿಲ್ಲ. ಪ್ರೇಮದ ಅರಮನೆಯಲಿರುವ ನನಗೆ ಹಂಗಿನರಮನೆ ಬೇಕಿಲ್ಲ.. ಗುಡಿಸಲೇ ಸಾಕಿತ್ತು. ಅಲ್ಲಿ ಯಾವುದೇ ತಕರಾರಿಲ್ಲ. ಆದರೆ..
ದುರಂತ ಇದ್ದಿದ್ದು ಬಡತನದ ಗುಡಿಸಲಿನಲ್ಲಿ ಅಲ್ಲ... ಬದುಕಿನ ಮಹಾ ತಿರುವಿನಲ್ಲಿ.. ಯಾವ ಹೆಣ್ಣಿಗೂ ಇಂಥದ್ದೊಂದು ಕಲ್ಪನೆ ಎಂದಿಗೂ ಬರಲಿಕ್ಕಿಲ್ಲ. ಗುಡಿಸಲಿನ ಒಳಗಿರುವ ತಾಯಿಗೆ ಅಚ್ಚರಿ ಮೂಡಿಸಬೇಕೆಂದೇ ಈ ಮಕ್ಕಳು ಹೊರಗಿನಿಂದ "ಭಿಕ್ಷೆ ತಂದಿದ್ದೇವೆ" ಎಂದರು. ಆಕೆಯೋ "ಎಲ್ಲರೂ ಸಮವಾಗಿ ಹಂಚಿಕೊಳ್ಳಿರಿ" ಎಂದು ಅಂದು ಬಿಟ್ಟರು. ಅವರೇನೋ ಅಂದರು.. ತಾಯಿ ಸಹಜ ವಾತ್ಸಲ್ಯವೋ.. ಅಥವಾ ಸರಿಯಾಗಿ ಕೇಳಿಸಿಕೊಂಡಿರಲಿಲ್ಲವೋ.. ಅದೇನೋ ಆಗಿ ಅವರು ಹೇಳಿರಬಹುದು.. ಆದರೆ ಇವರು ಯೋಚಿಸದೇ "ಹೂ" ಎಂದು ಒಪ್ಪಿಗೆ ಕೊಟ್ಟಿದ್ದು ಮಾತ್ರ ನನಗೆ ಆಘಾತವಾಗಿತ್ತು. ಅರ್ಜುನ ನನ್ನ ಪ್ರಾಣಕಾಂತನೆಂದು ನಂಬಿದ ನನಗೆ ಇದೇನು ವಿಚಿತ್ರ ಎಂದು ವಾಸ್ತವವನ್ನು ಅರ್ಥೈಸಿಕೊಳ್ಳುವ ವೇಳೆಗೆ ಐವರು ಪಾಂಡವರ ಪತ್ನಿಯಾಗಿದ್ದೆ ನಾನು..!! ಈ ನನ್ನ ದುಸ್ಥಿತಿಗೆ ಕಾರಣವೂ ಇತ್ತೆಂದು ವ್ಯಾಸರು ಹೇಳುತ್ತಾರೆ.. ನನ್ನ ಕರುಣಾಜನಕ ಕತೆ ಇನ್ನು ಮುಂದೆ ಶುರು..



Comments