top of page

ನಾನು ದ್ರೌಪದಿ.. (ಭಾಗ ೨)

'ಈ ದ್ರೌಪದಿಯ ಜನ್ಮಕ್ಕಿಂತಲೂ ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ಕನ್ಯೆಯಾದ ನನಗೆ ವಿವಾಹವಾಗಿರಲಿಲ್ಲ. ಅದಕ್ಕಾಗಿಯೇ ಶಿವನ ತಪಸ್ಸನ್ನು ಮಾಡಿ, ಶಿವನೊಲಿಸಿ "ಪತಿಯನ್ನು ದಯಪಾಲಿಸು" ಎಂದು ಐದುಬಾರಿ ಕೇಳಿಕೊಂಡಿದ್ದಕ್ಕೆ, ಈ ಜನ್ಮದಲ್ಲಿ ಐವರು ಪತಿಯರನ್ನು ಪಡೆಯುವಂತಾಯ್ತು', ಎಂದು ವ್ಯಾಸರು ಸಮಜಾಯಿಷಿ ಕೊಟ್ಟರು. ಅರ್ಜುನ ತನ್ನ ಅಳಿಯ ಎಂಬ ಸಂಭ್ರಮದಲ್ಲಿದ್ದ ನನ್ನ ತಂದೆಯನ್ನು ನೋಡಿ ನನ್ನ ಜನ್ಮಕ್ಕೆ ಇದೇ ಕಾರಣವಿರಬಹುದೇ ಎಂದೂ ಅನ್ನಿಸಿತ್ತು. ಪಾಂಡವರೆಲ್ಲರ ಪತ್ನಿಯಾದುದರ ಬಗ್ಗೆ ತಂದೆಗೂ ವಿರೋಧವಿತ್ತು. ಆದರೆ ವ್ಯಾಸರ ಮಾತನ್ನು ಕೇಳಿ ಮೌನವಹಿಸಿದರು. ನನ್ನ  ಹಣೆಬರಹವೇ ಹೀಗಿರುವಾಗ ಯಾರು ಏನು ಮಾಡಿಯಾರು?? ಅಂತೂ ವಿವಾಹವಾಗಿತ್ತು. ಮಹಾನ್ ಪರಾಕ್ರಮಿಗಳೇ ನನ್ನ ಪತಿಯರಾದರು. ಇದಿಷ್ಟೇ ದೊಡ್ಡ ನೋವು ಎಂದುಕೊಂಡ ನನಗೆ ಇನ್ನೂ ದೊಡ್ಡ ಆಘಾತವೊಂದು ಕಾಯುತ್ತಲಿತ್ತು ಎಂಬ ಸುಳಿವೇ ಇರಲಿಲ್ಲ..



ಅಂದು.. ದ್ಯೂತಕ್ಕಾಗಿ ಕೌರವ ಕರೆದಿದ್ದ ಎಂಬ ಸುದ್ದಿ ಬಂದಾಗಲೇ ಯಾಕೋ ಮನದಲ್ಲೊಂದು ಭಯ ಪ್ರಾರಂಭವಾಗಿತ್ತು. ತುಂಬಿದ ರಾಜಸಭೆಯಲ್ಲಿ ದ್ಯೂತ ಪ್ರಾರಂಭವಾಗಿದೆ ಎಂಬ  ವಿಷಯವನ್ನು ಸೇವಕಿ ಬಂದು ಹೇಳಿದಾಗ ನನಗೆ ಭಯವೋ ಭಯ... ಒಬ್ಬೊಬ್ಬರನ್ನೇ ಅಡವಿಟ್ಟಿದ್ದೂ ಆಯ್ತು.. ಇದೇನು ಹುಚ್ಚುತನ ಎಂದನ್ನಿಸಿದರೂ ನಾನು ವಿರೋಧಿಸುವಂತಿಲ್ಲ. ಆದರೆ ನನ್ನನ್ನೂ ಅಡವಿಟ್ಟಾಗ ಮಾತ್ರ ಕಂಗಾಲಾಗಿದ್ದೆ.. ಅಂತಃಪುರದಲ್ಲಿ ಋತುಮತಿಯಾಗಿದ್ದ ನನ್ನನ್ನು ಎಳೆದೊಯ್ಯಲು ಬಂದ ದುಶ್ಯಾಸನನ್ನು ನೋಡಿ ಎದೆ ನಡುಗಿತ್ತು. ಅದೆಷ್ಟು ವಿರೋಧಿಸಿದರೂ ನನ್ನ ಕೂದಲನ್ನು ಹಿಡಿದು, ಪ್ರಾಣಿಯಂತೇ ಎಳೆದೊಯ್ದಿದ್ದ... ಅವನಿಂದ ಬಿಡಿಸಿಕೊಳ್ಳುವ ಸರ್ವ ಪ್ರಯತ್ನವನ್ನು ಮಾಡುತ್ತಿರುವಾಗಲೇ ಸಭೆಯ ಮಧ್ಯದಲ್ಲಿ ಬಂದು ಉರುಳಿ ಬಿದ್ದಿದ್ದೆ. ಯಾವಾಗಲೂ ಸಿಂಗಾರವಾಗಿಯೇ ಇರುತ್ತಿದ್ದ ನಾನು.. ಇಂದು ಬಿಚ್ಚಿದ ಮುಡಿ, ಬೆವರಿಳಿದ ಮುಖದಲ್ಲಿ ಎಲ್ಲರೆದುರು ನಿಂತಿದ್ದೆ.. ಮೊದಲು ನೋಡಿದ್ದು ನನ್ನ ಪತಿಯರತ್ತ... ತಲೆ ತಗ್ಗಿಸಿ ಕುಳಿತಿದ್ದಾರೆ..


ಅದೇ ವೇಳೆಗೆ ಅತ್ತ ಆ ದುರ್ಯೋಧನ ಈ ದುಶ್ಯಾಸನನಿಗೆ ನನ್ನ ವಿವಸ್ತ್ರ ಮಾಡಲು ಆಜ್ಞೆಕೊಟ್ಟು ಗಹಗಹಿಸುತ್ತಿದ್ದಾನೆ.. ಛೀ.. ಇದೆಂತಹ ಆಜ್ಞೆ..! ನಾಚಿಕೆಗೇಡು.. ಕೈಹಿಡಿದ ಶಕ್ತಿಶಾಲಿ ಪತಿಯಂದಿರನ್ನು ಬೇಡಿದೆ.. ಕಾಪಾಡಿ ಎಂದು ಬೇಡಿಕೊಂಡೆ.. ಉತ್ತರವಿಲ್ಲ.. ಸಂಕಟವಾಯ್ತು.. ಪಿತಾಮಹ ಭೀಷ್ಮರಲ್ಲಿ ಬೇಡಿದೆ.. ಊಹು ಅಲ್ಲಾಡದೇ ತಲೆ ತಗ್ಗಿಸಿಬಿಟ್ಟರು.. ಕುರುಡ ದೃತರಾಷ್ಟ್ರ ಕಿವುಡನೂ ಆಗಿಬಿಟ್ಟ.. ಗುರು ದ್ರೋಣಾಚಾರ್ಯರೂ ಮೂಕರಾಗಿ ಬಿಟ್ಟರು.. ಈ ನೀಚ ದುಶ್ಯಾಸನ ಸೀರೆ ಸೆಳೆದೇ ಬಿಟ್ಟ.. ಮುಂದೇನು ನನ್ನ ಗತಿ??  ಯಾರಿದ್ದಾರೆ ನನಗೆ?? ಕೈಹಿಡಿದವರೇ ಕೈಬಿಟ್ಟಾಗ?? ದೇವರೇ... ಎಂದಂದುಕೊಳ್ಳುವಾಗಳೆ ನೆನಪಾದ 'ವಾಸುದೇವ'. ದೇವ, ಸ್ನೇಹಿತ, ನಂಟ.. ಎಲ್ಲವೂ ಹೌದು.. ಎರಡೂ ಕೈಯೆತ್ತಿ ನೀನೇ ಗತಿ ಎಂದುಬಿಟ್ಟೆ...! ಅದಾವ ಮಾಯೆಯೋ ಏನೋ.. ನನ್ನ ಮಾನ ಉಳಿದಿತ್ತು.. ಅಂದು.. ಆ ಕ್ಷಣ ನನ್ನ ಮನ ಜ್ವಾಲಾಮುಖಿಯಾಗಿತ್ತು... ದಾವಾನಲವಾಗಿತ್ತು..


ಹಾಗೆಂದು ಗಂಡಸರನ್ನೆಲ್ಲಾ ಬೈಯುವುದಿಲ್ಲ.. ಕೈಬಿಟ್ಟ ಪತಿಯಂದರ ಅನಿವಾರ್ಯತೆಯನ್ನೂ ಅರ್ಥ ಮಾಡಿಕೊಂಡುಬಿಟ್ಟೆ.. ಹಾಗಾಗಿಯೇ ಅವರ ಹಿಂದೆ ವನವಾಸಕ್ಕೂ ಹೊರಟುಬಿಟ್ಟೆ.. ಆ ಕ್ಷಣ ನನ್ನ ಮನಸ್ಸು ಹೇಗಿದ್ದೀತು ಎಂಬ ಕಲ್ಪನೆ ಯಾರಿಗಿರಲು ಸಾಧ್ಯ ಹೇಳಿ?? ಅದಕ್ಕಾಗಿಯೇ ಆ ದುರ್ಯೋಧನ.. ದುಶ್ಯಾಸನರ ಕೊಲ್ಲುವ ಕ್ಷಣಕ್ಕಾಗಿ ಕಾಯುತ್ತಾ ಮುಡಿ ಕಟ್ಟದೇ ಹಾಗೆಯೇ ಇಳಿಬಿಟ್ಟಿದ್ದೆ.. ವನವಾಸದಲ್ಲೂ ನೆಮ್ಮದಿ ಇರಲಿಲ್ಲ. ಆ ನೀಚ ಸೈಂಧವ ಕೈ ಹಿಡಿದು ಅಪಹರಿಸಲು ಪ್ರಯತ್ನಿಸಿದ್ದ.. ಅಜ್ಞಾತವಾಸದಲ್ಲಂತೂ ಕೀಚಕನ ಉಪಟಳವಂತೂ ಹೇಳತೀರದು. ಅವರಿಬ್ಬರಿಗೂ ನನ್ನ ಪತಿಯಂದಿರಿಂದಲೇ ಶಿಕ್ಷೆಯೊದಗಿತ್ತು..


ಉಳಿದವರು ಆ ಕೌರವರು.. ಸೇಡಿನ ಯಜ್ಞದಲ್ಲಿ ಹುಟ್ಟಿದ ನನ್ನ ಎದೆಯಲ್ಲಿ ಸೇಡು ಉರಿಯಲು ಪ್ರಾರಂಭಿಸಿತ್ತು. ಅದಕ್ಕಾಗಿಯೇ.. ಯುದ್ಧಕ್ಕಾಗಿ ಕಾಯುತ್ತಿದ್ದೆ.. ಅಂತೂ ಆ ದುಶ್ಯಾಸನನ ರಕ್ತ ತಲೆಗೆ ತಾಕಿದಾಗ ಸೇಡಿನ ಉರಿ ಸ್ವಲ್ಪ ತಣ್ಣಗಾಗಿತ್ತು.. ದುರ್ಯೋಧನನ ತೊಡೆ ಮುರಿದಾಗಲೇ ಮನಸ್ಸು ಶಾಂತಗೊಂಡಿತ್ತು. ಕೌರವರನ್ನೆಲ್ಲ ವಧಿಸಿ ರಾಜ್ಯ ನಮ್ಮದಾಯ್ತೆಂಬ ಸಂತಸ ಎಲ್ಲೆಡೆ.. ಆದರೆ ನನಗೆ.. ಆದರೆ ಪಟ್ಟದರಸಿಯಾಗಿ ಪಟ್ಟ ಏರುವಾಗ ಖುಶಿ ಇರಲಿಲ್ಲ. ಕಳೆದುಕೊಂಡ ಮಕ್ಕಳ ನೆನಪಾಗುತ್ತಿತ್ತು. ಆ ಅಶ್ವತ್ಥಾಮನ ಕೈಯಲ್ಲಿ ಹತರಾದ ನನ್ನ ಮಕ್ಕಳ ಸಾವು ಎದೆಯನ್ನು ಹಿಂಡುತ್ತಿರುವಾಗ... ಪಟ್ಟವೇರಲು ಸಂಭ್ರಮ ಎಲ್ಲಿರಲು ಸಾಧ್ಯ?? ಮನದಲ್ಲಿ ನೋವಿದ್ದರೂ ಲೋಕಕಲ್ಯಾಣಕ್ಕಾಗಿ ಕಾರ್ಯ ಮಾಡಲೇ ಬೇಕು. ಎಲ್ಲ ಗೊಂದಲವ ಬಿಟ್ಟು ವಾನಪ್ರಸ್ಥಕ್ಕೆ ಹೊರಟಿದ್ದೂ ಆಯ್ತು. ಇಷ್ಟೆಲ್ಲಾ ನೋವು ಅನುಭವಿಸಿದ್ದಕ್ಕೆ ಸ್ವರ್ಗ ಪ್ರಾಪ್ತಿಯಾಗಬಹುದೆಂಬ ನಂಬಿಕೆ ಇತ್ತು..


ಆದರೆ... ಅದೊಂದು ಕಾರಣಕ್ಕೆ ಮೊದಲಿಗೇ ಮರಣವನಪ್ಪಿದೆ.. ನನ್ನ ಗೆದ್ದವ ಅರ್ಜುನ.. ಅವನ‌ ಮೇಲೆ ಪ್ರೇಮ ಒಂದು ತೂಕ ಹೆಚ್ಚೊರುವುದೇ ನನ್ನ ತಪ್ಪಾಗಿ ಹೋಯ್ತೇ?? ರಾಜಕುಮಾರಿಯಾಗಿ ಹುಟ್ಟಿ, ಸಾಮ್ರಾಜ್ಞಿಯಾಗಿ ಜೀವಿಸಿದ ಲೋಕೈಕ ಸುಂದರಿಯಾದ ನನಗೆ ನೆಮ್ಮದಿ ಮಾತ್ರ ಬದುಕಿನ ಯಾವ ತಿರುವಿನಲ್ಲಿಯೂ ಸಿಗಲಿಲ್ಲ. ನಾನು ದ್ರೌಪದಿ.. ಇಂತಹ ಜನ್ಮ‌ ಮತ್ತಾವ ಹೆಣ್ಣಿಗೂ ಬರುವುದು ಬೇಡ.. ನನ್ನಷ್ಟು ನೋಯುವುದೂ ಬೇಡ. ವಾಸುದೇವನಂತಹ ಸ್ನೇಹಿತನಿಲ್ಲದಿದ್ದರೆ ಈ ದ್ರೌಪದಿ ಏನಾಗಿರುತ್ತಿದ್ದಳೋ..!

1 Comment


M.L.SAMAGA
2 days ago

ಸರಳ ಭಾಷೆಯಲ್ಲಿ ನಿರೂಪಣೆ ಚೆನ್ನಾಗಿದೆ

Like
bottom of page