top of page

ನಾನು ಕುಂತಿ... (ಭಾಗ 3)

3 hours ago
2 min read
ನಾನು ಕುಂತಿ... (ಭಾಗ 3)

ಹಸ್ತಿನಾವತಿಯ ಅರಮನೆಯಲ್ಲಿ ಪಾಂಡು ಪುತ್ರರು ಬಂದರೆಂಬ ಸಂಭ್ರಮವೇನೂ ಇರಲಿಲ್ಲ. ದೃತರಾಷ್ಟ್ರನ ಪುತ್ರರಿಗೆ ನಮ್ಮ ಮೇಲೆ ತಾತ್ಸಾರವೇ ಇತ್ತು.. ಜೊತೆಯಲ್ಲಿ ಸಣ್ಣ ಧ್ವೇಷವೂ ನಿಧಾನಕ್ಕೆ ಹಿಗೆಯಾಡುತ್ತಿತ್ತು. ಪಿತಾಮಹರ ಕಣ್ಣಲ್ಲಿ ಕಾಣುವ ಮಮತೆ ಮತ್ತಾರಿಂದಲೂ ಕಾಣಿಸಲಿಲ್ಲ. ದೃತರಾಷ್ಟ್ರನ ತಾತ್ಸಾರ.. ಅವನ ಮಕ್ಕಳು ನನ್ನ ಮಕ್ಕಳ ಮೇಲೆ ತೋರುವ ಧ್ವೇಷ.. ಇದೆಲ್ಲವನ್ನೂ ತಿಳಿದೂ ಮೌನವಾಗಿರುವ ಅನಿವಾರ್ಯ ನನಗೆ. ಇದೆಲ್ಲದರ ಗೊಂದಲದಲ್ಲಿರುವ ನನಗೆ ಇದ್ದಕ್ಕಿದ್ದಂತೆ ಎಂದೂ ನೋಡುವುದೇ ಇಲ್ಲವೇನೋ ಎಂಬ ನನ್ನ ಕರುಳಕುಡಿಯ ದರ್ಶನ ಮಾತ್ರ ಅಚ್ಚರಿಯೂ.. ಆಘಾತಕಾರಿಯೂ ಆಗಿತ್ತು..ಅದೇ ಕರ್ಣ ಕುಂಡಲ.. ರಕ್ಷಾ ಕವಚ... ಸೂರ್ಯದೇವನಂತೆಯೇ ತೇಜಸ್ಸು.. ಅಷ್ಟೇ ಶೂರನೂ ಹೌದು.. ಅನುಮಾನವೇ ಅಲ್ಲ.. ನನ್ನದೇ ಪುತ್ರ..! ವಿವಾಹ ಪೂರ್ವದಲ್ಲಿ ಜನಸಿ.. ನನ್ನಿಂದ ದೂರವಾದ ನನ್ನ ಪುತ್ರ.. 'ಕರ್ಣ' ಎಷ್ಟು ಚಂದನೆಯ ಹೆಸರು..! ಪುತ್ರವಾತ್ಸಲ್ಯ ಛಿಮ್ಮುತ್ತಿತ್ತು.. ಆದರೆ ಕೂತಿದ್ದು ಹಸ್ತಿನಾವತಿಯ ಅರಮನೆಯಲ್ಲಿ.. ಹೇಳಲಾದೀತೆ..?? ಹೃದಯ ಚೀರುತ್ತಿದೆ.. ಅವನನ್ನು ಹೋಗಿ ಬಿಗಿದಪ್ಪಿ, 'ಪುತ್ರಾ..." ಎಂದು ಕರೆಯಬೇಕನಿಸುತ್ತಿದೆ‌‌.. ಅದೆಲ್ಲವೂ ಕನಸಷ್ಟೇ.. ಎಲ್ಲರೂ ಅವನನ್ನು 'ಸೂತಪುತ್ರ'ಎಂದು ಹಂಗಿಸುತ್ತಿದ್ದಾರೆ.. ಅವನ ಶೌರ್ಯವನ್ನು ನೋಡದೇ ಅವನ ಕುಲಕ್ಕೆ ಅವಮಾನಿಸುತ್ತಿದ್ದಾರೆ.. ಎದ್ದು "ಅವನು ಸೂರ್ಯ ಪುತ್ರ" ಎಂದು ಹೇಳಿಬಿಡಬೇಕು... ಎಂದನಿಸುತ್ತಿದೆ... ಆದರೆ ಹಾಗೇನಾದರೂ ಹೇಳಿಬಿಟ್ಟರೆ... ಆಗುವ ಅನಾಹುತ ಅಷ್ಟಿಷ್ಟಲ್ಲ... ಇಲ್ಲಿಯವರೆಗೂ ಸತ್ಯವನ್ನು ಎದೆಯಲ್ಲಿಯೇ ಹುಗಿದುಕೊಂಡು ಬಂದ ನನ್ನ ಶ್ರಮವೆಲ್ಲ ವ್ಯರ್ಥವಾಗುತ್ತದೆ.. ಪಾಂಡವರ ಮಕ್ಕಳು ಅನಾಥರಾಗುತ್ತಾರೆ.. ಅದಕ್ಕಾಗಿಯೇ ಮೌನವಾಗುವ ಅನಿವಾರ್ಯತೆ.. ಆದರೆ ದುರ್ಯೋಧನ ನನ್ನ ಕರ್ಣನಿಗೊಂದು ರಾಜ ಪದವಿ ನೀಡಿದ.. ಅಂಗದಾಧಿಪತಿ ಎಂದು ಘೋಷಿಸಿದ. ತಾಯಿಯಾಗಿ ಸಂತೋಷವೇ.. ಆದರೆ ಅದರ ಜೊತೆ ಜೊತೆಯಲ್ಲಿಯೇ ನನ್ನ ಮಕ್ಕಳಿಗೆ ಆತ ವೈರಿಯಾಗಿಬಿಟ್ಟ..! ತಾನೇ ಹೆತ್ತ ಮಕ್ಕಳು ಕಡುವೈರಿಗಳಂತೆ ಬದುಕುವುದನ್ನು ನೋಡುವುದು ತಾಯಿಗೆ ಅತಿ ಕಷ್ಟ. ಪಕ್ಕಾ ವೈರಿಯಾದ ದುರ್ಯೋಧನನ ಆಪ್ತನಾದ ನನ್ನ ಕರ್ಣ. ಅವನ ಎಲ್ಲಾ ಕೆಟ್ಟ ಕಾರ್ಯಗಳಿಗೂ ಆತ ಜೊತೆಯಾದ.. ಸಾಥಿಯಾದ.. ಬೇಡವೆಂದು ಹೇಳಲು ನನಗಾಗುತ್ತಿಲ್ಲ. ಎಲ್ಲವನ್ನೂ ಮೌನವಾಗಿ ನೋಡುವುದಷ್ಟೇ ಆಯಿತು. ಮುಂದಿನ ದಿನಗಳನ್ನು ಅಷ್ಟೇ..


ಅರಗಿನ ಮನೆಯಲ್ಲಿ ಜೀವದ ಭಯದಿಂದ ಹೋರಾಡುವಾಗಲೂ.. ಅದೆಲ್ಲೋ ಸುರಂಗದಲ್ಲಿ ನುಸುಳಿ ಬಂದು ಜೀವ ಉಳಿಸಿಕೊಂಡಾಗಲೂ.. ಅಶಕ್ತಳಾಗಿ ಮೌನವಾಗಿಯೇ ಉಳಿದಿದ್ದೆ.. ಮಕ್ಕಳ ಜೊತೆ ಕಾಡಿನಲ್ಲಿ ವಾಸಮಾಡುವ ಸ್ಥಿತಿ ಬಂದಾಗ ಮಕ್ಕಳೇ ಭಿಲ್ಷೆ ಬೇಡಿ ತಂದಿದ್ದನ್ನು ತಿಂದು ಬದುಕುವಾಗಲಂತೂ ನಾನೊಬ್ಬ ಮಹಾತಾಯಿ ಅನ್ನಿಸಲೇ ಇಲ್ಲ. ಮಕ್ಕಳೆಲ್ಲ ಅವರದೇ ಸ್ವಂತ ರಾಜ್ಯ ಕಟ್ಟಿಕೊಂಡರೆಂದು ಸಂತಸ ಪಟ್ಟು ಇನ್ನೇನು ನೆಮ್ಮದಿಯಾಗಿರಬೇಕು ಎಂದು ಅಂದುಕೊಳ್ಳುತ್ತಲೇ ಇರುವಾಗ ಮತ್ತೆ ಆ ಜೂಜು..! ಹಿರಿಯವನಾದ ಧರ್ಮರಾಜನ ತಲೆ ಕೆಡಿಸಿತ್ತು. ಆ ಕೌರವ ದುರ್ಯೋಧನ ತನ್ನ ದುರ್ಬುದ್ದಿಯಿಂದಲೇ ಈ ಕೆಲಸ ಮಾಡುತ್ತಿದ್ದಾನೆಂಬ ಸುಳಿವು ನನ್ನ ಮಕ್ಕಳಿಗೆ ಸಿಕ್ಕಲೇ ಇಲ್ಲ. ಅಲ್ಲಿ.. ಆ ತುಂಬಿದ ಸಭೆಯಲ್ಲಿ ನನ್ನ ಸೊಸೆಗಾದ ಅವಮಾನವನ್ನು ಸಹಿಸಲಾದರೂ ಹೇಗಾದೀತು? ಆ ದುಃಖದ ಬೆಂಕಿಯಲ್ಲಿಯೇ ಇರುವ ನನ್ನ ಮನದಗ್ನಿಗೆ ತುಪ್ಪ ಸಿರಿದಿದ್ದು ನನ್ನ ಮಕ್ಕಳ ವನವಾಸ ಮತ್ತು ಅಜ್ಞಾತವಾಸದ ನಿಯಮ..! ಒಂದೆರಡು ವರ್ಷವಲ್ಲ.. ನಾನು ನನ್ನ ಮಕ್ಕಳನ್ನು ಅಗಲಿ ಇರಬೇಕಾದದ್ದು 14ವರ್ಷ..! ಎಲ್ಲಿರಲಿ... ಹೇಗಿರಲಿ... ಎಲ್ಲದಕ್ಕೂ ಸಮಾಧಾನ ನೀಡಿದ್ದು ವಿದುರನ ಆಶ್ರಯ. ಪ್ರತೀ ಕ್ಷಣ ಮಕ್ಕಳ ಹಿತಕ್ಕಾಗಿ ತುಡಿದಿದ್ದೇನೆ. ಭಕ್ತ ರಕ್ಷಕನಲ್ಲಿ ಮೊರೆ ಇಟ್ಟಿದ್ದೇನೆ. ನನ್ನ ಮಕ್ಕಳು ಅರಮನೆಯ ಸುಖವನ್ನಂತೂ ಅನುಭವಿಸಲಾಗುತ್ತಿಲ್ಲ.. ಇದ್ದಲ್ಲಾದರೂ ನೆಮ್ಮದಿಯಾಗಿರಲಿ.. ಸೌಖ್ಯವಾಗಿರಲಿ ಎಂದು ಪರಿತಪಿಸಿದ್ದೇನೆ. ಅಂತೂ ಆ ನೋವಿನ ಕಗಷಣ ಕಳೆದು ಮಕ್ಕಳ ಮುಖ ನೋಡಿದ್ದು ಯುದ್ಧದ ತಯಾರಿಯಲ್ಲಿರುವ ಮಕ್ಕಳನ್ನೇ..! ಭಯಾನಕ ಯುದ್ಧ.. ಅಲ್ಲಿ ಮೊಮ್ಮಕ್ಕಳ ಬಲಿಯಾಯ್ತು...! ಸಂಕಟ ಹೇಳತೀರದು.. ಮೊದಲಿನಿಂದಲೂ ನೋವನ್ನೇ ಅನುಭವಿಸಿದ ನನ್ನ ಮಕ್ಕಳಿಗೆ ಸುಖವಿಲ್ಲವೇ ಕೃಷ್ಣಾ?? ಅದೆಷ್ಟೋ ಬಾರಿ ಗೋಪಾಲಕನಲ್ಲಿ ಪ್ರಶ್ನೆ ಇಟ್ಟಿದ್ದೂ ಇದೆ. ಅವನ ನಗುಮುಖವೇ ನನಗೆ ಸಮಾಧಾನ ನೀಡುತ್ತಿತ್ತು. ಆದರೆ ನನ್ನ ಪುತ್ರರೊಡನೆ ಅವನಿದ್ದಾನಲ್ಲಾ ಎಂಬುದೇ ನನಗೆ ಧೈರ್ಯ.. ಯುದ್ದವೆಲ್ಲವೂ ಮುಗಿಯುವ ವೇಳೆಗೆ ಎಲ್ಲವೆಂದರೆ ಎಲ್ಲವೂ ಸಾಕಾಗಿ ಹೋಗಿತ್ತು. ಮಕ್ಕಳಿಗೊಂದು ನೆಮ್ಮದಿಯ ಬದುಕು ಸಿಕ್ಕಿರುವುದನ್ನು ಕಣ್ತುಂಬಿ ಕೊಂಡು.. ಅರಮನೆಯ ವೈಭೋಗ ಸಾಕೆಂದು ವಾನಪ್ರಸ್ಥಕ್ಕೆ ಹೊರಟೇ ಬಿಟ್ಟೆ.. ಕುಂತಿಯೆಂಬ ನತದೃಷ್ಟೆಯ ಬದುಕು ಕಾಡಿನ ಮಧ್ಯೆದಲ್ಲೆಲ್ಲೋ ಅನಾಥವಾಗಿ ಅಂತ್ಯವಾಗಿತ್ತು.. ಮಹಾತಾಯಿಯಾದ ಆಕೆಯ ಮನದಾಳದ ಅದೆಷ್ಟೋ ನೋವು ಅವಳಂತಯೇ ಯಾರ ಅರಿವಿಗೂ ಬರದೇ ಅನಾಥವಾಗಿದೆ..

Comments


bottom of page