top of page

ನಾನು ಕುಂತಿ....

ನಾನು ಕುಂತಿ....



ತುಂಬು ಕುಟುಂಬದಿಂದ ಹೊರಬಂದು ಒಂಟಿಯಾಗಿ ಬೆಳೆದು, ಒಬ್ಬಂಟಿಯಾಗಿಯೇ ಉಳಿದು ಅಳಿದವಳು ನಾನು. ನಾನು ಕುಂತಿ. ಊಹು ಅಲ್ಲ. ನಾನು ಪೃಥಾದೇವಿ..! ಹೌದು. ನನ್ನ ಮೂಲ ಹೆಸರು ಪೃಥಾದೇವಿ. ಸ್ವಾಮಿ ಶ್ರೀಕೃಷ್ಣನ ವಂಶವಾದ ಯದುವಂಶದ ಶೂರನ ಹಿರಿ ಮಗಳು ನಾನು. ಕೃಷ್ಣನ ತಂದೆ ವಸುದೇವ ನನ್ನ ಸಹೋದರ. ಕೇವಲ ವಸುದೇವ ಮಾತ್ರನಲ್ಲ ಇನ್ನೂ ಒಂಬತ್ತು ಮಂದಿ ಸಹೋದರರು ನನಗೆ. ನಾಲ್ವರು ಸಹೋದರಿಯರು. ಶಿಶುಪಾಲನ ತಾಯಿಯಾದ ಶ್ರುತಶ್ರವೆ, ಕೇಕಯನ ತಾಯಿಯಾದ ಶ್ರುತಕೀರ್ತಿ, ವಿಂದಾನುವಿಂದರ ತಾಯಿಯಾದ ರಾಜಾಧಿದೇವಿಯರೆಲ್ಲಾ ನನ್ನ ಸಹೀದರಿಯರೇ. ಅದ್ಯಾಕೆ ಅವರ ಮಕ್ಕಳಿಗೆಲ್ಲ ಕೃಷ್ಣನ ವೈರತ್ವ ಬೆಳೆಯಿತೋ ತಿಳಿಯದು. ನಾನು ಇಷ್ಟೆಲ್ಲಾ ಸಹೋದರ ಸಹೋದರಿಯರ ನಡುವೆ ಬೆಳೆಯಲಾಗದೇ ನನ್ನ ಬಾಲ್ಯವನ್ನು ಒಂಟಿಯಾಗಿಯೇ ಉಳಿಯಬೇಕಾಯಿತು. ಕಾರಣವಿಷ್ಟೇ. ನನ್ನ ತಂದೆಯವರ ಸ್ನೇಹಿತನಾದ ಕುಂತೀಭೋಜನಿಗೆ ಮಕ್ಕಳಿರಲಿಲ್ಲ. ಆಕಾರಣಕ್ಕೆ ನನ್ನ ತಂದೆಯವರು ನನ್ನನ್ನೇ ದತ್ತು ನೀಡಿಬಿಟ್ಟರು. ಹತ್ತು ಜನ ಸಹೋದರರಿದ್ದರೂ ಗಂಡು ಸಂತಾನವನ್ನು ದತ್ತು ಪಡೆಯದೇ ನನ್ನನ್ನೇ ಯಾಕೆ ದತ್ತು ಪಡೆದರೋ ತಿಳಿಯದು. ಅಂತೂ ನಾನು ಹೀಗೆ ಪೃಥೆಯಿಂದ ಕುಂತಿಯಾದೆ .


ಸಾಕುತಂದೆಗೆ ನನ್ನ ಮೇಲೆ ಅಪಾರವಾದ ಪ್ರೀತಿ‌. ಅತೀ ಮಮತೆಯಿಂದಲೇ ನೋಡಿಕೊಂಡರು. ಸುಂದರಿಯೂ, ವಿನಯಶೀಲತೆಯೂ ಆದ ನಾನೆಂದರೆ ಅರಮನೆಯಲ್ಲಿ ಅಚ್ಚುಮೆಚ್ಚು. ಹೀಗೆ ತುಂಬುಕುಟುಂಬದಿಂದ ಹೊರಬಂದು ಒಂಟಿಯಾಗಿ ಬೆಳೆಯಲಾರಂಭಿಸಿದೆ. ಹೀಗಿರುವಾಗಲೇ ಬಂದವರು ದುರ್ವಾಸ ಮುನಿಗಳು. ಅವರೆಂದರೆ ಎಲ್ಲರಿಗೂ ಭಯ ಮತ್ತು ಭಕ್ತಿ. ವರಕ್ಕಿಂತ ಶಾಪ ಕೊಟ್ಟಿದ್ದೇ ಹೆಚ್ಚಿರಬಹುದೇನೋ. ಅವರ ಪೂಜೆಯ ತಯಾರಿಗಾಗಿ ನನ್ನ ತಂದೆಯವರು ನನ್ನ ನಿಲ್ಲಿಸಿದ್ದರು. ಪ್ರೀತಿ ಗೌರವದಿಂದ ಅವರ ಸೇವೆಯನ್ನು ಮಾಡಿದ್ದಕ್ಕೆ ಸಿಕ್ಕಿದ ಪ್ರತಿಫಲವೇ ವಿಶೇಷವಾದ ವರ. ನಾನು ಯಾವ ದೇವತೆಗಳನ್ನು ನೆನೆಯುತ್ತೇನೋ ಅವರಿಂದ ನನಗೊಂದು ಮಗು ಸಿಗುವಂತಹ ದಿವ್ಯ ಮಂತ್ರದ ವರ. ನನಗೋ ಅಪಾರವಾದ ಕುತೂಹಲ. ಈ ಮಂತ್ರ ನಿಜಕ್ಕೂ ಕೆಲಸ ಮಾಡುತ್ತದೆಯಾ? ಹೇಗೆ ಕೆಲಸ ಮಾಡುತ್ತದೆ? ಆ ದೇವತೆಗಳು ನನ್ನೆದುರು ಬರುತ್ತಾರಾ? ಮಗು ಹೇಗಾಗುತ್ತದೆ? ಒಂದಾ ಎರಡಾ ನೂರಾರು ಪ್ರಶ್ನೆಗಳು. ಆ ಕುತೂಹಲಕ್ಕಾಗಿಯೇ ಅಂದು ಆ ಮುಂಜಾನೆ ಸುಂದರ ಸುರ್ಯೋದಯವನ್ನು ನೋಡಿ ಸೂರ್ಯನನ್ನೇ ಸ್ಮರಿಸಿ ಮಂತ್ರವನ್ನು ಹೇಳಿಯೇ ಬಿಟ್ಟೆ. ಸೂರ್ಯದೇವ ಪ್ರತ್ಯಕ್ಷ..! ಅಬ್ಬಾ.. ಯಾವಾಗ ಸೂರ್ಯದೇವ ಎದುರು ಬಂದನೋ ಆಗಿಂದ ಎದೆಯಲ್ಲಿ, ಮೈಯಲ್ಲಿ ನಡುಕ ಶುರುವಾಗಿತ್ತು. ಬೇಡ ಹೋಗಿಬಿಡು ಎಂದು ಬೇಡಿಕೊಂಡೆ.. ಆದರೆ ಆತ ಕೇಳುವಂತಿರಲಿಲ್ಲ. ಮರಳಿ ನಡೆದುಬಿಟ್ಟರೆ ದುರ್ವಾಸರ ಮಂತ್ರಕ್ಕೆ ಅಗೌರವ ತೋರಿಸಿದಂತೆ ಎಂದು ಆತನೇನೋ ಬಂದ ಕೆಲಸವನ್ನು ವಮುಗಿಸಿ ಹೊರಟೇ ಬಿಟ್ಟ. ಆದರೆ ನಾನು? ವಿವಾಹವಾಗದೇ ಮಗುವನ್ನು ಹೆರುವಂತಾಯ್ತು. ಮಗುವೋ ಅತೀ ಮುದ್ದಾಗಿದೆ. ಹುಟ್ಟುತ್ತಲೇ ಕರಗಣ ಕುಂಡಲವನ್ನೂ, ರಕ್ಷಾಕವಚವನ್ನು ಧರಿಸಿಯೆ ಜನಿಸಿದೆ. ಎಷ್ಟು ಅದ್ಭುತವಾದ ತೇಜಸ್ಸು ಆ ಮುಖದಲ್ಲಿ..! ಅಂತಹ ಮಗುವನ್ನು ಬೆಳೆಸುವ, ಆ ಮಗುವಿನಿಂದ ಅಮ್ಮಾ ಎಂದು ಕರೆಸಿಕೊಳ್ಳುವ ಸೌಭಾಗ್ಯ ಮಾತ್ರ ನನಗಿರಲಿಲ್ಲ. ನಿಂದಿಸುವ ಸಮಾಜಕ್ಕೆ ಹೆದರಿ ಆ ಮಗುವನ್ನು ಗಂಗೆಯಲ್ಲಿ ತೇಲಿ ಬಿಟ್ಟೆ..! ನೋಡುವ ಕುಜನರು ಅದೆಷ್ಟೋ ಮಾತುಗಳಲ್ಲಿ ನನ್ನ ನಿಂದಿಸಿದರು. ಆದರೆ ಪುತ್ರನಿಂದ ದೂರವಾಗಿ ಒಳಗೊಳಗೇ ಬೇಯುತ್ತಿರುವ ನನ್ನ ಅಂತರಾಳದ ನೋವನ್ನು ಅರಿಯುವವರಾದರೂ ಯಾರು? ಹೇಳಿಕೊಳ್ಳುವುದಾದರೂ ಯಾರಲ್ಲಿ?? ಈ ತೊಳಲಾಟದ ನೋವಲ್ಲಿಯೇ ಆ ಹಸ್ತಿನಾವತಿಯ ಪಾಂಡು ನನ್ನ ವಿವಾಹವಾದ. ಆತ ಶೂರನೇ, ಉತ್ತಮನೂ ಹೌದು. ಆದರೆ ಅವನಲ್ಲಿ ಸತ್ಯ ಹೇಳಲಾದೀತೆ?? ಯಾವ ಪತಿ ತಾನೆ ಇದನ್ನು ಒಪ್ಪಿಕೊಳ್ಳುತ್ತಾನೆ? ಮನೆತನದ ಗೌರವಕ್ಕಾಗಿ ಮೌನವಾದೆ. ಅಂತೂ ಒಂದು ಅರಮನೆಯ ಸೊಸೆಯಾದೆ. ಆದರೆ ಈ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ನನ್ನಿಂದ ಪಾಂಡುವಿಗೆ ಮಕ್ಕಳಾಗಲಿಲ್ಲ. ನನ್ನಿಂದ ಎಂಬುದು ಸುಳ್ಳು ಹೇಳುವುದು ನನಗೊಬ್ಬಳಿಗೇ ಗೊತ್ತು. ಆದರೆ ಸತ್ಯ ಹೇಳಲಾದೀತೇ? ನನ್ನ ಪತಿ ಪಾಂಡು ಮಾದ್ರಿಯನ್ನೂ ವಿವಾಹವಾಗಿ ಬಂದರು. ಮಾದ್ರಿ ತುಂಬಾ ಸುಂದರಿ. ಎಷ್ಟೆಂದರೂ ರಾಜರಲ್ಲವೇ? ಹಲವು ಪತ್ನಿಯರನ್ನು ಇರಿಸಿಕೊಳ್ಳುವುದೇ ಅವರ ಪೌರುಷಕ್ಕೊಂದು ಖಳೆ. ಕೋಪ, ಬೇಸರ ಎಲ್ಲವೂ ಇದ್ದರೂ ಆಕೆಯನ್ನು ಎದುರುಗೊಳ್ಳಲೇ ಬೇಕಿತ್ತು. ಇನ್ನೇನು ಸಂಸಾರ ಪ್ರಾರಂಭಿಸಬೇಕು ಎನ್ನುವಾಗಳೆ ಧುತ್ತೆಂದು ಎದುರು ನಿಂತಿದ್ದು ಪಾಂಡು ಮಹಾರಾಜರಿಗೆ ಒದಗಿದ ಶಾಪ.


ಕಿಂದಮ ಮಹರ್ಷಿಗಳು ತನ್ನ ಪತ್ನಿಯ ಜೊತೆ ಜಿಂಕೆಯ ವೇಷದಲ್ಲಿದ್ದಾಗ ಪಾಂಡು ಮಹಾರಾಜರು ಬಾಣವನ್ನು ಹೂಡಿ ಆ ಮಹರ್ಷಿಗಳ ಸಾವಿಗೆ ಕಾರಣರಾದರು. ಆ ಕಾರಣಕ್ಕಾಗಿಯೇ ಪಾಂಡು ಮಹಾರಾಜರಿಗೆ ಪತ್ನಿಯ ಸ್ಪರ್ಷಿಸಿದರೆ ಸಾವು ಎಂಬ ಶಾಪ ಬಂದಿತ್ತು. ಇನ್ನೆಲ್ಲಿಯ ಸಂಸಾರ?

ಈ ಶಾಪದಿಂದಾದ ಮಾನಸಿಕ ನೋವಿನಿಂದಲೇ ಸ್ವಾಮಿ ಪಾಂಡುಮಹಾರಾಜರು ಅರಮನೆಯ ತ್ಯಜಿಸಿ ವನದಲ್ಲಿ ಉಳಿದರು. ಜೊತೆಯಲ್ಲಿ ನಾನೂ ಮಾದ್ರಿಯೂ ನಡೆದೆವು.


ಮುಂದೆ? ಈ ಪ್ರಶ್ನೆ ನಮ್ಮ ಮೂರೂ ಜನರಲ್ಲಿ ಕಾಡುತ್ತಿತ್ತು. ದುರ್ವಾಸ ಮುನಿಗಳ ವರವನ್ನು ಹೇಳುವ ಅನಿವಾರ್ಯತೆ ಕಂಡಿತು. ಅದಕ್ಕಾಗಿಯೇ ಹೇಳಿಕೊಂಡುಬಿಟ್ಟೆ. ವಂಶಕ್ಕೆ ಪುತ್ರರತ್ನರ ಅವಶ್ಯಕತೆ ಇತ್ತು. ಒಪ್ಪಿಕೊಂಡರು. ಉತ್ತಮ ಧರ್ಮ ಪರಿಪಾಲನೆ ಮಾಡುವ ಪುತ್ರನಿಗಾಗಿ ಯಮನಿಂದ ಯುಧಿಷ್ಟಿರನನ್ನೂ, ವಾಯುವಿನಿಂದ ಬಲಶಾಲಿ ಪುತ್ರನಾದ ಭೀಮನನ್ನೂ, ಸುಂದರನೂ,ಪರಾಕ್ರಮಿಯೂ ಆದ ಇಂದ್ರನಿಂದ ಅರ್ಜುನನನ್ನೂ ಪಡೆದೆ. ನನ್ನ ಮಕ್ಕಳನ್ನೆಲ್ಲಾ ನೋಡಿ ಮಾದ್ರಿಗೂ ಮಕ್ಕಳ ಆಸೆಯಾಗಿತ್ತು.‌ ಅದಲ್ಕಾಗಿಯೇ ಅವಳಿಗೂ ನನ್ನಲ್ಲಿರುವ ಐದರಲ್ಲಿ ಕೊನೆಯಲ್ಲಿ ಒಂದನ್ನು ಅವಳಿಗೆ ನೀಡಿದೆ. ಅಶ್ವಿನಿ ದೇವತೆಗಳಿಂದ ಸುಂದರರಾದ ನಕುಲ ಸಹದೇವರನ್ನು ಮಾದ್ರಿ ಪಡೆದಳು. ಹೀಗೆ ಅಂತೂ ಪಾಂಡು ಮಹಾರಾಜನಿಗೆ ಐವರು ಪುತ್ರರಾದರು. ಪಾಂಡವರು ಎಂದೂ ಹೇಳಲಾಯಿತು.

ಇನ್ನೇನು ಎಲ್ಲವೂ ಸೌಖ್ಯ. ನಮಗೆ ಬೇಕಾದ ಮಕ್ಕಳು ಸಿಕ್ಕವು.. ಎಲ್ಲವೂ ಸುಕಾಂತವೆನ್ನುವಾಗಲೇ ಹೊಸ ಕಹಿ ಅಧ್ಯಾಗಳು ಪ್ರಾರಂಭವಾಗಿತ್ತು... ಮತ್ತೊಂದು ದಿನ ಹೇಳುತ್ತೇನೆ..

Comments


bottom of page